ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ? ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ಅಳಿಯ ಡಾ ಮೋಹನ್ ಲಾಬಿ
ಕನ್ನಡ ಸುದ್ದಿ  /  ಕರ್ನಾಟಕ  /  ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ? ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ಅಳಿಯ ಡಾ ಮೋಹನ್ ಲಾಬಿ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಯಾರಿಗೆ? ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ಅಳಿಯ ಡಾ ಮೋಹನ್ ಲಾಬಿ

Lok Sabha Election 2024: ಬಿಜೆಪಿ ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಅವರ ಅಳಿಯ ಚಾಮರಾಜನಗರ ಮೀಸಲು ಲೋಕ್ಷಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಲಾಬಿ ಮಾಡ್ತಿದ್ದಾರೆ. ಕಾಂಗ್ರೆಸ್ ನಡೆ ಏನು ಅನ್ನೋದರ ವಿವರ ಇಲ್ಲಿದೆ.

ಚಾಮರಾಜನಗರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಬಿಜೆಪಿ ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಅವರ ಅಳಿಯ ಡಾ ಎನ್‌ಎಸ್ ಮೋಹನ್ ಅವರು ಲಾಬಿ ನಡೆಸುತ್ತಿದ್ದಾರೆ.
ಚಾಮರಾಜನಗರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಬಿಜೆಪಿ ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಅವರ ಅಳಿಯ ಡಾ ಎನ್‌ಎಸ್ ಮೋಹನ್ ಅವರು ಲಾಬಿ ನಡೆಸುತ್ತಿದ್ದಾರೆ.

ಚಾಮರಾಜನಗರ ಮೀಸಲು ಲೋಕಸಭಾ (Chamarajanagar Lok Sabha Constituency) ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಬಿಗ್ ಫೈಟ್ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈಸೂರು ನಿವಾಸಕ್ಕೆ ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ಅವರ ಅಳಿಯ ಡಾ ಎನ್‌ ಎಸ್ ಮೋಹನ್ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಮೈಸೂರು ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳು ಹಾಗೂ ಚಾಮರಾಜನಗರ ಜಿಲ್ಲೆಯ ನಾಲ್ಕು ವಿಧಾನಸಭೆ ಕ್ಷೇತ್ರಗಳನ್ನು ಒಳಗೊ‌ಂಡಿರುವ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಸಚಿವ ಡಾ ಹೆಚ್ ಸಿ ಮಹದೇವಪ್ಪನವರ ಪುತ್ರ ಸುನಿಲ್ ಬೋಸ್, ಮಾಜಿ ಸಚಿವ ಬಿ ಸೋಮಶೇಖರ್, ಮಾಜಿ ಶಾಸಕ ಜಿ ಎನ್ ನಂಜುಂಡಸ್ವಾಮಿ ನಡುವೆ ತೀವ್ರ ಪೈಪೋಟಿ‌ ನಡೆದಿದೆ.

ಸುನಿಲ್ ಬೋಸ್ ಪರ ಸಚಿವ ಡಾ ಹೆಚ್ ಸಿ ಮಹದೇವಪ್ಪ ಲಾಬಿ ನಡೆಸಿದ್ದು, ಬಹುತೇಕ ಸುನಿಲ್ ಬೋಸ್‌ಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇನ್ನೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೈಸೂರಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸದಲ್ಲಿ ಶುಕ್ರವಾರ (ಮಾರ್ಚ್ 15) ಬಿರುಸಿನ ರಾಜಕೀಯ ಚಟುವಟಿಕೆಗಳು ಕಂಡು ಬಂದವು. ಟಿಕೆಟ್ ಆಕಾಂಕ್ಷಿಗಳಾಗಿರುವ ಜಿ ಎನ್ ನಂಜುಂಡಸ್ವಾಮಿ ಹಾಗು ಸುನಿಲ್ ಬೋಸ್ ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈ ನಡುವೆ ಹಠಾತ್ ರಾಜಕೀಯ ಬೆಳವಣಿಗೆಯಲ್ಲಿ ಚಾಮರಾಜನಗರದ ಹಾಲಿ ಬಿಜೆಪಿ ಸಂಸದ ವಿ ಶ್ರೀನಿವಾಸಪ್ರಸಾದ್ ಅವರ ಅಳಿಯ ಡಾ ಮೋಹನ್ ಏಕಾಏಕಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದು ಭಾರೀ ಮಹತ್ವ ಪಡೆದುಕೊಂಡಿತು. ಲೋಕಸಭೆ ಚುನಾವಣೆಗೆ ಬಿಜೆಪಿ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಿಜೆಪಿ ಸಂಸದ ಶ್ರೀನಿವಾಸಪ್ರಸಾದ್ ಅವರ ಅಳಿಯ ಡಾ ಮೋಹನ್, ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆಯಲು ಪ್ರಯತ್ನಿಸಿದ್ದಾರೆ.

ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಡಾ ಮೋಹನ್‌ಗೆ ಮತ್ತೋರ್ವ ಬಿಜೆಪಿ ಮುಖಂಡ ಹಾಗೂ ಮಾಜಿ ಸಚಿವ ಕೋಟೆ ಎಂ ಶಿವಣ್ಣ ಸಾಥ್ ನೀಡಿದ್ದು ಕೂಡ ಗಮನ ಸೆಳೆಯಿತು. ಶಾಸಕ ಅನಿಲ್ ಚಿಕ್ಕಮಾದು ಜೊತೆಯಲ್ಲಿ ಈ ಇಬ್ಬರೂ ಬಿಜೆಪಿ ಮುಖಂಡರು ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜೊತೆ ಮಾತುಕತೆ ನಡೆಸಿದ್ದು, ಹಠಾತ್ ರಾಜಕೀಯ ಬೆಳವಣಿಗೆಗೆ ಸಾಕ್ಷಿಯಾಯಿತಲ್ಲದೇ, ತೀವ್ರ ರಾಜಕೀಯ ಸಂಚಲನಕ್ಕೂ ಕಾರಣವಾಯಿತು. ಇನ್ನೂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿದ ನಂತರ ಯಾವುದೇ ಪ್ರತಿಕ್ರಿಯೆ ನೀಡದೇ ಡಾಕ್ಟರ್ ಮೋಹನ್‌ ತೆರಳಿದ್ದು ಕೂಡ ತೀವ್ರ ಕುತೂಹಲ ಕೆರಳುವಂತೆ ಮಾಡಿತು‌.

‘ಚಾಮರಾಜನಗರದಲ್ಲಿ ಸಣ್ಣ ನಾಯಕರನ್ನು ನಿಲ್ಲಿಸಿದರೂ ಕಾಂಗ್ರೆಸ್‌ಗೆ ಗೆಲುವು’

ಈ ನಡುವೆ ಮಾಜಿ ಶಾಸಕ ಜಿ ಎನ್ ನಂಜುಂಡಸ್ವಾಮಿ ಕೂಡ ಸಿದ್ದರಾಮಯ್ಯನವರ ‌ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಬಳಿಕ ಈ ಕುರಿತು ಮಾಧ್ಯಮ ಪ್ರತಿನಿಧಿಗಳ ಜೊತೆ ನಂಜುಂಡಸ್ವಾಮಿ ಮಾತನಾಡಿದರು. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಚಿವ ಮಹದೇವಪ್ಪರಂತಹ ದೊಡ್ಡ ನಾಯಕರ ಅವಶ್ಯಕತೆ ಇಲ್ಲ, ಸಣ್ಣ ನಾಯಕರನ್ನು ನಿಲ್ಲಿಸಿದರೂ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವೊಬ್ಬ ಸಚಿವರನ್ನು ಕಣಕ್ಕಿಳಿಯುವಂತೆ ಸೂಚಿಸಿಲ್ಲ. ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದೆ. ಈ ಕ್ಷೇತ್ರದಲ್ಲಿ ಸಾಮಾನ್ಯ ನಾಯಕ ಅಥವಾ ಕಾರ್ಯಕರ್ತನನ್ನು ಕಣಕ್ಕಿಳಿಸಿದರೂ ಗೆಲುವು ಸಾಧಿಸಬಹುದು. ಹಾಗಾಗಿ ಮಹದೇವಪ್ಪನವರಂತಹ ದೊಡ್ಡ ನಾಯಕರು ಇಲ್ಲಿಂದ ಕಣಕ್ಕಿಳಿಯುವ ಅಗತ್ಯವಿಲ್ಲ. ಮಹದೇವಪ್ಪ ಅವರ ಪುತ್ರನಿಗೆ ಟಿಕೆಟ್ ಕೇಳಿರುವುದು ಸಹಜ. ನಾನು ಕೂಡ ಟಿಕೆಟ್ ಕೇಳಿದ್ದೇನೆ. ಆದರೆ ಇದುವರೆಗೂ ಅಭ್ಯರ್ಥಿ ಯಾರೆಂದು ಅಂತಿಮವಾಗಿಲ್ಲ. ಮುಂದಿನ ಎರಡು ದಿನಗಳಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮವಾಗಲಿದೆ ಎಂದು ಚಾಮರಾಜನಗರ ಟಿಕೆಟ್ ಆಕಾಂಕ್ಷಿ ಹಾಗೂ ಮಾಜಿ ಶಾಸಕ ನಂಜುಂಡಸ್ವಾಮಿ ಹೇಳಿದ್ದಾರೆ.

Whats_app_banner