ಕನ್ನಡ ಸುದ್ದಿ  /  Karnataka  /  Lok Sabha Election 2024 Bjp Ticket Denied To Karadi Sanganna Supporters Vandalised Party Office In Koppal Rmy

Koppal News: ಕರಡಿ ಸಂಗಣ್ಣಗೆ ಟಿಕೆಟ್ ಸಿಗದಿದ್ದಕ್ಕೆ ಸಿಟ್ಟು; ಬಿಜೆಪಿ ಕಚೇರಿ ಕಿಟಕಿ ಗಾಜು ಒಡೆದು ಬೆಂಬಲಿಗರ ಆಕ್ರೋಶ

ಹಾಲಿ ಸಂಸದ ಕರಡಿ ಸಂಗಣ್ಣಕ್ಕೆ ಬಿಜೆಪಿ ಟಿಕೆಟ್ ನೀಡದಿರುವುದು ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೊಪ್ಪಳದಲ್ಲಿರುವ ಪಕ್ಷದ ಕಚೇರಿಯಲ್ಲಿನ ಟೇಬಲ್, ಕಿಟಕಿ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತ ಕರಣಿ ಸಂಗಣ್ಣ.
ಕೊಪ್ಪಳ ಲೋಕಸಭಾ ಕ್ಷೇತ್ರದ ಟಿಕೆಟ್ ವಂಚಿತ ಕರಣಿ ಸಂಗಣ್ಣ.

ಕೊಪ್ಪಳದ ಹಾಲಿ ಸಂಸದ ಕರಡಿ ಸಂಗಣ್ಣ (Karadi Sanganna) ಅವರಿಗೆ ಟಿಕೆಟ್ ನೀಡದಿದ್ದಕ್ಕೆ ಅವರ ಬೆಂಬಲಿಗರು ಕೊಪ್ಪಳದ ಬಿಜೆಪಿ ಕಚೇರಿಯಲ್ಲಿದ್ದ ಟೇಬಲ್ ಹಾಗೂ ಕಿಟಕಿ ಗಾಜು ಒಡೆದು ಆಕ್ರೋಶ ಹೊರಹಾಕಿದ್ದಾರೆ. ಈ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ಕರಡಿ ಸಂಗಣ್ಣ ಅವರಿಗೆ ಈ ಬಾರಿ ಬಿಜೆಪಿ ಹೈಕಮಾಂಡ್ ಟಿಕೆಟ್ ನೀಡಿಲ್ಲ. ಆದರೆ ತಮಗೆ ಟಿಕೆಟ್ ನೀಡಬೇಕೆಂದು ಸಂಗಣ್ಣ ಅವರು ಪಟ್ಟು ಹಿಡಿದಿದ್ದರು. ಆದರೆ ಇವರಿಗೆ ಮಣೆಹಾಕದ ಕೇಸರಿ ನಾಯಕರು ಈಚೆಗೆ ಬಿಡುಗಡೆ ಮಾಡಿದ್ದ ಲೋಕಸಭೆ ಚುನಾವಣೆಯ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಡಾ ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ನೀಡಿದೆ.

ಕೊಪ್ಪಳದ ಬಿಜೆಪಿ ಕಚೇರಿಯಲ್ಲಿ ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್, ಕುಷ್ಠಗಿ ಶಾಸಕ ಹಾಗೂ ವಿಧಾನಸಭೆಯಲ್ಲಿ ಬಿಜೆಪಿಯ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಅವರು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸುತ್ತಿದ್ದಾಗ ಅಲ್ಲಿಗೆ ಬಂದ ಸಂಗಣ್ಣ ಅವರ ಬೆಂಬಲಿಗರು ಪಕ್ಷದ ನಾಯಕರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಅಲ್ಲದೆ, ಮಾಧ್ಯಮದವರೊಂದಿಗೆ ಮಾತನಾಡುವುದಕ್ಕೆ ಅಡ್ಡಿಪಡಿಸಿದ್ದಾರೆ. ಅಷ್ಟೇ ಅಲ್ಲ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಲ್ಗಣ್ಣನವರ್ ಅವರಿಗೆ ಘೇರಾವ್ ಹಾಕಿ ಕೂಡಲೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಗಣ್ಣ ಅವರಿಗೆ ಆಗಿರುವ ಅನ್ಯಾಯವನ್ನು ಖಂಡಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ನೆರಿದ್ದ ನೂರಾರು ಬೆಂಬಲಿಗರು ಕಿಟಕಿ ಹಾಗೂ ಕಚೇರಿಯಲ್ಲಿದ್ದ ಟೇಬಲ್ ಗಾಜುಗಳನ್ನು ಒಡೆದು ಸಿಟ್ಟನ್ನು ಹೊರಹಾಕಿದ್ದಾರೆ. ಅಭ್ಯರ್ಥಿ ಡಾ ಬಸವರಾಜ ಕ್ಯಾವಟರ್ ಅವರು ಸಂಗಣ್ಣ ಅವರ ಮನೆಗೆ ಬಂದಾಗಲೂ ಅಲ್ಲೂ ಕೂಡ ಇವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ರಾಜ್ಯ ನಾಯಕರಾದ ಬಿಎಸ್ ಯಡಿಯೂರಪ್ಪ, ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮಗೆ ಟಿಕೆಟ್ ನೀಡಲಾಗುತ್ತದೆ ಎಂದು ಮಾತುಕೊಟ್ಟಿದ್ದರು. ಈಗ ಟಿಕೆಟ್ ನೀಡದಿರುವುದಕ್ಕೆ ಏನು ಕಾರಣ ಅಂತ ಗೊತ್ತಿಲ್ಲ. ಶಾಂತಿಯಿಂದ ಇರುವಂತೆ ನನ್ನ ಬೆಂಬಲಿಗರಿಗೆ ಹೇಳುತ್ತೇನೆ. ಅಲ್ಲದೆ, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವುದಾಗಿ ಕರಡಿ ಸಂಗಣ್ಣ ತಿಳಿಸಿದ್ದಾರೆ.

ಲೋಕಸಭೆ ಚುನಾವಣೆಗೆ ಬಿಜೆಪಿ ಕೈಮಾಂಡ್ 72 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕರ್ನಾಟಕದ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡಿತ್ತು. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಬೆಂಗಳೂರು ಉತ್ತರ ಕ್ಷೇತ್ರದ ಡಿವಿ ಸದಾನಂದ ಗೌಡ, ಕೊಪ್ಪಳದ ಕರಡಿ ಸಂಗಣ್ಣ, ದಾವಣಗೆರೆಯಲ್ಲಿ ಜಿಎಂ ಸಿದ್ದೇಶ್ವರ್, ನಳಿನ್ ಕುಮಾರ್ ಕಟೀಲ್ ಟಿಕೆಟ್ ವಂಚಿತರಲ್ಲಿ ಪ್ರಮುಖರಾಗಿದ್ದಾರೆ. ಜಿಎಂ ಸಿದ್ದೇಶ್ವರ್ ಬದಲಿಗೆ ಅವರ ಪತ್ನಿ ಗಾಯಿತ್ರಿಗೆ ಟಿಕೆಟ್ ನೀಡಲಾಗಿದೆ.

IPL_Entry_Point