ಕನ್ನಡ ಸುದ್ದಿ  /  Karnataka  /  Lok Sabha Election 2024 Chikkaballapur Ls Constituency Watch Bjp Congress Candidates Not Yet Decided Mrt

ಲೋಕಸಭೆ ಚುನಾವಣೆ 2024; ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳ ಪೈಪೋಟಿ

ಲೋಕಸಭೆ ಚುನಾವಣೆ 2024ಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆದಿದೆ. ಕಾಂಗ್ರೆಸ್‌ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಯುವ ನಾಯಕ ರಕ್ಷಾ ರಾಮಯ್ಯ, ಬಿಜೆಪಿಯಿಂದ ಮಾಜಿ ಸಚಿವ ಡಾ ಕೆ ಸುಧಾಕರ್, ಯುವ ನಾಯಕ ಅಲೋಕ್ ವಿಶ್ವನಾಥ್ ಆಕಾಂಕ್ಷಿಗಳು. ಕ್ಷೇತ್ರ ಚಿತ್ರಣ ಹೀಗಿದೆ (ರಾಜಕೀಯ ವಿಶ್ಲೇಷಣೆ - ಎಚ್. ಮಾರುತಿ, ಬೆಂಗಳೂರು)

ಬಿಜೆಪಿ ಯುವ ನಾಯಕ ಅಲೋಕ್ ವಿಶ್ವನಾಥ್‌, ಮಾಜಿ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್‌ನ ಯುವ ನಾಯಕ ರಕ್ಷಾ ರಾಮಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ
ಬಿಜೆಪಿ ಯುವ ನಾಯಕ ಅಲೋಕ್ ವಿಶ್ವನಾಥ್‌, ಮಾಜಿ ಸಚಿವ ಡಾ.ಕೆ.ಸುಧಾಕರ್, ಕಾಂಗ್ರೆಸ್‌ನ ಯುವ ನಾಯಕ ರಕ್ಷಾ ರಾಮಯ್ಯ, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರೇ ನಿರ್ಣಾಯಕರಾಗಿದ್ದರೂ ಮೊದಲಿನಿಂದಲೂ ಸಣ್ಣ ಸಣ್ಣ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳನ್ನೇ ಆಯ್ಕೆ ಮಾಡುತ್ತಿರುವುದು ಇಲ್ಲಿನ ಮತದಾರ ಪ್ರಭುವಿನ ವಿಶೇಷ.

ಇದುವರೆಗೂ ಇಬ್ಬರು ಒಕ್ಕಲಿಗ ಸಂಸದರು ಮಾತ್ರ ಆಯ್ಕೆಯಾಗಿದ್ದಾರೆ. ಆದರೆ ಕಳೆದ ಚುನಾವಣೆಯಿಂದ ಈ ಟ್ರೆಂಡ್ ಬದಲಾಗಿದ್ದು ಪ್ರಬಲ ಸಮುದಾಯದ ಅಭ್ಯರ್ಥಿಗಳೇ ಗೆಲ್ಲಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಚಿಕ್ಕಬಳ್ಳಾಪುರ 1977ರಲ್ಲಿ ಸ್ವತಂತ್ರ ಲೋಕಸಭಾ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂತು. ಅಲ್ಲಿಂದೀಚೆಗೆ 2 ಸಲ ಒಕ್ಕಲಿಗ, 4 ಬಾರಿ ಈಡಿಗ, 3 ಬಾರಿ ಬ್ರಾಹ್ಮಣ, 2 ಬಾರಿ ದೇವಾಡಿಗ, ಒಂದು ಸಲ ವೈಶ್ಯ ಸಮುದಾಯದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಚೊಚ್ಚಲ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಎಂ.ವಿ. ಕೃಷ್ಣಪ್ಪ ಗೆಲುವು ದಾಖಲಿಸಿದ್ದರು. ತದನಂತರ 2019ರ ಚುನಾವಣೆಯವರೆಗೂ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಗೆಲ್ಲಲೇ ಇಲ್ಲ. 2019ರಲ್ಲಿ ಬಿ.ಎನ್.ಬಚ್ಚೇಗೌಡ ಗೆಲ್ಲುವ ಮೂಲಕ ಹಲವು ಹೊಸ ದಾಖಲೆ ಸೃಷ್ಟಿಸಿದರು.

ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ 1980ರಲ್ಲಿ ವೈಶ್ಯ ಸಮುದಾಯದ ಎಸ್.ಎನ್.ಪ್ರಸನ್ನ ಕುಮಾರ್, 1984 ರಿಂದ 1991ರ ವರೆಗೆ ಬ್ರಾಹ್ಮಣ ಸಮುದಾಯದ ವಿ. ಕೃಷ್ಣರಾವ್, 1996 ರಿಂದ 2004ರ ವರೆಗೆ ಈಡಿಗ ಸಮುದಾಯದ ಆರ್‌.ಎಲ್.ಜಾಲಪ್ಪ, 2009 ಮತ್ತು 2014 ರಲ್ಲಿ ದೇವಾಡಿಗ ಸಮುದಾಯದ ಎಂ.ವೀರಪ್ಪ ಮೊಯಿಲಿ ಅವರು ಸಂಸದರಾಗಿ ಲೋಕಸಭೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಚಿತ್ರಣ

ಚಿಕ್ಕಬಳ್ಳಾಪುರ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ಹಾಗೂ ಬೆಂಗಳೂರು ನಗರ ಜಿಲ್ಲೆಯ 1 ವಿಧಾನಸಭಾ ಕ್ಷೇತ್ರವನ್ನೊಳಗೊಂಡಿದೆ. ಮಹಿಳಾ( 9,80,641),ಪುರುಷ (9,69,538) ಮತದಾರರು ಸೇರಿ ಒಟ್ಟು 19,50,000 ಮತದಾರರಿದ್ದಾರೆ

ಪ್ರದೀಪ್ ಈಶ್ವರ್ ಕಾಂಗ್ರೆಸ್ (ಚಿಕ್ಕಬಳ್ಳಾಪುರ), ಎಸ್ ಎನ್ ಸುಬ್ಬಾರೆಡ್ಡಿ ಕಾಂಗ್ರೆಸ್ (ಬಾಗೇಪಲ್ಲಿ), ಪುಟ್ಟಸ್ವಾಮಿ ಗೌಡ, ಪಕ್ಷೇತರ (ಗೌರಿಬಿದನೂರು), ಸಚಿವ ಕೆ. ಎಚ್. ಮುನಿಯಪ್ಪ(ದೇವನಹಳ್ಳಿ), ಧೀರಜ್ ಮುನಿರಾಜು ಬಿಜೆಪಿ(ದೊಡ್ಡಬಳ್ಳಾಪುರ), ಶ್ರೀನಿವಾಸ್ ಕಾಂಗ್ರೆಸ್ (ನೆಲಮಂಗಲ), ಶರತ್ ಬಚ್ಚೇಗೌಡ ಕಾಂಗ್ರೆಸ್(ಹೊಸಕೋಟೆ), ಎಸ್ ಆರ್ ವಿಶ್ವನಾಥ್, ಬಿಜೆಪಿ( ಯಲಹಂಕ).

2019ರ ಲೋಕಸಭೆ ಚುನಾವಣೆಯಲ್ಲಿ ಬಿ.ಎನ್.ಬಚ್ಚೇಗೌಡ ಗೆಲ್ಲುವ ಮೂಲಕ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದರು. ಅಲ್ಲಿಯವರೆಗೂ ಕಾಂಗ್ರೆಸ್‌ ಮತ್ತು ಜನತಾ ಪರಿವಾರದ್ದೇ ಪ್ರಾಬಲ್ಯ.

ಒಕ್ಕಲಿಗರ ಮತಗಳು ಚದುರಿ ಹೋಗದೆ ಒಂದೇ ತೆಕ್ಕೆಗೆ ಜಾರಿದ್ದು ಬಚ್ಚೇಗೌಡರ ಗೆಲುವಿಗೆ ಕಾರಣ. ಈ ಬಾರಿಯೂ ಇದೇ ಮನೋಭಾವ ಒಕ್ಕಲಿಗ ಸಮುದಾಯದಲ್ಲಿದೆ ಎಂಬ ಭಾವನೆಯಿದೆ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಅಹಿಂದ ಸಮುದಾಯಗಳು ಧ್ರುವೀಕರಣಗೊಳ್ಳುತ್ತಿವೆ.

ಈ ಕ್ಷೇತ್ರದಲ್ಲಿ ಒಕ್ಕಲಿಗ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಬಲಿಜ ಸಮುದಾಯದ ಮತದಾರರು ಹೆಚ್ಚು. ಒಕ್ಕಲಿಗ(4.50 ಲಕ್ಷ), ಎಸ್ ಸಿ ಎಸ್ ಟಿ (5 ಲಕ್ಷ) ಮತ್ತು ಬಲಿಜ ಸಮುದಾಯದ(2.50 ಲಕ್ಷ ), ಮುಸ್ಲಿಂ(2 ಲಕ್ಷ), ಲಿಂಗಾಯತ, ಬ್ರಾಹ್ಮಣ(1 ಲಕ್ಷ), ಕುರುಬ(1 ಲಕ್ಷ) ಇತರೆ (3 ಲಕ್ಷ) ಮತಗಳಿವೆ.

2019 ರಲ್ಲಿ ಬಿಜೆಪಿಯ ಬಿ.ಎನ್. ಬಚ್ಚೇಗೌಡ 7,45,912 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಎಂ. ವೀರಪ್ಪ ಮೊಯ್ಲಿ(5,63,802), ಅವರನ್ನು ಸೋಲಿಸಿದ್ದರು.

2014 ರ ಚುನಾವಣೆಯಲ್ಲಿ ಕಾಂಗ್ರಸ್ ಅಭ್ಯರ್ಥಿ ಎಂ ವೀರಪ್ಪ ಮೊಯ್ಲಿ 4,24,800 ಮತ ಗಳಿಸಿ ಬಿಜೆಪಿಯ ಬಿಎನ್ ಬಚ್ಚೇಗೌಡ(4,15,280) ಮತ್ತು ಜೆಡಿಎಸ್ ನ ಹೆಚ್.ಡಿ.ಕುಮಾರ ಸ್ವಾಮಿ, (3,46,339) ಅವರನ್ನು ಮಣಿಸಿ ಆಯ್ಕೆಯಾಗಿದ್ದರು.

2009 ರಲ್ಲಿಯೂ ಕಾಂಗ್ರೆಸ್ ನ ವೀರಪ್ಪ ಮೊಯ್ಲಿ ಬಿಜೆಪಿಯ ಸಿ. ಅಶ್ವಥನಾರಾಯಣ ಅವರನ್ನು ಸೋಲಿಸಿ ಮೊದಲ ಬಾರಿ ಇಲ್ಲಿಂದ ಆರಿಸಿ ಬಂದಿದ್ದರು. ದೂರದ ಮಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ ಗೆದ್ದಿದ್ದು ಸಾಧನೆಯೇ ಸರಿ.

ಟಿಕೆಟ್‌ಗಾಗಿ ಕಾಂಗ್ರೆಸ್, ಬಿಜೆಪಿಯಲ್ಲಿ ಪೈಪೋಟಿ

ಬಿಜೆಪಿಯ ಹಾಲಿ ಸಂಸದ ಬಿ.ಎನ್. ಬಚ್ಚೇಗೌಡ ನಿವೃತ್ತಿ ಘೋಷಿಸಿದ್ದಾರೆ. ಇವರ ಪುತ್ರ ಶರತ್ ಬಚ್ಚೇಗೌಡ ಕಾಂಗ್ರೆಸ್ ಶಾಸಕ. ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಮುಖ್ಯಮಂತ್ರಿ ಕ್ಷೇತ್ರದ ಮಾಜಿ ಸಂಸದ ವೀರಪ್ಪ ಮೊಯ್ಲಿ ಮತ್ತು ರಕ್ಷರಾಮಯ್ಯ ತೀವ್ರ ಪೈಪೋಟಿ ನಡೆಸಿದ್ದಾರೆ.

ಮಾಜಿ ಸಚಿವ ಸೀತಾರಾಂ ಅವರ ಪುತ್ರ ರಕ್ಷಾರಾಮಯ್ಯ ಮೂರ್ನಾಲ್ಕು ವರ್ಷಗಳಿಂದ ತಯಾರಿ ನಡೆಸಿದ್ದಾರೆ. ಬಲಿಜ ಸಮುದಾಯಕ್ಕೆ ಸೇರಿರುವುದು ಮತ್ತು ಹಣ ಬಲ ಇವರಿಗಿದೆ. ಟಿಕೆಟ್ ಯಾರಿಗೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ.

ಬಿಜೆಪಿ ಟಿಕೆಟ್‌ಗಾಗಿ ಮಾಜಿ ಸಚಿವ ಡಾ.ಕೆ. ಸುಧಾಕರ್ ಮತ್ತು ಅಲೋಕ್ ವಿಶ್ವನಾಥ್ ಕಸರತ್ತು ನಡೆಸಿದ್ದಾರೆ. ಡಾ.ಕೆ. ಸುಧಾಕರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಅಲೋಕ್ ಯಲಹಂಕ ಶಾಸಕ ವಿಶ್ವನಾಥ್ ಅವರ ಪುತ್ರ.

ಸುಧಾಕರ್ ಈಗಾಗಲೇ ದೆಹಲಿಯಲ್ಲಿ ಹೈ ಕಮಾಂಡ್ ಭೇಟಿ ಮಾಡಿದ್ದಾರೆ. ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಹಾಗೂ ಹೆಚ್.ಡಿ.ದೇವೇಗೌಡರನ್ನು ಭೇಟಿ ಮಾಡಿ ಸಹಕಾರ ಕೋರಿದ್ದಾರೆ. ವಿಧಾನಸಭೆ ಚುನಾವಣೆ ಸೋಲಿನ ಅನುಕಂಪ ಮತ್ತು ಮೋದಿ ನಾಮಬಲದಿಂದ ಗೆಲ್ಲಬಹುದು ಎನ್ನುವುದು ಇವರ ಲೆಕ್ಕಾಚಾರ. ಕುಮಾರಸ್ವಾಮಿ ಅವರೂ ಇಲ್ಲಿಂದ ಕಣಕ್ಕಿಳಿಯಲು ಚಿಂತನೆ ನಡೆಸಿದ್ದಾರೆ ಎಂದು ಅವರ ಆಪ್ತರು ಹೇಳುತ್ತಾರೆ.

(ರಾಜಕೀಯ ವಿಶ್ಲೇಷಣೆ - ಎಚ್. ಮಾರುತಿ, ಬೆಂಗಳೂರು)

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

IPL_Entry_Point