ಲೋಕಸಭಾ ಚುನಾವಣೆ 2024; ಕರ್ನಾಟಕದಲ್ಲಿ ಭರ್ಜರಿ ಜಯದ ನಿರೀಕ್ಷೆಯಲ್ಲಿದೆ ಕಾಂಗ್ರೆಸ್, ಬಿಜೆಪಿಗೆ ಸ್ಥಾನ ನಷ್ಟವಾಗುವ ಭೀತಿ
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆ 2024; ಕರ್ನಾಟಕದಲ್ಲಿ ಭರ್ಜರಿ ಜಯದ ನಿರೀಕ್ಷೆಯಲ್ಲಿದೆ ಕಾಂಗ್ರೆಸ್, ಬಿಜೆಪಿಗೆ ಸ್ಥಾನ ನಷ್ಟವಾಗುವ ಭೀತಿ

ಲೋಕಸಭಾ ಚುನಾವಣೆ 2024; ಕರ್ನಾಟಕದಲ್ಲಿ ಭರ್ಜರಿ ಜಯದ ನಿರೀಕ್ಷೆಯಲ್ಲಿದೆ ಕಾಂಗ್ರೆಸ್, ಬಿಜೆಪಿಗೆ ಸ್ಥಾನ ನಷ್ಟವಾಗುವ ಭೀತಿ

ಲೋಕಸಭಾ ಚುನಾವಣೆ 2024 ಸನ್ನಿಹಿತವಾಗಿದ್ದು, ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸತೊಡಗಿವೆ. ಈ ನಡುವೆ, ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಜಯದ ನಿರೀಕ್ಷೆ ಇದ್ದರೆ ಮತ್ತು ಬಿಜೆಪಿ ಕೂಡ 2019ರ ಫಲಿತಾಂಶ ಮೀರುವ ಸಾಧನೆ ಮಾಡಲು ಪ್ರಯತ್ನಿಸಿದೆ. ಈ ನಡುವೆ ಬಂದ ಸಮೀಕ್ಷೆಯೊಂದು ಕರ್ನಾಟಕದ ಚಿತ್ರಣ ನೀಡಿದ್ದು, ಅದರ ವಿವರ ಇಲ್ಲಿದೆ.

ಲೋಕಸಭಾ ಚುನಾವಣೆ 2024; ಕರ್ನಾಟಕದಲ್ಲಿ ಕಾಂಗ್ರೆಸ್‌ v/s ಬಿಜೆಪಿ (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ 2024; ಕರ್ನಾಟಕದಲ್ಲಿ ಕಾಂಗ್ರೆಸ್‌ v/s ಬಿಜೆಪಿ (ಸಾಂಕೇತಿಕ ಚಿತ್ರ)

ಬೆಂಗಳೂರು: ಲೋಕಸಭೆ ಚುನಾವಣೆ (Lok Sabha Election 2024) ಸನ್ನಿಹಿತವಾಗಿದ್ದು, ಅಭ್ಯರ್ಥಿಗಳ ಘೋಷಣೆ ಶುರುವಾಗಿದೆ. ಈ ನಡುವೆ, ಟೈಮ್ಸ್ ನೌ-ಇಟಿಜಿ ಸಮೀಕ್ಷೆ ಪ್ರಕಟವಾಗಿದ್ದು, ಕರ್ನಾಟಕದ ಮಟ್ಟಿಗೆ ಬಿಜೆಪಿಗೆ ಹಿನ್ನಡೆಯಾಗುವ ಲಕ್ಷಣಗಳನ್ನು ಸೂಚಿಸಿದೆ. ಅದೇ ರೀತಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಜಯ ಸುಳಿವನ್ನೂ ನೀಡಿದೆ.

ಕಳೆದ ವರ್ಷ (2023) ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಭರ್ಜರಿ ಬಹುಮತ ಪಡೆದು ಗೆಲುವು ಕಂಡಿತು. ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರ ರಚನೆಯೂ ಆಗಿದೆ. ಈ ಗೆಲುವಿನೊಂದಿಗೆ ನಿಕಟಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿಯನ್ನು ಸೋಲಿಸಿತ್ತು. ಈ ಗೆಲುವಿನ ಉತ್ಸಾಹವನ್ನು ಉಳಿಸಿಕೊಂಡಿರುವ ಕಾಂಗ್ರೆಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸುವ ಹುಮ್ಮಸ್ಸಿನಲ್ಲಿದೆ. ಇದಕ್ಕಾಗಿ ಐದು ಗ್ಯಾರೆಂಟಿ ಯೋಜನೆಗಳನ್ನು ನೆಚ್ಚಿಕೊಂಡಿದೆ.

ಇನ್ನೊಂದೆಡೆ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಬಿಜೆಪಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಕಳೆದ ಸಲದ ಸಾಧನೆಯನ್ನು ಮೀರಿಸುವ ಸಾಧನೆ ಮಾಡಲು ಮುಂದಾಗಿದೆ. ಈ ತೀವ್ರ ರಾಜಕೀಯ ಚಟುವಟಿಕೆಗಳ ಮಧ್ಯೆ, ಟೈಮ್ಸ್ ನೌ-ಇಟಿಜಿ ಸಮೀಕ್ಷೆಯು ಕಾಂಗ್ರೆಸ್‌ ಪಕ್ಷಕ್ಕೆ ಶುಭ ಸುದ್ದಿ ನೀಡಿದೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಗೆಲುವಿನ ಸುಳಿವು

ಟೈಮ್ಸ್ ನೌ-ಇಟಿಜಿ ಸಮೀಕ್ಷೆಯ ಪ್ರಕಾರ, ಕರ್ನಾಟಕದಲ್ಲಿ ವಿಧಾನಸಭಾ ವಿಜಯದ ಅಲೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಬಲವಾಗಿದೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ 10 ಶೇಕಡ ಹೆಚ್ಚುವರಿ ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಇನ್ನೊಂದೆಡೆ, 2019 ರ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಗಮನಿಸಿದರೆ, ಬಿಜೆಪಿಗೆ ಸ್ಥಾನಗಳ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ಆದಾಗ್ಯೂ, ಕರ್ನಾಟಕದಲ್ಲಿ ಉತ್ತಮ ಪ್ರದರ್ಶನ ನೀಡಲು ಬಿಜೆಪಿ ಶ್ರಮಿಸುತ್ತಿದೆ.

2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕರ್ನಾಟಕ ಸಚಿವ ಸಂಪುಟದ ಬಹುತೇಕ ಹಾಲಿ ಸಚಿವರು ಆಸಕ್ತಿ ಹೊಂದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸಚಿವರಾದ ದಿನೇಶ್ ಗುಂಡೂರಾವ್, ಬಿ.ನಾಗೇಂದ್ರ ಮುಂತಾದವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಜಿಸುತ್ತಿದೆ. ಆದರೆ ಅವರು ದೆಹಲಿಗೆ ಹೋಗಲು ಆಸಕ್ತಿ ಹೊಂದಿಲ್ಲ ಎಂದು ವರದಿಗಳು ತಿಳಿಸಿವೆ.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ವಿಧಾನಸಭಾ ಚುನಾವಣೆಯ ಜಾತಿ ಸಮೀಕರಣವನ್ನು ಪುನರಾವರ್ತಿಸಲು ಪ್ರಯತ್ನಿಸುತ್ತಿದೆ. ಇದಕ್ಕೆ ಕರ್ನಾಟಕದ ಕೆಲವು ಪ್ರಭಾವಿ ಶಾಸಕರ ಬೆಂಬಲ ಬೇಕಾಗುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

2019ರ ಲೋಕಸಭೆ ಚುನಾವಣೆ; ಕರ್ನಾಟಕದ ಫಲಿತಾಂಶ ಹೀಗಿತ್ತು

ಕರ್ನಾಟಕದಲ್ಲಿ ಕಳೆದ ಲೋಕಸಭೆ ಚುನಾವಣೆ (2019ರಲ್ಲಿ) ಯಲ್ಲಿ ಒಟ್ಟು 28 ಸ್ಥಾನಗಳ ಪೈಕಿ ಬಿಜೆಪಿ 25, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ 1 ಸ್ಥಾನಗಳನ್ನು ಗೆದ್ದಿದ್ದವು. ಒಂದು ಸ್ಥಾನವನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡ ಸ್ವತಂತ್ರ ಅಭ್ಯರ್ಥಿ ಸುಮಲತಾ ಗೆದ್ದುಕೊಂಡಿದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸಿದ ದಕ್ಷಿಣ ಭಾರತದ ಏಕೈಕ ರಾಜ್ಯ ಕರ್ನಾಟಕ.

ಕರ್ನಾಟಕದ ಏಳು ಅಭ್ಯರ್ಥಿಗಳು ಸೇರಿ 39 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದ ದಿನವೇ ಈ ಸಮೀಕ್ಷೆ ಹೊರಬಿದ್ದಿದೆ. ಬಿಜಾಪುರದಿಂದ ಎಚ್.ಆರ್.ಆಲಗೂರು, ಹಾವೇರಿಯಿಂದ ಆನಂದಸ್ವಾಮಿ ಗಡ್ಡದೇವರ ಮಠ, ತುಮಕೂರಿನಿಂದ ಎಸ್.ಪಿ.ಮುದ್ದಹನುಮೇಗೌಡ, ಮಂಡ್ಯದಿಂದ ವೆಂಕಟರಾಮೇಗೌಡ, ಬೆಂಗಳೂರು ಗ್ರಾಮಾಂತರದಿಂದ ಡಿ.ಕೆ.ಸುರೇಶ್, ಶಿವಮೊಗ್ಗದಿಂದ ಗೀತಾ ಶಿವರಾಜ್ ಕುಮಾರ್, ಹಾಸನದಿಂದ ಶ್ರೇಯಸ್ ಪಟೇಲ್ ಕಣದಲ್ಲಿದ್ದಾರೆ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

Whats_app_banner