ಕನ್ನಡ ಸುದ್ದಿ  /  Karnataka  /  Lok Sabha Election 2024 Congress Finalized K V Gautham As Its Candidate In Kolar Lok Sabha Constituency Uks

ಲೋಕಸಭಾ ಚುನಾವಣೆ; ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ ವಿ ಗೌತಮ್‌, ಬಣ ಬಡಿದಾಟಕ್ಕೆ ಬ್ರೇಕ್‌

ಲೋಕಸಭಾ ಚುನಾವಣೆಗೆ ಕರ್ನಾಟಕದ 28 ಕ್ಷೇತ್ರಗಳ ಪೈಕಿ ಕೋಲಾರ ಬಾಕಿ ಉಳಿಸಿದ್ದ ಕಾಂಗ್ರೆಸ್ ಪಕ್ಷ, ಇಂದು (ಮಾರ್ಚ್ 30) ಅಲ್ಲಿನ ಅಭ್ಯರ್ಥಿಯಾಗಿ ಕೆ ವಿ ಗೌತಮ್ ಹೆಸರನ್ನು ಪ್ರಕಟಿಸಿದೆ. ಇದರೊಂದಿಗೆ ಬಣ ಬಡಿದಾಟಕ್ಕೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ.

ಕೆ.ಆರ್ ರಮೇಶ್ ಕುಮಾರ್‌, ಕೆ ವಿ ಗೌತಮ್‌ ( ಕಾಂಗ್ರೆಸ್ ಪಕ್ಷದ ಕೋಲಾರ ಅಭ್ಯರ್ಥಿ), ಕೆ ಎಚ್ ಮುನಿಯಪ್ಪ
ಕೆ.ಆರ್ ರಮೇಶ್ ಕುಮಾರ್‌, ಕೆ ವಿ ಗೌತಮ್‌ ( ಕಾಂಗ್ರೆಸ್ ಪಕ್ಷದ ಕೋಲಾರ ಅಭ್ಯರ್ಥಿ), ಕೆ ಎಚ್ ಮುನಿಯಪ್ಪ

ಕೋಲಾರ: ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಕೋಲಾರ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿ ಕೆ ವಿ ಗೌತಮ್ ಅವರ ಹೆಸರನ್ನು ಕಾಂಗ್ರೆಸ್ ಪಕ್ಷ ಪ್ರಕಟಿಸಿದೆ. ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯ ಆಯ್ಕೆ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಿನ ಸಂಗತಿಯಾಗಿತ್ತು.

ಕೋಲಾರ ಲೋಕಸಭೆ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರಾದ ಕೆ ಆರ್‌ ರಮೇಶ್‌ ಕುಮಾರ್‌ ಹಾಗೂ ಸಚಿವ ಕೆಎಚ್‌ ಮುನಿಯಪ್ಪ ಅವರ ಬಣದ ನಡುವೆ ಭಾರೀ ಸಂಘರ್ಷ ನಡೆದಿತ್ತು. ಎಡಗೈ ಮತ್ತು ಬಲಗೈ ಸಮುದಾಯ ಪ್ರತಿನಿಧಿಸುವ ಎರಡು ಬಣಗಳ ನಾಯಕರು ಪ್ರಸ್ತಾಪ ಮಾಡಿದ್ದ ನಾಯಕರನ್ನು ಕೈ ಬಿಟ್ಟಿರುವ ಹೈಕಮಾಂಡ್, ತಟಸ್ಥ ಅಭ್ಯರ್ಥಿಗೆ ಟಿಕೆಟ್ ಘೋಷಣೆ ಮಾಡಿದೆ. ಅಂದರೆ ಬೆಂಗಳೂರು ಮೂಲದ ಕೆ ವಿ ಗೌತಮ್‌ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.

ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಅಚ್ಚರಿಯ ಅಭ್ಯರ್ಥಿಯನ್ನು ಪ್ರಕಟಿಸಿ ಗಮನಸೆಳೆದಿದೆ. ಈ ವಿಚಾರವಾಗಿ ನಿನ್ನೆ (ಮಾರ್ಚ್ 29) ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಮಾತನಾಡುತ್ತ, ಕೋಲಾರದಲ್ಲಿ ಇಬ್ಬರ ಜಗಳದ ಕಾರಣ ಮೂರನೆಯವರಿಗೆ ಪಕ್ಷ ಟಿಕೆಟ್ ನೀಡುವ ಸಾಧ್ಯತೆ ಇದೆ. ಅಚ್ಚರಿಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬಹುದು ಎಂದು ನನ್ನ ಮನಸ್ಸು ಹೇಳುತ್ತಿದೆ ಎಂದು ಸೂಚ್ಯವಾಗಿ ಕೆ ಎಚ್ ಮುನಿಯಪ್ಪ ಅಥವಾ ಅವರ ಅಳಿಯನಿಗೆ ಟಿಕೆಟ್ ಸಿಗಲ್ಲ ಎಂಬುದನ್ನು ಸೂಚಿಸಿದ್ದರು.

ಕಳೆದ ಬುಧವಾರ ನಡೆದಿತ್ತು ಭಾರಿ ರಾಜಕೀಯ ಪ್ರಹಸನ

ಕೋಲಾರ ಕ್ಷೇತ್ರದ ಟಿಕೆಟ್‌ಗೆ ಸಂಬಂಧಿಸಿದ ಕಳೆದ ಬುಧವಾರ (ಮಾರ್ಚ್‌ 27) ಇಡೀ ದಿನ ರಾಜಕೀಯ ಪ್ರಹಸನ ನಡೆಸಿದ್ದ ಶಾಸಕರು, ವಿಧಾನಪರಿಷತ್ತಿನ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ವಿಶೇಷ ಎಂದರೆ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಈ ಬಣದ ಮುಂಚೂಣಿಯಲ್ಲಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಪ್ರವೇಶ ಮಾಡಿದ ಬಳಿಕ ರಾಜೀನಾಮೆ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದರು.

ಈ ಒತ್ತಡದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ರಾಜೀನಾಮೆ ನೀಡಲು ಮುಂದಾದ ಮೂವರು ಶಾಸಕರು, ವಿಧಾನ ಪರಿಷತ್‌ನ ಇಬ್ಬರು ಸದಸ್ಯರ ಜೊತೆ ಗುರುವಾರ ಸಂಜೆ ಸಭೆ ನಡೆಸಿದರು. ಅವರೆಲ್ಲರ ಅಭಿಪ್ರಾಯವನ್ನೂ ಆಲಿಸಿದರು.

ಮುನಿಯಪ್ಪ ಅವರ ಕುಟುಂಬಕ್ಕೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು. ಅವರದ್ದು ಎಡಗೈ ಸಮುದಾಯವಾಗಿದ್ದು, ಇಲ್ಲಿ ಬಲಗೈ ಸಮುದಾಯಕ್ಕೆ ಟಿಕೆಟ್ ನೀಡಿದರೆ ಗೆಲುವು ಸುಲಭ ಎಂದು ಪ್ರತಿಪಾದಿಸಿದ್ದರು.

‘ಪರಿಶಿಷ್ಟ ಜಾತಿಗೆ ಮೀಸಲಾದ 5 ಕ್ಷೇತ್ರಗಳ ಪೈಕಿ ಮೂರನ್ನು ಬಲಗೈ ಸಮುದಾಯದವರಿಗೆ ನೀಡಲಾಗಿದೆ. ಚಿತ್ರದುರ್ಗದಲ್ಲಿ ಎಡಗೈ ಸಮುದಾಯಕ್ಕೆ ನೀಡಲಾಗಿದ್ದು, ಕೋಲಾರದಲ್ಲೂ ಬಲಗೈಗೆ ನೀಡಿದರೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಎಡಗೈ ಸಮುದಾಯದ ಆಕ್ರೋಶಕ್ಕೆ ಎಡೆ ಮಾಡಿಕೊಡುತ್ತದೆ. ಹೀಗಾಗಿ, ಕೋಲಾರದಲ್ಲಿ ಎಡಗೈ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು" ಎಂಬ ಆಗ್ರಹವೂ ಕೇಳಿಬಂದಿತ್ತು. ಕೊನೆಗೆ, ‘ಮುನಿಯಪ್ಪ ಕುಟುಂಬದವರನ್ನು ಬಿಟ್ಟು ಎಡಗೈ ಸಮುದಾಯದ ಯಾರಿಗೇ ಆದರೂ ಟಿಕೆಟ್‌ ಕೊಡುವ ವಿಷಯದಲ್ಲಿ ನಿಮ್ಮ ಮತ್ತು ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿರುತ್ತೇವೆ’ ಎಂದು ಅಸಮಾಧಾನಿತ ಶಾಸಕರು ವಾಗ್ದಾನ ಮಾಡಿದ್ದರು.

ಇದರಂತೆ ಈಗ ಕೆ ವಿ ಗೌತಮ್ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಪ್ರಕಟಿಸಿದ್ದು, ಎರಡೂ ಬಣದವರು ಅಚ್ಚರಿ ಪಡುವಂತೆ ಮಾಡಿದೆ. ಕೆ ವಿ ಗೌತಮ್‌ ಅವರು ಬೆಂಗಳೂರಿನ ಮಾಜಿ ಕಾರ್ಪೊರೇಟರ್‌ ವಿಜಯಕುಮಾರ್ ಅವರ ಪುತ್ರ. ಬೆಂಗಳೂರು ಕೇಂದ್ರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.