ಕನ್ನಡ ಸುದ್ದಿ  /  ಕರ್ನಾಟಕ  /  ಫಲಿತಾಂಶ ವಿಶ್ಲೇಷಣೆ: ಜಾತಿ ಸಮೀಕರಣ, ನೋಟಾ ಪ್ರಾಬಲ್ಯ ನಡುವೆ ಗೆದ್ದ ಚೌಟ; ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಕ್ಯಾಪ್ಟನ್

ಫಲಿತಾಂಶ ವಿಶ್ಲೇಷಣೆ: ಜಾತಿ ಸಮೀಕರಣ, ನೋಟಾ ಪ್ರಾಬಲ್ಯ ನಡುವೆ ಗೆದ್ದ ಚೌಟ; ದಕ್ಷಿಣ ಕನ್ನಡಕ್ಕೆ ಬ್ರಿಜೇಶ್ ಕ್ಯಾಪ್ಟನ್

Dakshina Kannada Lok Sabha Elections Result: ಬಿಜೆಪಿಯ ಭದ್ರಕೋಟೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಗೆಲುವು ಸಾಧಿಸಿದ್ದಾರೆ. ಎಲ್ಲಾ ಲೆಕ್ಕಾಚಾರಗಳ ಹೊರತಾಗಿಯೂ ಕಾಂಗ್ರೆಸ್‌ ಅಭ್ಯರ್ಥಿ ಆರ್‌ ಪದ್ಮರಾಜ್‌ ಸೋಲು ಕಂಡಿದ್ದಾರೆ. (ಹರೀಶ ಮಾಂಬಾಡಿ, ಮಂಗಳೂರು)

ಜಾತಿ ಸಮೀಕರಣ, ನೋಟಾ ಪ್ರಾಬಲ್ಯ ನಡುವೆ ಗೆದ್ದ ಬ್ರಿಜೇಶ್ ಕ್ಯಾಪ್ಟನ್ ಚೌಟ
ಜಾತಿ ಸಮೀಕರಣ, ನೋಟಾ ಪ್ರಾಬಲ್ಯ ನಡುವೆ ಗೆದ್ದ ಬ್ರಿಜೇಶ್ ಕ್ಯಾಪ್ಟನ್ ಚೌಟ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದ ಇಬ್ಬರೂ ಅಭ್ಯರ್ಥಿಗಳು ಲೋಕಸಭೆ ಸ್ಪರ್ಧೆಗೆ ಹೊಸಮುಖಗಳೇ. ಇಬ್ಬರೂ ವಿದ್ಯಾವಂತರು. ಹೀಗಾಗಿ ಪ್ರಚಾರ ಸಂದರ್ಭ ಭಾರೀ ಪೈಪೋಟಿ. ಜತೆಗೆ ಜಾತಿ ಸಮೀಕರಣ ಬೇರೆ. ಆದರೆ ಕಳೆದ ಬಾರಿಗಿಂತ ಮತಗಳ ಅಂತರ ಕಡಿಮೆಯಾದರೂ ಬಿಜೆಪಿ ಗೆಲುವಿಗೆ ಇದು ಅಡ್ಡಿಯಾಗಿಲ್ಲ. ಕ್ಯಾಪ್ಟನ್ ಬ್ರಿಜೇಶ್ ಚೌಟ ಲೋಕಸಭೆ ಪ್ರವೇಶಿಸಲಿದ್ದಾರೆ. ನ್ಯಾಯವಾದಿ ಆರ್ ಪದ್ಮರಾಜ್ ಪ್ರಬಲ ಪೈಪೋಟಿ ನೀಡಿ, ಪಕ್ಷ ತನಗೆ ನೀಡಿದ ಅವಕಾಶಕ್ಕೆ ತಕ್ಕುದಾಗಿಯೇ ಫೈಟ್ ನೀಡಿದ್ದಾರೆ. ಆದರೂ ಚೌಟ ಗೆಲುವಿನ ನಾಗಾಟೋಟವನ್ನು ತಡೆಯಲು ಆಗಲಿಲ್ಲ. ನಿರೀಕ್ಷೆಯಂತೆ 1 ಲಕ್ಷಕ್ಕೂ ಅಧಿಕ (149208) ಮತಗಳ ಅಂತರದಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಜಯಶಾಲಿಯಾಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬ್ರಿಜೇಶ್ ಚೌಟ ಬಿಜೆಪಿಯ ಸಾಂಪ್ರದಾಯಿಕ ಮತಗಳತ್ತ ಕಣ್ಣಿಟ್ಟಿದ್ದರು. ಕಾಂಗ್ರೆಸ್ ಅಭ್ಯರ್ಥಿ ಆರ್ ಪದ್ಮರಾಜ್ ಬಿಲ್ಲವ ಮತಗಳತ್ತ ಕಣ್ಣಿಟ್ಟಿದ್ದರು ಎಂದು ಹೇಳಲಾಗಿತ್ತು. ಸ್ವತಃ ಸಮುದಾಯದ ಮುಖಂಡರಾಗಿ ಜನಾರ್ದನ ಪೂಜಾರಿ ಅವರ ಶಿಷ್ಯನೆಂದೇ ಬಿಂಬಿಸಲ್ಪಟ್ಟಿದ್ದ ಪದ್ಮರಾಜ್ ಅವರು ಚುನಾವಣೆ ಪ್ರಚಾರದಲ್ಲೂ ಹಿಂದೆ ಬಿದ್ದಿರಲಿಲ್ಲ. ಜತೆಗೆ ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ಕೊಟ್ಟ ಕಾರಣ ಬಿಜೆಪಿ ಪಕ್ಷದೊಳಗೆ ಇದ್ದಿರಬಹುದಾದ ಮುನಿಸು, ಒಳಬೇಗುದಿಯ ಲಾಭ ತನಗಾಗಿದೆ ಎಂದು ಕಾಂಗ್ರೆಸ್ ನಂಬಿತ್ತು. ಮುಸ್ಲಿಂ ಸಮುದಾಯದ ಮತ ಈ ಸಲ ತನಗೇ ‘ಗ್ಯಾರಂಟಿ’ ಎಂಬುದು ಕಾಂಗ್ರೆಸ್ ಪಕ್ಷದ ನಂಬಿಕೆಯಾಗಿತ್ತು . ನಳಿನ್ ಕುಮಾರ್ ಕಟೀಲ್ ಅವರಿಗೆ ಟಿಕೆಟ್ ನಿರಾಕರಿಸಿ ಚೌಟ ಅವರಿಗೆ ನೀಡಿದ್ದು, ಒಂದು ಹಂತದಲ್ಲಿ ನಳಿನ್ ಬೆಂಬಲಿಗರೆನಿಸಿಕೊಂಡವರ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿತ್ತು. ಅದೇನೇ ಇದ್ದರೂ ಬಿಜೆಪಿ ಗೆಲುವಿನ ಹಂತಕ್ಕೆ ಹೋಗಿ ಜಯಶಾಲಿಯಾಗಿದೆ. ಹಾಗೆ ನೋಡಿದರೆ ಜಿಲ್ಲೆಯಲ್ಲ ಭಾರಿ ಸದ್ದು ಮಾಡಿದ್ದ ನೋಟಾಗೆ 1 ಲಕ್ಷ ಮತಗಳು ಅದಕ್ಕೆ ಬೀಳಬಹುದು ಎನ್ನಲಾಗಿತ್ತು. ಆದರೆ ಅದು ವರ್ಕೌಟ್ ಆಗಿಲ್ಲವಾದರೂ, 23576 ಮತಗಳು ನೋಟಾ ಪಾಲಗಿವೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ಫಲಿತಾಂಶದ

 • ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಗೆಲುವು
 • ಬಿಜೆಪಿ ಅಭ್ಯರ್ಥಿ ಚೌಟ 764132 ಮತಗಳೊಂದಿಗೆ 149208 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.
 • ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ 614924 ಮತ ಪಡೆದಿದ್ದಾರೆ.
 • ಬಹುಜನ ಸಮಾಜ ಪಾರ್ಟಿ ಅಭ್ಯರ್ಥಿ ಕಾಂತಪ್ಪ ಅಲಂಗಾರ್ 4232 ಮತ ಗಳಿಸಿದ್ದಾರೆ.
 • ಕರುಣಾಡ ಸೇವಕರ ಪಾರ್ಟಿ ಅಭ್ಯರ್ಥಿ ದುರ್ಗಾ ಪ್ರಸಾದ್ 2592 ಮತ ಗಳಿಸಿದ್ದಾರೆ.
 • ಪಕ್ಷೇತರ ಅಭ್ಯರ್ಥಿ ಸುಪ್ರಿತ್ ಕುಮಾರ್ ಪೂಜಾರಿಗೆ 1901 ಮತ.
 • ಪಕ್ಷೇತರ ಅಭ್ಯರ್ಥಿ ಮ್ಯಾಕ್ಸಿಮ್ ಪಿಂಟೊ 1690 ಮತ.
 • ಪಕ್ಷೇತರ ಅಭ್ಯರ್ಥಿ ದೀಪಕ್ ರಾಜೇಶ್ ಕುವೆಲ್ಲೊ 976 ಮತ.
 • ಉತ್ತಮ ಪ್ರಜಾಕೀಯ ಪಾರ್ಟಿಯ ಮನೋಹರ್ 971 ಮತ.
 • ಕರ್ನಾಟಕ ರಾಷ್ಟ್ರ ಸಮಿತಿಯ ರಂಜಿನಿ ಎಂ 776 ಮತ.
 • ಈ‌ ಬಾರಿ ನೋಟಕ್ಕೆ 23576 ಮತ ಚಲಾವಣೆ‌ ಆಗಿದೆ.

ಇದನ್ನೂ ಓದಿ | Karnataka Results: ಕರ್ನಾಟಕದಲ್ಲಿ ಸತತ 5ನೇ ಬಾರಿ ಬಿಜೆಪಿಗೆ ಮುನ್ನಡೆ, 25 ವರ್ಷ ಬಳಿಕವೂ ಕಾಂಗ್ರೆಸ್‌ ಎರಡಂಕಿ ಸಾಧನೆ ಆಗಲಿಲ್ಲ

ಕಳೆದ ಬಾರಿಯ ಫಲಿತಾಂಶ ಹೇಗಿತ್ತು?

ನಳಿನ್ ಕುಮಾರ್ ಕಟೀಲ್ (ಬಿಜೆಪಿ) -774285. ಮಿಥುನ್ ಎಂ. ರೈ (ಕಾಂಗ್ರೆಸ್) – 449664. ಮಹಮ್ಮದ್ ಎಲಿಯಾಸ್ (ಎಸ್.ಡಿ.ಪಿ.ಐ.) – 46,839. ಸತೀಶ್ ಸಾಲ್ಯಾನ್ (ಬಿ.ಎಸ್.ಪಿ.) -4713. ಅಲೆಕ್ಸಾಂಡರ್ (ಪಕ್ಷೇತರ) 2752, ಎಚ್.ಸುರೇಶ್ ಪೂಜಾರಿ (ಪಕ್ಷೇತರ) -2315, ವೆಂಕಟೇಶ ಬೆಂಡೆ – ಪಕ್ಷೇತರ -1702, ವಿಜಯ್ ಶ್ರೀನಿವಾಸ್ (ಯುಪಿಜೆಪಿ)- 1629, ಸುಪ್ರೀತ್ ಕುಮಾರ್ ಪೂಜಾರಿ (ಎಚ್.ಜೆ.ಪಿ.) -948, ಮ್ಯಾಕ್ಸಿಂ ಪಿಂಟೊ (ಪಕ್ಷೇತರ) 908, ದೀಪಕ್ ರಾಜೇಶ್ ಕೊಯೆಲ್ಲೊ (ಪಕ್ಷೇತರ ) 748, ಮಹಮ್ಮದ್ ಖಾಲಿದ್ (ಪಕ್ಷೇತರ ) 602, ಅಬ್ದುಲ್ ಹಮೀದ್ (ಪಕ್ಷೇತರ) – 554, ನೋಟಾ – 7380. ಒಟ್ಟು 13,45,039 ಮತಗಳು ಚಲಾವಣೆ.

ಈ ಬಾರಿಯ ಮತದಾನದ ವಿವರ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಈ ಬಾರಿ ಶೇ77.56 ಮತ ಚಲಾವಣೆಯಾಗಿದೆ. 14,09,519 ಮತಗಳು ಈ ಬಾರಿ ಚಲಾವಣೆಯಾಗಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ 189155, ಮೂಡುಬಿದಿರೆ ಕ್ಷೇತ್ರದಲ್ಲಿ 160767, ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ 188825, ಮಂಗಳೂರು ನಗರ ದಕ್ಷಿಣ ಕ್ಷೇತ್ರದಲ್ಲಿ 169669, ಮಂಗಳೂರು ಕ್ಷೇತ್ರದಲ್ಲಿ 164637, ಬಂಟ್ವಾಳ ಕ್ಷೇತ್ರದಲ್ಲಿ 187361, ಪುತ್ತೂರು ಕ್ಷೇತ್ರದಲ್ಲಿ 175731, ಸುಳ್ಯ ಕ್ಷೇತ್ರದಲ್ಲಿ 173374 ಮತ ಚಲಾವಣೆಯಾಗಿದೆ. ಈ ಬಾರಿ ಸುಮಾರು 59 ಸಾವಿರ ಮತಗಳು ಅಧಿಕ ಚಲಾವಣೆಯಾಗಿವೆ.

ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ ಸಂಘದ ಪ್ರೇರಣೆಯಿಂದ ಮುಂದೆ ಭಾರತೀಯ ಸೇನೆಗೆ ಸೇರಿದ್ದರು. ನಿವೃತ್ತಿ ಬಳಿಕ ಮಂಗಳೂರಿಗೆ ಆಗಮಿಸಿ ಆರೆಸ್ಸೆಸ್‌ನ ವಿವಿಧ ಆಯಾಮಗಳಲ್ಲಿ ತೊಡಗಿಸಿಕೊಂಡು 2013ರಲ್ಲಿ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. 2016-19ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿ ಪಕ್ಷದ ಪರ ಕೆಲಸ ಆರಂಭಿಸಿದರು. 2019ರಲ್ಲಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿದ್ದ ಚೌಟ, 2023ರ ವಿಧಾನಸಭೆ ಚುನಾವಣೆಯಲ್ಲಿ ಬೈಂದೂರು ಕ್ಷೇತ್ರದ ಪ್ರಭಾರಿಯಾಗಿದ್ದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು

ಲೋಕಸಭೆ ಚುನಾವಣೆ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ | Dakshina Kannada Result: ದಕ್ಷಿಣ ಕನ್ನಡದಲ್ಲಿ ಬಿಜೆಪಿಯ ಬ್ರಿಜೇಶ್‌ ಚೌಟ ಗೆಲುವು; ಕಾಂಗ್ರೆಸ್‌ನ ಪದ್ಮರಾಜ್‌ಗೆ ಸೋಲು

ಟಿ20 ವರ್ಲ್ಡ್‌ಕಪ್ 2024