ಲೋಕಸಭೆ ಚುನಾವಣೆ 2024: ಬೆಂಗಳೂರು ಗ್ರಾಮಾಂತರದಲ್ಲಿ 4ನೇ ಬಾರಿ ಡಿಕೆ ಸುರೇಶ್ ಕೈ ಹಿಡಿಯುವನೇ ಮತದಾರ; ಎದುರಾಳಿ ಯಾರು?
ಕರ್ನಾಟಕದಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಲೋಕಸಭೆ ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಈ ಪೈಕಿ ಬೆಂಗಳೂರು ಗ್ರಾಮಾಂತರ ಕೈ ನಾಯಕರ ನೆಚ್ಚಿನ ಕ್ಷೇತ್ರವಾಗಿದೆ.
ಬೆಂಗಳೂರು: 2019ರ ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರ ದೇಶಾದ್ಯಂತ ಗಮನ ಸೆಳೆದಿತ್ತು. ಕಾರಣ ಈ ಕ್ಷೇತ್ರದಿಂದ ಡಿಕೆ ಸುರೇಶ್ ಆಯ್ಕೆಯಾಗಿದ್ದ ಏಕೈಕ ಕಾಂಗ್ರೆಸ್ ಸಂಸದರಾಗಿದ್ದರು. ಇದೀಗ ಕಾಂಗ್ರೆಸ್ ಪಕ್ಷ ಟಿಕೆಟ್ ನಿರೀಕ್ಷೆಯಂತೆ ಹಾಲಿ ಸಂಸದರಿಗೆ ಟಿಕೆಟ್ (Lok Sabha Election 2024) ಘೋಷಿಸಿದೆ. ಈ ಕ್ಷೇತ್ರ ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ ಎನ್ನುವುದು ವಿಶೇಷ. ಮೂರು ಜಿಲ್ಲೆಗಳ 8 ವಿಧಾನಸಭಾ ಕ್ಷೇತ್ರಗಳು ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತವೆ. ರಾಮನಗರ ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್ ಹಾಗೂ ತುಮಕೂರು ಜಿಲ್ಲೆಯ ಕುಣಿಗಲ್ ಸೇರಿ 8 ವಿಧಾನಸಭಾ ಕ್ಷೇತ್ರಗಳು ಸೇರಿವೆ. ರಾಮನಗರ ರೇಷ್ಮೆಗೆ, ಚನ್ನಪಟ್ಟಣ ಗೊಂಬೆಗಳ ತಯಾರಿಕೆಗೆ ಹೆಸರುವಾಸಿಯಾಗಿದ್ದರೆ ಬೆಂಗಳೂರಿನ ಹೊರವಲಯದ ಈ ಕ್ಷೇತ್ರ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಖ್ಯಾತಿ ಪಡೆದಿದೆ. ಭೂಮಿಯ ಬೆಲೆ ಚಿನ್ನಕ್ಕಿಂತಲೂ ದುಬಾರಿಯಾಗಿದೆ.
ಪ್ರಸ್ತುತ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ, 2 ರಲ್ಲಿ ಬಿಜೆಪಿ ಹಾಗೂ 1 ರಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೆ ಹೋಲಿಸಿದರೆ, ಕೈ ಬಲ ವೃದ್ಧಿಸಿದೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಡಿ.ಕೆ. ಶಿವಕುಮಾರ್ ಅವರ ಸಹೋದರನಾಗಿರುವ ಸುರೇಶ್ ಅವರಿಗೆ ಖಚಿತವಾಗಿತ್ತು. ಬೇರೆ ಯಾರೂ ಟಿಕೆಟ್‌ಗೆ ಅರ್ಜಿ ಸಲ್ಲಿಸಿರಲಿಲ್ಲ. ಟಿಕೆಟ್ ಘೋಷಣೆಗೂ ಮೊದಲೇ ಅವರು ಭರ್ಜರಿ ಪ್ರಚಾರ ಆರಂಭಿಸಿದ್ದರು. ಅಧಿಕೃತವಾಗಿ ಟಿಕೆಟ್ ಘೋಷಣೆ ಯಾಗಿರುವುದು ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚಿಸಿದೆ ಎಂದು ಮುಖಂಡರು ಹೇಳುತ್ತಾರೆ.
ಉಪ ಚುನಾವಣೆ ಮೂಲಕ ಪ್ರವೇಶ: ಕನಕಪುರ ತಾಲ್ಲೂಕಿನ ದೊಡ್ಡಆಲಹಳ್ಳಿಯ ಸುರೇಶ್ ಆಕಸ್ಮಿಕವಾಗಿ ರಾಜಕಾರಣ ಪ್ರವೇಶ ಪಡೆದವರು. ಅಣ್ಣ ಡಿಸಿಎಂ ಶಿವಕುಮಾರ್ ಅವರಿಗೆ ಬೆಂಬಲವಾಗಿ ತೆರೆಮರೆಯಲ್ಲಿ ಕೆಲಸ ಮಾಡುತ್ತಾ ಕನಕಪುರ ಕ್ಷೇತ್ರದ ಉಸ್ತುವಾರಿ ಹೊತ್ತಿದ್ದರು. 2008ರಲ್ಲಿ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗಿದ್ದ ಜೆಡಿಎಸ್‌ನ ಎಚ್.ಡಿ. ಕುಮಾರಸ್ವಾಮಿ, 2013ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ನಡೆದ ಉಪ ಚುನಾವಣೆಗೆ ಶಿವಕುಮಾರ್, ತಮ್ಮ ಸಹೋದರ ಸುರೇಶ್ ಅವರನ್ನು ಚುನಾವಣಾ ರಾಜಕೀಯಕ್ಕೆ ಕರೆ ತಂದರು. ಸುರೇಶ್ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು 1.37 ಲಕ್ಷ ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದರು.
ಮರು ವರ್ಷ 2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲೂ 2.31 ಮತಗಳ ಅಂತರದಲ್ಲಿ ಮರು ಆಯ್ಕೆಯಾದರು. ಅವರು 6,52,723 ಮತಗಳನ್ನು ಪಡೆದಿದ್ದರು. ಬಿಜೆಪಿಯಿಂದ ಮುನಿರಾಜು ಗೌಡ (4,21,243) ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ಆರ್. ಪ್ರಭಾಕರ್ ರೆಡ್ಡಿ (3,17,870) ಸ್ಪರ್ಧಿಸಿದ್ದರು. 2019ರಲ್ಲಿ 8.78,258 ಮತಗಳನ್ನು ಪಡೆದು ಬಿಜೆಪಿಯ ಡಾ. ಅಶ್ವಥ್ ನಾರಾಯಣ ಅವರನ್ನು ಸೋಲಿಸಿ ಮೂರನೇ ಸಲ ಸಂಸತ್‌ಗೆ ಆಯ್ಕೆಯಾದರು. ಡಾ. ಅಶ್ವಥ್ ನಾರಾಯಣ ಅವರು, 6,71,388 ಮತಗಳನ್ನು ಮಾತ್ರ ಪಡೆದಿದ್ದರು. 2009ರಲ್ಲಿ ಜೆಡಿಎಸ್ ನ ಕುಮಾರಸ್ವಾಮಿ 4,93,302 ಮತಗಳನ್ನು ಪಡೆದು ಬಿಜೆಪಿಯ ಸಿ.ಪಿ. ಯೋಗೀಶ್ವರ್ ಅವರನ್ನು ಸೋಲಿಸಿದ್ದರು. ಆಗ ಕಾಂಗ್ರೆಸ್ ನ ತೇಜಸ್ವಿನಿ ಗೌಡ ಅವರು ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.
ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್‌ಗೆ ಎದುರಾಳಿ ಯಾರು?
ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು ಎನ್ನುವುದು ಬಹಿರಂಗವಾಗಿಲ್ಲ. ಈ ಕ್ಷೇತ್ರ ಬಿಜೆಪಿ ಪಾಲಿಗೆ ದಕ್ಕುತ್ತದೆ ಎಂದು ತಿಳಿದು ಬಂದಿದೆ. ಇದುವರೆಗಿನ ಮಾಹಿತಿ ಪ್ರಕಾರ ಅಭ್ಯರ್ಥಿಯಾಗಲು ಯಾರೂ ಆಸಕ್ತಿ ತೋರಿಸುತ್ತಿಲ್ಲ. ಈ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್ ಮುಖಂಡರನ್ನೆಲ್ಲಾ ಡಿಕೆ ಸಹೋದರರು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯಕ್ಕೆ ಬಿಜೆಪಿ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡ ಅವರ ಅಳಿಯ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಆದರೆ ಗೌಡರ ಕುಟುಂಬ ಆಸಕ್ತಿ ತೋರಿಸುತ್ತಿಲ್ಲ. ಒಂದೇ ಸಮುದಾಯದ ಎರಡು ಕುಟುಂಬಗಳು ಘರ್ಷಣೆ ನಡೆಸುವುದು ಸರಿಯಲ್ಲ. ಆದ್ದರಿಂದ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಪಿ ಯೋಗೇಶ್ವರ್ ಎದುರಾಳಿಯಾಗಬಹುದು ಎನ್ನಲಾಗುತ್ತಿದೆ. ಕಾಂಗ್ರೆಸ್‌ಗೆ ಗೆಲ್ಲುವ ಕ್ಷೇತ್ರಗಳಲ್ಲಿ ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿದೆ ಎಂದು ಕೈ ಮುಖಂಡರು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಆದರೂ ಫಲಿತಾಂಶ ಏರುಪೇರು ಮಾಡುವುದು ಮತದಾರನಿಗೆ ಅಸಾಧ್ಯವೇನಲ್ಲ.
(This copy first appeared in Hindustan Times Kannada website. To read more like this please logon to kannada.hindustantimes.com )