ಹೆಚ್‌ಡಿ ಕುಮಾರಸ್ವಾಮಿ ಬಳಿ ಸ್ವಂತ ಕಾರಿನಲ್ಲ, ಟ್ರ್ಯಾಕ್ಟರ್ ಇದೆ; ಹೆಚ್‌ಡಿಕೆ, ಪತ್ನಿ ಅನಿತಾ ಅವರ ಬಳಿ 217.21 ಕೋಟಿ ರೂ ಆಸ್ತಿ
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಒಟ್ಟು ಆಸ್ತಿ ಮೌಲ್ಯ 217.21 ಕೋಟಿ ರೂಪಾಯಿ. ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಹೆಚ್‌ಡಿಕೆ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ.
ಮಂಡ್ಯ: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ ಕುಮಾರಸ್ವಾಮಿ (Ex CM HD Kumaraswamy) ಅವರು ಮಂಡ್ಯ ಲೋಕಸಭಾ (Mandya Lok Sabha Constituency) ಕ್ಷೇತ್ರದಿಂದ ಗುರುವಾರ (ಏಪ್ರಿಲ್ 4) ನಾಮಪತ್ರ ಸಲ್ಲಿಸಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ತಮ್ಮ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿಯನ್ನು ಘೋಷಿಸಿದ್ದಾರೆ. ಕುಮಾರಸ್ವಾಮಿಗಿಂತ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರೇ ಹೆಚ್ಚು ಶ್ರೀಮಂತರಾಗಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಒಟ್ಟು ಆಸ್ತಿ ಮೌಲ್ಯ 217.21 ಕೋಟಿ ರೂಪಾಯಿ ಇದೆ. ಆದರೆ, ರಾಮನಗರದ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಅವರು 154.39 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೆ, ಎಚ್.ಡಿ.ಕುಮಾರಸ್ವಾಮಿ ಅವರು 54.63 ಕೋಟಿ ರೂಪಾಯಿಗಳ ಆಸ್ತಿಯನ್ನು ಮಾತ್ರ ಹೊಂದಿದ್ದಾರೆ.
ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ವಿರುದ್ಧ 3 ಪ್ರಕರಣ
ಹೆಚ್‌ಡಿಕೆ ವಿರುದ್ಧ ಮೂರು ಪೊಲೀಸ್ ಪ್ರಕರಣಗಳು ಬಾಕಿ ಇವೆ. ಇನ್ನ ಇವರ ಆಸ್ತಿ ಎಲ್ಲೆಲ್ಲಿದೆ ಅನ್ನೋದನ್ನ ನೋಡುವುದಾದರೆ ಬೆಂಗಳೂರಿನಲ್ಲಿ 6.46 ಕೋಟಿ ಮೌಲ್ಯದ ಮನೆ, 37.48 ಕೋಟಿ ಮೌಲ್ಯದ ಕೃಷಿ ಭೂಮಿ, 47.06 ಲಕ್ಷ ಮೌಲ್ಯದ ಚಿನ್ನ ಮತ್ತು 2.60 ಲಕ್ಷ ಮೌಲ್ಯದ ವಜ್ರಗಳು ಇವರ ಇತರ ಆಸ್ತಿಗಳಾಗಿವೆ. ಅನಿತಾ ಕುಮಾರಸ್ವಾಮಿ ಬಳಿ ನಿಖಿಲ್ ಅಂಡ್ ಕೋ ಹೆಸರಿನಲ್ಲಿ 11 ಲಕ್ಷ ಮೌಲ್ಯದ ಕಾರು ಇದೆ. ಅವರು ಕಸ್ತೂರಿ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಮಾಧ್ಯಮ ಸಂಸ್ಥೆ ಸೇರಿ ಹಲವು ಆಸ್ತಿಗಳಿವೆ.
ಸುದೀರ್ಘ ಸರ್ಕಸ್ ನಂತರ, ಎಚ್.ಡಿ.ಕುಮಾರಸ್ವಾಮಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸುವುದಾಗಿ ಕಳೆದ ವಾರ ಘೋಷಿಸಿದದ್ದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಕುಮಾರಸ್ವಾಮಿ ಅವರೇ ಒಕ್ಕಲಿಗರ ಭದ್ರಕೋಟೆಯಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಕಾಂಗ್ರೆಸ್ ಈಗಾಗಲೇ ಮಂಡ್ಯದಿಂದ ಡಿ.ಕೆ.ಶಿವಕುಮಾರ್ ಆಪ್ತ ನಟ ಚಂದ್ರು ಅವರನ್ನು ಕಣಕ್ಕಿಳಿಸಿದೆ.
2019 ರ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ಮಂಡ್ಯದ ಹಾಲಿ ಸಂಸದೆ ಸುಮಲತಾ ಅಂಬರೀಶ್ ಶೀಘ್ರದಲ್ಲೇ ಬಿಜೆಪಿಗೆ ಸೇರಲಿದ್ದಾರೆ ಮತ್ತು ಅವರು ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧಾರ ಮಾಡಿದ್ದಾರೆ.
ಕುಮಾರಸ್ವಾಮಿ ನಾಮಪತ್ರಕ್ಕೆ ಬಿಜೆಪಿ ಹಿರಿಯ ನಾಯಕರ ಸಾಥ್
ಎನ್‌ಡಿಎ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಅವರು ಗುರುವಾರ (ಏಪ್ರಿಲ್ 4) ಮಂಡ್ಯ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಗೋವಾ ಸಿಎಂ ಪ್ರಮೋದ್ ಸಾವಂತ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಯದುವೀರ್ ಸಾಥ್ ನೀಡಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಹೆಚ್‌ಡಿಕೆ ಬೃಹತ್ ರೋಡ್ ಶೋ ಮೂಲಕ ಎನ್‌ಡಿಎ ಶಕ್ತಿ ಪ್ರದರ್ಶನ ತೋರಿದ್ದಾರೆ.
ಕರ್ನಾಟಕದಲ್ಲಿ ಮೊದಲ ಹಂತದ ಮತದಾನ 14 ಲೋಕಸಭಾ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಗುರುವಾರ (ಏಪ್ರಿಲ್ 4) ಕೊನೆಯ ದಿನವಾಗಿತ್ತು. ಏಪ್ರಿಲ್ 5 (ಶುಕ್ರವಾರ) ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 8 ಕೊನೆಯ ದಿನವಾಗಿದೆ. ಉಳಿದ 14 ಕ್ಷೇತ್ರಗಳಿಗೆ ಮೇ 7 ರಂದು ಮತದಾನ ನಡೆಯಲಿದೆ. 18ನೇ ಲೋಕಸಭಾ ಚುನಾವಣೆ ಒಟ್ಟು 7 ಹಂತಗಳಲ್ಲಿ ನಡೆಯಲಿದೆ. ಎನ್‌ಡಿಎ ಈ ಬಾರಿ 400 ಕ್ಷೇತ್ರಗಳನ್ನು ಗೆಲ್ಲುವ ಗುರಿಯನ್ನು ಹೊಂದಿದೆ. ಕಾಂಗ್ರೆಸ್ ಒಳಗೊಂಡು ಇಂಡಿಯಾ ಮೈತ್ರಿಕೂಟ ಹೆಚ್ಚು ಸ್ಥಾನಗಳನ್ನು ಜಯಿಸಲು ಇನ್ನಿಲ್ಲದ ಕಸರತ್ತುಗಳನ್ನು ನಡೆಸಿದೆ.