ಕರ್ನಾಟಕದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ; 14 ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ಅಭ್ಯರ್ಥಿಗಳ ಅಂತಿಮ ಕಸರತ್ತು
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ; 14 ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ಅಭ್ಯರ್ಥಿಗಳ ಅಂತಿಮ ಕಸರತ್ತು

ಕರ್ನಾಟಕದಲ್ಲಿ 2ನೇ ಹಂತದ ಲೋಕಸಭಾ ಚುನಾವಣೆ; 14 ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ಅಭ್ಯರ್ಥಿಗಳ ಅಂತಿಮ ಕಸರತ್ತು

ಕರ್ನಾಟಕದ ಲೋಕಸಭಾ ಚುನಾವಣೆಯ 14 ಕ್ಷೇತ್ರಗಳ ಬಹಿರಂಗ ಪ್ರಚಾರ ಇಂದು (ಮೇ 5, ಶನಿವಾರ) ಸಂಜೆ ತೆರೆ ಬೀಳಲಿದೆ. ಮೇ 7ರ ಮಂಗಳವಾರ ಮತದಾನ ನಡೆಯಲಿದೆ. ಅಭ್ಯರ್ಥಿಗಳ ಅಂತಿಮ ಹಂತದ ಕಸರತ್ತು ನಡೆಸುತ್ತಿದ್ದಾರೆ.

ಕರ್ನಾಟಕ ಲೋಕಸಭಾ ಚುನಾವಣೆಯ 2ನೇ ಹಂತದ 14 ಕ್ಷೇತ್ರಗಳ ಬಹಿರಂಗ ಪ್ರಚಾರ ಮೇ 5ರ ಭಾನುವಾರ ಸಂಜೆ ಕೊನೆಗೊಳ್ಳಲಿದೆ.
ಕರ್ನಾಟಕ ಲೋಕಸಭಾ ಚುನಾವಣೆಯ 2ನೇ ಹಂತದ 14 ಕ್ಷೇತ್ರಗಳ ಬಹಿರಂಗ ಪ್ರಚಾರ ಮೇ 5ರ ಭಾನುವಾರ ಸಂಜೆ ಕೊನೆಗೊಳ್ಳಲಿದೆ.

ಬೆಂಗಳೂರು: ಕರ್ನಾಟಕದ 2ನೇ ಹಂತದಲ್ಲಿ ಮತದಾನ (Karnataka 2nd Phase Lok Sabha Election 2024) ನಡೆಯುವ 14 ಲೋಕಸಭಾ ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ಇಂದು (ಮೇ 5, ಭಾನುವಾರ) ಸಂಜೆ 6 ಗಂಟೆಗೆ ತೆರೆ ಬೀಳಲಿದೆ. ಈ ಕ್ಷೇತ್ರಗಳಲ್ಲಿ ಮೇ 7 ರಂದು ಮತದಾನ ನಡೆಯಲಿದೆ. ಮತದಾನ ನಡೆಯುವ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಕೊನೆಗೊಳ್ಳಬೇಕಿದೆ. ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕರ್ತರು ಕ್ಷೇತ್ರ ಬಿಟ್ಟು ಹೊರಹೋಗಬೇಕಾಗಿದೆ. ಇದೇ ಕಾರಣಕ್ಕೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ವಾರಾಂತ್ಯವೂ ಆಗಿದ್ದ ನಿನ್ನೆಯಿಂದಲೇ (ಮೇ 4, ಶನಿವಾರ) ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ನಾಳೆ (ಮೇ 6 ಸೋಮವಾರ) ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಲು ಅವಕಾಶ ಇದೆ. ಸಮಾರಂಭ, ಮೆರವಣಿಗೆ, ಧ್ವನಿವರ್ಧಕ ಬಳಕೆ, ಡಿಜಿಟಲ್ ವಿದ್ಯುನ್ಮಾನ ಪ್ರಚಾರ ಮಾಡುವಂತಿಲ್ಲ ಮತ್ತು ಜಾಹಿರಾತುಗಳನ್ನೂ ನೀಡುವಂತಿಲ್ಲ.

ಎಲ್ಲ ಕ್ಷೇತ್ರಗಳಲ್ಲೂ 144ನೇ ಸೆಕ್ಷನ್ ಜಾರಿಯಾಗಲಿದ್ದು, 5 ಜನರಿಗಿಂತ ಹೆಚ್ಚು ಗುಂಪು ಸೇರುವಂತಿಲ್ಲ. ಮದ್ಯ ಮಾರಾಟ ನಿಷೇಧ ಮಾಡಲಾಗಿರುತ್ತೆ. ಮತದಾನದ ದಿನದಂದು ಸಂತೆ, ಜಾತ್ರೆ ನಡೆಸುವಂತಿಲ್ಲ. ವರುಣನ ಕೃಪೆಯಿಂದ ಅಲ್ಲಲ್ಲಿ ಮಳೆಯಾಗಿದ್ದು, ಅಷ್ಟಾಗಿ ಬಿಸಿಲಿನ ದಗೆ ಕಾಣಿಸಿಕೊಳ್ಳುತ್ತಿಲ್ಲ. ವಾತಾವರಣವೂ ಪ್ರಚಾರಕ್ಕೆ ಪೂರಕವಾಗಿದ್ದು, ತುಸು ಹೆಚ್ಚಿನ ಉತ್ಸಾಹದಿಂದಲೇ ಬಹಿರಂಗ ಪ್ರಚಾರದಲ್ಲಿ ನಿರತರಾಗಿದ್ದಾರೆ. ಎಲ್ಲರೂ ಮತದಾರರ ಮನ ಗೆಲ್ಲಲು ಅಂತಿಮ ಕ್ಷಣದ ಕಸರತ್ತು ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah), ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಸೇರಿದಂತೆ ಅವರ ಎಲ್ಲ ಸಂಪುಟ ಸಹದ್ಯೋಗಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಉತ್ತರ ಕರ್ನಾಟಕದ (North Karnataka) 14 ಕ್ಷೇತ್ರಗಳ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪ್ರಚಾರದಲ್ಲಿ ಬಿಜೆಪಿಯೂ (Karnataka BJP) ಹಿಂದೆ ಬಿದ್ದಿಲ್ಲ. ಪಕ್ಷದ ವರಿಷ್ಠರಾದ ಬಿ ಎಸ್. ಯಡಿಯೂರಪ್ಪ, ಪಕ್ಷ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತಿತರ ಮುಖಂಡರು ಬಿಸಿಲನ್ನೂ ಲೆಕ್ಕಿಸದೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಇಂದು (ಮೇ 5, ಭಾನುವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಸಂಜೆ ಬೆಂಗಳೂರಿಗೆ ಮರಳಲಿದ್ದಾರೆ. ಯಡಿಯೂರಪ್ಪ ಮತ್ತು ವಿಜಯೇಂದ್ರ ಇಬ್ಬರೂ ಶಿವಮೊಗ್ಗ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಸುರಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೂ ಇದೇ ನಿಯಮಗಳು ಅನ್ವಯವಾಗಲಿವೆ.

ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯಲುವ 14 ಕ್ಷೇತ್ರಗಳಲ್ಲಿ ಒಟ್ಟು 2,59,52,958 ಮತದಾರರು ಇದ್ದಾರೆ. ಇದರಲ್ಲಿ 1,29,48,928 ಪುರುಷ, 1,29,6,570 ಮಹಿಳಾ ಮತದಾರರು ಸೇರಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಒಟ್ಟು 28,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಇಬ್ಬರು ಕೇಂದ್ರ ಸಚಿವರು ಸ್ಪರ್ಧೆಯಲ್ಲಿರುವುದು ವಿಶೇಷ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಧಾರವಾಡದಿಂದ ಮತ್ತು ಭಗವಂತ ಖೂಬಾ ಬೀದರ್ ನಿಂದ ಸ್ಪರ್ಧಿಸಿದ್ದಾರೆ. ಹಾವೇರಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬೆಳಗಾವಿಯಿಂದ ಜಗದೀಶ ಶೆಟ್ಟರ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಶಿವಮೊಗ್ಗದಲ್ಲಿ ಬಿಜೆಪಿಯ ಹಾಲಿ ಸಂಸದ ಬಿ.ವೈ ರಾಘವೇಂದ್ರ, ಕಾಂಗ್ರೆಸ್‌ನ ಗೀತಾ ಶಿವರಾಜ್‌ಕುಮಾರ್ ಹಾಗೂ ಬಿಜೆಪಿಯಿಂದ ಬಂಡೆದ್ದು ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆ.ಎಸ್. ಈಶ್ವರಪ್ಪ ಕಣದಲ್ಲಿ ಉಳಿದಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಯ ಗೆಲುವಿನ ನಾಗಾಲೋಟಕ್ಕೆ ತೊಡಕಾಗಬಹುದು.

ಅತ್ತ ದಾವಣಗೆರೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಬಿ ವಿನಯ್ ಕುಮಾರ್ ಕಾಂಗ್ರೆಸ್ ಪ್ರಯತ್ನಕ್ಕೆ ಅಡ್ಡಗಾಲಾಗಿದ್ದಾರೆ. ಇಲ್ಲಿ ಬಿಜೆಪಿಯಿಂದ ಗಾಯತ್ರಿ ಸಿದ್ಧೇಶ್ವರ್ ಮತ್ತು ಕಾಂಗ್ರೆಸ್ ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ ಅಭ್ಯರ್ಥಿಗಳಾಗಿದ್ದಾರೆ. ರಾಜ್ಯ ಕಾಂಗ್ರೆಸ್ ಸಚಿವರ ಮಕ್ಕಳಾದ ಮೃಣಾಳ್ ಹೆಬ್ಬಾಳ್ಕರ್ ಬೆಳಗಾವಿಯಿಂದ, ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ, ಬಾಗಲಕೋಟೆಯಿಂದ ಸಂಯುಕ್ತಾ ಪಾಟೀಲ್ ಮತ್ತು ಬೀದರ್ ನಿಂದ ಸಾಗರ್ ಖಂಡ್ರೆ ಅಖಾಡಾದಲ್ಲಿದ್ದಾರೆ.

Whats_app_banner