Lok Sabha Election 2024: ಇಂದಿನಿಂದ ಹಿರಿಯ ನಾಗರಿಕರಿಗೆ ಮನೆಯಿಂದ ಮತದಾನಕ್ಕೆ ಅವಕಾಶ; ತಪ್ಪಿದರೆ ಮತ್ತೆ ವೋಟ್ ಮಾಡುವಂತಿಲ್ಲ
ಲೋಕಸಭಾ ಚುನಾವಣೆಯಲ್ಲಿ ಹಿರಿಯ ನಾಗಕರಿಕರು ಮನೆಯಿಂದಲೇ ಮತಾದನ ಮಾಡುವ ಪ್ರಕ್ರಿಯೆ ಏಪ್ರಿಲ್ 13ರ ಶನಿವಾರದಿಂದ ಪ್ರಾರಂಭವಾಗಿದೆ. 2 ಬಾರಿಯ ಅವಕಾಶ ತಪ್ಪಿದರೆ ಮತ್ತೆ ವೋಟ್ ಮಾಡುವಂತಿಲ್ಲ.

ಬೆಂಗಳೂರು: ಏಪ್ರಿಲ್ 26 ರಂದು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ (Lok Sabha Election 2024) ಮತದಾನ ನಡೆಯಲಿದೆ. ಆದರೆ ಇದಕ್ಕೂ ಮುನ್ನವೇ ಅಂದರೆ ಇಂದಿನಿಂದಲೇ (ಏಪ್ರಿಲ್ 13, ಶನಿವಾರ) ಹಿರಿಯ ನಾಗರಿಕರು ಮನೆಯಿಂದಲೇ ಮತದಾನ (Vote From Home) ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಮನೆಯಿಂದ ಮತದಾನಕ್ಕೆ ನೋಂದಣಿ ಮಾಡಿಕೊಂಡಿರುವವರು ಇದೇ ಅವಧಿಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕು. ಇಲ್ಲದಿದ್ದರೆ ಅವರಿಗೆ ಮತಗಟ್ಟೆ ಮತದಾನಕ್ಕೆ ಅವಕಾಶ ಇರುವುದಿಲ್ಲ. ಚುನಾವಣಾ ಅಧಿಕಾರಿಗಳು ಹಿರಿಯ ನಾಗರಿಕರ ಮನೆಗಳಿಗೆ ಬಂದು ಅಂಚೆ ಮತದಾನವನ್ನು ಸ್ವೀಕರಿಸಲಿದ್ದಾರೆ.
ಮತಗಟ್ಟೆ ಸಿಬ್ಬಂದಿ ಮತಪತ್ರ ಮತ್ತು ಮತಪೆಟ್ಟಿಗೆಯೊಂದಿಗೆ ಪ್ರತಿ ಮತದಾರರ ಮನೆ ಬಳಿಗೆ ಎರಡು ಬಾರಿ ಭೇಟಿ ನೀಡುತ್ತಾರೆ. ಮತದಾನದ ನೋಂದಣಿಯ ಅರ್ಜಿಯಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಚುನಾವಣಾ ಅಧಿಕಾರಿಗಳ ಭೇಟಿಯ ದಿನಾಂಕ ಮತ್ತು ಅಂದಾಜು ಸಮಯದ ಬಗ್ಗೆ ಮತದಾರರಿಗೆ ಮುಂಚಿತವಾಗಿ ತಿಳಿಸಲಾಗುತ್ತದೆ. ಸಿಬ್ಬಂದಿ ಮೊದಲ ಬಾರಿ ಮನೆಗೆ ಬಂದಾಗ ಮತದಾರರು ಲಭ್ಯವಿಲ್ಲದಿದ್ದರೆ ಎರಡನೇ ಬಾರಿ ಬರುತ್ತಾರೆ. ಆಗಲೂ ಮತದಾರ ಲಭ್ಯವಿಲ್ಲದಿದ್ದರೆ ಆ ನಂತರ ಅವರಿಗೆ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಚುನಾವಣಾ ಸಿಬ್ಬಂದಿ ಹಿರಿಯ ನಾಗರಿಕರ ಮನೆಗೆ ಬಂದು ಅಂಚೆ ಮತಪತ್ರ ಸ್ವೀಕರಿಸುವ ಎಲ್ಲ ಪ್ರಕ್ರಿಯೆಗಳನ್ನು ವಿಡಿಯೊ ಮಾಡಲಾಗುತ್ತದೆ.
ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು 85 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರು ಮತ್ತು ಅಂಗವಿಕಲರಿಗೆ 'ಮನೆಯಿಂದ ವೋಟ್ ಫ್ರಮ್ ಹೋಮ್' ಸೌಲಭ್ಯಗಳನ್ನು ಘೋಷಿಸಿತ್ತು. 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಶೇಕಡಾ 40 ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರುವ ಮತದಾರರಿಗೆ ಮನೆ ಮತದಾನ ಸೌಲಭ್ಯವನ್ನು ವಿಸ್ತರಿಸಲಾಗಿದೆ. ಚುನಾವಣೆಗಳನ್ನು ಹೆಚ್ಚು ಅಂತರ್ಗತವಾಗಿಸಲು ಮನೆ ಮತದಾನದ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಮನೆಯಿಂದಲೇ ಮತದಾನ ನೋಂದಣಿ ಪ್ರಕ್ರಿಯೆ ಹೇಗಿರುತ್ತೆ?
85 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಮತದಾರರು ದೇಶಾದ್ಯಂತ 81 ಲಕ್ಷಕ್ಕೂ ಅಧಿಕ ಮಂದಿ ಇದ್ದಾರೆ. 90 ಲಕ್ಷ ಅಂಗವಿಕಲ ಮತದಾರರು ಮನೆಯಿಂದಲೇ ಮತದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಗತ್ಯ ದಾಖಲೆಗಳು ಪೂರ್ಣಗೊಂಡಾಗ ಮತದಾರನ ವಾಸಸ್ಥಳದಿಂದ ಫಾರ್ಮ್ 12 ಡಿ ಅನ್ನು ಹಿಂಪಡೆಯಲು ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಜವಾಬ್ದಾರರಾಗಿರುತ್ತಾರೆ. ಇದರ ನಂತರ, ಚುನಾವಣಾ ಅಧಿಕಾರಿಗಳ ಸಮರ್ಪಿತ ತಂಡವು ಭದ್ರತಾ ಅಧಿಕಾರಿಗಳೊಂದಿಗೆ ಮತದಾರರ ಮನೆಗೆ ಭೇಟಿ ನೀಡಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅನುವು ಮಾಡಿಕೊಡುತ್ತದೆ.
ಅರ್ಜಿಯಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಚುನಾವಣಾ ಅಧಿಕಾರಿಗಳ ಭೇಟಿಯ ದಿನಾಂಕ ಮತ್ತು ಅಂದಾಜು ಸಮಯದ ಬಗ್ಗೆ ಮತದಾರರಿಗೆ ಮುಂಚಿತವಾಗಿ ತಿಳಿಸಲಾಗುತ್ತದೆ. ಏಪ್ರಿಲ್ 26 ರಂದು ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ (ಎಸ್‌ಸಿ) ಒಟ್ಟು 14 ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ ಮೇ 7 ರಂದು ನಡೆಯಲಿದೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ.
