ಕನ್ನಡ ಸುದ್ದಿ  /  Karnataka  /  Lok Sabha Election 2024 Kota Srinivas Poojary Got Ticket In Udupi Chikkamagaluru Political Picture In Constitueencey Hsm

ಬಿಜೆಪಿ ಭದ್ರಕೋಟೆಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡ ಕೋಟಾ ಶ್ರೀನಿವಾಸ ಪೂಜಾರಿ; ಉಡುಪಿ-ಚಿಕ್ಕಮಗಳೂರು ಕ್ಷೇತ್ರ ರಾಜಕೀಯ ಚಿತ್ರಣ ಹೀಗಿದೆ

ಇಬ್ಬರು ಬಿಜೆಪಿ ನಾಯಕರ ನಡುವಿನ ಮುಸುಕಿನ ಗುದ್ದಾಟದ ನಡುವೆ ಕೋಟಾ ಶ್ರೀನಿವಾಸ ಪೂಜಾರಿ ಅವರು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಹಾಲಿ ಸಂಸದೆ, ಬೆೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ (ಶ್ರೀನಿವಾಸ ಪೂಜಾರಿ ಫ್ಯಾನ್ಸ್‌ ಎಫ್‌ಬಿ/ಎಎನ್‌ಐ)
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಹಾಲಿ ಸಂಸದೆ, ಬೆೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ (ಶ್ರೀನಿವಾಸ ಪೂಜಾರಿ ಫ್ಯಾನ್ಸ್‌ ಎಫ್‌ಬಿ/ಎಎನ್‌ಐ)

ಉಡುಪಿ: ಕೇಂದ್ರ ಸಚಿವೆ, ಹಾಲಿ ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ಹಾಗೂ ಬಿಜೆಪಿಯ ಮಾಜಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ನಡುವಿನ ಅವರ ಮುಸುಕಿನ ಗುದ್ದಾಟದ ನಡುವೆ ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭ ಎನ್ನುವಂತೆ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಸದ್ದಿಲ್ಲದೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಆ ಮೂಲಕ ಒಂದೇ ಸಮುದಾಯದ ಇಬ್ಬರ ಪ್ರಭಾವಿ ನಾಯಕರಿಗೆ ಶಾಕ್ ನೀಡಿದ್ದಾರೆ. ಬಿಜೆಪಿಯಲ್ಲಿ ಶೋಭಾ ಕರಂದ್ಲಾಜೆಯೋ ಅಥವಾ ಹೊಸ ಮುಖವೋ ಎಂಬ ಭಾರಿ ಕುತೂಹಲಕ್ಕೆ ಕೇಸರಿ ನಾಯಕರು ಕಡೆಗೂ ತೆರೆ ಎಳೆದಿದ್ದಾರೆ.

10 ವರ್ಷಗಳಿಂದ ಇಲ್ಲಿ ಸಂಸದರಾಗಿ ಸೇವೆ ಸಲ್ಲಿಸುತ್ತಿರುವ ಶೋಭಾ ಕರಂದ್ಲಾಜೆ ಅವರಿಗೆ ಕಳೆದ ಕಳೆದ ಕೆಲವು ತಿಂಗಳುಗಳಿಂದ ಸ್ವಪಕ್ಷದವರಿಂದಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ಅವರ ವಿರುದ್ಧ ಗೋಬ್ಯಾಕ್ ಶೋಭಾ ಎಂಬ ಅಭಿಯಾನವನ್ನೂ ಆರಂಭಿಸಿದ್ದರು. ಇದು ಸಚಿವರಿಗೆ ಇರುಸು ಮುರಿಸು ಉಂಟುಮಾಡಿತ್ತು. ಸದ್ಯ ನಿನ್ನೆ (ಮಾರ್ಚ್ 13, ಬುಧವಾರ) ಬಿಜೆಪಿ ಬಿಡುಗಡೆ ಮಾಡಿರುವ 2ನೇ ಪಟ್ಟಿಯಲ್ಲಿ ಶುಭಾ ಕರಂದ್ಲಾಜೆ ಅವರು ಟಿಕೆಟ್ ಪಡೆದಿದ್ದಾರೆ. ಆದರೆ ಉಡುಪಿ-ಚಿಕ್ಕಮಗಳೂರು ಬದಲಿಗೆ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ. ಅಚ್ಚರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರಲ್ಲಿ ಹೆಸರುವಾಸಿಯಾಗಿರುವ ಬಿಜೆಪಿ ಹೈಕಮಾಂಡ್ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಪಟ್ಟಿಯಲ್ಲೇ ಹೆಸರು ಇಲ್ಲದ ಕೋಟ ಶ್ರೀನಿವಾಸ ಪೂಜಾರಿಗೆ ಅವರನ್ನ ಅಭ್ಯರ್ಥಿಯಾಗಿನ್ನಾಗಿ ಘೋಷಣೆ ಮಾಡಿದೆ.

ಉಭಯ ಜಿಲ್ಲೆಗಳತ್ತ ಒಮ್ಮೆ ಕಣ್ಣಾಡಿಸಿದರೆ ಶ್ರೀಕೃಷ್ಣ ಮಠ, ದತ್ತಪೀಠ-ಬಾಬಾಬುಡನ್ ಗಿರಿ, ಕಾಫಿ ಎಸ್ಟೇಟ್ ಗಳು, ಕುದುರೆಮುಖ ಅಭಯಾರಣ್ಯ, ಸೈಂಟ್ ಮೇರಿ ದ್ವೀಪ, ಮಲ್ಪೆ, ಕಾಪು, ಪಡುಬಿದ್ರಿ ಕಡಲಕಿನಾರೆ, ಮೀನುಗಾರಿಕಾ ವಲಯದ ಸಮೃದ್ಧ ಜಾಗ ಉಡುಪಿ, ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. ಪ್ರವಾಸೋದ್ಯಮ, ಸಾರಿಗೆ, ಪಶ್ಚಿಮ ಘಟ್ಟದ ಪ್ರಕೃತಿ, ಅಡಕೆ, ಭತ್ತ, ಕಾಫಿ ತೋಟಗಳ ಸೊಬಗಿನ ಈ ಕ್ಷೇತ್ರದಲ್ಲಿ ಅಡ್ಡಾಡಿದರೆ, ರೈತ, ಕೂಲಿ ಕಾರ್ಮಿಕರಾದಿಯಾಗಿ ದುಡಿಯುವ ವರ್ಗ, ಶ್ರಮಜೀವಿಗಳ ದೊಡ್ಡ ಸಂಖ್ಯೆ ಕಾಣಸಿಗುತ್ತದೆ. ಕೃಷಿಯೇ ಜೀವನಾಧಾರ. ಪ್ರಕೃತಿ ತನ್ನ ಸೊಬಗನ್ನೆಲ್ಲಾ ಈ ಕ್ಷೇತ್ರದಲ್ಲಿ ಹರವಿಟ್ಟಿದೆ.

ಕರಾವಳಿಯಲ್ಲಿ ದೇಗುಲಗಳ ಜಿಲ್ಲೆ ಎಂದೆನಿಸಿದ ಉಡುಪಿ ಜಿಲ್ಲೆ ಅಸ್ತಿತ್ವಕ್ಕೆ ಬಂದು ಕೇವಲ ಇಪ್ಪತ್ತೈದು ವರ್ಷಗಳಾದರೂ ಲೋಕಸಭೆಗೆ ಉಡುಪಿ ಕ್ಷೇತ್ರ (ಹಿಂದಿನ ಸೌತ್ ಕೆನರಾ- ನಾರ್ತ್)ಕ್ಕೆ 1951ರಿಂದಲೇ ಚುನಾವಣೆಗಳು ನಡೆದಿವೆ. ಇದರಲ್ಲಿ ಸೋಲು ಗೆಲುವಿನ ಲೆಕ್ಕಾಚಾರವನ್ನು ಗಮನಿಸಿದರೆ, ಕಾಂಗ್ರೆಸ್ ಪಕ್ಷ ಸುದೀರ್ಘ ಕಾಲ ಹಿಡಿತವನ್ನು ಸಾಧಿಸಿತ್ತು. ಆಸ್ಕರ್ ಫೆರ್ನಾಂಡೀಸ್ ಸತತ 5 ಬಾರಿ ಗೆಲುವು ಸಾಧಿಸಿದ್ದು ಉಲ್ಲೇಖನಾರ್ಹ.

ಉಡುಪಿಯೊಂದಿಗೆ ಚಿಕ್ಕಮಗಳೂರು

ಕರಾವಳಿಯಲ್ಲಿ ಚುನಾವಣೆಗೆ ಪ್ರಧಾನ ವಸ್ತು ಧರ್ಮ. ಬಳಿಕ ಅಭಿವೃದ್ಧಿ ವಿಚಾರಗಳು ಚರ್ಚೆಗೆ ಬರುತ್ತವೆ ಎಂಬ ಮಾತಿಗೆ ಉಡುಪಿಯೂ ಹೊರತಲ್ಲ. ಭಾವನಾತ್ಮಕ ಸನ್ನಿವೇಶಗಳಿಗೆ ಉಡುಪಿಯೂ ಸ್ಪಂದಿಸುತ್ತದೆ. ಉಡುಪಿಯೊಂದಿಗೆ ಚಿಕ್ಕಮಗಳೂರನ್ನು ಬೆಸೆದುಕೊಂಡಿರುವ ಈ ಕ್ಷೇತ್ರದ ಪ್ರಧಾನ ಸಮಸ್ಯೆಗಳು ಕೃಷಿಗೆ ಸೂಕ್ತವಾದ ಬೆಲೆ, ಮೀನುಗಾರರ ಸಂಕಷ್ಟಗಳು, ಕಡಲ್ಕೊರೆತ ಹೌದಾದರೂ ಕೇಂದ್ರದ ಪ್ರತಿನಿಧಿಗಳಿಂದ ದೊಡ್ಡ ಪ್ರಮಾಣದ ನೆರವು ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ಪಾಲನ್ನು ಮತದಾರರು ನಿರೀಕ್ಷಿಸುತ್ತಾರೆ.

ರಾಮಮಂದಿರದಲ್ಲಿ ಪೇಜಾವರ ಶ್ರೀಗಳ ಪಾತ್ರ

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಸಂದರ್ಭ ಪೇಜಾವರ ಶ್ರೀ ವಿಶ್ವೇಶತೀರ್ಥರು, ಹಾಗೂ ಈಗ ಅಲ್ಲೇ ಪ್ರಮುಖ ಟ್ರಸ್ಟಿಯಾಗಿ ಗಮನ ಸೆಳೆಯುತ್ತಿರುವ ಹಾಲಿ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರು ರಾಮಮಂದಿರ ನಿರ್ಮಾಣದ ಪ್ರಮುಖ ಭಾಗವೇ ಆಗಿರುವ ಕಾರಣ, ಅದರ ಪ್ರಭಾವ ಖಂಡಿತವಾಗಿಯೂ ಉಡುಪಿಗಿದೆ. ಪ್ರಮುಖ ಚುನಾವಣಾ ವಿಷಯವೇ ಈಗ ರಾಮಮಂದಿರವಾಗಿದೆ.

ಉಡುಪಿ, ಚಿಕ್ಕಮಗಳೂರು ಕ್ಷೇತ್ರ, ಜಾತಿ ಸಮೀಕರಣ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ 2008ರ ಕ್ಷೇತ್ರ ಪುನರ್ವಿಂಗಡಣೆ ಬಳಿಕ ನಿರ್ಮಾಣವಾದ ಕ್ಷೇತ್ರ. ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ ಬೈಂದೂರು ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿದೆ. ಉಳಿದ ನಾಲ್ಕು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿದೆ. ಹೀಗಾಗಿ ಎರಡೂ ಜಿಲ್ಲೆಗಳಲ್ಲಿ ಹಂಚಿಹೋಗಿರುವ ಈ ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಜಾತಿ ಸಮೀಕರಣವೂ ಕೆಲಸ ಮಾಡುತ್ತದೆ. ಒಕ್ಕಲಿಗ, ಬಂಟ, ಮೊಗವೀರ, ಬಿಲ್ಲವ ಸಮುದಾಯದವರು ಈ ಕ್ಷೇತ್ರಗಳಲ್ಲಿ ಪ್ರಬಲರು. ಕೊಂಕಣಿ ಭಾಷಿಗರು ಸುದೀರ್ಘ ಕಾಲ ಇಲ್ಲಿ ಸಂಸದರಾಗಿದ್ದಾರೆ. (ಆಗ ಚಿಕ್ಕಮಗಳೂರು ಭಾಗ ಉಡುಪಿಯಲ್ಲಿ ಇರಲಿಲ್ಲ)

ಲೋಕಸಭಾ ಕ್ಷೇತ್ರದಲ್ಲಿ ಇದುವರೆಗಿನ ಸಂಸದರು

1951 ಮತ್ತು 1957 – ಯು.ಶ್ರೀನಿವಾಸ ಮಲ್ಯ (ಕಾಂಗ್ರೆಸ್), 1962 – ಜೆ.ಎಂ.ಲೋಬೊ ಪ್ರಭು (ಸ್ವತಂತ್ರ ಪಕ್ಷ), 1971 – ಪಿ.ರಂಗನಾಥ ಶೆಣೈ (ಕಾಂಗ್ರೆಸ್), 1977 – ಟಿ.ಎ.ಪೈ (ಕಾಂಗ್ರೆಸ್), 1980, 1984, 1989, 1991, 1996 – ಆಸ್ಕರ್ ಫೆರ್ನಾಂಡೀಸ್ (ಕಾಂಗ್ರೆಸ್), 1998 – ಐ.ಎಂ.ಜಯರಾಮ ಶೆಟ್ಟಿ (ಬಿಜೆಪಿ), 1999 – ವಿನಯ ಕುಮಾರ್ ಸೊರಕೆ (ಕಾಂಗ್ರೆಸ್), 2004 – ಮನೋರಮಾ ಮಧ್ವರಾಜ್ – (ಬಿಜೆಪಿ), 2009 – ಡಿ.ವಿ.ಸದಾನಂದ ಗೌಡ (ಬಿಜೆಪಿ), 2012 – ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್), 2014 – ಶೋಭಾ ಕರಂದ್ಲಾಜೆ (ಬಿಜೆಪಿ), 2019 – ಶೋಭಾ ಕರಂದ್ಲಾಜೆ (ಬಿಜೆಪಿ). ಇದುವರೆಗೆ 11 ಬಾರಿ ಕಾಂಗ್ರೆಸ್, 5 ಬಾರಿ ಬಿಜೆಪಿ ಹಾಗೂ 1 ಬಾರಿ ಸ್ವತಂತ್ರ ಪಾರ್ಟಿ ಚುನಾವಣೆಯಲ್ಲಿ ಜಯಗಳಿಸಿದೆ.

ಶೋಭಾ ಸಾಧನೆ, ಗೋ ಬ್ಯಾಕ್ ಅಭಿಯಾನ

2014ರಲ್ಲಿ ಶೋಭಾ ಕರಂದ್ಲಾಜೆ ಗೆದ್ದ ಮೇಲೆ ಕ್ಷೇತ್ರಕ್ಕೆ ಬರುತ್ತಿರಲಿಲ್ಲ ಎಂದು ಕಳೆದ ಚುನಾವಣೆಯಲ್ಲೇ ಅವರು ಸ್ಪರ್ಧಿಸಿದಾಗ ಗೋ ಬ್ಯಾಕ್ ಶೋಭಾ ಅಭಿಯಾನ ಇತ್ತು. ಆದರೆ ಮೋದಿ ಅಲೆಯಲ್ಲಿ ದಾಖಲೆಯ ಅಂತರದಲ್ಲಿ ಗೆದ್ದಿದ್ದ ಶೋಭಾ ಈ ಬಾರಿಯೂ ಟಿಕೆಟ್ ಕೊಟ್ಟರೆ ದಾಖಲೆಯ ಅಂತರದ ಗೆಲುವಿನ ನಿರೀಕ್ಷೆಯಲ್ಲಿದ್ದರು. ಕೇಂದ್ರ ಸಚಿವೆಯಾಗಿದ್ದರೂ ಜನ ನೆನಪಿಸಿಕೊಳ್ಳುವಂತಹ ಯಾವ ಯೋಜನೆಯನ್ನೂ ತರಲಿಲ್ಲ. ಕೊನೇ ಪಕ್ಷ ರೈಲ್ವೆ ಸಂಪರ್ಕ, ಹೆಚ್ಚುವರಿ ರೈಲುಗಳ ಓಡಾಟಕ್ಕೂ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಎಂದು ಹೇಳುತ್ತಿದ್ದ ಕಾರ್ಯಕರ್ತರು, ಈ ಬಾರಿ ಗೋ ಬ್ಯಾಕ್ ಎಂದು ಬೈಕ್ ಜಾಥಾವನ್ನೇ ಮಾಡಿದರು.

ಪ್ರಮೋದ್ ಮಧ್ವರಾಜ್ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೆ ಇದಕ್ಕೆ ಹೈಕಮಾಂಡ್ ಮಣೆ ಹಾಕಿಲ್ಲ. ಉಡುಪಿಯಲ್ಲಿ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ನಿರ್ಮಾಣ ಯೋಜನೆ ಐದು ವರ್ಷ ಸಂದರೂ ಮುಗಿದಿಲ್ಲ. ಸಂತೆಕಟ್ಟೆ ಅಂಡರ್ ಪಾಸ್ ನಿಧಾನಗತಿಯಲ್ಲಿ ಸಾಗುತ್ತಿದೆ. ಇಎಸ್ಐ ಆಸ್ಪತ್ರೆಗೆ ಜಾಗ ಇನ್ನು ಅಂತಿಮವಾಗಿಲ್ಲ. ಮೆಡಿಕಲ್ ಕಾಲೇಜು ಸದ್ದಿಲ್ಲ. ಕೇಂದ್ರಿಯ ವಿದ್ಯಾಲಯ ಕಟ್ಟಡ ಕಾಮಗಾರಿ ಕುಂಟುತ್ತಿದೆ. ಜಮ್ಸ್ ಅಂಡ್ ಜ್ಯೂಯಲರಿ ಕಟ್ಟಡಕ್ಕೂ ಗ್ರಹಣ ಹಿಡಿದಿದೆ. ಇದ್ಯಾವುದಕ್ಕೂ ಶೋಭಾ ಕರಂದ್ಲಾಜೆ ಅವರು ಆಸಕ್ತಿ ತೋರಲಿಲ್ಲ ಎಂಬ ಆರೋಪಗಳಿದ್ದವು.

ಈಚೆಗೆ ನಡೆದಿದ್ದ ಸಭೆಯಲ್ಲೂ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಕಾರ್ಯಕರ್ತರ ಪರಿಚಯವೇ ಇಲ್ಲದ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬಾರದು ಎಂದು ಪಟ್ಟುಹಿಡಿದಿದ್ದರು. ಸದ್ಯಕ್ಕೆ ಇಲ್ಲಿನ ಕಾರ್ಯಕರ್ತರಿಗೆ ಬಿಜೆಪಿ ಸ್ಪಂದಿಸಿದಂತಿದೆ. ಇನ್ನು ಕಾಂಗ್ರೆಸ್ ಪಕ್ಷದತ್ತ ಮತ್ತೆ ವಾಲುತ್ತಿರುವ ಜಯಪ್ರಕಾಶ್ ಹೆಗ್ಡೆ ಅವರೇ ಕೈ ಪಕ್ಷದ ಅಭ್ಯರ್ಥಿಯಾಗುವ ಸಾಧ್ಯತೆ ಇದೆ. 2014ರಲ್ಲಿ ಗೆದ್ದಂತೆ ಈ ಬಾರಿಯೂ ಗೆಲ್ಲಬೇಕೆಂದು ಆಲೋಚನೆಯಲ್ಲಿ ಹೆಗ್ಡೆಯವರಿದ್ದಾರೆ . (ಹರೀಶ ಮಾಂಬಾಡಿ, ಮಂಗಳೂರು)

(This copy first appeared in Hindustan Times Kannada website. To read more like this please logon to kannada.hindustantimes.com )

IPL_Entry_Point