ಕನ್ನಡ ಸುದ್ದಿ  /  Karnataka  /  Lok Sabha Election 2024 Mysuru Dist Is Spread Over 3 Ls Constituencies Mysore Kodagu Mandya Chamarajnagar Rsg

ಲೋಕಸಭಾ ಚುನಾವಣೆ; 3 ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ ಮೈಸೂರು ಜಿಲ್ಲೆ, ಮತದಾನ ದಿನಾಂಕ ಮತ್ತು ಇತರೆ ವಿವರ

ಲೋಕಸಭಾ ಚುನಾವಣೆ 2024: ಮೈಸೂರು ಜಿಲ್ಲೆ ಮೈಸೂರು -ಕೊಡಗು ಸೇರಿ 3 ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ. ಮೈಸೂರು-ಕೊಡಗು ಚುನಾವಣಾ ಕ್ಷೇತ್ರದ ವಿವರ ಇಲ್ಲಿದೆ.

ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯ್ತಿ ಸಿಇಒ ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯ್ತಿ ಸಿಇಒ ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ (Mysuru- Kodagu Lok Sabha Constituency) ಚುನಾವಣೆ ಕರ್ನಾಟಕದಲ್ಲಿ ಮೊದಲ ಹಂತದಲ್ಲೇ ನಡೆಯಲಿದೆ. ಈ ಕ್ಷೇತ್ರದ ಮತದಾನ ಏಪ್ರಿಲ್ 26ಕ್ಕೆ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ.

ಲೋಕಸಭಾ ಚುನಾವಣೆ (Lok Sabha Election 2024) ಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸುತ್ತಿದ್ದಂತೆ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ಲೋಕಸಭಾ ಚುನಾವಣೆ 2024ರ ವೇಳಾಪಟ್ಟಿ ಪ್ರಕಟವಾಗಿದ್ದು, ಇದಕ್ಕೆ ನಡೆಸಿಕೊಂಡಿರುವ ಸಿದ್ಧತೆಯ ವಿವರ ನೀಡಿದ ಮೈಸೂರು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ, ಮುಂಬರುವ ಲೋಕಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಕೂಡಲೇ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಹೇಳಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 20.72 ಲಕ್ಷ ಮತದಾರರು

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ 2072337 ಮತದಾರರಿದ್ದಾರೆ. ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಕೃಷ್ಣರಾಜ, ಚಾಮರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 2202 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗುತ್ತದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಮಾಹಿತಿ ನೀಡಿದರು.

ಮೈಸೂರು ಜಿಲ್ಲೆಯಲ್ಲಿ ಏಪ್ರಿಲ್ 26ರಂದು ಚುನಾವಣೆ ನಡೆಯಲಿದೆ. ಇದಕ್ಕಾಗಿ ಮಾರ್ಚ್ 28ರಂದು ಚುನಾವಣಾ ಅಧಿಸೂಚನೆ ಪ್ರಕಟಿಸಲಾಗುತ್ತದೆ, ಅಂದಿ‌ನಿಂದಲೇ ನಾಮಪತ್ರಗಳ ಸಲ್ಲಿಕೆ ಆರಂಭವಾಗಲಿದೆ. ಏಪ್ರಿಲ್ 4ರವರೆಗೆ ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಏಪ್ರಿಲ್ 5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಏಪ್ರಿಲ್ 8 ಕೊನೆಯ ದಿ‌ನವಾಗಿದೆ. ಏಪ್ರಿಲ್ 26ರಂದು ಚುನಾವಣೆ ನಡೆಯಲಿದೆ. ಜೂನ್ 4ರಂದು ಮತಗಳ ಎಣಿಕೆ ನಡೆಯಲಿದೆ. ಜೂನ್ 6ಕ್ಕೆ ಚುನಾವಣೆ ಮುಕ್ತಾಯ ದಿನಾಂಕ.

ಈ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಕೆ ವಿ ರಾಜೇಂದ್ರ ವಿವರಿಸಿದರು.

ಮತಗಟ್ಟೆ ಭದ್ರತೆ, ರೌಡಿಶೀಟರ್‌ಗಳ ಮೇಲೆ ನಿಗಾ

ಮೈಸೂರು ನಗರ ವ್ಯಾಪ್ತಿಗೆ ನರಸಿಂಹರಾಜ, ಕೃಷ್ಣರಾಜ, ಚಾಮರಾಜ ವಿಧಾನಸಭೆ ಕ್ಷೇತ್ರಗಳ ಎಲ್ಲಾ ಮತಗಟ್ಟೆಗಳು ಒಳಪಡುತ್ತವೆ. ಚಾಮುಂಡೇಶ್ವರಿ ಕ್ಷೇತ್ರದ 167 ಮತಗಟ್ಟೆಗಳು ಹಾಗು ವರುಣ ವಿಧಾನಸಭಾ ಕ್ಷೇತ್ರದ 8 ಮತಗಟ್ಟೆಗಳು ಸೇರಿ ಒಟ್ಟು 971 ಮತಗಟ್ಟೆಗಳು ಇವೆ. ಈ ಪೈಕಿ 220 ಕ್ರಿಟಿಕಲ್ ಬೂತ್ ಗಳಾಗಿದ್ದು, 751 ಸಾಮಾನ್ಯ ಬೂತ್ ಗಳಾಗಿವೆ. ಮೈಸೂರು ನಗರದ 10 ಕಡೆ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಚೆಕ್ ಪೋಸ್ಟ್ ಗಳಲ್ಲಿ ದಿನದ 24 ಗಂಟೆಯೂ ತಪಾಸಣೆ ನಡೆಸಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.

ಮೈಸೂರು ನಗರದಲ್ಲಿ 731 ರೌಡಿಶೀಟರ್ ಗಳಿದ್ದು 583 ಮಂದಿ ಮೇಲೆ ಈಗಾಗಲೇ ನಿಗಾ ವಹಿಸಲಾಗಿದೆ. 69 ಮಂದಿಯನ್ನು ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಸಿ ಆರ್ ಪಿ ಎಫ್ ನ ಒಂದು ತುಕಡಿ ಮೈಸೂರಿಗೆ ಆಗಮಿಸಿ ಪಥಸಂಚಲನ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪ್ಯಾರಾ ಮಿಲಿಟರಿ ತುಕಡಿಗಳು ಆಗಮಿಸಲಿವೆ. ಮೈಸೂರಿನಲ್ಲಿ 1077 ಮಂದಿ ಪರವಾನಗಿ ಪಡೆದು ಶಸ್ತ್ರಾಸ್ತ್ರ ಹೊಂದಿದ್ದಾರೆ. ಈ ಪೈಕಿ ತೀವ್ರ ಅನಿವಾರ್ಯತೆ ಇರುವವರನ್ನು ಹೊರತುಪಡಿಸಿ ಉಳಿದವರ ಶಸ್ತ್ರಾಸ್ತ್ರಗಳನ್ನು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ವಶಕ್ಕೆ ಪಡೆಯಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು.

ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿ ಹೋಗಿದೆ ಮೈಸೂರು ಜಿಲ್ಲೆ

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾಲಾಟ್ಕರ್ ಮಾತನಾಡಿ, ಮೈಸೂರು ಜಿಲ್ಲೆ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಹಂಚಿಕೆಯಾಗಿದೆ ಎಂದು ಹೇಳಿದರು.

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವ್ಯಾಪ್ತಿಗೆ 1947 ಬೂತ್‌ಗಳು ಒಳಪಡಲಿವೆ. ಈ ಪೈಕಿ 305 ಕ್ರಿಟಿಕಲ್ ಬೂತ್ ಗಳಾಗಿವೆ. ಉಳಿದವು ಸಾಮಾನ್ಯ ಬೂತ್ ಗಳಾಗಿವೆ. ಕ್ರಿಟಿಕಲ್ ಬೂತ್ ಗಳಿಗೆ ಹೆಚ್ಚಿನ ಭದ್ರತೆ ನೀಡಲಾಗುತ್ತದೆ. ರಾಜ್ಯದ ಗಡಿ ಭಾಗ ಬಾವಲಿ ಸೇರಿದಂತೆ ಜಿಲ್ಲೆಯ ವಿವಿಧೆಡೆಗಳಲ್ಲಿ 28 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಮೈಸೂರು ಜಿಲ್ಲೆಯಾದ್ಯಂತ ರೌಡಿಶೀಟರ್‌ಗಳ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ತಿಳಿಸಿದರು.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

IPL_Entry_Point