ಲೋಕಸಭಾ ಚುನಾವಣೆ; ಮೈಸೂರು-ಕೊಡಗು ಕ್ಷೇತ್ರದ ಚುನಾವಣಾ ಅಖಾಡಕ್ಕೆ ಇಳಿದ ಮಹಾರಾಜ ಯದುವೀರ್; ಕಾಂಗ್ರೆಸ್ ಅಭ್ಯರ್ಥಿ ಯಾರೆಂಬ ಕುತೂಹಲ
ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮಹಾರಾಜ ಯದುವೀರ್ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬ ಕುತೂಹಲ ಇನ್ನೂ ಹಾಗೆಯೇ ಉಳಿದಿದೆ. ಈ ಕ್ಷೇತ್ರದ ಪರಿಚಯ ಮತ್ತು ಸದ್ಯದ ಚಿತ್ರಣ ಹೀಗಿದೆ.(ವಿಶೇಷ ವರದಿ- ರಂಗಸ್ವಾಮಿ, ಮೈಸೂರು)
ಮೈಸೂರು: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಪ್ರತಿಷ್ಠಿತ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಈ ಬಾರಿ ಹೈ ವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಕಳೆದೆರಡು ಬಾರಿ ಗೆಲುವು ಸಾಧಿಸಿದ್ಧ ಸಂಸದ ಪ್ರತಾಪ್ ಸಿಂಹ ಅವರ ಬದಲು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ.
ಅತಿ ಹೆಚ್ಚು ಒಕ್ಕಲಿಗ ಸಮುದಾಯದ ಮತದಾರರನ್ನು ಒಳಗೊಂಡಿರುವ ಕ್ಷೇತ್ರದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರೇ ಮೂರನೇ ಬಾರಿಯೂ ಮತ್ತೊಮ್ಮೆ ಚುನಾವಣೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದರು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ 31 ವರ್ಷದ ರಾಜ ಯದುವೀರ್ ಒಡೆಯರ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಈ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಈ ಕ್ಷೇತ್ರದಲ್ಲಿ ಒಡೆಯರ್‌ಗೆ ವರದಾನವಾಗಬಹುದು. 1951ರಿಂದ 17 ಬಾರಿ ಲೋಕಸಭಾ ಚುನಾವಣೆ ನಡೆದಿದ್ದು, ಜೆಡಿಎಸ್ ಈ ಕ್ಷೇತ್ರದಲ್ಲಿ ಒಮ್ಮೆಯೂ ಗೆದ್ದಿಲ್ಲ.
ಮೊದಲ ಬಾರಿ ಕಿಸಾನ್ ಮಜ್ದೂರ್ ಪಕ್ಷ ಗೆಲುವು ಸಾಧಿಸಿತ್ತು. 12 ಬಾರಿ ಕಾಂಗ್ರೆಸ್ ಪಾರ್ಟಿ ಗೆಲುವು ಸಾಧಿಸಿದೆ, ಬಿಜೆಪಿ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿದೆ. 1971, 1977ರಲ್ಲಿ ಎಂ ಡಿ ತುಳಸಿದಾಸ್, 1980ರಲ್ಲಿ ಎಂ ರಾಜಶೇಖರಮೂರ್ತಿ, 1984 ಹಾಗು 1989ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, 1991ರಲ್ಲಿ ಚಂದ್ರಪ್ರಭಾ ಅರಸ್, 1996ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, 1998ರಲ್ಲಿ ಸಿ ಹೆಚ್ ವಿಜಯಶಂಕರ್, 1999ರಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, 2004ರಲ್ಲಿ ಸಿ ಹೆಚ್ ವಿಜಯಶಂಕರ್, 2009 ಹೆಚ್ ವಿಶ್ವನಾಥ್, 2014 ಹಾಗು 2019ರಲ್ಲಿ ಪ್ರತಾಪ್ ಸಿಂಹ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಬರಲಿದ್ದು 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. 2 ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದರೆ, ಕೇವಲ 1 ಕ್ಷೇತ್ರದಲ್ಲಷ್ಟೇ ಬಿಜೆಪಿ ಶಾಸಕರಿದ್ದಾರೆ. ಇದು ಈ ಬಾರಿಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಮೈಸೂರು–ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೈಸೂರು ಜಿಲ್ಲೆಯ ಕೃಷ್ಣರಾಜ, ಚಾಮರಾಜ, ಪಿರಿಯಾಪಟ್ಟಣ, ನರಸಿಂಹರಾಜ ಚಾಮುಂಡೇಶ್ವರಿ, ಹುಣಸೂರು ಹಾಗೂ ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ಸೇರಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ, ಪಿರಿಯಾಪಟ್ಟಣ, ನರಸಿಂಹರಾಜ, ಮಡಿಕೇರಿ, ವಿರಾಜಪೇಟೆಯಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯ ಸಾಧಿಸಿದೆ. ಚಾಮುಂಡೇಶ್ವರಿ ಹಾಗೂ ಹುಣಸೂರು ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿದೆ. ಬಿಜೆಪಿ ಗೆದ್ದಿರುವುದು ಕೃಷ್ಣರಾಜ ಕ್ಷೇತ್ರದಲ್ಲಿ ಮಾತ್ರ. ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಬಲ ಹೆಚ್ಚಾಗಿ ಚೈತನ್ಯ ಮೂಡಿದ್ದರೆ ಬಿಜೆಪಿಯು ಒಂದು ಸ್ಥಾನಕ್ಕೆ ಕುಸಿತ ಕಂಡು ಶೋಚನೀಯ ಸ್ಥಿತಿ ತಲುಪಿದೆ. ಇದು ಕಾಂಗ್ರೆಸ್ ಗೆ ಲಾಭವಾಗಲಿದೆ ಎನ್ನೋದು ಕಾಂಗ್ರೆಸ್‌ನವರ ಲೆಕ್ಕಾಚಾರವಾಗಿದೆ.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 20,50,857 ಮಂದಿ ಮತರಾರರಿದ್ದು, 10,08,438 ಪುರುಷ ಮತದಾರರು,10,42,419 ಮಂದಿ ಮಹಿಳಾ ಮತದಾರರಿದ್ದಾರೆ.
ಕಳೆದೆರಡು ಬಾರಿ ಸಂಸದ ಪ್ರತಾಪ್ ಸಿಂಹಗೆ ಗೆಲುವು
2014ರಲ್ಲಿ ಪತ್ರಕರ್ತನಾಗಿ ಮೊದಲ ಬಾರಿ ಚುನಾವಣಾ ಕಣಕ್ಕೆ ಧುಮುಕಿದ ಸಂಸದ ಪ್ರತಾಪ್ ಸಿಂಹ ಮೊದಲ ಪ್ರಯತ್ನದಲ್ಲೇ ಹಾಲಿ ಸಂಸದ ಕಾಂಗ್ರೆಸ್ ನ ಹೆಚ್ ವಿಶ್ವನಾಥ್ ವಿರುದ್ಧ 31608 ಮತಗಳಿಂದ ಗೆಲುವು ಸಾಧಿಸಿದರು, ಸಂಸದರಾಗಿ ಆಯ್ಕೆಯಾದ ಪ್ರತಾಪ್ ಸಿಂಹ 5,03,908 ಮತಗಳನ್ನು ಪಡೆದರೆ ಸಂಸದನಾಗಿದ್ದ ಹೆಚ್ ವಿಶ್ವನಾಥ್ 4,72,300 ಮತಗಳನ್ನು ಪಡೆದು ಪ್ರತಾಪ್ ಸಿಂಹ ಎದುರು ಸೋಲು ಅನುಭವಿಸಿದರು.
ಇನ್ನೂ 2019ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಗೆ ಹೋಗಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಣಕ್ಕೆ ಇಳಿದಿದ್ದ ಮಾಜಿ ಸಂಸದ ಸಿ ಹೆಚ್ ವಿಜಯಶಂಕರ್ ವಿರುದ್ಧ ಬರೋಬ್ಬರಿ 1,38,647 ಮತಗಳ ಬಾರಿ ಅಂತರದಿಂದ ಪ್ರತಾಪ್ ಸಿಂಹ ಗೆಲುವು ಸಾಧಿಸಿದರು. ಸಂಸದ ಪ್ರತಾಪ್ ಸಿಂಹ 688974 ಮತ ಪಡೆದರೇ, ಸಿ ಹೆಚ್ ವಿಜಯಶಂಕರ್ 550327 ಮತ ಪಡೆದರು.
ಕಾಂಗ್ರೆಸ್ ನಲ್ಲಿ ಆಕಾಂಕ್ಷಿಗಳ ದಂಡು
ರಾಜ್ಯದಲ್ಲಿ ಆಡಳಿತ ಪಕ್ಷವಾಗಿ ಕಾಂಗ್ರೆಸ್ ಇದೆ. ಹೀಗಾಗಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಿದೆ. ಈ ಒಂದೇ ಕ್ಷೇತ್ರಕ್ಕೆ ಕಾಂಗ್ರೆಸ್ ನಲ್ಲಿ 12 ರಿಂದ 14 ಮಂದಿ ಆಕಾಂಕ್ಷಿಗಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ ಜೆ ವಿಜಯಕುಮಾರ್, ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಮಾಜಿ ಅಧ್ಯಕ್ಷ ಸಿ ಬಸವೇಗೌಡ, ಗೋಪಾಲಗೌಡ ಆಸ್ಪತ್ರೆಯ ವೈದ್ಯ ಡಾ ಸುಶ್ರುತ್ ಗೌಡ, ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ, ವಕೀಲ ಚಂದ್ರಮೌಳಿ, ಎಂ ಕೆ ಸೋಮಶೇಖರ್, ಮುಖಂಡರಾದ ಜೆ ಜೆ ಆನಂದ್, ಗುರುಮಲ್ಲೇಶ್ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಸೂರಜ್ ಹೆಗಡೆ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಒಕ್ಕಲಿಗ ಸಮಾಜದ ಮತಗಳೇ ಹೆಚ್ಚಿರುವ ಕಾರಣದಿಂದಾಗಿ ಒಕ್ಕಲಿಗ ಸಮಾಜದ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಎಂದು ಕಾಂಗ್ರೆಸ್ ಚಿಂತನೆ ಮಾಡುತ್ತಿದೆ.
ಇತ್ತ ಜೆಡಿಎಸ್ ಕೂಡ ಮೈಸೂರು ಕೊಡಗು ಕ್ಷೇತ್ರಕ್ಕೆ ಮಾಜಿ ಸಚಿವ ಸಾ ರಾ ಮಹೇಶ್ ಅವರನ್ನು ಕಣಕ್ಕೆ ಇಳಿಸಬೇಕು ಎಂದು ಪ್ಲಾನ್ ಮಾಡಿದೆ. ಆದರೆ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಇರುವ ಕಾರಣಕ್ಕೆ ಜೆಡಿಎಸ್ ಪಕ್ಷ ಮೈತ್ರಿಯಿಂದಾಗಿ ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಪಡೆಯಲು ಮುಂದಾಗಿಲ್ಲ. ಇತ್ತ ಬಿಜೆಪಿಯಲ್ಲೂ ಕೂಡ ಎರಡು ಬಾರಿ ಗೆಲುವು ಸಾಧಿಸಿರುವ ಪ್ರತಾಪ್ ಸಿಂಹರನ್ನು ಬಿಟ್ಟು ಹೊಸ ಮುಖಕ್ಕೆ ಮಣೆ ಹಾಕಿ, ಅಚ್ಚರಿಯ ಅಭ್ಯರ್ಥಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.
ಕ್ಷೇತ್ರದ ನಾಡಿ ಮಿಡಿತ
ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಎರಡು ಅವಧಿಗೆ ಸಂಸದರಾಗಿರುವ ಕಾರಣ, ಯುವ ಮತದಾರರು ಸಂಸದ ಪ್ರತಾಪ್ ಸಿಂಹ ಬೆಂಬಲಕ್ಕೆ ನಿಂತಿದ್ದಾರೆ. ಮೈಸೂರು-ಬೆಂಗಳೂರು ಹೈವೇ, ವಿಮಾನ ನಿಲ್ದಾಣ, ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ಕ್ಷೇತ್ರಕ್ಕೆ ತಂದು ತಾನೇ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳುತ್ತಿದ್ದರು. ಆದರೆ ಬಿಜೆಪಿ ನಾಯಕರು, ಕಾರ್ಯಕರ್ತರಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆಂಬ ಮಾತು ಪಕ್ಷದ ವಲಯದಿಂದಲೇ ಕೇಳಿ ಬರುತ್ತಿದೆ. ಅಲ್ಲದೇ ಜನಸಾಮಾನ್ಯರ ಕೈಗೂ ಅಷ್ಟಾಗಿ ಸಿಗುವುದಿಲ್ಲ, ವೈಟ್ ಕಾಲರ್ ಪೊಲಿಟಿಷಿಯನ್ ಎಂಬ ಆರೋಪಗಳು ಸಂಸದ ಪ್ರತಾಪ್ ವಿರುದ್ದ ಕೇಳಿ ಬಂದಿತ್ತು. ಹೀಗಾಗಿ ಅವರಿಗೆ ಈ ಬಾರಿ ಟಿಕೆಟ್ ಕೈತಪ್ಪಿ ಹೋಗಿದೆ.
ಇತ್ತ ಕಾಂಗ್ರೆಸ್ ಕೂಡ ಗ್ಯಾರಂಟಿ ಅಲೆಯಲ್ಲಿ ತೇಲಾಡುತ್ತಿದ್ದು, ಈ ಬಾರಿ ಮೈಸೂರು-ಕೊಡಗು ಕ್ಷೇತ್ರವನ್ನು ಹೇಗಾದರೂ ಮಾಡಿ ಕೈ ವಶ ಮಾಡಿಕೊಳ್ಳುವ ಹಠಕ್ಕೆ ಬಿದ್ದಿದೆ. ಏಕೆಂದರೇ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯೇ ಮೈಸೂರು. ಹೀಗಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಶತಾಯ ಗತಾಯ ಗೆಲ್ಲಲೇ ಬೇಕು ಎಂದು ಸಿಎಂ ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ. ಆದರೆ ಕಾಂಗ್ರೆಸ್ ನಲ್ಲಿ ಗೆಲ್ಲುವ ಸಮರ್ಥ ಅಭ್ಯರ್ಥಿ ಯಾರು ಎನ್ನೋದು ಸದ್ಯಕ್ಕೆ ಇರುವ ಯಕ್ಷ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಈ ಬಾರಿಯ ಚುನಾವಣೆಯಲ್ಲಿ ಹೈ ವೋಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರಿನಲ್ಲಿ ಈ ಬಾರಿ ಯಾರು ಗೆಲ್ಲುತ್ತಾರೆ ಎನ್ನೋದು ತೀವ್ರ ಕುತೂಹಲ ಕೆರಳಿಸಿದೆ.
ನಾಡಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಾಮುಂಡಿಬೆಟ್ಟ, ಜಗತ್ಪ್ರಸಿದ್ಧ ಅರಮನೆ, ಚಾಮರಾಜೇಂದ್ರ ಮೃಗಾಲಯ, ಪಿರಿಯಾಪಟ್ಟಣದ ಬೈಲುಕುಪ್ಪೆ ಬಳಿಯಿರುವ ಗೋಲ್ಡನ್ ಟೆಂಪಲ್, ಕೊಡಗಿನ ತಲಕಾವೇರಿ, ಭಾಗಮಂಡಲ, ನಾಗರಹೊಳೆ ಅಭಯಾರಣ್ಯ ಮೊದಲಾದ ಸ್ಥಳಗಳು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವುದು ಮತ್ತೊಂದು ವಿಶೇಷವಾಗಿದೆ.
(ವಿಶೇಷ ವರದಿ- ರಂಗಸ್ವಾಮಿ, ಮೈಸೂರು)
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)