ಕನ್ನಡ ಸುದ್ದಿ  /  Karnataka  /  Lok Sabha Election 2024 Mysuru Kodagu Mp Pratap Simha Shared Dvg Kagga After Denial Of Ls Ticket By Bjp Uks

Lok Sabha Election: ಎಲ್ಲ ಕಾಲಕ್ಕೂ ಸಲ್ಲುವ ಕಗ್ಗ; ಪ್ರತಾಪ್ ಸಿಂಹ ಅವರ ನೋವಿಗೂ ನಲಿವಿಗೂ ಆಸರೆ

ಲೋಕಸಭೆ ಚುನಾವಣೆ (Lok Sabha Election) ಈ ಬಾರಿ ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಪಾಲಿಗೆ ನೋವು ತಂದೊಡ್ಡಿದೆ. ಕಾರಣ ಈ ಬಾರಿ ಮಹಾರಾಜ ಯದುವೀರ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಹಾಗೆ, ಪ್ರತಾಪ್ ಸಿಂಹ ಅವರ ನೋವಿಗೂ ನಲಿವಿಗೂ ಆಸರೆಯಾಗಿದೆ ಅವರೇ ಶೇರ್ ಮಾಡಿರುವ ಎಲ್ಲ ಕಾಲಕ್ಕೂ ಸಲ್ಲುವ ಕಗ್ಗ. ಅದರ ವಿವರ ಇಲ್ಲಿದೆ.

ಮೈಸೂರು - ಕೊಡಗು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (ಎಡ ಚಿತ್ರ); ಹಾಲಿ ಸಂಸದ ಬಿಜೆಪಿ ನಾಯಕ ಪ್ರತಾಪ್ ಸಿಂಹ (ಬಲ ಚಿತ್ರ)
ಮೈಸೂರು - ಕೊಡಗು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ (ಎಡ ಚಿತ್ರ); ಹಾಲಿ ಸಂಸದ ಬಿಜೆಪಿ ನಾಯಕ ಪ್ರತಾಪ್ ಸಿಂಹ (ಬಲ ಚಿತ್ರ)

ಲೋಕಸಭೆ ಚುನಾವಣೆಗೆ ಈ ಬಾರಿ ಮೈಸೂರು -ಕೊಡಗು ಕ್ಷೇತ್ರದಿಂದ ಮಹಾರಾಜ ಯದುವೀರ ಒಡೆಯರ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಎರಡು ಬಾರಿ ಸಂಸದರಾಗಿದ್ದ ಪ್ರತಾಪ್ ಸಿಂಹ ಅವರು ಮೂರನೆ ಸಲವೂ ಟಿಕೆಟ್ ಸಿಗುವ ಭಾರಿ ನಿರೀಕ್ಷೆಯಲ್ಲಿದ್ದರು. 10 ವರ್ಷಗಳ ಸಾಧನೆಯ ರಿಪೋರ್ಟ್‌ ಕಾರ್ಡ್‌ ಅನ್ನು ಕ್ಷೇತ್ರದ ಮತದಾರರಿಗೆ ತಲುಪಿಸಿದ್ದರು. ಆದರೆ, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುನ್ನ ಪ್ರತಾಪ್ ಅವರಿಗೆ ಟಿಕೆಟ್‌ ಕೈತಪ್ಪಿರುವುದು ಮನವರಿಕೆಯಾಗಿದೆ.

ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಕಾರಣ ಪ್ರತಾಪ್ ಸಿಂಹ ಅವರಿಗೆ ಮತ್ತು ಅವರ ಬೆಂಬಲಿಗರಿಗೆ ಈ ಅನಿರೀಕ್ಷಿತ ಬೆಳವಣಿಗೆಯನ್ನು ಅರಗಿಸಿಕೊಳ್ಳುವುದು ಸಾಧ್ಯವಾಗಿಲ್ಲ. ಇದನ್ನು ಅವರ ಹೇಳಿಕೆಗಳು, ಬೆಂಬಲಿಗರ ಪ್ರತಿಭಟನೆ ಎಲ್ಲವೂ ಸಾರಿ ಹೇಳಿವೆ. ಇದಷ್ಟೇ ಅಲ್ಲ ಪ್ರತಾಪ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳಲ್ಲೂ ಅವರ ನೋವು ಪ್ರತಿಧ್ವನಿಸುತ್ತಿದೆ.

ನೋವನ್ನು ಶಮನ ಮಾಡಿಕೊಳ್ಳುವ ಪ್ರಯತ್ನದಲ್ಲಿರುವ ಪ್ರತಾಪ್ ಸಿಂಹ ಅವರು ಮಂಕು ತಿಮ್ಮನ ಕಗ್ಗ ಒಂದನ್ನು ಫೇಸ್‌ಬುಕ್ ಖಾತೆಯಲ್ಲಿ ನಿನ್ನೆ ತಡರಾತ್ರಿ ಶೇರ್ ಮಾಡಿದ್ದಾರೆ. ಬದುಕಿನ ಪ್ರತಿಯೊಂದು ನೋವನ್ನೂ ಶಮನಗೊಳಿಸುವುದಕ್ಕೆ ಬೇಕಾದಂತೆ ಸನ್ನಿವೇಶಕ್ಕೆ ತಕ್ಕಂತಹ ಕಗ್ಗದ ಸಾಲುಗಳಿರುವುದು ವಿಶೇಷ.

ಪ್ರತಾಪ್ ಸಿಂಹ ಶೇರ್ ಮಾಡಿದ ಮಂಕು ತಿಮ್ಮನ ಕಗ್ಗದ ಸಾಲುಗಳು

ಸತ್ತೆನೆಂದೆನಬೇಡ; ಸೋತೆನೆಂದೆನಬೇಡ |

ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ ||

ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು |

ಮತ್ತೆ ತೋರ್ಪುದು ನಾಳೆ -ಮಂಕುತಿಮ್ಮ ||(೫೯೨)

ಬ್ರಹ್ಮವಸ್ತುವು ಆನಂದಪಡುವುದಕ್ಕೋಸ್ಕರ ಪ್ರಕೃತಿಯ ಮೂಲಕವಾಗಿ ಆಟವನ್ನು ನಡೆಸುತ್ತಿದೆ. ತ್ರಿಗುಣಗಳ ವ್ಯತ್ಯಾಸದಿಂದ ಸೋಲು, ಗೆಲವು ಸ್ವಾಭಾವಿಕವೇ. ಈ ಲೀಲೆ ಸತತವಾಗಿ ಕೊನೆಯಿಲ್ಲದೆ ನಡೆಯುತ್ತಿರುವುದರಿಂದ ಇಲ್ಲಿ ಒಂದು ಸಲ ಸೋಲಾಗಬಹುದು, ಇನ್ನೊಂದು ಸಲ ಗೆಲುವಾಗಬಹುದು. ಆದದ್ದರಿಂದ ಈ ತತ್ತ್ವವನ್ನು ಮನದಟ್ಟು ಮಾಡಿಕೊಂಡು, ನನ್ನ ಜೀವನ ಕೆಟ್ಟಿತು, ನಾನು ಸಾಧಿಸಬೇಕಾದದ್ದನ್ನು ಸಾಧಿಸದೆಯೇ ಸಾಯುತ್ತಿದ್ದೇನೆ, ನಾನು ಸೋತೆ. ನನ್ನ ಒಳಸತ್ಯ ಬತ್ತಿಹೋಗಿದೆ, ನಾನು ಕೆಲಸಕ್ಕೆ ಬಾರದವನಾದೆ ಎಂದು-ನಿರಾಸೆಯ ಮನೋಭಾವವನ್ನು ತಳೆಯುವುದು ತಪ್ಪು ಎನ್ನುತ್ತಾರೆ ತಿಮ್ಮಗುರು.

ಮೃತ್ಯು ಎಂಬುದು ಒಂದು ಅಲೆಯಂತೆ, ಅಲೆ ಮೇಲೇಳುತ್ತದೆ ಮತ್ತೆ ಬೀಳುತ್ತದೆ, ಇನ್ನೊಂದು ಸಲ ಏಳುತ್ತದೆ. ಹೀಗೆ ನಮ್ಮ ಜೀವನ ಒಂದೇ ಜನ್ಮದಲ್ಲಿ ಮುಗಿದುಹೋಗುವುದಿಲ್ಲ. ಇಂದು ಬಿದ್ದ ಅಲೆ ನಾಳೆ ಏಳುತ್ತದೆ. ಇಂದು ಬಂದ ಸೋಲು ನಾಳೆ ಗೆಲುವಾಗುತ್ತದೆ.

(ಕೃಪೆ: ಮಂಕುತಿಮ್ಮನ ಕಗ್ಗ ತಾತ್ಪರ್ಯ - ಶ್ರೀಕಾಂತ್, ಕಗ್ಗಕ್ಕೊಂದು ಕೈಪಿಡಿ - ಡಿ.ಆರ್.ವೆಂಕಟರಮಣನ್ http://todayskagga.blogspot.com)

ಎಂಬ ಸಾಲುಗಳು ಪ್ರತಾಪ್ ಸಿಂಹ ಶೇರ್ ಮಾಡಿರುವ ಪೋಸ್ಟ್‌ನಲ್ಲಿದೆ.

ಪ್ರತಾಪ್ ಸಿಂಹ ಅವರ ಪೋಸ್ಟ್‌ಗೆ ಸಾಂತ್ವನ, ವಿಭಿನ್ನ ಪ್ರತಿಕ್ರಿಯೆ

ಪ್ರತಾಪ್ ಸಿಂಹ ಅವರ ಫೇಸ್‌ಬುಕ್‌ ಪೋಸ್ಟ್‌ಗೆ 500ಕ್ಕೂ ಹೆಚ್ಚು ಕಾಮೆಂಟ್‌ಗಳಿದ್ದು, ಅವುಗಳಲ್ಲಿ ಆಯ್ದವು ಇಲ್ಲಿದೆ.

“ಪ್ರತಾಪ್ ಸರ್ ನಿಮಗೆ ಎಷ್ಟು ಬೇಜಾರಾಗಿದೆ ಅಂತ ನಮಗೆ ಗೊತ್ತು ನಿಮಗಿಂತ ನೂರು ಪಟ್ಟು ನಮಗೆ ಬೇಜಾರಾಗಿದೆ. ಆದರೂ ಮೋದಿಜಿಗೋಸ್ಕರ ನೀವು ನಾವು ಸುಮ್ಮನಿರಲೇಬೇಕು. ಮುಂದೊಂದು ದಿನ ನಿಮಗೆ ಕೇಂದ್ರದಲಾಗಲಿ ರಾಜ್ಯದಲಾಗಲಿ ಒಂದು ಉನ್ನತವಾದ ಹುದ್ದೆ ನಿಮಗೆ ಸಿಕ್ಕೆ ಸಿಗುತ್ತದೆ. ಆ ಚಾಮುಂಡೇಶ್ವರಿ ತಾಯಿ ಆಶೀರ್ವಾದ ಕರ್ನಾಟಕದ ಜನರ ಆಶೀರ್ವಾದ ಸದಾ ನಿಮ್ಮ ಮೇಲೆ ಇದ್ದೇ ಇರುತ್ತದೆ” ಎಂದು ರಾಜೇಶ್‌ ಕುಮಾರ್ ಎಂಬುವವರು ಕಾಮೆಂಟ್ ಮಾಡಿದ್ದಾರೆ.

“ನೋಡಿ ಒಬ್ಬ ಕಾಲಂ ರೈಟರ್ ಅನ್ನು ಈ ಭಾಗದ ಸಂಸದರನ್ನಾಗಿ ಎರಡು ಸಲ ಆಯ್ಕೆ ಮಾಡಿಯಾಗಿದೆ. ಅದು ನಮ್ಮಂತವರ (ಪಕ್ಕಾ ಬಿಜೆಪಿ ) ಶ್ರಮದ ಫಲ. ದಯವಿಟ್ಟು ಮೋದಿ ಪ್ರಧಾನಿ ಆಗಲಿ ಅಂತ ಹಾರೈಸಿ. ಮಹಾರಾಜರಿಗೆ ರಾಜಕೀಯದ ಅವಶ್ಯಕತೆ ಇಲ್ಲ. ನಮ್ಮ ಮೋದಿಜಿ ಮತ್ತು ನಮ್ಮ ಬಿಜೆಪಿಗೆ ಅವಶ್ಯಕತೆ ಇದೆ.. ದಯವಿಟ್ಟು ಬೇರೆ ರೀತಿಯ ವ್ಯಾಖ್ಯಾನ ಬೇಡ”ಎಂದು ಪಿ. ಮೋಹನ್ ಕುಮಾರ್. (ಮೋಹನ್ ಪಾಂಡುರಂಗ ) ಪ್ರತಿಕ್ರಿಯಿಸಿದ್ದಾರೆ.

ಧಾರವಾಡದ ರಾಜೇಂದ್ರ ಕುಮಾರ್‌ ಮಠ ಅವರು “ಇಂದಿನ ವಾಸ್ತವ ಜಗತ್ತಿನ ಕಟು ಸತ್ಯವನ್ನು ಡಿವಿಜಿ ಅವರು ಎಂದೋ ಹೇಳಿದ್ದಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

IPL_Entry_Point