ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Election 2024: ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿಗೆ ನೋಟಾ ಪೈಪೋಟಿ; ಮತದಾರನ ಮನದಾಳದಲ್ಲಿ ಏನಿದೆ

Lok Sabha Election 2024: ಕರಾವಳಿ ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿಗೆ ನೋಟಾ ಪೈಪೋಟಿ; ಮತದಾರನ ಮನದಾಳದಲ್ಲಿ ಏನಿದೆ

ಕರಾವಳಿ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳಿಂದ ಮತದಾರ ಬೇಸರಗೊಂಡಂತಿದೆ. ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ಜೊತೆಗೆ ನೋಟಾ ಕೂಡ ಪೈಪೋಟಿ ನೀಡುತ್ತಿದೆ. (ವರದಿ: ಹರೀಶ್ ಮಾಂಬಾಡಿ)

ಕರ್ನಾಟಕ ಕರಾವಳಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆಗೆ ನೋಟಾ ಕೂಡ ಸ್ಪರ್ಧೆ ನೀಡುತ್ತಿದೆ. ಮತದಾರ ರಾಜಕೀಯ ಪಕ್ಷಗಳಿಂದ ಬೇಸರಗೊಂಡಂತಿದೆ.
ಕರ್ನಾಟಕ ಕರಾವಳಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆಗೆ ನೋಟಾ ಕೂಡ ಸ್ಪರ್ಧೆ ನೀಡುತ್ತಿದೆ. ಮತದಾರ ರಾಜಕೀಯ ಪಕ್ಷಗಳಿಂದ ಬೇಸರಗೊಂಡಂತಿದೆ.

ಮಂಗಳೂರು: ‘ಮತದಾನ ನಮ್ಮ ಹಕ್ಕು, ಅದನ್ನು ಚಲಾಯಿಸಲೇಬೇಕು’ ಎಂದು ಮತದಾನ ಜಾಗೃತಿ ಕಾರ್ಯಕ್ರಮಗಳಲ್ಲಿ ಚುನಾವಣಾ ಆಯೋಗ ಹೇಳುತ್ತದೆ. ಮತಗಟ್ಟೆಗೆ ಹೋಗಿ ಯಾರಿಗೂ ಗೊತ್ತಾಗದಂತೆ ನಮ್ಮ ಹಕ್ಕು ಚಲಾಯಿಸಲು ಮತಗಟ್ಟೆಗಳಿವೆ. ಅದರಲ್ಲಿ ನೋಟಾ ಎಂಬ ಬಟನ್ ಒತ್ತಲೂ ಅವಕಾಶವಿದೆ. ಮತದಾನ ಮಾಡಿದಂತೆಯೂ ಆಯಿತು, ಯಾರಿಗೂ ಓಟು ಹಾಕದಂತೆಯೂ ಆಯಿತು..!! ರಾಜಕಾರಣದ ಕುರಿತು ಬೇಸತ್ತ ಯುವ ಮತದಾರರ ಸಹಿತ ಹಲವರು ಹೇಳುತ್ತಿರುವ ಮಾತು ಇದು. ಕಣಕ್ಕೆ ಇಳಿದವರು ಯಾರೂ ಇಷ್ಟವಿಲ್ಲ ಎಂದಾದರೆ, ನೋಟಾ (NONE OF THE ABOVE). ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರಿಗೂ ತಾನು ವೋಟ್ ಹಾಕುವುದಿಲ್ಲ ಎಂದಾದರೆ ‘ಮೇಲಿನ ಯಾವುದೂ ಅಲ್ಲ’ ಎಂಬ ನೋಟಾ (NOTA) ಮತ ಚಲಾಯಿಸುವ ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್ 2013ರ ಸೆ.27 ರಂದು ತೀರ್ಪು ನೀಡಿತ್ತು. ಆ ನಂತರ ನಡೆದ 2014ರ ಲೋಕಸಭಾ ಚುನಾವಣೆಯಲ್ಲಿ ಇಸಿ ನೋಟಾವನ್ನು ಪರಿಚಯಿಸಿತು.

ಟ್ರೆಂಡಿಂಗ್​ ಸುದ್ದಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎತ್ತಿನಹೊಳೆ ಹೋರಾಟದ ಕಾವು ಇತ್ತು. ಆ ಸಂದರ್ಭದಲ್ಲಿ ನೋಟಾ ಚಲಾಯಿಸಿ ಎಂದು ಹೋರಾಟಗಾರರು ಕರೆ ಕೊಟ್ಟಿದ್ದರು. 2014ರ ಚುನಾವಣೆಯಲ್ಲಿ ಏಳು ಸಾವಿರಕ್ಕೂ ಅಧಿಕ ಮತ ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಚಲಾವಣೆಯಾಗಿತ್ತು. ಇದೀಗ ಮತ್ತೆ ನೋಟಾ ಸದ್ದು ಮಾಡುತ್ತಿದೆ. ಈ ಬಾರಿ ಜೋರಾಗಿಯೇ ಇದೆ. ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ತಮ್ಮ ಪ್ರಚಾರ ಮಾಡುವಂತೆಯೇ ನೋಟಾ ಪರ ಪ್ರಚಾರವೂ ಸೋಶಿಯಲ್ ಮೀಡಿಯಾಗಳಲ್ಲಿ ನಡೆಯುತ್ತಿದ್ದು, ಬಹಿರಂಗವಾಗಿಯೂ ಆಗುತ್ತಿದೆ.

ರಾಜಕೀಯ ಪಕ್ಷಗಳಿಗೂ ನೋಟಾದ ಮೇಲೆ ಕಣ್ಣು

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳಿನ್ ಕುಮಾರ್ ಅವರ ಬದಲು ಬ್ರಿಜೇಶ್ ಚೌಟ ಅವರಿಗೆ ಟಿಕೆಟ್ ನೀಡಿದ ಬಳಿಕ ಕಾಂಗ್ರೆಸ್‌ ಆರ್. ಪದ್ಮರಾಜ್ ಅವರಿಗೆ ಟಿಕೆಟ್ ನೀಡಿತು. ಇದಾದ ಬಳಿಕ ಚುನಾವಣಾ ಸಮೀಕರಣ ಬದಲಾಯಿತು. ಇಬ್ಬರೂ ತಮ್ಮ ಸಾಂಪ್ರದಾಯಿಕ ಮತಗಳನ್ನು ರಕ್ಷಿಸುವುದರೊಂದಿಗೆ ಹೊಸ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿರುವಾಗಲೇ ನೋಟಾ ಕರೆ ಯಾರಿಗೆ ಲಾಭ ತರುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಬಿಜೆಪಿಯ ಸಾಂಪ್ರದಾಯಿಕ ಮತಗಳ ಮೇಲೆ ನೋಟಾ ಕರೆ ಪ್ರಭಾವ ಬೀರುತ್ತದೆಯೇ ಎಂಬ ಚರ್ಚೆಗಳು ಆರಂಭಗೊಂಡಿದ್ದು, ಹೀಗಾದರೆ, ಕಣ ಮತ್ತಷ್ಟು ರಂಗೇರಲಿದೆ.

ನೋಟಾ ಅಭಿಯಾನಕ್ಕೆ ಕರೆ ನೀಡಿದ ಹೋರಾಟಗಾರರು ಏನು ಹೇಳುತ್ತಾರೆ?

ದಶಕದ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಹತ್ಯೆ ಖಂಡಿಸಿ ಈಗಾಗಲೇ ಹಲವು ಹೋರಾಟಗಳು ನಡೆದಿದ್ದು, ಅದರ ಮುಂದುವರಿದ ಭಾಗವಾಗಿ ಈ ಬಾರಿಯ ಚುನಾವಣೆಯಲ್ಲಿ ಹೋರಾಟಗಾರರು ನ್ಯಾಯಕ್ಕೆ ಆಗ್ರಹಿಸಿ, ನೋಟಾ ಅಭಿಯಾನ ಆರಂಭಿಸಿದ್ದಾರೆ. ಚುನಾವಣೆಯಲ್ಲಿ ಯಾವುದೇ ಅಭ್ಯರ್ಥಿಗಳಿಗೂ ಮತ ನೀಡುವ ಬದಲು ನೋಟಾ ಒತ್ತಿ, ಇದು ಜಾಸ್ತಿಯಾದರೆ, ದೇಶದ ಗಮನ ದಕ್ಷಿಣ ಕನ್ನಡ ಕ್ಷೇತ್ರದತ್ತ ಬರುತ್ತದೆ, ಹೀಗಾದರೆ, ಹೋರಾಟಕ್ಕೆ ಬಲ ದೊರಕುತ್ತದೆ ಎಂಬ ನಿರೀಕ್ಷೆಯಲ್ಲಿ ಈ ಅಭಿಯಾನ ಮಾಡಲಾಗುತ್ತಿದೆ.

ಅತ್ಯಾಚಾರ ಸಂತ್ರಸ್ತರಿಗೆ ನ್ಯಾಯ ಆಗ್ರಹಿಸಿ ಹೋರಾಟ ಸಮಿತಿಯಿಂದ ನೋಟಾ ಅಭಿಯಾನ ನಡೆಸುತ್ತಿದ್ದೇವೆ ಎಂದು ಅಭಿಯಾನದ ಹೋರಾಟಗಾರರು ಹೇಳುತ್ತಾರೆ. ಈ ಕುರಿತು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ಅಭಿಯಾನದ ಉದ್ದೇಶಗಳನ್ನು ವಿವರಿಸಿದ್ದಾರೆ. ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣಗಳನ್ನು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಬೇಕೆಂದು ಆಗ್ರಹಿಸಿ ಹೋರಾಟ ಸಮಿತಿ ನೋಟಾ ಅಭಿಯಾನ ಆರಂಭಿಸಲಾಗಿದೆ ಎಂದು ಹೋರಾಟ ಸಮಿತಿಯ ಮುಖಂಡ ಗಿರೀಶ್ ಮಟ್ಟನ್ನನವರ್ ಹೇಳಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೋರಾಟ ಸಮಿತಿ ನೋಟಾ ಅಭಿಯಾನ ಹಮ್ಮಿಕೊಂಡಿದ್ದು, ಹೋರಾಟಗಾರರು ಈ ಬಾರಿ ನೋಟ ಮತ ಚಲಾಯಿಸುವ ಮೂಲಕ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಲು ಮುಂದಾಗಿದ್ದೇವೆ. ಸೌಜನ್ಯ ಅತ್ಯಾಚಾರ ಸೇರಿದಂತೆ ರಾಜ್ಯದಲ್ಲಿ ನಡೆದ ಎಲ್ಲಾ ಹೆಣ್ಣು ಮಕ್ಕಳ ಅತ್ಯಾಚಾರ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವ ನಿಟ್ಟಿನಲ್ಲಿ ಈ ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ. ನೋಟ ಬಗ್ಗೆ ಜನ ಜಾಗೃತಿ ಅಗತ್ಯವಿದೆ ಎಂದು ನ್ಯಾಯಾಲಯವೇ ಹೇಳಿದೆ. ದ.ಕ ಹಾಗೂ ಉಡುಪಿಯ ಕರಾವಳಿ ಭಾಗದಲ್ಲಿ ಈ ಅಭಿಯಾನ ಹಮ್ಮಿಕೊಳ್ಳುತ್ತಿದ್ದು, ಜನಜಾಗೃತಿ ಸಭೆಯನ್ನೂ ಆಯೋಜಿಸುವ ಕುರಿತು ಚಿಂತಿಸಿದೆ. ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಈ ಅಭಿಯಾನವಾಗುತ್ತಿದ್ದು, ಪ್ರಸನ್ನ ರವಿ, ತಮ್ಮಣ್ಣ ಶೆಟ್ಟಿ, ಜಯನ್ ಮತ್ತಿತರರು ಇವರ ಜೊತೆಗಿದ್ದಾರೆ.

ಸದ್ದು ಮಾಡುತ್ತಿರುವ ನೋಟಾ ಪ್ರಣಾಳಿಕೆ, ರಾಜಕೀಯ ಪಕ್ಷಗಳಿಗೂ ತಲೆನೋವು

ಹೋರಾಟಗಾರರು ಕರೆ ನೀಡಿರುವ ನೋಟಾ ಅಭಿಯಾನ ದ.ಕ.ಜಿಲ್ಲಾ ಚುನಾವಣಾ ಕಣದಲ್ಲಿ ಭಾರೀ ಸಂಚಲನ ಸೃಷ್ಟಿಸುತ್ತಿದೆ. ಹೋರಾಟಗಾರರು ನೋಟಾ ಅಭಿಯಾನಕ್ಕೆಂದು ಪ್ರತ್ಯೇಕ ಪ್ರಣಾಳಿಕೆಯನ್ನೂ ಬಿಡುಗಡೆ ಮಾಡಿದ್ದಾರೆ. ಪ್ರಣಾಳಿಕೆಯ ಈ ಅಂಶಗಳು ರಾಜಕೀಯ ಪಕ್ಷಗಳಿಗೆ ತಲೆನೋವು ತಂದಿದೆ. ಈವರೆಗೆ ನಾವು ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷಗಳ ಪ್ರಣಾಳಿಕೆಯನ್ನು ನೋಡುತ್ತಿದ್ದೆವು. ಆದರೆ ಇದೀಗ ದ.ಕ ಜಿಲ್ಲೆಯಲ್ಲಿ ನೋಟಾ ಅಭಿಯಾನಕ್ಕೂ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆಯಾಗಿದೆ. ಈ ಮೂಲಕ ಸೌಜನ್ಯ ಪರ ಹೋರಾಟ ಚುನಾವಣಾ ಕಣದಲ್ಲಿ ಸಂಚಲನ ಸೃಷ್ಟಿಸಿದೆ. ಜಿಲ್ಲೆಯಾದ್ಯಂತ ಹಲವಾರು ಪ್ರತಿಭಟನೆಗಳು, ಸಮಾವೇಶಗಳು ನಡೆದ ಬಳಿಕ ಇದೀಗ ದೇಶದ ಸರ್ವತೋಮುಖ ನ್ಯಾಯಾಂಗ ಹಾಗು ಸಂಸದೀಯ ವ್ಯವಸ್ಥೆಯ ಗಮನ ಸೆಳೆಯಲು ಸೌಜನ್ಯ ಪರ ಹೋರಾಟಗಾರರು ನೋಟಾ ಅಭಿಯಾನವನ್ನು ಜಿಲ್ಲೆಯಾದ್ಯಂತ ತೀವ್ರಗೊಳಿಸಿದ್ದಾರೆ.

ಎತ್ತಿನಹೊಳೆ ಯೋಜನೆ ವಿರೋಧಿಸಿ ನೋಟಾಗೆ ಕರೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 2014 ಮತ್ತು 2019ರ ಚುನಾವಣೆಯಲ್ಲಿ ಎತ್ತಿನಹೊಳೆ ಹೋರಾಟ ತೀವ್ರವಾಗಿದ್ದ ಸಂದರ್ಭ, ನೋಟಾ ಅಭಿಯಾನ ನಡೆದಿತ್ತು. ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಹೋರಾಟಗಾರರು ಯಾವ ರಾಜಕೀಯ ಪಕ್ಷವೂ ನಮ್ಮ ನದಿ ಉಳಿಸುವ ಕುರಿತು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ. ಹೀಗಾಗಿ ನೋಟಾ ಹಾಕಿ ಪಾಠ ಕಲಿಸಿ ಎಂದು ಹೇಳಿದ್ದರು. ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ನೋಟಾಕ್ಕೆ ಏಳು ಸಾವಿರ ಮತಗಳು ಲಭಿಸಿದ್ದವು. ಈ ಬಾರಿ ಹೋರಾಟಗಾರರ ಬೆಂಬಲಿಗರು ಎರಡು ಲಕ್ಷ ಮತಗಳು ದೊರಕಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.(ವರದಿ: ಹರೀಶ್ ಮಾಂಬಾಡಿ)

IPL_Entry_Point