R Padmaraj: ಹಿರಿಯ ನಾಯಕ ಜನಾರ್ದನ ಪೂಜಾರಿ ಶಿಷ್ಯನಿಗೆ ಒಲಿದ ಅದೃಷ್ಟ; ದ.ಕ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡ ಆರ್ ಪದ್ಮರಾಜ್ ಯಾರು?
Lok Sabha Election 2024: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿಕೊಂಡಿರುವ ಆರ್ ಪದ್ಮರಾಜ್ ಯಾರು? ಕೈ ನಾಯಕರು ಇವರಿಗೆ ಯಾಕೆ ಮಣಿಹಾಕಿದ್ದು ಅನ್ನೋದರ ವಿವರ ತಿಳಿಯೋಣ. (ವರದಿ: ಹರೀಶ ಮಾಂಬಾಡಿ, ಮಂಗಳೂರು)

ಮಂಗಳೂರು (ದಕ್ಷಿಣ ಕನ್ನಡ): ಅಳೆದು, ತೂಗಿ ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರ ಶಿಷ್ಯ ಎಂದೇ ಹೇಳಲಾಗುತ್ತಿರುವ ವಕೀಲ ಆರ್ ಪದ್ಮರಾಜ್ ಅವರ ಮೇಲೆ ವಿಶ್ವಾಸವಿಟ್ಟಿದೆ. 1991ರಲ್ಲಿ ಕಳೆದುಕೊಂಡಿದ್ದ ದಕ್ಷಿಣ ಕನ್ನಡ (ಅಂದಿನ ಮಂಗಳೂರು) ಕ್ಷೇತ್ರವನ್ನು ಮತ್ತೆ ಪಡೆಯುವ ವಿಶ್ವಾಸವನ್ನು ಕೈ ನಾಯಕರು ಹೊಂದಿದ್ದಾರೆ. ಟಿಕೆಟ್ ದೊರಕುವ ವಿಚಾರ ಖಚಿತವಾದ ನಂತರ ಪದ್ಮರಾಜ್ ಅವರು ಟೆಂಪಲ್ ರನ್ ಮಾಡಿದ್ದಾರೆ. ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ತೆರಳಿ ದೇವರ ಆಶೀರ್ವಾದ ಪಡೆದ ಬಳಿಕ ನೇರವಾಗಿ ಬಂಟ್ವಾಳದಲ್ಲಿರುವ ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮನೆಗೆ ತೆರಳಿ ಅವರ ಆಶೀರ್ವಾದ ಪಡೆದಿದ್ದಾರೆ.
ವಿಶೇಷವೆಂದರೆ 1991ರಲ್ಲಿ ಜನಾರ್ದನ ಪೂಜಾರಿ ಅವರನ್ನು ಸೋಲಿಸಿದ ಬಿಜೆಪಿ ಕ್ಷೇತ್ರವನ್ನು ವಶಪಡಿಸಿಕೊಂಡ ಮೇಲೆ ಸತತವಾಗಿ ಗೆಲ್ಲುತ್ತಾ ಬಂದಿದ್ದು, ಮೂರು ಬಾರಿ ಪೂಜಾರಿಯವರನ್ನೇ ಸೋಲಿಸಿತ್ತು. ಇದೀಗ ಮುಯ್ಯಿ ತೀರಿಸಲೆಂದೇ ಜನಾರ್ದನ ಪೂಜಾರಿ ಅವರ ಶಿಷ್ಯ ಪದ್ಮರಾಜ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವುದರ ಮೂಲಕ ಬಿಜೆಪಿಯ ಹೊಸಮುಖ ಕ್ಯಾಪ್ಟನ್ ವಿರುದ್ಧ ಮತ್ತೋರ್ವ ಯುವಮುಖವನ್ನು ಸ್ಪರ್ಧೆಗಿಳಿಸಿದೆ.
ಯಾರು ಪದ್ಮರಾಜ್, ಕಾಂಗ್ರೆಸ್ ಯಾಕೆ ಅವರ ಮೇಲಿಟ್ಟಿತು ವಿಶ್ವಾಸ?
ಜಾತಿ ಸಮೀಕರಣವನ್ನು ನೋಡುವುದಾದರೆ, ದಕ್ಷಿಣ ಕನ್ನಡದಲ್ಲಿ ಹಿಂದುಗಳಲ್ಲಿ ಪ್ರಬಲವಾಗಿರುವ ಬಿಲ್ಲವ ಸಮುದಾಯದ ಪದ್ಮರಾಜ್ ಅವರಿಗೆ ಟಿಕೆಟ್ ನೀಡುವುದರ ಮೂಲಕ ಬಿಜೆಪಿ ಉಡುಪಿ ಕ್ಷೇತ್ರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಉತ್ತರ ನೀಡಿದೆ. ಪದ್ಮರಾಜ್ ಅವರು ಬಿಲ್ಲವ ಯುವ ಸಂಘಟನೆಯನ್ನು ಸಂಘಟಿಸುವುದರ ಮೂಲಕ ಸಮುದಾಯದಲ್ಲಿ ವಿಶ್ವಾಸವನ್ನು ಗಳಿಸಿಕೊಂಡದ್ದಲ್ಲದೆ, ಗುರುಬೆಳದಿಂಗಳು ಎಂಬ ಯೋಜನೆ ಮೂಲಕ ಹಲವು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು. ನ್ಯಾಯವಾದಿಯೂ ಆಗಿರುವ ಅವರು, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಸಮಿತಿ ಕೋಶಾಧಿಕಾರಿ ಆಗಿದ್ದಾರೆ.
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಬಾಳೂರಿನಲ್ಲಿ ಮಂಗಳೂರು ಮೂಲದ ಎಚ್.ಎಂ ರಾಮಯ್ಯ ಮತ್ತು ಲಲಿತಾ ದಂಪತಿಯ ದ್ವಿತೀಯ ಪುತ್ರನಾಗಿ ಜನಿಸಿದ ಪದ್ಮರಾಜ್, ಅವರ ಅಣ್ಣ ಮಂಗಳೂರಿನ ಹೆಸರಾಂತ ಹೃದಯ ರೋಗ ತಜ್ಞ ಡಾ. ಪುರುಷೋತ್ತಮ ಆರ್. ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಹುಟ್ಟೂರಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಗಿಸಿ ಮುಂದೆ ಬಿ.ಎ ಪದವಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಕಾಲೇಜು ಹಾಗೂ ಕಾನೂನು ಪದವಿಯನ್ನು ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಮುಗಿಸಿದರು.
1995 ರಿಂದ ಕಾನೂನು ವೃತ್ತಿಯ ಚೊಚ್ಚಲ ಅಭ್ಯಾಸವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಜನಾರ್ದನ ಪೂಜಾರಿಯವರೊಂದಿಗೆ ಪ್ರಾರಂಭಿಸಿದರು. ಬಳಿಕ ಸ್ವಂತ ಕಚೇರಿ ಪ್ರಾರಂಭಿಸಿದರು. ವೃತ್ತಿ ಜೀವನದ ಆರಂಭದ ಸಮಯದಲ್ಲಿ ಹಿರಿಯ ವಕೀಲರಾದ ಪಿ.ಗಂಗಾಧರ್ ಸಲಹೆಯಂತೆ ಆಗಿನ ಬಿಲ್ಲವರ ಯೂನಿಯನ್‌ನ ಸದಸ್ಯರಾದರು. 25 ವರ್ಷಗಳಿಂದ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿಯಾಗಿರುವ ಬಿ ಜನಾರ್ದನ ಪೂಜಾರಿಯವರ ಅಪ್ಪಟ ಅನುಯಾಯಿ.
ಗುರುಬೆಳದಿಂಗಳು ಫೌಂಡೇಶನ್
ಗುರುಬೆಳದಿಂಗಳು ಫೌಂಡೇಶನ್ ಮೂಲಕ ಸಹಸ್ರಾರು ನೊಂದವರಿಗೆ ದಿನಸಿ, ಆಹಾರ ಸಾಮಗ್ರಿ ತಲುಪಿಸುವ ಮೂಲಕ ಗಮನ ಸೆಳೆದರು. ಕುಕ್ಕರ್ ಬಾಂಬ್ ಸ್ಪೋಟದ ಸಂತ್ರಸ್ತ ಉಜ್ಜೋಡಿಯ ಪುರುಷೋತ್ತಮ ಪೂಜಾರಿಯವರಿಗೆ ಸುಸಜ್ಜಿತವಾಗಿ ಮನೆ ನವೀಕರಣಗೊಳಿಸಿದ ವಿಚಾರವೂ ಸೇರಿದಂತೆ ಬಡವರಿಗೆ ಜಾತಿಮತದ ತಾರತಮ್ಯ ನೋಡದೆ ಸುಸಜ್ಜಿತವಾಗಿ ಮನೆ ನಿರ್ಮಿಸಿಕೊಡುವ ಮೂಲಕ ಪದ್ಮರಾಜ್ ಗಮನ ಸೆಳೆದಿದ್ದಾರೆ. ಗುರುಬೆಳದಿಂಗಳು ಫೌಂಡೇಶನ್ ಮೂಲಕ ಆರೋಗ್ಯ, ಆಸರೆ, ಶಿಕ್ಷಣ ಎನ್ನುವ ಧ್ಯೇಯದೊಂದಿಗೆ ಈವರೆಗೆ ಲಕ್ಷಾಂತರ ರೂಪಾಯಿ ಖರ್ಚಿನಲ್ಲಿ ಬಡವರ ಸೇವೆಗೆ ವಿನಿಯೋಗಿಸಿದ್ದಾರೆ.
ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಧ್ಯೇಯದೊಂದಿಗೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಯುವವಾಹಿನಿ ಕೇಂದ್ರ ಸಮಿತಿಯ ಗೌರವ ಸಲಹೆಗಾರರಾಗಿದ್ದಾರೆ. ಜೆಪಿ ನಾರಾಯಣ ಸ್ವಾಮಿ ಪ್ರತಿಷ್ಠಾಪನ ಬೆಂಗಳೂರು ಇದರ ದ.ಕ. ಜಿಲ್ಲಾ ಸಂಚಾಲಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹೀಗೆ ಹತ್ತು ಹಲವು ಸಂಘ ಸಂಸ್ಥೆಗಳಲ್ಲಿ ಸದಾ ಕ್ರೀಯಾಶೀಲತೆಯಲ್ಲಿದ್ದಾರೆ.
ಈಗಾಗಲೇ ಗುರುಬೆಳದಿಂಗಳು ಫೌಂಡೇಶನ್ ಮೂಲಕ ನೊಂದವರಿಗೆ ಮನೆ ನಿರ್ಮಾಣ, ಬಡ ಹೆಣ್ಣುಮಕ್ಕಳ ಮದುವೆ, ನೂರಾರು ರೋಗಿಗಳಗೆ ಔಷಧಕ್ಕೆ ನೆರವು, ನೂರಾರು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸೇರಿ ಫೌಂಡೇಶನ್ ಮೂಲಕ ಲಕ್ಷಾಂತರ ರೂಪಾಯಿ ಸಹಾಯಹಸ್ತ ನೀಡಲಾಗಿದೆ. ನೋಟರಿ ವಕೀಲರಾದ ಇವರು ತನ್ನ ನೋಟರಿ ಸಹಿಯನ್ನು ಬಡವರು, ವಿದ್ಯಾರ್ಥಿಗಳ ದೃಢೀಕರಣಕ್ಕೆ ಉಚಿತವಾಗಿ ನೀಡುತ್ತಿದ್ದಾರೆ. ಈ ಎಲ್ಲಾ ಸಾಮಾಜಿಕ ಕಾರ್ಯಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇವರ ಕೈ ಹಿಡಿಯಲಿದೆಯೇ ಎಂಬುದು ಜೂನ್ 4 ರ ಫಲಿತಾಂಶದಂದು ಗೊತ್ತಾಗಲಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)
