ಕನ್ನಡ ಸುದ್ದಿ  /  ಕರ್ನಾಟಕ  /  Lok Sabha Result: ರಾಯಚೂರು ಡಿಸಿಗಳಾಗಿದ್ದ ಇಬ್ಬರು ಐಎಎಸ್‌ ಅಧಿಕಾರಿಗಳೀಗ ಸಂಸದರು, ಯಾರವರು?

Lok sabha Result: ರಾಯಚೂರು ಡಿಸಿಗಳಾಗಿದ್ದ ಇಬ್ಬರು ಐಎಎಸ್‌ ಅಧಿಕಾರಿಗಳೀಗ ಸಂಸದರು, ಯಾರವರು?

IAS officer to Parliament ಕರ್ನಾಟಕ ಕೇಡರ್‌ನ ಐಎಎಸ್‌ ಅಧಿಕಾರಿಗಳಾಗಿದ್ದ ಕುಮಾರನಾಯಕ್‌ ಹಾಗೂ ಸಸಿಕಾಂತ್‌ ಸೇಂಥಿಲ್‌ ಈಗ ಲೋಕಸಭಾ ಸದಸ್ಯರಾಗಿದ್ದಾರೆ.

ರಾಯಚೂರು ಡಿಸಿಗಳಾಗಿದ್ದ ಕುಮಾರನಾಯಕ್‌ ಹಾಗೂ ಸಸಿಕಾಂತ್‌ ಸೇಂಥಿಲ್‌ ಈಗ ಸಂಸದರು.
ರಾಯಚೂರು ಡಿಸಿಗಳಾಗಿದ್ದ ಕುಮಾರನಾಯಕ್‌ ಹಾಗೂ ಸಸಿಕಾಂತ್‌ ಸೇಂಥಿಲ್‌ ಈಗ ಸಂಸದರು.

ಬೆಂಗಳೂರು: ಕೆಲ ವರ್ಷಗಳ ಹಿಂದೆ ಈ ಇಬ್ಬರು ಐಎಎಸ್‌ ಅಧಿಕಾರಿಗಳು( IAS Officers) ಕರ್ನಾಟಕ ದ ರಾಯಚೂರು ಜಿಲ್ಲಾಧಿಕಾರಿಗಳಾಗಿದ್ದರು. ಅಷ್ಟೇ ಅಲ್ಲದೇ ಕರ್ನಾಟಕದ ನಾನಾ ಭಾಗಗಳಲ್ಲಿ ಅಧಿಕಾರಿಗಳಾಗಿ ಕೆಲಸ ಮಾಡಿದವರು. ಒಬ್ಬರು ನಿವೃತ್ತರಾದರೆ ಮತ್ತೊಬ್ಬರು ಸ್ವಯಂ ನಿವೃತ್ತಿ ಪಡೆದರು. ಇಬ್ಬರೂ ಕಾಂಗ್ರೆಸ್‌ ಪಕ್ಷ ಸೇರಿದರು. ಲೋಕಸಭೇ ಚುನಾವಣೆಯಲ್ಲಿ ಟಿಕೆಟ್‌ ಕೂಡ ಪಡೆದರು. ಒಬ್ಬರು ಕರ್ನಾಟಕದ ರಾಯಚೂರಿನಿಂದ( Raichur) ಗೆದ್ದರೆ, ಮತ್ತೊಬ್ಬರು ತಮಿಳುನಾಡಿನ ತಿರುವಳ್ಳೂರು( TIRUVALLUR ) ಕ್ಷೇತ್ರದಿಂದ ಜಯಗಳಿಸಿದರು, ಈ ಇಬ್ಬರು ಈಗ ಸಂಸದ್‌ ಸದಸ್ತರಾಗಿ ಕೆಲಸ ಮಾಡುವ ಅವಕಾಶ ಪಡೆದಿದ್ದಾರೆ. ಆಗ ಕಾರ್ಯಾಂಗದಲ್ಲಿದ್ದರು. ಈಗ ಶಾಸಕಾಂಗಕ್ಕೆ ಸೇರಿಕೊಂಡಿದ್ದಾರೆ. ಒಬ್ಬರು ಕರ್ನಾಟಕದವರೇ ಆದ ಜಿ.ಕುಮಾರನಾಯಕ್‌, ಮತ್ತೊಬ್ಬರು ಜಿ.ಸಸಿಕಾಂತ್‌ ಸೇಂಥಿಲ್‌ (Sasikanth Senthil) .

ಟ್ರೆಂಡಿಂಗ್​ ಸುದ್ದಿ

ಕನ್ನಡಿಗ ಕುಮಾರನಾಯಕ್‌

ಕುಮಾರನಾಯಕ್‌ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರಾದರೂ ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಆದರೆ ಶಿಕ್ಷಣವನ್ನು ಮೈಸೂರಿನ ರಾಮಕೃಷ್ಣ ವಿದ್ಯಾಶಾಲೆ, ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಪೂರೈಸಿದವರು. ಬ್ಯಾಂಕ್‌ ಅಧಿಕಾರಿಯಾಗಿದ್ದವರು. ಆನಂತರ ಯುಪಿಎಸ್ಸಿ ಪರೀಕ್ಷೆ ಬರೆದು 1990 ರಲ್ಲಿ ಕರ್ನಾಟಕ ಸೇವೆಗೆ ಆಯ್ಕೆಯಾದವರು. ಮೂರು ದಶಕ ಕಾಲ ಹಲವು ಇಲಾಖೆಯಲ್ಲಿ ಕೆಲಸ ಮಾಡಿದವರು. ಹುಣಸೂರು, ಕುಮಟಾ ಎಸಿಯಾಗಿದ್ದರು. ಬೆಳಗಾವಿ ಜಿಲ್ಲಾಪಂಚಾಯಿತಿ ಸಿಇಒ ಆಗಿದ್ದರು. ನಂತರ ಡಿಸಿಯಾದರು. ಅದರಲ್ಲೂ ಆಹಾರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ., ಇಂಧನ, ಶಿಕ್ಷಣ, ಬಿಬಿಎಂಪಿ, ಬಿಡಿಎದಲ್ಲಿ ಕಾರ್ಯನಿರ್ವಹಿಸಿ ಕಳೆದ ವರ್ಷ ನಿವೃತ್ತರಾದವರು.

ಮೈಸೂರಿನಲ್ಲಿ ಡಿಸಿಯಾಗಿದ್ದಾಗ ದಸರಾವನ್ನು ಯಶಸ್ವಿಯಾಗಿ ನಿಭಾಯಿಸಿ ಹೊಸತನ ನೀಡಿದ ಹಿರಿಮೆ ಅವರದ್ದು. ಆಗ ಉಸ್ತುವಾರಿ ಸಚಿವರಾಗಿದ್ದ ಎಚ್.ವಿಶ್ವನಾಥ್‌ ಅವರೊಂದಿಗೆ ಕುಮಾರನಾಯಕ್‌ ಅವರು ಯುವ ದಸರಾ ಸಹಿತ ಹತ್ತಾರು ಹೊಸ ಕಾರ್ಯಕ್ರಮಗಳನ್ನು ಆರಂಭಿಸಿದ್ದರು. ಅಲ್ಲದೇ ದಸರಾಕ್ಕೆ ಪ್ರವಾಸೋದ್ಯಮ ಸ್ಪರ್ಶ ನೀಡಿದ್ದರು.

ಆನಂತರ ಕುಮಾರನಾಯಕ್‌ ಅವರು ಮೂರು ವರ್ಷ ರಾಯಚೂರು ಡಿಸಿಯಾಗಿದ್ಧಾಗ ಧರ್ಮಸಿಂಗ್‌ ಉಸ್ತುವಾರಿ ಸಚಿವರಾಗಿದ್ದರು. ಅವರೊಂದಿಗೆ ಆತ್ಮೀಯತೆ ಇತ್ತು. ಆಗ ಜಿಲ್ಲೆಯಲ್ಲಿ ಮಾಡಿದ ಕೆಲಸವನ್ನು ಜನ ಈಗಲೂ ಸ್ಮರಿಸುತ್ತಾರೆ. ರಾಯಚೂರಿನಲ್ಲಿ ಬರ ನಿರ್ವಹಣೆ, ಗ್ರಂಥಾಲಯಗಳ ನಿರ್ಮಾಣದಂತ ಕೆಲಸಗಳು ಪ್ರಮುಖವಾದವು.

ನಿವೃತ್ತಿ ನಂತರವೂ ಜನಸೇವೆ ಮಾಡಬೇಕು ಎನ್ನುವುದು ಅವರ ಬಯಕೆಯಾಗಿದ್ದರಿಂದ ರಾಜಕೀಯ ಕ್ಷೇತ್ರ ಮಾಡಿಕೊಂಡು ರಾಯಚೂರಿನಿಂದ ಸ್ಪರ್ಧಿಸಿದರು. ಹಾಲಿ ಸಂಸದ ರಾಜಾ ಅಮರೇಶ್ವರ ನಾಯ್ಕ್‌ ಅವರನ್ನ ಮಣಿಸಿ ಗೆದ್ದಿದ್ದಾರೆ ಕುಮಾರನಾಯಕ್.‌

ಖಡಕ್‌ ಅಧಿಕಾರಿ ಸಸಿಕಾಂತ್‌

ಸಸಿಕಾಂತ್‌ ಸೇಂಥಿಲ್‌ ಅವರು ಮೂಲತಃ ತಮಿಳುನಾಡಿದವರು. ಐಎಎಸ್‌ ಅಧಿಕಾರಿಯಾಗಿ 2009ರಲ್ಲಿ ಕರ್ನಾಟಕ ಸೇವೆಗೆ ಸೇರಿದರು. ಮಂಡ್ಯದಲ್ಲಿ ತರಬೇತಿ ಮುಗಿಸಿ ಇಲ್ಲಿಯೇ ಎಸಿಯಾಗಿದ್ದರು. ಆನಂತರ ಬಳ್ಳಾರಿಯಲ್ಲಿ ಎಸಿ, ಜಿಲ್ಲಾಪಂಚಾಯಿತಿ ಸಿಇಒ ಆಗಿದ್ದವರು. ನಂತರ ರಾಯಚೂರು ಜಿಲ್ಲಾಧಿಕಾರಿಯಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನೂ ನಡೆಸಿದ್ದರು. ದೇಶದಲ್ಲಿ 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅಧಿಕಾರ ತ್ಯಜಿಸುವ ನಿರ್ಧಾರ ಮಾಡಿದರು. ಮೂರ್ನಾಲ್ಕು ವರ್ಷದಲ್ಲಿ ರಾಜೀನಾಮೆ ನೀಡಿದರು. 2019ರಲ್ಲಿ ರಾಜೀನಾಮೆ ಅಂಗೀಕಾರವಾಗಿ ಕಾಂಗ್ರೆಸ್‌ ಪಕ್ಷವನ್ನು ಸೇರಿದರು. ಪಕ್ಷದಲ್ಲಿ ನೀತಿ ನಿರೂಪಣಾ ವಿಭಾಗದಲ್ಲಿ ಕೆಲಸ ಮಾಡಿದರು. ದೇಶಾದ್ಯಂತ ಪ್ರವಾಸ ಮಾಡಿ ಸಂವಿಧಾನ ವಿರೋಧಿ ನೀತಿಗಳ ಕುರಿತು ಸಭೆಗಳನ್ನು ನಡೆಸಿದರು. ಆನಂತರ ಚುನಾವಣೆ ಅಖಾಡಕ್ಕೂ ಸಿದ್ದವಾದರು. ಡಿಎಂಕೆ ಜತೆಗೆ ಹೊಂದಾಣಿಕೆ ಮಾಡಿಕೊಂಡು ಕಾಂಗ್ರೆಸ್‌ಗೆ ತಿರುವಳ್ಳೂರು ಕ್ಷೇತ್ರ ಬಿಟ್ಟು ಕೊಡಲಾಯಿತು. ಸ್ಪರ್ಧೆ ಮಾಡಿದ ಅವರು ಸುಮಾರು ಐದು ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದಾರೆ ಸಸಿಕಾಂತ್‌ ಸೇಂಥಿಲ್‌.

ಟಿ20 ವರ್ಲ್ಡ್‌ಕಪ್ 2024