ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ 1.34 ಕೋಟಿ ಹಣ ವಶ; ಬಿಜೆಪಿ-ಕಾಂಗ್ರೆಸ್ ಆರೋಪ, ಪ್ರತ್ಯಾರೋಪ; ಹಾಗಾದ್ರೆ ಈ ಹಣ ಯಾರದ್ದು
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಗಳು ಸೀಜ್ ಮಾಡಿರುವ 1.34 ಕೋಟಿ ರೂಪಾಯಿ ಹಣದ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಾತಿನ ಸಮರವನ್ನು ಮುಂದುವರಿಸಿವೆ. (ವರದಿ: ಎಚ್ ಮಾರುತಿ)

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಜಯನಗರದಲ್ಲಿ ದಾಖಲೆಗಳಿಲ್ಲದ 1.34 ಕೋಟಿ ರೂಪಾಯಿ ಹಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯನ್ನು ಆಧರಿಸಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಶನಿವಾರ (ಏಪ್ರಿಲ್ 13) ಮಧ್ಯಾಹ್ನ ದಾಳಿ ನಡೆಸಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಜಯನಗರ 4 ನೇ ಹಂತದಲ್ಲಿ ಎರಡು ಕಾರು ಮತ್ತು ಒಂದು ದ್ವಿಚಕ್ರ ವಾಹನದಲ್ಲಿ ಈ ಬೃಹತ್ ಮೊತ್ತವನ್ನು ಸಾಗಿಸಲು ಪ್ರಯತ್ನಿಸಲಾಗುತ್ತಿತ್ತು. ಈ ಬಗ್ಗೆ ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ ಅವರಿಗೆ ಹಣ ಸಾಗಿಸುತ್ತಿರುವ ಖಚಿತ ಮಾಹಿತಿ ಲಭಿಸಿತ್ತು.
ಇವರು ಕೂಡಲೇ ಮಾದರಿ ನೀತಿ ಸಂಹಿತೆ ಅನುಷ್ಠಾನ ಅಧಿಕಾರಿ ನಿಖಿತಾ ಅವರನ್ನು ಸ್ಥಳಕ್ಕೆ ಕಳುಹಿಸಿದ್ದರು. ಎರಡು ಕಾರು ಮತ್ತು ಒಂದು ದ್ವಿಚಕ್ರ ವಾಹನದಲ್ಲಿದ್ದ ಹಣವನ್ನು ಫಾರ್ಚೂನರ್ ಕಾರ್‌ಗೆ ವರ್ಗಾಯಿಸಲಾಗುತ್ತಿತ್ತು. ಈ ಪ್ರಯತ್ನ ನಡೆಯುತ್ತಿರುವಾಗಲೇ ಸ್ಥಳಕ್ಕೆ ಧಾವಸಿದ ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ. ಮೊದಲು ದ್ವಿಚಕ್ರ ವಾಹನದಲ್ಲಿದ್ದ ಹಣದ ಬ್ಯಾಗ್ ಅನ್ನು ನಿಖಿತಾ ಅವರು ವಶಕ್ಕೆ ಪಡೆಯುತ್ತಿದ್ದಂತೆ ಮರ್ಸಿಡೀಸ್ ಬೆಂಝ್ ಮತ್ತು ವೋಕ್ಸ್‌ವ್ಯಾಗನ್ ಪೋಲೊ ಕಾರುಗಳನ್ನು ಅಲ್ಲಿಯೇ ಬಿಟ್ಟು ಫಾರ್ಚೂನರ್ ಕಾರಿನಲ್ಲಿ ಕೆಲವರು ಪರಾರಿಯಾಗಿದ್ದಾರೆ. ನಂತರ ಅಧಿಕಾರಿಗಳು ಎರಡೂ ಕಾರುಗಳ ಕಿಟಕಿಗಳ ಗಾಜು ಒಡೆದು ನಗದು ಇದ್ದ ಬ್ಯಾಗ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮುನೀಶ್ ಮೌದ್ಗಿಲ್ ತಿಳಿಸಿದ್ದಾರೆ.
ಹಣ ಯಾರಿಗೆ ಸೇರಿದ್ದು ಅನ್ನೋದು ಇನ್ನೂ ಪತ್ತೆಯಾಗಿಲ್ಲ
ಮರ್ಸಿಡೀಸ್ ಬೆಂಝ್ ಕಾರನ್ನು ಸೋಮಶೇಖರ್ ಎಂಬುವವರ ಹೆಸರಿನಲ್ಲಿದೆ. ಶುಕ್ರವಾರ (ಏಪ್ರಿಲ್ 12) ನೋಂದಣಿ ಮಾಡಿಸಲಾಗಿದೆ. ಇನ್ನೂ ನಂಬರ್ ಪ್ಲೇಟ್ ಅಳವಡಿಸಿಲ್ಲ. ದ್ವಿಚಕ್ರ ವಾಹನ ಧನಂಜಯ್ ಎಂಬುವರಿಗೆ ಸೇರಿದೆ. ವೋಕ್ಸ್‌ವ್ಯಾಗನ್ ಕಾರಿನ ಮಾಲೀಕರ ವಿವರ ಪತ್ತೆಯಾಗಿಲ್ಲ. ಮೂರೂ ವಾಹನಗಳಿಂದ ಒಟ್ಟು 1,34,09,000 ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಚುನಾವಣಾಧಿಕಾರಿಗಳು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಣ ಯಾರಿಗೆ ಸೇರಿದೆ ಎನ್ನುವುದು ಬಗೆ ಹರಿದಿಲ್ಲ. ಕಾಂಗ್ರೆಸ್ ಪಕ್ಷದ ಮುಖಂಡರು ಬಿಜೆಪಿಗೆ ಸೇರಿದ್ದು ಎಂದು ಆಪಾದಿಸಿದರೆ ಬಿಜೆಪಿ ನಾಯಕರು ಕಾಂಗ್ರೆಸ್ ಮುಖಂಡರಿಗೆ ಸೇರಿದ ಹಣ ಎಂದು ದೂರುತ್ತಿದ್ದಾರೆ
ಸಾರಿಗೆ ಸಚಿವ, ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದ ರಾಮಲಿಂಗಾ ರೆಡ್ಡಿ ಈ ಹಣಕ್ಕೂ ನಮಗೂ ಸಂಬಂಧ ಇಲ್ಲ. ಬಿಜೆಪಿಯವರು ವಿನಾಕಾರಣ ನಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಈ ಹಣ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾಗಿದೆ. ವಾಹನಗಳು ಕಾಂಗ್ರೆಸ್ ಕಾರ್ಯಕರ್ತರಿಗೆ ಸೇರಿವೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಆಪಾದಿಸಿದ್ದಾರೆ. ನಮಗೆ ಬಂದ ಮಾಹಿತಿ ಕರೆಯ ಆಧಾರದ ಮೇಲೆ ಜಯನಗರದ ನಾಲ್ಕನೇ ಹಂತದಲ್ಲಿ ಎರಡು ಕಾರು ಒಂದು ದ್ವಿಚಕ್ರ ವಾಹನದಲ್ಲಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ. ಕರೆ ಬಂದ ಮೂರು ನಿಮಿಷಗಳಲ್ಲೇ ಸ್ಥಳಕ್ಕೆ ಭೇಟಿ ಕೊಟ್ಟಿದ್ದೇವೆ ಎಂದು ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ ಹೇಳಿದ್ದಾರೆ.
ಮೊದಲು ನಿಖಿತಾ ಅವರು ಒಬ್ಬರೇ ತೆರಳಿ ಬ್ಯಾಗ್‌ನಲ್ಲಿ ಏನಿದೆ ಎಂದು ಪ್ರಶ್ನಿಸಿದ್ದಾರೆ. ನಂತರ ದ್ವಿಚಕ್ರ ವಾಹನದಲ್ಲಿದ್ದ ಹಣವನ್ನು ಜಪ್ತಿ ಮಾಡಿದ್ದಾರೆ. ಕಾರಿನಲ್ಲಿದ್ದ ಐವರು ನಾಪತ್ತೆಯಾಗಿದ್ದಾರೆ. ಫಾರ್ಚೂನರ್ ಕಾರಿನ ನಂಬರ್ ಗುರುತು ಇದೆ ಎಂದು ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ ವಿವರಿಸಿದ್ದಾರೆ. (ವರದಿ: ಎಚ್ ಮಾರುತಿ)
