Lok Sabha Election 2024: ಚುನಾವಣಾ ನೀತಿ ಸಂಹಿತೆ ಜಾರಿಯಾದ ಒಂದೇ ವಾರಕ್ಕೆ ಕರ್ನಾಟಕದಲ್ಲಿ 9.64 ಕೋಟಿ ಹಣ ವಶ
ಲೋಕಸಭೆ ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ಬಳಿಕ ಕರ್ನಾಟಕದಲ್ಲಿ ಶುಕ್ರವಾರ (ಮಾರ್ಚ್ 22) ಒಂದೇ ದಿನ 2.75 ಕೋಟಿ ರೂಪಾಯಿ ಸೀಜ್ ಮಾಡಲಾಗಿದೆ.
ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕರ್ನಾಟಕದಲ್ಲಿ ನಿನ್ನೆ (ಮಾರ್ಚ್ 22, ಶುಕ್ರವಾರ) ಒಂದೇ ದಿನ 2.75 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಮಾರ್ಚ್ 16 ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ ಕರ್ನಾಟಕದಲ್ಲಿ ವಶಪಡಿಸಿಕೊಂಡ ಒಟ್ಟು ಹಣದ ಮೊತ್ತ 9.64 ಕೋಟಿ ರೂ.ಗೆ ತಲುಪಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಚುನಾವಣೆ ಘೋಷಣೆಯಾದಾಗಿನಿಂದ ರಾಜ್ಯದಲ್ಲಿ ದಾಖಲಾದ ಒಟ್ಟು ಪ್ರಕರಣಗಳು, ಏನೆಲ್ಲಾ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರ ಮೌಲ್ಯ ಎಷ್ಟು ಎಂಬುದರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಕರ್ನಾಟಕದ 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ, ಮಾರ್ಚ್ 16 ರಂದು ಮಾದರಿ ನೀತಿ ಸಂಹಿತೆ ಜಾರಿಗೆ ಬಂದಾಗಿನಿಂದ, ಫ್ಲೈಯಿಂಗ್ ಸ್ಕ್ವಾಡ್‌ಗಳು, ಕಣ್ಗಾವಲು ತಂಡಗಳು ಹಾಗೂ ಪೊಲೀಸ್ ಅಧಿಕಾರಿಗಳು ಒಟ್ಟು 9.64 ಕೋಟಿ ನಗದು, 15.6 ಲಕ್ಷ ರೂಪಾಯಿಗಳ ಮೌಲ್ಯದ ಉಚಿತ ವಸ್ತುಗಳು, 22.85 ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ 7.20 ಲಕ್ಷ ಲೀಟರ್ ಮದ್ಯ, 53 ಲಕ್ಷ ರೂ.ಗೂ ಹೆಚ್ಚು ಮೌಲ್ಯದ 52.12 ಕೆಜಿ ಮಾದಕ ವಸ್ತುಗಳು ಮತ್ತು 36 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಮೂಲ್ಯ ಲೋಹಗಳನ್ನು ವಶಪಡಿಸಿಕೊಂಡಿದ್ದಾರೆ.
ನಗದು, ಮದ್ಯ, ಮಾದಕ ದ್ರವ್ಯಗಳು, ಅಮೂಲ್ಯ ಲೋಹ ಮತ್ತು ಉಚಿತ ವಸ್ತುಗಳನ್ನು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ 402 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ, 65,432 ಶಸ್ತ್ರಾಸ್ತ್ರಗಳನ್ನು ಠೇವಣಿ ಇಡಲಾಗಿದೆ. 831 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಂಟು ಶಸ್ತ್ರಾಸ್ತ್ರ ಪರವಾನಗಿಗಳನ್ನು ರದ್ದುಪಡಿಸಲಾಗಿದೆ. ಸಿಆರ್‌ಪಿಸಿಯ ಅಡಿಯಲ್ಲಿ 3,853 ಪ್ರಕರಣಗಳನ್ನು ದಾಖಲಿಸಲಾಗಿದ್ದು, 4,136 ಜನರನ್ನು ಬಂಧಿಸಲಾಗಿದೆ.
ಈವರೆಗೆ ದಾಖಲಾಗಿರುವ ಪ್ರಕರಣ ಎಷ್ಟು?
ಅಬಕಾರಿ ಇಲಾಖೆಯು 471 ಹೇಯ ಪ್ರಕರಣಗಳು, ಪರವಾನಗಿ ಷರತ್ತುಗಳ ಉಲ್ಲಂಘನೆಗಾಗಿ 359 ಪ್ರಕರಣಗಳು, 24 ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸಸ್ ಆಕ್ಟ್) ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965 ರ ಸೆಕ್ಷನ್ 15 (ಎ) ಅಡಿಯಲ್ಲಿ 1,477 ಪ್ರಕರಣಗಳು ಮತ್ತು 284 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಂಡಿದೆ. ಚಿತ್ರದುರ್ಗ ಲೋಕಸಭಾ ಕ್ಷೇತ್ರದ ನಾಯಕನಹಟ್ಟಿ ಕ್ರಾಸ್ ಚೆಕ್ ಪೋಸ್ಟ್ ನಲ್ಲಿ 38 ಲಕ್ಷ ರೂ., ಗುಲ್ಬರ್ಗ ಲೋಕಸಭಾ ಕ್ಷೇತ್ರದ ಹಿರೋಳ್ಳಿ ಚೆಕ್ ಪೋಸ್ಟ್‌ನಲ್ಲಿ 12.68 ಲಕ್ಷ ರೂ. ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಚಿಗರಳ್ಳಿ ಚೆಕ್ ಪೋಸ್ಟ್ ನಲ್ಲಿ 33 ಲಕ್ಷ ಮೌಲ್ಯದ ಪಾನ್ ಮಸಾಲಾ ಹೊಂದಿರುವ 180 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮಾಗಡಿ ಚೆಕ್ ಪೋಸ್ಟ್ ನಲ್ಲಿ 13.20 ಲಕ್ಷ ಮೌಲ್ಯದ 243.56 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 38 ಲಕ್ಷ ಮೌಲ್ಯದ ಚಿನ್ನಾಭರಣ, ಬೆಂಗಳೂರು ನಗರ ಜಿಲ್ಲೆಯಲ್ಲಿ 28 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಕಳೆದ ಶನಿವಾರ (ಮಾರ್ಚ್ 16) ಲೋಕಸಭೆ ಚುನಾವಣೆಗೆ ದಿನಾಂಕವನ್ನು ಘೋಷಣೆ ಮಾಡಿ ಅಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಹೇಳಿದ್ದರು.
ಒಟ್ಟು 7 ಹಂತಗಳಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯದರೆ ಮೇ 7 ರಂದು ಉತ್ತರ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡುವಲ್ಲಿ ಬ್ಯುಸಿಯಾಗಿವೆ. ನಂತರ ಅಬ್ಬರದ ಪ್ರಚಾರಕ್ಕೆ ಇಳಿಯಲಿವೆ.