ಹಕ್ಕು ಚಲಾಯಿಸಿ, ವೋಟಿಂಗ್ ಪ್ರಮಾಣ ಹೆಚ್ಚಿಸಿ; ಮೈಸೂರಿನಲ್ಲಿ ವಿಂಟೇಜ್ ಕಾರುಗಳ ರ‍್ಯಾಲಿ ನಡೆಸಿ ಮತದಾನ ಜಾಗೃತಿ
ಕನ್ನಡ ಸುದ್ದಿ  /  ಕರ್ನಾಟಕ  /  ಹಕ್ಕು ಚಲಾಯಿಸಿ, ವೋಟಿಂಗ್ ಪ್ರಮಾಣ ಹೆಚ್ಚಿಸಿ; ಮೈಸೂರಿನಲ್ಲಿ ವಿಂಟೇಜ್ ಕಾರುಗಳ ರ‍್ಯಾಲಿ ನಡೆಸಿ ಮತದಾನ ಜಾಗೃತಿ

ಹಕ್ಕು ಚಲಾಯಿಸಿ, ವೋಟಿಂಗ್ ಪ್ರಮಾಣ ಹೆಚ್ಚಿಸಿ; ಮೈಸೂರಿನಲ್ಲಿ ವಿಂಟೇಜ್ ಕಾರುಗಳ ರ‍್ಯಾಲಿ ನಡೆಸಿ ಮತದಾನ ಜಾಗೃತಿ

ನಗರದಲ್ಲಿ ವಾಸಿಸುವ ಪ್ರತಿಯೊಬ್ಬರೂ ಲೋಕಸಭೆ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಬೇಕು, ಮತದಾನ ಪ್ರಮಾಣ ಹೆಚ್ಚಿಸಬೇೆಕೆಂದು ಮೈಸೂರಿನಲ್ಲಿ ವಿಂಟೇಜ್ ಕಾರುಗಳ ರ‍್ಯಾಲಿ ನಡೆಸಲಾಗಿದೆ.

ಮತದಾನದ ಜಾಗೃತಿ ಮೂಡಿಸಲು ಮೈಸೂರಿನಲ್ಲಿ ಸ್ವೀಪ್‌ ವತಿಯಿಂದ ವಿಂಟೇಜ್ ಕಾರುಗಳ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.
ಮತದಾನದ ಜಾಗೃತಿ ಮೂಡಿಸಲು ಮೈಸೂರಿನಲ್ಲಿ ಸ್ವೀಪ್‌ ವತಿಯಿಂದ ವಿಂಟೇಜ್ ಕಾರುಗಳ ರ‍್ಯಾಲಿ ಹಮ್ಮಿಕೊಳ್ಳಲಾಗಿತ್ತು.

ಮೈಸೂರು: ಚುನಾವಣೆಯಿಂದ ಚುನಾವಣೆಗೆ ಇಳಿಕೆಯಾಗುತ್ತಿರುವ ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ಮುಂದಾಗುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಮೈಸೂರು ಜಿಲ್ಲಾಡಳಿತ ಮುಂದಾಗಿದೆ. ನಗರ ಪ್ರದೇಶದ ಹಲವು ಮತದಾರರು ಚುನಾವಣೆಯ ದಿನ ಮತಗಟ್ಟೆಗೆ ತೆರಳಿ ಮತ ಚಲಾಯಿಸುವ ಬದಲು ದೂರದ ಊರುಗಳಿಗೆ ಪ್ರವಾಸ ಕೈಗೊಳ್ಳುತ್ತಾರೆ. ಪರಿಣಾಮ ಗ್ರಾಮೀಣ ಪ್ರದೇಶಕ್ಕೆ ಹೋಲಿಸಿದರೆ ನಗರ ಪ್ರದೇಶದಲ್ಲಿ ಮತದಾನ ಪ್ರಮಾಣ ಕಡಿಮೆಯಾಗುತ್ತಿದೆ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಮತದಾನ ಪ್ರಮಾಣ ಹೆಚ್ಚಿಸಲು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಮೈಸೂರು ಜಿಲ್ಲಾಡಳಿತದ ವತಿಯಿಂದ ಇಂದು (ಏಪ್ರಿಲ್ 6ರಂದು) ವಿಂಟೇಜ್ ಕಾರುಗಳ ರ‍್ಯಾಲಿ (Vintage Cars Rally) ನಡೆಸಿತು.

ಮತದಾರರಲ್ಲಿ ಮತದಾನದ ಮಹತ್ವ ಹಾಗು ಚುನಾವಣೆಯ ಬಗ್ಗೆ ಅರಿವು ಮೂಡಿಸಲು ಸ್ವೀಪ್ ಸಮಿತಿ ವತಿಯಿಂದ ವಿಂಟೇಜ್ ಕಾರುಗಳ ರ‍್ಯಾಲಿ ಆಯೋಜನೆ‌ ಮಾಡಲಾಗಿತ್ತು. ರ‍್ಯಾಲಿಯಲ್ಲಿ ಪಾಲ್ಗೊಂಡ ಕಾರುಗಳ ಮಾಲೀಕರಿಗೆ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಬಳಿಕ ಮೈಸೂರಿನ ಟೌನ್‌ಹಾಲ್ ಆವರಣದಿಂದ ಆರಂಭಗೊಂಡ ವಿಂಟೇಜ್ ಕಾರುಗಳ ರ‍್ಯಾಲಿಗೆ ಮೈಸೂರು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಹಸಿರು ನಿಶಾನೆ ತೋರಿದರು. ಒಂದರ ಹಿಂದೆ‌ ಒಂದು ಸಾಲಾಗಿ ಸಾಗಿದ ಹಲವಾರು ವರ್ಷಗಳ ಹಿಂದಿನ ವಿಂಟೇಜ್ ಕಾರುಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಕಣ್ತುಂಬಿಕೊಂಡರು.

ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ, ಜಿಲ್ಲಾ ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಗಾಯತ್ರಿ, ಮಹಾನಗರ ಪಾಲಿಕೆ ಆಯುಕ್ತೆ ಎನ್ ಎನ್ ಮಧು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಮೈಸೂರು ನಗರದ ಡಿಸಿಪಿಗಳಾದ ಮುತ್ತುರಾಜ್ ಹಾಗು ಜಾಹ್ನವಿ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಕಾರುಗಳಲ್ಲಿ ಸಾಗುವ ಮೂಲಕ ಮತದಾನದ ಮಹತ್ವ ಸಾರಿದರು. ದೊಡ್ಡಗಡಿಯಾರ ವೃತ್ತ, ಚಾಮರಾಜೇಂದ್ರ ವೃತ್ತ, ಕೆ ಆರ್ ವೃತ್ತ, ದೇವರಾಜ ಅರಸು ರಸ್ತೆ ಸೇರಿದಂತೆ ವಿವಿಧ ಮಾರ್ಗದಲ್ಲಿ ಸಾಗಿದ ವಿಂಟೇಜ್ ಕಾರುಗಳ ರ‍್ಯಾಲಿ ಟೌನ್‌ಹಾಲ್ ಆವರಣದಲ್ಲಿ ಅಂತ್ಯಗೊಂಡಿತು. ವಿಂಟೇಜ್ ಕಾರುಗಳ ಜೊತೆಗೆ ಮೈಸೂರಿನ ಪಾರಂಪರಿಕತೆಯ ಪ್ರತೀಕವಾಗಿರುವ ಟಾಂಗಾ ಗಾಡಿಗಳು ಕೂಡ ವಿಂಟೇಜ್ ಕಾರುಗಳಿಗೆ ಸಾಥ್ ನೀಡಿದವು.

ಮತದಾನ ಹೆಚ್ಚಿಸಲು ಎಲ್ಲರೂ ಕಡ್ಡಾಯವಾಗಿ ಹಕ್ಕು ಚಲಾಯಿಸಬೇಕು

ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ ಕೆ ವಿ ರಾಜೇಂದ್ರ ಮಾತನಾಡಿ, 70 ರಿಂದ 75 ವರ್ಷಗಳ ಇತಿಹಾಸವಿರುವ ಈ ಚುನಾವಣೆ ಮತ್ತು ವಿಂಟೇಜ್ ಕಾರ್‌ಗಳನ್ನು ಹೋಲಿಸಿದರೆ ಪ್ರತಿವರ್ಷವೂ ಅದರ ಮಹತ್ವ ಹಾಗೂ ಛಾಪು ಹೆಚ್ಚಾಗುತ್ತಲೇ ಇದೆ ಎಂದರು. ಪ್ರಜೆಗಳೆಲ್ಲರೂ ಪ್ರಜಾಪ್ರಭುತ್ವ ಮತ್ತು ಚುನಾವಣೆಯ ಯಜಮಾನರು. ಇದನ್ನು ಹೆಚ್ಚಿನ ಜಾಗರೂಕತೆಯಿಂದ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಹಾಗಾಗಿ ಪ್ರತಿ ಬಾರಿಯೂ ಚುನಾವಣಾ ಹಬ್ಬದ ಮೆರುಗನ್ನು ಹೆಚ್ಚಿಸಲು ಎಲ್ಲರೂ ಕಡ್ಡಾಯವಾಗಿ ತಪ್ಪದೇ ಮತದಾನ ಮಾಡಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬ ಮತದಾರನು ಈ ದೇಶದ ಹಾಗೂ ಪ್ರಜಾಪ್ರಭುತ್ವದ ಆಸ್ತಿ. ಮತದಾರರು ಯಾವುದೇ ರೀತಿಯ ಚುನಾವಣಾ ಅಕ್ರಮವನ್ನು ಮಾಡದೇ, ನೈತಿಕ ಮತದಾನವನ್ನು ಮಾಡಿ, ಬೇರೆಯವರಿಗೂ ನೈತಿಕ ಮತದಾನ ಮಾಡುವಂತೆ ಅರಿವು ಮೂಡಿಸಬೇಕು ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಲ್ಲಿ ಶೇಕಡ 70ರಷ್ಟು ಮತದಾನವಾಗಿದ್ದು, ಈ ಬಾರಿ ಆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿಯ ವತಿಯಿಂದ ಫ್ಲಾಶ್ ಮಾಬ್, ರ‍್ಯಾಲಿ ಸೇರಿದಂತೆ, ಮಾಲ್, ಅಪಾರ್ಟ್ಮೆಂಟ್ ಹೀಗೆ ಮೈಸೂರು ನಗರದಾದ್ಯಂತ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮುಖಾಂತರ ನಗರ ಪ್ರದೇಶದ ಮತದಾರರು ಹಾಗೂ ಯುವಜನರನ್ನು ಮತಗಟ್ಟೆಗೆ ಬರುವಂತೆ ಸೆಳೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

Whats_app_banner