Lok Sabha Election 2024: ಹಿರಿಯ ನಾಗರಿಕರಿಗಾಗಿ ಮನೆಯಿಂದ ಮತದಾನ ಎಷ್ಟು ದಿನ ನಡೆಯುತ್ತೆ? ನಿಮ್ಮ ಮನೆಗೆ ಬರುತ್ತೆ ಚುನಾವಣಾ ತಂಡ
Voting From Home: ಕರ್ನಾಟಕ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನದಲ್ಲಿ ಹಿರಿಯ ನಾಗರಿಕರಿಗಾಗಿ ಏಪ್ರಿಲ್ 13 ರಿಂದ ಮನೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ.
ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ (Lok Sabha Election 2024) ವ್ಯಾಪ್ತಿಯಲ್ಲಿರುವ 85 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಹಾಗೂ ಅಂಗವಿಕಲರು ಶನಿವಾರದಿಂದಲೇ ( ಏಪ್ರಿಲ್ 13) ತಮ್ಮ ಮನೆಯಿಂದ ಅಂಚೆ ಮತದಾನ (Voting From Home) ಮಾಡಬಹುದು. ಏಪ್ರಿಲ್ 13ರಿಂದ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಮೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ 95,128 ಮತದಾರರಿದ್ದಾರೆ. ಇವರಲ್ಲಿ ಕೇವಲ 6,206 ಮಂದಿ ಅಂಚೆ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ. ಈ ಮೂರು ಲೋಕಸಭಾ ಕ್ಷೇತ್ರಗಳಲ್ಲಿ 22,222 ಅಂಗವಿಕಲರಲ್ಲಿ 201 ಮತದಾರರು ಮಾತ್ರ ಅಂಚೆ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.
ಏಪ್ರಿಲ್ 13ರಿಂದ ಏಪ್ರಿಲ್ 18ರವರೆಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಮತ್ತು ಛಾಯಾಚಿತ್ರ ಗ್ರಾಹಕರನ್ನು ಒಳಗೊಂಡ ಮತಗಟ್ಟೆ ತಂಡವು ಮತದಾರರ ಮನೆಗೆ ತೆರಳಿ ಮೊದಲಿಗೆ ಮತದಾನದ ಗುರುತಿನ ಚೀಟಿ ಪರಿಶೀಲಿಸುತ್ತದೆ. ನಂತರ ರಹಸ್ಯ ಮತದಾನಕ್ಕಾಗಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ. ಚುನಾವಣಾ ಆಯೋಗವು ಈ ಎಲ್ಲಾ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡುತ್ತದೆ.
ಮತಗಟ್ಟೆ ಸಿಬ್ಬಂದಿಯು ಮತ ಪತ್ರ ಮತ್ತು ಮತಪೆಟ್ಟಿಗೆಗಳೊಂದಿಗೆ ಮತದಾರರಿಗೆ ಮುಂಚಿತವಾಗಿ ಮೊಬೈಲ್ ಮೂಲಕ ಮಾಹಿತಿ ನೀಡಿ ಮನೆಗೆ ಭೇಟಿ ನೀಡಲಿದ್ದಾರೆ. ಒಂದು ವೇಳೆ ಮೊದಲ ಬಾರಿ ಭೇಟಿ ನೀಡಿದಾಗ ಮತದಾರರು ಮನೆಯಲ್ಲಿರದಿದ್ದರೆ, ಎರಡನೇ ಬಾರಿ ಮನೆಗೆ ಹೋಗುತ್ತಾರೆ. ಆಗಲೂ ಮತದಾರರು ಮನೆಯಲ್ಲಿ ಲಭ್ಯವಿರದಿದ್ದರೆ ಮತದಾನಕ್ಕೆ ಅವಕಾಶವಿರುವುದಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಮನೆಯಿಂದ ಮತದಾನಕ್ಕೆ 12 ಡಿ ನಮೂನೆಯಲ್ಲಿ ನೋಂದಣಿ ಮಾಡಿಸಿಕೊಂಡವರಿಗೆ ಮತಗಟ್ಟೆಗೆ ತೆರಳಿ ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸುವ ಅವಕಾಶ ಇರುವುದಿಲ್ಲ ಎನ್ನುವುದನ್ನು ಹಿರಿಯ ನಾಗರಿಕರು ನೆನಪಿನಲ್ಲಿಡಬೇಕು. ಮತದಾನ ಎಲ್ಲರ ಹಕ್ಕು ಮತ್ತು ಪವಿತ್ರ ಕರ್ತವ್ಯ. ಹಿರಿಯರಾದರೇನಂತೆ, ಹಕ್ಕು ಚಲಾಯಿಸಲು ಇರುವ ಅಮೂಲ್ಯ ಅವಕಾಶವನ್ನು ಕಳೆದುಕೊಳ್ಳಬೇಡಿ ಎನ್ನುವುದು ಎಲ್ಲರ ಆಶಯವಾಗಿದೆ.
ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (ಎಸ್‌ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ (ಎಸ್‌ಸಿ) ಒಟ್ಟು 14 ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿಯ ಅಭ್ಯರ್ಥಿಗಳು ಕಣದಲ್ಲಿದ್ದು, ಸಭೆ, ಸಮಾರಂಭ ಹಾಗೂ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಹಾಸನ, ಮಂಡ್ಯ ಹಾಗೂ ಕೋಲಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಮಂಡ್ಯದಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಜೆಡಿಎಸ್‌ನಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವುದು ವಿಶೇಷ. 18ನೇ ಲೋಕಸಭೆ ಚುನಾವಣೆಯ ಒಟ್ಟು 7 ಹಂತಗಳಲ್ಲಿ ನಡೆಯಲಿದೆ.