ಕನ್ನಡ ಸುದ್ದಿ  /  Karnataka  /  Lok Sabha Election 2024 Will Congress Candidate Raju Algur Defeat Bjp Who Has Won 5 Consecutive Times In Vijayapur Smu

Lok Sabha Election 2024: ವಿಜಯಪುರದಲ್ಲಿ ಸತತ 5 ಬಾರಿ ಅರಳಿದೆ ಕಮಲ; ಬಿಜೆಪಿ ಭದ್ರಕೋಟೆ ಛಿದ್ರವಾಗಿಸುವರೇ ಕಾಂಗ್ರೆಸ್‌ನ ರಾಜು ಆಲಗೂರ?

ವಿಜಯಪುರದಲ್ಲಿ ಸತತ ಐದು ಬಿಜೆಪಿಯವರನ್ನು ಗೆಲ್ಲಿಸಿರುವ ಅಲ್ಲಿನ ಮತದಾರರು ಈ ಬಾರಿ ಕಾಂಗ್ರೆಸ್‌ನ ಪ್ರೊ.ರಾಜು ಆಲಗೂರ ಅವರ ಕೈ ಹಿಡೀತಾರಾ. ಲೋಕಸಭಾ ಚುನಾವಣಾ ಚಿತ್ರಣ ಇಲ್ಲಿದೆ. (ವರದಿ: ಸಮೀವುಲ್ಲಾ ಉಸ್ತಾದ)

ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಕಾಂಗೆಸ್‌ನ ಪ್ರೊ ರಾಜು ಆಲಗೂರ ಮತ್ತು ಮೂರು ಗೆಲುವು ಕಂಡಿರುವ ರಮೇಶ್ ಜಿಗಜಿಗಣಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ವಿಜಯಪುರ ಲೋಕಸಭಾ ಚುನಾವಣೆಯಲ್ಲಿ ಕಾಂಗೆಸ್‌ನ ಪ್ರೊ ರಾಜು ಆಲಗೂರ ಮತ್ತು ಮೂರು ಗೆಲುವು ಕಂಡಿರುವ ರಮೇಶ್ ಜಿಗಜಿಗಣಿ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ವಿಜಯಪುರ: ಲೋಕಸಭೆ ಚುನಾವಣೆ ದಿನದಿಂದ ದಿನಕ್ಕೆ ಭರ್ಜರಿ ಕಾವು ಪಡೆಯುತ್ತಿದೆ. ಕಳೆದ ಐದು ಲೋಕಸಭೆ ಚುನಾವಣೆಯಲ್ಲಿಯೂ ಸತತ ಗೆಲುವಿನ ನಗೆ ಬೀರುವ ಮೂಲಕ ವಿಜಯಪುರವನ್ನು ಬಿಜೆಪಿ ತನ್ನ ಭದ್ರಕೋಟೆಯಾಗಿಸಿಕೊಂಡಿದ್ದು, ಈ ಭದ್ರಕೋಟೆಯನ್ನು ಕಾಂಗ್ರೆಸ್ ಬೇಧಿಸುವುದೇ ಎಂಬುದು ಕುತೂಹಲ ಕೆರಳಿಸಿದೆ. ಸತತ ಮೂರು ಬಾರಿ ಈ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿರುವ ರಮೇಶ ಜಿಗಜಿಣಗಿ ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪ್ರಥಮ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿರುವ ಪ್ರೊ.ರಾಜು ಆಲಗೂರ ಈ ಬಾರಿ ಶತಾಯ ಗತಾಯ ಗೆಲುವಿನ ಉತ್ಸಾಹದಲ್ಲಿದ್ದಾರೆ.

ಈ ಹಿಂದೆ ಬಳ್ಳೊಳ್ಳಿ, ನಾಗಠಾಣ ಕ್ಷೇತ್ರದ ಶಾಸಕರಾಗಿರುವ ಅನುಭವವುಳ್ಳ ಪ್ರೊ.ರಾಜು ಆಲಗೂರ ದಲಿತ ಸಂಘರ್ಷ ಸಮಿತಿಯ ಹೋರಾಟದಿಂದ ಮುಂಚೂಣಿಗೆ ಬಂದವರು. ಕಳೆದ ಅವಧಿಯ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿ ನಾಗಠಾಣ ಹಾಲಿ ಶಾಸಕರಾಗಿದ್ದರೂ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿರಲಿಲ್ಲ, ಆದರೆ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಫಲವಾಗಿ ಕ್ಷೇತ್ರ ಜೆಡಿಎಸ್ ಕೈ ಸೇರಿತು, ಹೀಗಾಗಿ ಆಲಗೂರ ಅವರಿಗೆ ಟಿಕೆಟ್ ಕೈ ತಪ್ಪಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಸಹ ಲೋಕಸಭೆಗೆ ಸ್ಪರ್ಧಿಸುವ ಏಕೈಕ ಉದ್ದೇಶದಿಂದ ಆಲಗೂರ ಟಿಕೆಟ್ ಆಕಾಂಕ್ಷಿಯಗಿರಲಿಲ್ಲ. ಹೀಗಾಗಿ ಪ್ರೊ.ರಾಜು ಅಲಗೂರ ಅವರಿಗೆ ನಿರೀಕ್ಷೆಯಂತೆ ಟಿಕೆಟ್ ದೊರಕಿದೆ.

ಜಿಲ್ಲೆಯ ಇಬ್ಬರು ಪ್ರಭಾವಿ ಸಚಿವರು, ನಾಲ್ಕು ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರ ಸಾಥ್ ಇದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕಸಭೆ ಚುನಾವಣೆ ಎದುರಿಸಲು ಸಜ್ಜಾಗಿರುವ ಎಡಗೈ-ಬಲಗೈ ಸಮುದಾಯದ ಅಭ್ಯರ್ಥಿಗಳ ನೇರ ಹಣಾಹಣಿಗೆ ವಿಜಯಪುರ ಸಾಕ್ಷಿಯಾಗಿದೆ. ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆಗಳ ಜೊತೆಗೆ ಅಣ್ಣ ಬಸವಣ್ಣನವರ ತತ್ವ, ಸಿದ್ದಾಂತಗಳು, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮೊದಲಾದವುಗಳು ಪ್ರೊ.ರಾಜು ಆಲಗೂರ ಅವರಿಗೆ ಪ್ಲಸ್ ಫಾಯಿಂಟ್.

ಅತ್ತ ರಮೇಶ ಜಿಗಜಿಣಗಿ ಅವರು ಕೂಡಗಿ ಎನ್‌ಟಿಪಿಸಿ, ರೈಲ್ವೆ ಮೆಲ್ಸೇತುವೆ, ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ಪ್ರಗತಿ ಹೀಗೆ ಸರಿಸುಮಾರು ತಮ್ಮ ಅಧಿಕಾರ ಅವಧಿಯಲ್ಲಿ 1 ಲಕ್ಷ ಕೋಟಿ ರೂ.ಗೂ ಅಧಿಕ ಮೊತ್ತದ ಕಾಮಗಾರಿ, ಮೋದಿ ಅಲೆ ಮೊದಲಾದವುಗಳು ಸಹ ಜಿಗಜಿಣಗಿ ಅವರಿಗೆ ಶ್ರೀರಕ್ಷೆ.

ಒಳಗಡೆ ಅಸಮಾಧಾನವಿದ್ದರೂ ಅಭ್ಯರ್ಥಿ ಪರ ಕೆಲಸ ಮಾಡ್ತೀನಿ ಎನ್ನುತ್ತಿರುವ ಶಾಸಕ ಯತ್ನಾಳ್

ಪಕ್ಷದ ಆಂತರಿಕ ಕಚ್ಚಾಟ, ಅಸಮಾಧಾನ, ಬಂಡಾಯ ಬಿಸಿತುಪ್ಪವಾಗಿ ಪರಿಣಮಿಸಿದೆ. ಟಿಕೆಟ್ ವಂಚಿತ ಡಾ.ಬಾಬು ರಾಜೇಂದ್ರ ನಾಯಕ ಸ್ವತಂತ್ರವಾಗಿ ಕಣಕ್ಕಿಳಿಯುವುದಾಗಿ ತೀರ್ಮಾನಿಸಿದ್ದಾರೆ. ಇನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ಚುನಾವಣೆ ಮಾಡುವುದಾಗಿ ವಾಗ್ದಾನ ಮಾಡಿದ್ದಾರಾದರೂ ಅಂತರಾಳದಲ್ಲಿ ಅಭ್ಯರ್ಥಿ ಬಗೆಗಿರುವ ಅಸಮಾಧಾನ ಅಲ್ಲಗಳೆಯುವಂತಿಲ್ಲ. ಪಕ್ಷದಲ್ಲಿ ತಮಗೆ ಸರಿಯಾದ ಸ್ಥಾನ ಮಾನ ಸಿಕ್ಕಿಲ್ಲ ಅಂತ ರಾಜ್ಯದ ಪ್ರಮುಖ ನಾಯಕರ ವಿರುದ್ಧ ಆಕ್ರೋಶಗೊಂಡಿದ್ದಾರೆ.

ಈಗಾಗಲೇ ಎರಡು ಪಕ್ಷಗಳ ಅಭ್ಯರ್ಥಿಗಳು ಪ್ರಚಾರಕ್ಕೆ ಧುಮುಕಿದ್ದಾರೆ. ಕಾರ್ಯಕರ್ತರ ಗುಂಪು ಕಟ್ಟಿಕೊಂಡು ಗ್ರಾಮಗಳಿಗೆ ಮುಖ ಮಾಡಿದ್ದಾರೆ. ಅಲ್ಲಿ ಹಲವಾರು ಸುತ್ತಿನ ಸಭೆಗಳನ್ನು ನಡೆಸಿ ಮತಬೇಟೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದಾರೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯನ್ನೇ ಸುತ್ತಬೇಕಾಗಿರುವುದರಿಂದ ಕಡಿಮೆ ಅವಧಿಯನ್ನೂ ಸಹ ಸಂಪೂರ್ಣ ಸದ್ಭಳಕೆ ಮಾಡಿಕೊಂಡು ದಿನವೊಂದಕ್ಕೆ ಎರಡು ಮೂರು ಗ್ರಾಮಗಳಲ್ಲಿ ಪ್ರಚಾರ ಸಭೆಗೆ ಪ್ಲಾನ್ ಮಾಡಿ ಕಾರ್ಯೋನ್ಮುಖರಾಗಿದ್ದಾರೆ. ಒಟ್ಟಾರೆಯಾಗಿ ಅಖಾಡವೂ ಸಿದ್ಧವಾಗಿದೆ, ಮುಹೂರ್ತವೂ ನಿಗದಿಯಾಗಿದೆ, ಆದರೆ ವಿಜಯಮಾಲೆ ಯಾರಿಗೆ ಎಂಬುದು ಕಾದು ನೋಡಬೇಕಿದೆ. (ವರದಿ: ಸಮೀವುಲ್ಲಾ ಉಸ್ತಾದ)