ಕನ್ನಡ ಸುದ್ದಿ  /  Karnataka  /  Lok Sabha Election Bjp Pc Mohan Congress Soumya Reddy Filed Nomination Amit Shah In Benglauru Today Mrt

ಲೋಕಸಭಾ ಚುನಾವಣೆ; ಪಿಸಿ ಮೋಹನ್, ಸೌಮ್ಯ ರೆಡ್ಡಿ ನಾಮಪತ್ರ ಸಲ್ಲಿಕೆ, ಬೆಂಗಳೂರಲ್ಲಿ ಅಮಿತ್ ಶಾ ಇಂದು ಸಭೆ, ಚನ್ನಪಟ್ಟಣದಲ್ಲಿ ರೋಡ್ ಷೋ

ಬೆಂಗಳೂರಿನಲ್ಲಿ ಬಿಜೆಪಿಯ ಪಿ.ಸಿ. ಮೋಹನ್, ಕಾಂಗ್ರೆಸ್ ನ ಸೌಮ್ಯ ರೆಡ್ಡಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಉಭಯ ಪಕ್ಷಗಳಿಂದ ಭರ್ಜರಿ ರೋಡ್ ಶೋ ನಡೆಯಿತು. ಇಂದು (ಏಪ್ರಿಲ್ 2) ಚನ್ನಪಟ್ಟಣದಲ್ಲಿ ಅಮಿತ್ ಶಾ ರೋಡ್ ಶೋ ಆಯೋಜನೆಯಾಗಿದೆ. ವಿವರ ವರದಿ ಹೀಗಿದೆ (ವರದಿ - ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ  ಜಯನಗರದ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. (ಎಡ ಚಿತ್ರ); ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪ್ರಚಾರ ಸಭೆ ನಡೆಸಿದರು. (ಬಲ ಚಿತ್ರ)
ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಜಯನಗರದ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. (ಎಡ ಚಿತ್ರ); ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪ್ರಚಾರ ಸಭೆ ನಡೆಸಿದರು. (ಬಲ ಚಿತ್ರ)

ಬೆಂಗಳೂರು: ಭರ್ಜರಿ ರೋಡ್ ಶೋ ಮತ್ತು ವರಿಷ್ಠರ ಸಮ್ಮುಖದಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಸೋಮವಾರ (ಏಪ್ರಿಲ್ 1) ನಾಮಪತ್ರ ಸಲ್ಲಿದರು. ಬಿಜೆಪಿಯ ಚಾಣಕ್ಯ ಅಮಿತ್ ಷಾ ಇಂದು (ಏಪ್ರಿಲ್ 2) ಬೆಂಗಳೂರಿನಲ್ಲಿದ್ದು, ಪ್ರಚಾರ ಸಭೆ, ರೋಡ್ ಷೋಗಳಲ್ಲಿ ಭಾಗವಹಿಸಲಿದ್ದಾರೆ.

ಪಿಸಿ ಮೋಹನ್ ಅವರು ಮುತ್ಯಾಲಮ್ಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ರೋಡ್ ಶೋ ಮೂಲಕ ಬಿಬಿಎಂಪಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಪಕ್ಷದ ವರಿಷ್ಠರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿ ಪಕ್ಷ ನಾಯಕ ಆರ್. ಅಶೋಕ್ ಶಾಸಕರಾದ ಎಸ್.ಸುರೇಶ್ ಕುಮಾರ್, ಎಸ್.ರಘು, ಗಾಲಿ ಜನಾರ್ಧನ ರೆಡ್ಡಿ, ಅರವಿಂದ ಲಿಂಬಾವಳಿ ಮೊದಲಾದ ಗಣ್ಯರೊಂದಿಗೆ ಬೃಹತ್ ರೋಡ್ ಶೋ ನಡೆಸಿ ತಮ್ಮ ಶಕ್ತಿ ಪ್ರದರ್ಶಿಸಿದರು.

ಕಾರ್ಯಕರ್ತರು ಹುಮ್ಮಸ್ಸಿನಿಂದ ಇದ್ದು ಮನೆ ಮನೆಗೂ ತೆರಳಿ ಪ್ರಚಾರ ನಡೆಸುತ್ತಿದ್ದಾರೆ. ಪ್ರಧಾನಿ ಮೋದಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿಗೆ ಉಪ ನಗರ ರೈಲು ಯೋಜನೆ, ಸ್ಮಾರ್ಟ್ ಸಿಟಿ, ಪ್ರಧಾನಮಂತ್ರಿ ಆವಾಸ್ ಯೋಜನೆ ಮೊದಲಾದ ಯೋಜನೆಗಳ ಅಡಿಯಲ್ಲಿ ಸಾಕಷ್ಟು ಅನುದಾನ ತಂದಿರುವುದಾಗಿ ತಿಳಿಸಿದರು.

ಸೌಮ್ಯ ರೆಡ್ಡಿ ನಾಮಪತ್ರ ಸಲ್ಲಿಕೆ

ಮತ್ತೊಂದು ಕಡೆ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಆಟೋದಲ್ಲಿ ಜಯನಗರದ ಬಿಬಿಎಂಪಿ ಕಚೇರಿಗೆ ತೆರಳಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಆಟೋದಲ್ಲಿ ತೆರಳಿ ನಾಮಪತ್ರ ಸಲ್ಲಿಸಿದ್ದು ಗಮನ ಸೆಳೆಯಿತು.

ಅವರೂ ಸಹ ಮುತ್ಯಾಲಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗೆಲುವಿಗೆ ಆಶೀರ್ವಾದ ಕೋರಿದರು. ನಂತರ ಮಾತನಾಡಿದ ಅವರು ಬಿಜೆಪಿ ಕಳೆದ 10 ವರ್ಷಗಳಿಂದ ಅಚ್ಚೇ ದಿನ್ ಜಪ ಮಾಡುತ್ತಾ ಬರುತ್ತಿದೆ. ಆದರೆ ಜನರಿಗೆ ಯಾವುದೇ ಪ್ರಯೋಜನ ಆಗಿಲ್ಲ. ಆದರೆ ಕಾಂಗ್ರೆಸ್ ನ 5 ಗ್ಯಾರಂಟಿಗಳಿಂದ ಸಾರ್ವಜನಿಕರಿಗೆ ಅನುಕೂಲ ಆಗಿದೆ. ವಿಶೇಷವಾಗಿ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ರೋಡ್ ಶೋ ನಡೆಸಿ ಕಾಂಗ್ರೆಸ್ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸೌಮ್ಯ ಅವರ ತಂದೆ ಸಚಿವ ರಾಮಲಿಂಗಾರೆಡ್ಡಿ, ಬಿಬಿಎಂಪಿ ಮಾಜಿ ಸದಸ್ಯರು ಭಾಗಿಯಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್, ಅಧಿಕಾರಕ್ಕೆ ಬಂದ ನಂತರ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ನನ್ನ ಮಗಳು ಐಶ್ವರ್ಯ ಬೇರೆ ಅಲ್ಲ, ಸೌಮ್ಯ ಬೇರೆ ಅಲ್ಲ. ಆದ್ದರಿಂದ ಸೌಮ್ಯ ಅವರನ್ನು ನನ್ನ ಮಗಳೆಂದು ಭಾವಿಸಿ ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ಕೋರಿದರು.

ಇಂದು ಬೆಂಗಳೂರಿಗೆ ಅಮಿತ್ ಶಾ, ಅರಮನೆ ಮೈದಾನದಲ್ಲಿ ಸಭೆ, ಚನ್ನಪಟ್ಟಣದಲ್ಲಿ ರೋಡ್ ಶೋ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಏಪ್ರಿಲ್ 2ರಂದು ಕರ್ನಾಟಕಕ್ಕೆ ಆಗಮಿಸಲಿದ್ದು, ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಮುಖ 5 ಸಾವಿರ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ನೇರವಾಗಿ 5 ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರ ಜೊತೆ ಮಾತನಾಡಲಿದ್ದಾರೆ.

ಮಧ್ಯಾಹ್ನ ಚನ್ನಪಟ್ಟಣದಲ್ಲಿ ರೋಡ್ ಷೋ ಅಲ್ಲಿ ಭಾಗಿಯಾಗಲಿದ್ದಾರೆ. ಇವರ ಪ್ರವಾಸದಿಂದ ಮೊದಲ ಹಂತದಲ್ಲಿ ನಡೆಯುವ 14 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಗಂಭೀರ ಪರಿಣಾಮ ಬೀರಲಿದೆ ಎಂದು ಪಕ್ಷದ ಮುಖಂಡ, ಶಾಸಕ ಸುನಿಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಎರಡು ಕಾರ್ಯಕ್ರಮಗಳ ಜೊತೆಗೆ ಸಮಯ ಸಿಕ್ಕಲ್ಲಿ ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಬೀದರ್, ಬೆಳಗಾವಿ ಜಿಲ್ಲೆಗಳ ಕೋರ್ ಕಮಿಟಿ ಸದಸ್ಯರ ಜೊತೆ ಅಮಿತ್ ಶಾ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

IPL_Entry_Point