ಕನ್ನಡ ಸುದ್ದಿ  /  Karnataka  /  Lok Sabha Election Congress Appoints 5 Working Presidents Forms 3 Member Campaign Committee In Karnataka Uks

ಲೋಕಸಭಾ ಚುನಾವಣೆ; ಜಾತಿ ಸಮೀಕರಣ ಲೆಕ್ಕಾಚಾರದಲ್ಲಿ ಕೆಪಿಸಿಸಿಗೆ 5 ನೂತನ ಕಾರ್ಯಾಧ್ಯಕ್ಷರ ನೇಮಕ, ಪ್ರಚಾರ ಸಮಿತಿಗೆ ಸೊರಕೆ ಅಧ್ಯಕ್ಷ

ಲೋಕಸಭಾ ಚುನಾವಣೆ ಕಾವು ಏರುತ್ತಿರುವಾಗಲೇ ಕರ್ನಾಟಕದಲ್ಲಿ ಜಾತಿ ಸಮೀಕರಣ ಲೆಕ್ಕಾಚಾರದಲ್ಲಿ ಕೆಪಿಸಿಸಿಗೆ 5 ನೂತನ ಕಾರ್ಯಾಧ್ಯಕ್ಷರ ನೇಮಕ ಮಾಡಲಾಗಿದೆ. ಇದೇ ರೀತಿ, ಪ್ರಚಾರ ಸಮಿತಿಗೆ ವಿನಯ ಕುಮಾರ್ ಸೊರಕೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.

ತನ್ವಿರ್ ಸೇರ್, ಜಿ.ಸಿ.ಚಂದ್ರಶೇಖರ್, ವಿನಯ್ ಕುಲಕರ್ಣಿ, ಮಂಜುನಾಥ್ ಭಂಡಾರಿ, ವಸಂತಕುಮಾರ್. ಜಾತಿ ಸಮೀಕರಣ ಲೆಕ್ಕಾಚಾರದಲ್ಲಿ ಕೆಪಿಸಿಸಿಗೆ ನೇಮಕವಾಗಿರುವ 5 ನೂತನ ಕಾರ್ಯಾಧ್ಯಕ್ಷರು.
ತನ್ವಿರ್ ಸೇರ್, ಜಿ.ಸಿ.ಚಂದ್ರಶೇಖರ್, ವಿನಯ್ ಕುಲಕರ್ಣಿ, ಮಂಜುನಾಥ್ ಭಂಡಾರಿ, ವಸಂತಕುಮಾರ್. ಜಾತಿ ಸಮೀಕರಣ ಲೆಕ್ಕಾಚಾರದಲ್ಲಿ ಕೆಪಿಸಿಸಿಗೆ ನೇಮಕವಾಗಿರುವ 5 ನೂತನ ಕಾರ್ಯಾಧ್ಯಕ್ಷರು.

ಬೆಂಗಳೂರು: ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಎರಡು ಹಂತದಲ್ಲಿ ನಡೆಯುತ್ತಿದ್ದು, ಅಧಿಸೂಚನೆ ಪ್ರಕಟವಾಗುವುದಕ್ಕೆ ಬೆರಳೆಣಿಕೆ ದಿನಗಳಿರುವಾಗ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಕಮಿಟಿ (ಕೆಪಿಸಿಸಿ)ಗೆ 5 ಹೊಸ ಕಾರ್ಯಾಧ್ಯಕ್ಷರ ನೇಮಕವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಬೇಕು ಎಂಬ ಏಕೈಕ ಗುರಿಯೊಂದಿಗೆ ಕಾಂಗ್ರೆಸ್ ಪಕ್ಷವು ಜಾತಿ ಸಮೀಕರಣದ ಲೆಕ್ಕಾಚಾರದಲ್ಲಿ ಕೆಪಿಸಿಸಿಗೆ ಐವರು ನೂತನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಅದೇ ರೀತಿ ಪ್ರಚಾರ ಸಮಿತಿಯ ಹೊಣೆಗಾರಿಕೆಯನ್ನು ದಕ್ಷಿಣ ಕನ್ನಡದ ವಿನಯಕುಮಾರ್ ಸೊರಕೆ ಅವರಿಗೆ ಒಪ್ಪಿಸಿದೆ.

ಕೆಪಿಸಿಸಿಯ 5 ನೂತನ ಕಾರ್ಯಾಧ್ಯಕ್ಷರು ಯಾರು

1) ತನ್ವಿರ್ ಸೇರ್, ನರಸಿಂಹರಾಜ ಕ್ಷೇತ್ರದ ಶಾಸಕ (ಮೈಸೂರು ವಿಭಾಗ)

2) ವಿನಯ್ ಕುಲಕರ್ಣಿ, ಧಾರವಾಡ ಗ್ರಾಮೀಣ ಶಾಸಕ (ಬೆಳಗಾವಿ)

3) ಜಿ.ಸಿ.ಚಂದ್ರಶೇಖರ್, ರಾಜ್ಯ ಸಭಾ ಸದಸ್ಯ (ಆಡಳಿತ ಹಾಗೂ ಬೆಂಗಳೂರು ವಿಭಾಗ)

4) ಮಂಜುನಾಥ್ ಭಂಡಾರಿ, ವಿಧಾನ ಪರಿಷತ್ ಸದಸ್ಯ (ಕರಾವಳಿ)

5) ವಸಂತಕುಮಾರ್, ರಾಯಚೂರು ಜಿಲ್ಲಾ ಕಾಂಗ್ರೆಸ್ ಮುಖಂಡ (ಕಲ್ಯಾಣ ಕರ್ನಾಟಕ)

ಈ 5 ನೂತನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಶನಿವಾರ ಆದೇಶ ಮಾಡಿದ್ದಾರೆ. ಈ ಹಿಂದೆ ಕೆಪಿಸಿಸಿಯ ಕಾರ್ಯಾಧ್ಯಕ್ಷರಾಗಿದ್ದ ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಈಶ್ವ‌ರ್‌ ಖಂಡ್ರೆ ಅವರು ಸಚಿವ ಸಂಪುಟದಲ್ಲಿದ್ದಾರೆ. ಸಲೀಂ ಅಹಮದ್ ಅವರು ವಿಧಾನ ಪರಿಷತ್‌ ಮುಖ್ಯ ಸಚೇತಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇನ್ನು ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮತ್ತೆ ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ಅವರ ಸ್ಥಾನಗಳಿಗೆ ಸಮುದಾಯದ ಅಥವಾ ಜಾತಿಲೆಕ್ಕಾಚಾರದಲ್ಲಿ ಪ್ರಾತಿನಿಧ್ಯ ನೀಡಿ ಜಿ.ಸಿ.ಚಂದ್ರಶೇಖರ್ (ಒಕ್ಕಲಿಗ), ಮಂಜುನಾಥ್ ಭಂಡಾರಿ (ಈಡಿಗ ಹಿಂದುಳಿದ ವರ್ಗ), ವಿನಯ್ ಕುಲಕರ್ಣಿ (ಲಿಂಗಾಯತ), ತನ್ನೀರ್ ಸೇರ್ (ಅಲ್ಪಸಂಖ್ಯಾತ), ವಸಂತಕುಮಾರ್ (ದಲಿತ) ಅವರನ್ನು ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೆಪಿಸಿಸಿ ಪ್ರಚಾರ ಸಮಿತಿಗೆ ಸೊರಕೆ ನೂತನ ಅಧ್ಯಕ್ಷ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಅವರನ್ನು ಕೆಪಿಸಿಸಿ ಪ್ರಚಾರ ಸಮಿತಿಗೆ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ರಾಜ್ಯ ಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಅವರನ್ನು ಪ್ರಚಾರ ಸಮಿತಿಯ ಸಹ ಅಧ್ಯಕ್ಷರನ್ನಾಗಿ ಮತ್ತು ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆದೇಶ ಮಾಡಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆ ವೇಳೆ ಎಂ.ಬಿ.ಪಾಟೀಲ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರು ಲಿಂಗಾಯತ ಸಮುದಾಯದವರು. ಈಗ ಲೋಕಸಭಾ ಚುನಾವಣೆಗೆ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ವಿನಯಕುಮಾರ್ ಸೊರಕೆ ಅವರನ್ನು ನೇಮಿಸಲಾಗಿದೆ. ಅವರು ಹಿಂದುಳಿದ ವರ್ಗದ ಪ್ರಾತಿನಿಧ್ಯದಡಿ ಬಿಲ್ಲವ ಸಮುದಾಯದವರು.

ಇದಲ್ಲದೆ, ದಲಿತ ಸಮುದಾಯಕ್ಕೆ ಸಹ ಅಧ್ಯಕ್ಷಸ್ಥಾನ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಕೋಲಾರ ಲೋಕಸಭಾ ಕ್ಷೇತ್ರದಿಂದ ಎಲ್.ಹನುಮಂತಯ್ಯ ಅವರನ್ನು ಕಣಕ್ಕಿಳಿಸಬೇಕೆಂಬ ಒತ್ತಡ ಇದೆ. ಈ ಮಧ್ಯೆ, ಹನುಮಂತಯ್ಯ ಅವರನ್ನು ಪ್ರಚಾರ ಸಮಿತಿಗೆ ನೇಮಕ ಮಾಡಲಾಗಿದೆ. ಪಕ್ಷದ ಈ ನಡೆಯು ಹನುಮಂತಯ್ಯ ಅವರು ಲೋಕಸಭೆ ಚುನಾವಣೆ ಕಣಕ್ಕೆ ಇಳಿಯಲ್ಲ ಎಂಬ ಸಂದೇಶವೇ ಎಂಬುದು ರಾಜಕೀಯ ಪಡಸಾಲೆಯ ಕುತೂಹಲದ ಪ್ರಶ್ನೆ. ಇದು ಊಹಾಪೋಹಕ್ಕೂ ಕಾರಣವಾಗಿದೆ.