ಲೋಕಸಭಾ ಚುನಾವಣೆ; ನಂಜನಗೂಡು ತಾಲೂಕಲ್ಲಿ ಬರೋಬ್ಬರಿ 98.52 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶ-lok sabha election illegal liquor worth rs 98 crore 52 lakh seized in nanjangud taluk mysuru chamarajanagar rgs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭಾ ಚುನಾವಣೆ; ನಂಜನಗೂಡು ತಾಲೂಕಲ್ಲಿ ಬರೋಬ್ಬರಿ 98.52 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶ

ಲೋಕಸಭಾ ಚುನಾವಣೆ; ನಂಜನಗೂಡು ತಾಲೂಕಲ್ಲಿ ಬರೋಬ್ಬರಿ 98.52 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶ

ಲೋಕಸಭಾ ಚುನಾವಣೆ ಪ್ರಗತಿಯಲ್ಲಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ನಂಜನಗೂಡು ಇಮ್ಮಾವು ಗ್ರಾಮದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರೀವರೀಸ್ ಘಟಕಕ್ಕೆ ಅಬಕಾರಿ ಅಧಿಕಾರಿಗಳ ತಂಡ ದಾಳಿ ನಡೆಸಿ, 98.52 ಕೋಟಿ ರೂಪಾಯಿ ಮೌಲ್ಯದ ಮದ್ಯ ವಶಪಡಿಸಿಕೊಂಡರು. (ವರದಿ - ರಂಗಸ್ವಾಮಿ, ಮೈಸೂರು)

ನಂಜನಗೂಡು ತಾಲೂಕಲ್ಲಿ ಬರೋಬ್ಬರಿ 98.52 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡ ಚಾಮರಾಜನಗರ ಮತ್ತು ಮೈಸೂರು ಅಬಕಾರಿ ಅಧಿಕಾರಿಗಳ ತಂಡ.
ನಂಜನಗೂಡು ತಾಲೂಕಲ್ಲಿ ಬರೋಬ್ಬರಿ 98.52 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡ ಚಾಮರಾಜನಗರ ಮತ್ತು ಮೈಸೂರು ಅಬಕಾರಿ ಅಧಿಕಾರಿಗಳ ತಂಡ.

ಚಾಮರಾಜನಗರ/ಮೈಸೂರು: ಲೋಕಸಭಾ ಚುನಾವಣೆಯ ಕಾವು ಏರುತ್ತಿರುವಾಗಲೇ ಕರ್ನಾಟಕದ ಗಡಿನಾಡು ಚಾಮರಾಜನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ಮಂಗಳವಾರ (ಏಪ್ರಿಲ್ 2) 98.52 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ವಶಪಡಿಸಿಕೊಂಡರು. 

ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಇಮ್ಮಾವು ಗ್ರಾಮದ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರೀವರೀಸ್ ಲಿಮಿಟೆಡ್‍ನ ಘಟಕಕ್ಕೆ ಅಬಕಾರಿ ಅಬಕಾರಿ ಉಪ ಆಯುಕ್ತ ತಂಡ ಮಂಗಳವಾರ ಮಧ್ಯಾಹ್ನ ನಂತರ 3.30ರ ವೇಳೆಗೆ ಹಠಾತ್ ಭೇಟಿ ನೀಡಿ ಪರಿಶೀಲನೆ ನಡೆಸಿತು. ಮೈಸೂರು ವಿಭಾಗದ ಅಬಕಾರಿ ಜಂಟಿ ಆಯುಕ್ತರೂ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಒಟ್ಟು 98.52 ಕೋಟಿ ರೂಪಾಯಿ ಮೌಲ್ಯದ ಮದ್ಯ ವಶಪಡಿಸಲಾಗಿದೆ. ಬ್ರೇವರಿ ಘಟಕದ ವಿರುದ್ದ ಪ್ರಕರಣ ದಾಖಲಾಗಿದೆ. 

ಅಕ್ರಮ ಮದ್ಯ ದಾಸ್ತಾನು ಕುರಿತು ಎಚ್ಚರಿಸಿತು ಅನಾಮಧೇಯ ದೂರವಾಣಿ ಕರೆ 

ಚಾಮರಾಜನಗ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಏಪ್ರಿಲ್ 2ರಂದು ಬಂದ ಅನಾಮಧೇಯ ದೂರವಾಣಿ ಕರೆಯ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿ ನೀಡಿದ ಮೌಖಿಕ ಆದೇಶದನ್ವಯ ಬ್ರೇವರಿ ಘಟಕಕ್ಕೆ ಹಠಾತ್ ಭೇಟಿ ನೀಡಿ ಘಟಕದ ದಾಖಲಾತಿ ಹಾಗು ಲೆಕ್ಕದ ಪುಸ್ತಕದೊಂದಿಗೆ ಭೌತಿಕ ದಾಸ್ತಾನನ್ನು ಪರಿಶೀಲಿಸಲಾಗಿತ್ತು. ಆಗ ಲೆಕ್ಕದ ಪುಸ್ತಕದ ದಾಸ್ತಾನಿಗಿಂತ 7 ಸಾವಿರ ವಿವಿಧ ಬ್ರಾಂಡಿನ ರಟ್ಟಿನ ಪೆಟ್ಟಿಗೆಗಳ ಬಿಯರ್ ದಾಸ್ತಾನು ಕೊಠಡಿಯಲ್ಲಿ ಹೆಚ್ಚಾಗಿ ಕಂಡುಬಂದಿದ್ದವು.

ಈ ಕೃತ್ಯವು ಅಬಕಾರಿ ಕಾಯ್ದೆ ಕಲಂ 9, 10, 11, 12, 14 ಖ/ತಿ 32, 34, 38(ಎ), 43 ಮತ್ತು ಕರ್ನಾಟಕ ಬ್ರೇವರಿಯ ಸನ್ನದು ಷರತ್ತುಗಳ ನಿಯಮ 1, 2, 7 ಮತ್ತು 9 ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಬ್ರೇವರಿ 1967ರ ನಿಯಮ 18 ಮತ್ತು 19 ಬಾಟ್ಲಿಂಗ್ ರೂಲ್ ನಿಯಮ 13 ಕರ್ನಾಟಕ ಅಬಕಾರಿ (ದಾಸ್ತಾನು, ಸಾಗಾಣಿಕೆ, ಆಮದು ಮತ್ತು ರಫ್ತು ಅಮಲು ಪದಾರ್ಥಗಳು) (ಕರ್ನಾಟಕ) ನಿಯಮಗಳು 1967ರ ನಿಯಮ 7, 89, 3 ಇವುಗಳ ಉಲ್ಲಂಘನೆ ಎಂದು ತಿಳಿದುಬಂದಿದೆ.

ಯುಬಿ ಘಟಕದಲ್ಲಿತ್ತು ಅಕ್ರಮ ಮದ್ಯ ದಾಸ್ತಾನು

ಮದ್ಯದ ಅಕ್ರಮ ದಾಸ್ತಾನು ಮಾಡುವುದು ಕರ್ನಾಟಕ ಅಬಕಾರಿ ಕಾಯ್ದೆ 1965ರ ಅನ್ವಯ ದಂಡಾರ್ಹ ಹಾಗೂ ಶಿಕ್ಷಾರ್ಹ ಅಪರಾಧ. ಆದ್ದರಿಂದ ಯುಬಿ ಬ್ರೇವರಿ ಘಟಕದಲ್ಲಿ ತಯಾರಿಸಿರುವ ಒಟ್ಟು 6,03,644 ರಟ್ಟಿನ ಪೆಟ್ಟಿಗೆಗಳನ್ನು ತಂಡ ವಶಪಡಿಸಿದೆ. ಅಷ್ಟೇ ಅಲ್ಲ, ಕೆಗ್‍ಗಳಲ್ಲಿದ್ದ 23,160 ಲೀಟರ್, ಬಿಬಿಟಿ ಟ್ಯಾಂಕ್‍ನಲ್ಲಿದ್ದ ದಾಸ್ತಾನು 5,16,700 ಲೀಟರ್ ಯುಟಿ ಟ್ಯಾಂಕ್‍ನಲ್ಲಿದ್ದ 66,16,700 ಲೀಟರ್, ಸೈಲೋಸ್ ಟ್ಯಾಂಕ್‍ನಲ್ಲಿದ್ದ 6,50,458 ಕಿಲೋ ಕಚ್ಚಾವಸ್ತುವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.  

ಅಬಕಾರಿ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದ ಸುದ್ದಿ ತಿಳಿಯುತ್ತಿದ್ದಂತೆ ಈ ಪ್ರಕರಣದಲ್ಲಿ ಭಾಗಿಯಾಗಿರುವ 17 ಆರೋಪಿಗಳು ನಾಪತ್ತೆಯಾಗಿದ್ದಾರೆ. ಹಾಗಾಗಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಲಾಗಿದೆ. ಅಕ್ರಮ ಮದ್ಯದ ದಾಸ್ತಾನನ್ನು ಜಪ್ತಿ ಮಾಡಿದ ಸ್ಥಳವು ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿಗೆ ಸೇರಿದ್ದು, ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿರುವ ಹಿನ್ನೆಲೆಯಲ್ಲಿ, ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಕ್ರಮ ದಾಸ್ತಾನು ಪ್ರಕರಣ ದಾಖಲಿಸಲಾಗಿದೆ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ಹಾಗು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಶಿಲ್ಪಾ ನಾಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ವರದಿ - ರಂಗಸ್ವಾಮಿ, ಮೈಸೂರು)