ಕನ್ನಡ ಸುದ್ದಿ  /  Karnataka  /  Lok Sabha Election Jds To Contest From 3 Seats In Ls Polls Claims Karnataka Ex Cm Hd Kumaraswamy Uks

ಲೋಕಸಭಾ ಚುನಾವಣೆ; 3 ಸ್ಥಾನಗಳಲ್ಲಿ ಜೆಡಿಎಸ್‌ ಸ್ಪರ್ಧೆ, ಶೀಘ್ರವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ, ಮಂಡ್ಯದ್ದೇ ಸವಾಲು

ಕರ್ನಾಟಕದಲ್ಲಿ 20 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಈಗಾಗಲೇ ಬಿಡುಗಡೆ ಮಾಡಿದೆ. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರೂ, ಅಧಿಕೃತವಾಗಿ ಬಿಜೆಪಿ ಸೀಟು ಹಂಚಿಕೆ ವಿಚಾರ ಬಹಿರಂಗಪಡಿಸಿಲ್ಲ. ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಜೆಡಿಎಸ್ ಸಜ್ಜಾಗಿದೆ. ಶೀಘ್ರವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ನಿರೀಕ್ಷೆ ಇದ್ದು, ಮಂಡ್ಯ ಸವಾಲಾಗಿ ಪರಿಣಮಿಸಿದೆ.

ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ
ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (PTI)

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ನಿನ್ನೆ (ಮಾರ್ಚ್ 13) ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕದ 20 ಸ್ಥಾನಗಳ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಇನ್ನುಳಿದಂತೆ 8 ಸ್ಥಾನಗಳ ಪೈಕಿ ಮೂರು ಸ್ಥಾನಗಳನ್ನು ಮಿತ್ರ ಪಕ್ಷ ಜೆಡಿಎಸ್‌ಗೆ ಬಿಜೆಪಿ ಬಿಟ್ಟುಕೊಟ್ಟಿದೆ.

ಈ ವಿಚಾರವನ್ನು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಬುಧವಾರ (ಮಾರ್ಚ್‌ 13) ದೃಢಪಡಿಸಿದ್ದಾರೆ. ಹಾಸನ, ಕೋಲಾರ ಮತ್ತು ಮಂಡ್ಯ ಮೂರು ಕ್ಷೇತ್ರಗಳಲ್ಲಿ ನಾವು ಸ್ಪರ್ಧಿಸಲಿದ್ದೇವೆ. ಬಿಜೆಪಿ ನಾಯಕರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ. ಎರಡು ಹೆಚ್ಚುವರಿ ಸ್ಥಾನಗಳ ಬಗ್ಗೆ ಚರ್ಚೆಗಳು ನಡೆದಿದ್ದರೂ, ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಂಪನ್ಮೂಲಗಳ ಕೊರತೆಯಿದೆ" ಎಂದು ಹೆಚ್‌ ಡಿ ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ಗೆ 5 ಬೇಡ 3 ಸ್ಥಾನ ಸಾಕೆಂದ ಹೆಚ್‌ಡಿಕೆ

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಈಗ ಮೂರು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಸಜ್ಜಾಗಿದೆ. ಈ ನಡುವೆ ಹೆಚ್ಚುವರಿಯಾಗಿ ಎರಡು ಸ್ಥಾನಗಳ ಮಾತುಕತೆ ನಡೆದರೂ, ಸಂಪನ್ಮೂಲದ ಕೊರತೆಯನ್ನು ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಮುಂದಿಟ್ಟಿದ್ದಾರೆ.

“ಹೆಚ್ಚಿನ ಸ್ಥಾನಗಳನ್ನು ನೀಡಿದರೆ ಚುನಾವಣೆಗಳನ್ನು ನಿರ್ವಹಿಸುವ ಶಕ್ತಿ ನನಗಿಲ್ಲ. 2007ರಿಂದ 17 ವರ್ಷಗಳ ಕಾಲ ದೇವೇಗೌಡರ ಮಾರ್ಗದರ್ಶನದಲ್ಲಿ ಏಕಾಂಗಿಯಾಗಿ ಪಕ್ಷವನ್ನು ನಡೆಸಿದ್ದೇನೆ” ಎಂದು ಕುಮಾರಸ್ವಾಮಿ ಹೇಳಿಕೊಂಡಿರುವುದಾಗಿ ವರದಿ ಹೇಳಿದೆ.

ಜೆಡಿಎಸ್ ಅನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಚಿತ್ರದುರ್ಗ, ಬಿಜಾಪುರ ಮತ್ತು ರಾಯಚೂರು ಕ್ಷೇತ್ರಗಳಲ್ಲಿ 2.5 ಲಕ್ಷ (2,50,000) ಮತದಾರರಿದ್ದಾರೆ. ಗುಲ್ಬರ್ಗಾದಲ್ಲಿ ನಾವು 1.9 ಲಕ್ಷ (190,000) ಹೊಂದಿದ್ದೇವೆ... ಆದ್ದರಿಂದ, ನಾನು ಬಿಜೆಪಿ ಕಾರ್ಯಕರ್ತರನ್ನು ವಿನಂತಿಸಿದೆ. ಈ ಹಿಂದೆ, ಕಾಂಗ್ರೆಸ್ ನಮ್ಮ ಕತ್ತು ಸೀಳಿತು" ಎಂದು 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಎದುರಿಸಿದ ಸೋಲನ್ನು ಉಲ್ಲೇಖಿಸಿ ಜೆಡಿಎಸ್ ನಾಯಕ ಹೇಳಿದರು.

ಶೀಘ್ರವೇ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯೂ ಬಿಡುಗಡೆ

ಪ್ರಸ್ತುತ ಹಾಸನದಲ್ಲಿ ಜೆಡಿಎಸ್‌ನಿಂದ ಪ್ರಜ್ವಲ್ ರೇವಣ್ಣ, ಮಂಡ್ಯದಲ್ಲಿ ಬಿಜೆಪಿ ಬೆಂಬಲಿತ ಸುಮಲತಾ ಅಂಬರೀಶ್ ಮತ್ತು ಕೋಲಾರದಲ್ಲಿ ಬಿಜೆಪಿ ಬೆಂಬಲಿತ ಎಸ್.ಮುನಿರಾಜು ಸಂಸದರಾಗಿದ್ದಾರೆ. ಈ ಸಲದ ಲೋಕಸಭಾ ಚುನಾವಣೆಗೆ ಈ ಮೂರು ಕ್ಷೇತ್ರಗಳನ್ನು ಬಿಜೆಪಿ ನಾಯಕರು ಮಿತ್ರ ಪಕ್ಷ ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ, ಜೆಡಿಎಸ್ ಈಗಾಗಲೇ ರೇವಣ್ಣ ಅವರನ್ನು ಹಾಸನದ ಅಭ್ಯರ್ಥಿ ಎಂದು ಘೋಷಿಸಿದೆ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರಿಗೆ ಮಂಡ್ಯದಿಂದ ಟಿಕೆಟ್ ಸಿಗುವ ಸಾಧ್ಯತೆ ಇದೆ. ಆದರೆ, ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಸೀಟು ಹಂಚಿಕೆಗೆ ಸಂಬಂಧಿಸಿದ ಅಧಿಕೃತ ಪ್ರಕಟಣೆ ಎರಡೂ ಪಕ್ಷಗಳ ನಾಯಕತ್ವದಿಂದ ಬಾಕಿ ಉಳಿದಿದೆ.

ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಔಪಚಾರಿಕವಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸೇರ್ಪಡೆಯಾಗಿತ್ತು. ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಚರ್ಚಿಸಿದ ನಂತರ ಕುಮಾರಸ್ವಾಮಿ ಈ ಮೈತ್ರಿಯನ್ನು ಘೋಷಿಸಿದರು. ಸೀಟು ಹಂಚಿಕೆ ಕುರಿತು ಹಲವಾರು ಸುತ್ತಿನ ಮಾತುಕತೆಗಳ ಹೊರತಾಗಿಯೂ, ಬಿಜೆಪಿ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ.

ಕಳೆದ ಚುನಾವಣೆಯಲ್ಲಿ ಅಂದರೆ, 2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಏಳು ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಆದರೆ ಗೌಡ ಕುಟುಂಬದ ಸಾಂಪ್ರದಾಯಿಕ ಭದ್ರಕೋಟೆಯಾಗಿದ್ದ ಹಾಸನದಲ್ಲಿ ಮಾತ್ರ ಗೆಲುವು ಸಾಧಿಸಿತು. ಉಳಿದೆಡೆ ಸೋಲಾಗಿದೆ.

(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)

IPL_Entry_Point