ಕನ್ನಡ ಸುದ್ದಿ  /  Karnataka  /  Lok Sabha Election Karnataka Muslim Population 12 Pc But Till Today No Muslim Candidate Elected In 20 Yrs Mrt

ಕರ್ನಾಟಕದಲ್ಲಿ ಮುಸ್ಲಿಮರ ಸಂಖ್ಯೆ ಶೇ 12, 20 ವರ್ಷದ ಹಿಂದೆ ಒಬ್ಬರು ಸಂಸದರಾಗಿದ್ದರು; ರಾಜಕೀಯ ವಿಶ್ಲೇಷಣೆ

ಕರ್ನಾಟಕದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಮುಸಲ್ಮಾನರ ಜನಸಂಖ್ಯೆ ಶೇ.12. ಆದರೂ 20 ವರ್ಷ ಹಿಂದೆ ಒಬ್ಬ ಮುಸ್ಲಿಂ ಅಭ್ಯರ್ಥಿ ಆಯ್ಕೆ ಆಗಿರುವುದು ಬಿಟ್ಟರೆ ಇನ್ನೊಬ್ಬ ಲೋಕಸಭೆಗೆ ಆಯ್ಕೆಯಾಗಿಲ್ಲ, ಕಾರಣಗಳತ್ತ ಅವಲೋಕನದ ನೋಟ ಹೀಗಿದೆ. (ರಾಜಕೀಯ ವಿಶ್ಲೇಷಣೆ - ಎಚ್. ಮಾರುತಿ, ಬೆಂಗಳೂರು)

ಕರ್ನಾಟಕದಲ್ಲಿ ಮುಸ್ಲಿಮರ ಸಂಖ್ಯೆ ಶೇ 12 ಇದ್ದರೂ 20 ವರ್ಷದಲ್ಲಿ ಒಬ್ಬನೂ ಸಂಸದರಾಗಿಲ್ಲ. (ಸಾಂಕೇತಿಕ ಚಿತ್ರ)
ಕರ್ನಾಟಕದಲ್ಲಿ ಮುಸ್ಲಿಮರ ಸಂಖ್ಯೆ ಶೇ 12 ಇದ್ದರೂ 20 ವರ್ಷದಲ್ಲಿ ಒಬ್ಬನೂ ಸಂಸದರಾಗಿಲ್ಲ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ಶೇ.12ರಷ್ಟು ಮುಸಲ್ಮಾನರಿದ್ದರೂ 20 ವರ್ಷಗಳ ಹಿಂದೆ ಈ ಸಮುದಾಯದ ಒಬ್ಬರು ಲೋಕಸಭೆ ಸದಸ್ಯರಾಗಿದ್ದು ಬಿಟ್ಟರೆ ನಂತರ ಯಾರೊಬ್ಬರೂ ಯಾವುದೇ ಪಕ್ಷದಿಂದ ಲೋಕಸಭೆಗೆ ಆಯ್ಕೆಯಾಗಿಲ್ಲ. ಕಲಬುರಗಿಯಿಂದ ಇಕ್ಬಾಲ್ ಅಹಮದ್ ಸರಡಗಿ 2004ರಲ್ಲಿ ಆಯ್ಕೆಯಾಗಿದ್ದೇ ಕೊನೆ. ಅಲ್ಲಿಂದೀಚೆಗೆ ಯಾವುದೇ ಪಕ್ಷವೂ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ. ಇನ್ನು ಸಣ್ಣ ಸಣ್ಣ ಪಕ್ಷಗಳು ಮುಸಲ್ಮಾನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆಯಾದರೂ ಗೆಲುವು ಮರೀಚಿಕೆಯಾಗಿಯೇ ಉಳಿದಿದೆ.

ಕಳೆದ 4 ಚುನಾವಣೆಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ 11 ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದೇ ಅವಧಿಯಲ್ಲಿ ಎರಡೂ ಪಕ್ಷಗಳು 112 ಅಭ್ಯರ್ಥಿಗಳಿಗೆ ಅವಕಾಶ ನೀಡಿದೆ. ಅಂದರೆ ಮುಸಲ್ಮಾನರಿಗೆ ನೀಡುತ್ತಿರುವ ಪ್ರಾತಿನಿಧ್ಯ ಶೇ.10ಕ್ಕಿಂತ ಕಡಿಮೆ ಇದೆ. ವಿಸ್ತೃತವಾಗಿ ವಿಶ್ಲೇಷಿಸುವುದಾದರೆ 2004ರಲ್ಲಿ 4, 2009 ಮತ್ತು 2014 ರಲ್ಲಿ ತಲಾ 3 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯ ಸ್ಪರ್ಧೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಬಿಜೆಪಿ ಕರ್ನಾಟಕದಲ್ಲಿ ಇದುವರೆಗೂ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ನೀಡಿಲ್ಲ.

ಈ ಬಾರಿಯೂ ಏಕೈಕ ಮುಸ್ಲಿಂ ಅಭ್ಯರ್ಥಿ ಮಾತ್ರ ಚುನಾವಣಾ ಕಣದಲ್ಲಿದ್ದಾರೆ. ಮನ್ಸೂರ್ ಆಲಿ ಖಾನ್ ಅವರಿಗೆ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್ ಸ್ಪರ್ಧೆಗೆ ಅವಕಾಶ ನೀಡಿದೆ. ಇವರು ಬಿಜೆಪಿಯಿಂದ ಮೂರು ಬಾರಿ ಆಯ್ಕೆಯಾಗಿರುವ ಪಿ.ಸಿ. ಮೋಹನ್ ಅವರನ್ನು ಎದುರಿಸಬೇಕಾಗಿದೆ.

ಲೋಕಸಭಾ ಕ್ಷೇತ್ರಗಳಲ್ಲಿ ಮುಸಲ್ಮಾನರ ಸಂಖ್ಯೆ ನಿರ್ಣಾಯಕವಾಗಿಲ್ಲ

ಎರಡು ದಶಕಗಳ ಹಿಂದೆ ಕಾಂಗ್ರೆಸ್ ಮತ್ತು ಜನತಾ ಪರಿವಾರ 3-5 ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತಿದ್ದವು. ಸಿ.ಕೆ. ಜಾಫರ್ ಷರೀಪ್ ಅವರಂತಹ ದಿಗ್ಗಜರು ನಿರಂತರವಾಗಿ ಲೋಕಸಭೆಗೆ ಆಯ್ಕೆಯಾಗಿ ಬರುತ್ತಿದ್ದರು ಮತ್ತು ಸಚಿವರಾಗಿಯೂ ಕೆಲಸ ಮಾಡಲು ಅವಕಾಶ ಲಭ್ಯವಾಗಿತ್ತು. ಲೋಕಸಭಾ ಕ್ಷೇತ್ರಗಳಲ್ಲಿ ಮುಸಲ್ಮಾನರ ಸಂಖ್ಯೆ ಯಾವುದೇ ಕ್ಷೇತ್ರದಲ್ಲಿ ನಿರ್ಣಾಯಕವಾಗಿಲ್ಲದಿರುವುದು, ಮುಸಲ್ಮಾನ ನಾಯಕರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಿರುವುದು ಮತ್ತು ಮತದಾರರ ಧ್ರುವೀಕರಣದ ಕಾರಣಗಳಿಗಾಗಿ ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶವೂ ಸಿಗುತ್ತಿಲ್ಲ ಮತ್ತು ಆರಿಸಿ ಬರುವುದೂ ಕಷ್ಟ ಸಾಧ್ಯವಾಗಿದೆ.

ಈ ಕಾರಣಗಳ ಜೊತೆಗೆ 2008ರಲ್ಲಿ ನಡೆದ ಕ್ಷೇತ್ರ ಪುನರ್ ವಿಂಗಡನೆಯೂ ಕಾರಣವಾಗಿದೆ. 1989ರಲ್ಲಿ ಇಬ್ಬರು ಲೋಕಸಭೆಗೆ ಆಯ್ಕೆಯಾಗಿದ್ದರು. ಬಿಎಂ ಮುಜಾಹಿದ್ ಅವರು ಧಾರವಾಡ ದಕ್ಷಿಣ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಜಾಪರ್ ಷರೀಪ್ ಅವರು ಬೆಂಗಳೂರು ಉತ್ತರ ಕ್ಷೇತ್ರದಿಂದ 1992, 1998 ಮತ್ತು 1999 ರಲ್ಲಿ ಮೂರು ಬಾರಿ ಅರಿಸಿ ಬಂದಿದ್ದರು. ಖಮರುಲ್ ಇಸ್ಲಾಂ 1996ರಲ್ಲಿ ಆಯ್ಕೆಯಾದರೆ ಸರಡಗಿ 2004ರಲ್ಲಿ ಆರಿಸಿ ಬಂದಿದ್ದರು. ಈ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್ ಮತ್ತು ಜೆಡಿಎಸ್ ಮುಸಲ್ಮಾನರಿಗೆ 5ಕ್ಕಿಂತ ಹೆಚ್ಚಿಗೆ ಟಿಕೆಟ್ ನೀಡಿರಲಿಲ್ಲ.

ಕಾಂಗ್ರೆಸ್‌ನಿಂದ ಕನಿಷ್ಠ 3 ಸ್ಥಾನ ನಿರೀಕ್ಷಿಸಿದ್ದ ಸಮುದಾಯ

ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಸ್ಲಿಂ ಮುಖಂಡರು ಕನಿಷ್ಠ 2-3 ಸ್ಥಾನಗಳನ್ನು ನಿರೀಕ್ಷಿಸಿದ್ದರು. ಹೆಚ್ಚಿನ ಸ್ಥಾನಗಳು ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಪಾಲಾಗಿದ್ದರಿಂದ ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ಇಲ್ಲವಾಗಿದೆ. ಇತ್ತೀಚಿನ ಚುನಾವಣೆಗಳಲ್ಲಿ ಮತದಾರರು ಜಾತಿಯ ಆಧಾರದಲ್ಲಿ ಮತ ಚಲಾಯಿಸುತ್ತಿದ್ದು, ಅವರ ನಿರೀಕ್ಷೆಗೆ ತಕ್ಕಂತೆ ಟಿಕೆಟ್ ಹಂಚಿಕೆ ಅನಿವಾರ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಅಭಿಪ್ರಾಯಪಡುತ್ತಾರೆ.

ಈ ಭಾರಿಯ ಚುನಾವಣೆಯ ಏಕೈಕ ಅಭ್ಯರ್ಥಿ ಮನ್ಸೂರ್ ಆಲಿಖಾನ್ ಕಳೆದ 2 ದಶಕಗಳ ಕೊರಗನ್ನು ನಿವಾರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಕೇವಲ ಮುಸಲ್ಮಾನ ಎಂಬ ಕಾರಣಕ್ಕೆ ತಾವು ಮತ ಕೇಳುವುದಿಲ್ಲ. ಕಳೆದ 25 ವರ್ಷಗಳಲ್ಲಿ ಕ್ಷೇತ್ರ ಅಭಿವೃದ್ದಿಯಾಗಿಲ್ಲ. ಹಾಲಿ.ಸಂಸದರಿಗೆ ಆಡಳಿತ ವಿರೋಧಿ ಅಲೆ ಎದುರಾಗಿದ್ದು, ತಮ್ಮನ್ನು ಎಲ್ಲ ವರ್ಗಗಳ ಮತದಾರರು ಬೆಂಬಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. 2 ದಶಕಗಳ ಶೂನ್ಯವನ್ನು ಹೋಗಲಾಡಿಸುವರೇ? ಕಾದು ನೋಡಬೇಕಿದೆ.

(ರಾಜಕೀಯ ವಿಶ್ಲೇಷಣೆ - ಎಚ್.ಮಾರುತಿ, ಬೆಂಗಳೂರು)

IPL_Entry_Point