ಕೋಲಾರ ಕ್ಷೇತ್ರದಲ್ಲಿ ಕೆವಿ ಗೌತಮ್‌ಗೆ ಕಾಂಗ್ರೆಸ್ ಟಿಕೆಟ್; ಅಳಿಯನಿಗೆ ಟಿಕೆಟ್ ಪಡೆಯಲು ವಿಫಲ, ಅಧಿಕೃತ ಅಭ್ಯರ್ಥಿ ಗೆಲುವಿಗೆ ಬೆವರು ಹರಿಸುವರೇ
ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಕೆವಿ ಗೌತಮ್‌ಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ. ಈ ನಡುವೆ ಶತಾಯ ಗತಾಯ ಅಳಿಯನಿಗೆ ಟಿಕೆಟ್ ಪಡೆಯಲು ಪ್ರಯತ್ನಿಸಿ ವಿಫಲರಾದ ಸಚಿವ ಕೆ ಎಚ್ ಮುನಿಯಪ್ಪ ಅವರು ಈಗ ಅಧಿಕೃತ ಅಭ್ಯರ್ಥಿ ಗೆಲುವಿಗೆ ಬೆವರು ಹರಿಸುವರೇ ಎಂಬುದು ಸದ್ಯದ ಕುತೂಹಲ. ಇದರ ಹಿಂದಿದೆ ರಾಜಕೀಯ ಲೆಕ್ಕಾಚಾರ. (ವಿಶ್ಲೇಷಣೆ- ಎಚ್. ಮಾರುತಿ, ಬೆಂಗಳೂರು)
ಬೆಂಗಳೂರು: ಕಾಂಗ್ರೆಸ್ ವರಿಷ್ಠರು ಕೋಲಾರ ಹೊರತುಪಡಿಸಿ ಬಾಕಿ ಉಳಿದಿದ್ದ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಶುಕ್ರವಾರವಷ್ಟೇ ಪ್ರಕಟಿಸಿದ್ದರು. ಮಾರನೇ ದಿನವಾದ ಇಂದು (ಮಾರ್ಚ್ 30) ಕೋಲಾರ ಕ್ಷೇತ್ರಕ್ಕೆ ಕೆವಿ ಗೌತಮ್ ಅವರಿಗೆ ಟಿಕೆಟ್ ನೀಡಿದೆ. ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಆಗಿದೆ. ಮಾಜಿ ಮೇಯರ್ ವಿಜಯಕುಮಾರ್ ಅವರ ಪುತ್ರ ಗೌತಮ್. ಕ್ಷೇತ್ರಕ್ಕೆ ಅಷ್ಟೊಂದು ಚಿರಪರಿಚಿತ ಅಲ್ಲದಿದ್ದರೂ ಕಾಂಗ್ರೆಸ್ ಟಿಕೆಟ್ ನೀಡಿದೆ. ಒಟ್ಟಿನಲ್ಲಿ ಟಿಕೆಟ್ ಎಡಗೈ ಸಮುದಾಯಕ್ಕೆ ಸಿಕ್ಕಿದೆ ಎನ್ನುವುದು ಅಲ್ಲಿನ ಅನೇಕ ನಾಯಕರನ್ನು ಸಮಾಧಾನಗೊಳಿಸುವ ಅಂಶ.
ಕೋಲಾರದಲ್ಲಿ ಸಚಿವ ಮುನಿಯಪ್ಪ ಅವರದ್ದು ಒಂದು ಬಣವಾದರೆ ಉಳಿದ ಎಲ್ಲ ಶಾಸಕರದ್ದು ಒಂದು ಗುಂಪು. ಈ ಬಣಕ್ಕೆ ಮಾಜಿ ಸಚಿವ ಕೆ.ಆರ್. ರಮೇಶ್ ಕುಮಾರ್ ಅವರದ್ದು ನಾಯಕತ್ವ. ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಮುನಿಯಪ್ಪ ಪರೋಕ್ಷವಾಗಿ ಹೇಳಿದ್ದರು.
ಮುನಿಯಪ್ಪ ಅವರ ಕುಟುಂಬಕ್ಕೆ ಟಿಕೆಟ್ ತಪ್ಪಿದ ಖುಷಿಗೆ ರಮೇಶ್ ಕುಮಾರ್ ಬಣ ಗೌತಮ್ ಗೆಲುವಿಗೆ ಶ್ರಮ ಹಾಕಬಹುದು. ಆದರೆ ಮುನಿಯಪ್ಪ ಗುಂಪು ಕೈ ಕೊಡುವುದರಲ್ಲಿ ಸಂದೇಹವೇ ಇಲ್ಲ. ಇವರಿಬ್ಬರ ಜಗಳದಲ್ಲಿ ಕೋಲಾರ ಕೈ ತಪ್ಪೀತು ಎಂಬ ಭಯಕ್ಕೆ ಹೈ ಕಮಾಂಡ್ ಮುನಿಯಪ್ಪ ಅವರ ಕೋಪವನ್ನು ಶಮನ ಮಾಡಿದರೆ ಗೆಲುವಿನ ಹಾದಿ ಸುಗಮವಾಗುತ್ತದೆ.
2019ರ ಲೋಕಸಭಾ ಚುನಾವಣೆ ಸೋತರೂ ವಿಧಾನಸಭೆ ಚುನಾವಣೆ ಗೆದ್ದರು ಮುನಿಯಪ್ಪ
ಒಂದು ತಿಂಗಳಿಂದ ಈ ಕ್ಷೇತ್ರದ ಟಿಕೆಟ್ ಪಡೆಯಲು ಮತ್ತು ತಪ್ಪಿಸಲು ಹಣಾಹಣಿಯೇ ನಡೆದು ಹೋಗಿತ್ತು. ಎರಡು ಬಣಗಳ ಪ್ರತಿಷ್ಠೆಗಾಗಿ ಈ ಕ್ಷೇತ್ರ ಸಿಎಂ ಡಿಸಿಎಂ ಅಂಗಳವನ್ನೂ ದಾಟಿ ಅಂತಿಮ ನಿರ್ಧಾರಕ್ಕೆ ದೂರದ ದೆಹಲಿಯನ್ನು ತಲುಪಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಸೋತರೂ ಸಚಿವ ಕೆ.ಎಚ್. ಮುನಿಯಪ್ಪ 2023ರ ವಿಧಾನಸಭಾ ಚುನಾವಣೆಯಲ್ಲಿ ದೇವನಹಳ್ಳಿ ಕ್ಷೇತ್ರದಿಂದ ಟಿಕೆಟ್ ಗಿಟ್ಟಿಸಿ ಸಚಿವರೂ ಆದರು. ಜೊತೆಗೆ ತಮ್ಮ ಪುತ್ರಿ ರೂಪಕಲಾ ಶಶಿಧರ್ ಅವರನ್ನು ಶಾಸಕಿ ಮಾಡಿದರು. ಇದೀಗ ತಮ್ಮ ಅಳಿಯ ಸರ್ಕಾರಿ ಉದ್ಯೋಗಿ ಕೆ.ಎಚ್.ಚಿಕ್ಕಪೆದ್ದಣ್ಣ ಅವರಿಗೆ ಲೋಕಸಭೆಗೆ ಟಿಕೆಟ್ ಪಡೆಯುವಲ್ಲಿ ಸೋತಿದ್ದಾರೆ. ಯಾವುದೇ ಕಾರಣಕ್ಕೂ ಕೋಲಾರ ಅನ್ಯರ ಪಾಲಾಗಬಾರದು ತಮ್ಮ ಕುಟುಂಬದ ಹಿಡಿತದಲ್ಲೇ ಇರಬೇಕು ಎನ್ನುವುದು ಇವರ ಉದ್ದೇಶ ವಿಫಲವಾಗಿದೆ.
ದಕ್ಷಿಣ ಕರ್ನಾಟಕದಲ್ಲಿ ಮಾದಿಗ ಸಮುದಾಯ ಪ್ರಬಲವಾಗಿದ್ದು, ಬಿಜೆಪಿ ಈ ಪಂಗಡವನ್ನು ಓಲೈಸಲು ಕಸರತ್ತು ನಡೆಸುತ್ತಾ ಬಂದಿದೆ. ಈ ಮಧ್ಯೆ ಬಲಗೈ ಸಮುದಾಯಕ್ಕೆ ಸೇರಿದ ಮಲ್ಲಿಕಾರ್ಜುನ ಖರ್ಗೆ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರತಿಷ್ಠಾಪನೆಗೊಂಡ ನಂತರ ರಾಜ್ಯ ರಾಜಕಾರಣದಲ್ಲಿ ಮುನಿಯಪ್ಪ ಅವರ ಹೆಸರು ಮುನ್ನೆಲೆಗೆ ಬಂದಿದೆ. ಖರ್ಗೆ ಮತ್ತು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಬಲಗೈ ಸಮುದಾಯಕ್ಕೆ ಸೇರಿದವರು. ಹಾಗಾಗಿ ಎಡಗೈ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯಕ್ಕೆ ಒತ್ತಡ ಹೆಚ್ಚುತ್ತಲೇ ಇದೆ.
ರಾಜ್ಯ ರಾಜಕಾರಣದಲ್ಲಿ ದಲಿತ ವರ್ಗಕ್ಕೆ ಸೇರಿದವರೇ ಆಗಿದ್ದರೂ ಎಡಗೈ ಮತ್ತು ಬಲಗೈ ನಡುವೆ ಸದಾ ತಿಕ್ಕಾಟ ನಡೆಯುತ್ತಲೇ ಬಂದಿದೆ. ಇದೇ ಕಾರಣಕ್ಕೆ ಎಡಗೈ ಸಮುದಾಯದ ಮುನಿಯಪ್ಪ ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಕೋಲಾರದಲ್ಲಿ ಟಿಕೆಟ್ ಗೆ ಬೇಡಿಕೆ ಮುಂದಿಟ್ಟಿದ್ದರು.
ಮುನಿಯಪ್ಪ ರಾಷ್ಟ್ರ ರಾಜಕಾರಣದಲ್ಲಿ ಪಳಗಿದ ಕೈ. ಮೇಲಾಗಿ ಸೋನಿಯಾ ಗಾಂಧಿ ಅವರಿಗೆ ಹತ್ತಿರವಾಗಿದ್ದಾರೆ. 7 ಬಾರಿ ಲೋಕಸಭೆಗೆ ಆಯ್ಕೆಯಾಗಿ ಡಾ.ಮನಮೋಹನ್ ಸಿಂಗ್ ಸಂಪುಟದಲ್ಲಿ 10 ವರ್ಷಗಳ ಕಾಲ ಸಚಿವರಾಗಿ ಕೆಲಸ ಮಾಡಿದ್ದಾರೆ. ಪಕ್ಷ ನಿಷ್ಠೆಗೆ ಖರ್ಗೆ ಅವರಂತೆ ಇವರ ಪಕ್ಷ ನಿಷ್ಠೆಯನ್ನು ಯಾರೂ ಪ್ರಶ್ನಿಸುವಂತಿಲ್ಲ.
ಖರ್ಗೆ ಆದಿಯಾಗಿ ಅನೇಕ ಮುಖಂಡರು ಮುನಿಯಪ್ಪ ಅವರ ಅಳಿಯನಿಗೆ ಟಿಕೆಟ್ ನೀಡಲು ಒಲವು ತೋರಿಸುವ ಮೂಲಕ ಎಡಗೈ ಸಮುದಾಯದ ಓಲೈಕೆಗೆ ಮುಂದಾಗಿದ್ದಾರೆ. ತಮ್ಮ ಅಳಿಯ ರಾಧಾಕೃಷ್ಣ ಸ್ಪರ್ಧಿಸಿರುವ ಕಲಬುರಗಿಯಲ್ಲಿ ಎಡಗೈ ಸಮುದಾಯಕ್ಕೆ ಸೇರಿದ ಮತದಾರರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಪ್ರಬಲ ಮುಖಂಡರೊಬ್ಬರ ಕುಟುಂಬಕ್ಕೆ ಟಿಕೆಟ್ ನೀಡಿದರೆ ಮಾದಿಗ ಸಮುದಾಯ ಕಾಂಗ್ರೆಸ್ ಪಕ್ಷದ ಜೊತೆಗೆ ನಿಲ್ಲುತ್ತದೆ ಎನ್ನುವುದು ಇವರ ವಿಶ್ವಾಸವಾಗಿತ್ತು. ಆದರೆ ಖರ್ಗೆ ಅವರಿಂದಲೂ ಸಾಧ್ಯವಾಗಿಲ್ಲ.
ದಲಿತ ಸಮುದಾಯದ ಒಳಪಂಗಡಗಳಿಗೆ ಮೀಸಲಾತಿ, ಓಲೈಕೆಯ ರಾಜಕಾರಣ
2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಎಸ್ ಸಿ ಜನಸಂಖ್ಯೆ ಶೇ.17.5ರಷ್ಟಿದೆ. ಆದರೂ ರಾಜಕಾರಣದ ವಿಷಯಕ್ಕೆ ಬಂದರೆ ಸದಾ ಅನ್ಯಯವಾಗುತ್ತಿದೆ ಎನ್ನವುದು ಈ ಸಮುದಾಯದ ಕೊರಗು. ಬಿಜೆಪಿಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರದಿಂದ ನಿರ್ಗಮಿಸುವುದಕ್ಕೂ ಮುನ್ನ ದಲಿತ ಸಮುದಾಯದ ಒಳಪಂಗಡಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿ ಈ ಸಮುದಾಯದ ಓಲೈಕೆಗೆ ನಾಂದಿ ಹಾಡಿದ್ದರು. ಸಧ್ಯಕ್ಕೆ ಒಳ ಮೀಸಲಾತಿ ವಿಷಯ ನ್ಯಾಯಾಲಯದ ಕಟೆಕಟೆಯಲ್ಲಿದೆ.
ದಲಿತ ಉಪ ಪಂಗಡಗಳಿಗೆ ಸರ್ಕಾರಿ ಯೋಜನೆಗಳ ಲಾಭಾಂಶವನ್ನು ಗರಿಷ್ಠ ಪ್ರಮಾಣದಲ್ಲಿ ಒದಗಿಸಲು ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಪ್ರಧಾನಿ ಮೋದಿ ಸಮಿತಿಯೊಂದನ್ನು ರಚಿಸಿದ್ದಾರೆ. ಸಚಿವ ಮುನಿಯಪ್ಪ ಅವರೂ ನ್ಯಾಯಮೂರ್ತಿ ಒಳ ಮೀಸಲಾತಿ ಕುರಿತ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವಂತೆ ಬೇಡಿಕೆ ಮುಂದಿಟ್ಟಿದ್ದಾರೆ. ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ರಾಜಕೀಯವಾಗಿ ಸದೃಢವಾಗಿರುವ ಒಂದೇ ಕುಟುಂಬಕ್ಕೆ ಅವಕಾಶಗಳನ್ನು ನೀಡುವುದು ಸರಿಯೇ ಎಂದು ಈ ಸಮುದಾಯದ ಮುಖಂಡರು ಪ್ರಶ್ನಿಸುತ್ತಾರೆ.
ಎಸ್ ಸಿ ಸಮುದಾಯಕ್ಕೆ ಮೀಸಲಾದ 5 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಎರಡನ್ನು ಎಸ್ ಸಿ ಎಡಗೈ ಸಮುದಾಯಕ್ಕೆ ನೀಡಿದೆ. ತಲಾ ಒಂದನ್ನು ಬಲಗೈ ಮತ್ತು ಲಂಬಾಣಿ ಸಮುದಾಯಕ್ಕೆ ನೀಡಿದೆ. ಕೋಲಾರ ಮೀಸಲು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದೆ. ಕಾಂಗ್ರೆಸ್ ಕೂಡಾ ಗುಲ್ಬರ್ಗಾ, ಚಾಮರಾಜನಗರ ಮತ್ತು ಬಿಜಾಪುರ ಕ್ಷೇತ್ರಗಳನ್ನು ಎಸ್ ಸಿ ಬಲಗೈ ಸಮುದಾಯಕ್ಕೆ ನೀಡಿದ್ದರೆ ಚಿತ್ರದುರ್ಗ ಕ್ಷೇತ್ರವನ್ನು ಎಡಗೈ ಪಂಗಡಕ್ಕೆ ನೀಡಿದೆ.
ಕೋಲಾರದಲ್ಲಿ ಬಣ ರಾಜಕೀಯ, ಎಡಗೈ, ಬಲಗೈ ಮೊದಲಾದ ತಿಕ್ಕಾಟಗಳಿವೆ. ಎಲ್ಲವನ್ನೂ ಮೀರಿ ಗೌತಮ್ ಗೆಲುವಿಗೆ ಒಮ್ಮನಸ್ಸಿನಿಂದ ಕೆಲಸ ಮಾಡಿದರೆ ಕೋಲಾರ ಗೆಲುವಿನ ಹಾರ ಆಗುವುದರಲ್ಲಿ ಸಂಶಯವಿಲ್ಲ.
(ವಿಶ್ಲೇಷಣೆ- ಎಚ್. ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.