ಲೋಕಸಭಾ ಚುನಾವಣೆ; ಮೈಸೂರು ಮಹಾರಾಜ ಯದುವೀರ್ ಆಸ್ತಿ 5 ಕೋಟಿ ರೂ; ಬಿಜೆಪಿ ಅಭ್ಯರ್ಥಿ ಒಡೆಯರ್ ಬಳಿ ಇರೋದಿಷ್ಟೆ ಆಸ್ತಿಪಾಸ್ತಿ
ಲೋಕಸಭಾ ಚುನಾವಣೆ; ಮೈಸೂರು ಮಹಾರಾಜ ಯದುವೀರ್ ಆಸ್ತಿ 5 ಕೋಟಿ ರೂಪಯಿ ಎಂದು ಘೋಷಿಸಿದ್ದಾರೆ. ದೇಶದ ಗಮನ ಸೆಳೆದಿರುವ ಮೈಸೂರು - ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಾಜವಂಶಸ್ಥ ಯದುವೀರ್ ಒಡೆಯರ್ ಬಳಿ ಇರುವ ಆಸ್ತಿಪಾಸ್ತಿ ವಿವರ ಹೀಗಿದೆ. (ವರದಿ- ರಂಗಸ್ವಾಮಿ, ಮೈಸೂರು)
ಮೈಸೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೈಸೂರು - ಕೊಡಗು ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಸ್ತಿ ವಿಚಾರ ಈಗ ಗಮನಸೆಳೆದಿದೆ. ಯದುವೀರ್ ಅವರು ಸೋಮವಾರ (ಏಪ್ರಿಲ್ 1) ನಾಮಪತ್ರ ಸಲ್ಲಿಸಿದರು. ಈ ಹಿಂದೆ, ಏಪ್ರಿಲ್ 3ರಂದು ಯದುವೀರ್ ನಾಮಪತ್ರ ಸಲ್ಲಿಸಲು ನಿರ್ಧರಿಸಿದ್ದರು. ಆದರೆ ಜ್ಯೋತಿಷಿಗಳ ಸಲಹೆಯ ಮೇರೆಗೆ ಸೋಮವಾರವೇ ನಾಮಪತ್ರ ಸಲ್ಲಿಸಿದರು.
ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಹಾಗು ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಅವರಿಗೆ ಯದುವೀರ್ ಒಡೆಯರ್ ನಾಮಪತ್ರ ಸಲ್ಲಿಸಿದರು. ಈ ವೇಳೆ ಯದುವೀರ್ ಅವರ ತಾಯಿ ಪ್ರಮೋದಾದೇವಿ ಒಡೆಯರ್ ಮತ್ತು ಶಾಸಕ ಶ್ರೀವತ್ಸ ಉಪಸ್ಥಿತರಿದ್ದರು. ಅಂದಹಾಗೆ ಏಪ್ರಿಲ್ 3ರಂದು ಕೂಡ ಯದುವೀರ್ ಒಡೆಯರ್ ಅವರು ಪಕ್ಷದ ಪ್ರಮುಖರೊಂದಿಗೆ ಮೆರವಣಿಗೆ ಮೂಲಕ ಸಾಗಿ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ. ಯದುವೀರ್ ಒಡೆಯರ್ ಅವರು ನಾಮಪತ್ರ ಸಲ್ಲಿಸಿದ ವೇಳೆ ತಮಗಿರುವ ಆಸ್ತಿಯನ್ನು ಘೋಷಣೆ ಮಾಡಿದ್ದಾರೆ. ಯದುವೀರ್ ಅವರು ಒಟ್ಟು 4,99,59,303 ಮೌಲ್ಯದ ಆಸ್ತಿಗಳಿರುವುದಾಗಿ ಘೋಷಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಒಡೆಯರ್ ಬಳಿ ಇರೋದಿಷ್ಟೆ ಆಸ್ತಿಪಾಸ್ತಿ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಯದುವೀರ್ ಒಡೆಯರ್ ಒಟ್ಟು 4.99 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಯದುವೀರ್ ಹೆಸರಿನಲ್ಲಿ ಸ್ವಂತ ವಾಹನ ಅಥವಾ ಸ್ಥಿರಾಸ್ತಿ ಇಲ್ಲ, ಯದುವೀರ್ ಬಳಿ ಯಾವುದೇ ಕೃಷಿಭೂಮಿ, ಸ್ವಂತಮನೆ ಹೊಂದಿಲ್ಲ. ವಾಣಿಜ್ಯ ಕಟ್ಟಡಗಳಿಲ್ಲ, ಬ್ಯಾಂಕ್‌ಗಳಲ್ಲಿ ಸಾಲ ಪಡೆದಿಲ್ಲ. ಯದುವೀರ್ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ.
ಯದುವೀರ್, ತ್ರಿಷಿಕಾ ದಂಪತಿ ಪುತ್ರ ಆದ್ಯವೀರ್ ತಾಯಿಗಿಂತಲೂ ಸಿರಿವಂತ. ಯದುವೀರ್ ಕೈಯಲ್ಲಿ ನಗದು 1 ಲಕ್ಷ ರೂ. ಇದ್ದು, ಮಡದಿ ತ್ರಿಷಿಕಾ ಕೈಯಲ್ಲಿ 75 ಸಾವಿರ ರೂಪಾಯಿ ಇದೆ. ವಿವಿಧ ಬ್ಯಾಂಕುಗಳ ಉಳಿತಾಯ ಖಾತೆಗಳಲ್ಲಿ ಯದುವೀರ್ ಒಡೆಯರ್ ಹೆಸರಿನಲ್ಲಿ 23.55 ಲಕ್ಷ ರೂಪಾಯಿ, ಮಡದಿ ತ್ರಿಷಿಕಾ ಹೆಸರಲ್ಲಿ 1 ಲಕ್ಷ ರೂಪಾಯಿ ಬ್ಯಾಂಕ್ ಡೆಪಾಸಿಟ್ ಇಡಲಾಗಿದೆ. ಯದುವೀರ್ ಹೆಸರಿನಲ್ಲಿ 1,33,04,303 ರೂಪಾಯಿ ಹೂಡಿಕೆ ಮಾಡಲಾಗಿದೆ. ಅವರ ಮಗನ ಹೆಸರಿನಲ್ಲಿ 1,49,00,343 ರೂಪಾಯಿ ಹೂಡಿಕೆ ಮಾಡಲಾಗಿದೆ.
ಯದುವೀರ್ ಬಳಿ ಚಿನ್ನ ಬೆಳ್ಳಿ ಎಷ್ಟಿದೆ
ಯದುವೀರ್ ಒಡೆಯರ್ ಹೆಸರಿನಲ್ಲಿ 3.25 ಕೋಟಿ ರೂ. ಮೌಲ್ಯದ 4 ಕೆಜಿ ಚಿನ್ನವಿದೆ. ಮಡದಿ ತ್ರಿಷಿಕಾ ಹೆಸರಿನಲ್ಲಿ 90 ಲಕ್ಷ ರೂಪಾಯಿ ಮೌಲ್ಯದ ಚಿನ್ನ ಹಾಗೂ 5.5 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿ, ಪುತ್ರನ ಹೆಸರಿನಲ್ಲಿ 12 ಲಕ್ಷ ರೂಪಾಯಿ ಚಿನ್ನ ಹಾಗೂ 5.5 ಲಕ್ಷ ರೂಪಾಯಿ ಚಿನ್ನದ ಗಟ್ಟಿ ಇದೆ.
ಯದುವೀರ್ ಒಡೆಯರ್ ಹೆಸರಿನಲ್ಲಿ 14 ಲಕ್ಷ ರೂ. ಮೌಲ್ಯದ 20 ಕೆಜಿ ಬೆಳ್ಳಿ, ಮಡದಿ ಹೆಸರಿನಲ್ಲಿ 7 ಲಕ್ಷ ರೂ. ಮೌಲ್ಯದ 10 ಕೆಜಿ ಬೆಳ್ಳಿ, ಹಾಗೂ ಮಗನ ಹೆಸರಿನಲ್ಲಿ 7 ಲಕ್ಷರೂ ಮೌಲ್ಯದ 10 ಕೆಜಿ ಬೆಳ್ಳಿ ಇದೆ. ಒಟ್ಟು ಇವೆಲ್ಲ ಸೇರಿಸಿ ಯದುವೀರ್ ಹೆಸರಿನಲ್ಲಿ 3.33 ಕೋಟಿ ರೂಪಾಯಿ, ಮಡದಿ ಹೆಸರಿನಲ್ಲಿ 1 ಕೋಟಿ ಹಾಗೂ ಮಗನ ಹೆಸರಿನಲ್ಲಿ 20 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳಿವೆ.
ಯದುವೀರ್ ಹೆಸರಿನಲ್ಲಿ 4,90,59,303 ರೂ., ಮಡದಿ ತ್ರಿಷಿಕಾ ಹೆಸರಿನಲ್ಲಿ 1,04,25,000 ರೂ. ಹಾಗೂ ಪುತ್ರನ ಹೆಸರಿನಲ್ಲಿ 3,13,55,343 ರೂಪಾಯಿ ಮೌಲ್ಯದ ಒಟ್ಟು ಆಸ್ತಿ ಹೊಂದಿದ್ದಾರೆ.
(ವರದಿ- ರಂಗಸ್ವಾಮಿ, ಮೈಸೂರು)
----------------------------
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.