ಲೋಕಸಭಾ ಚುನಾವಣೆ; ಕೋಲಾರ ಗಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರು ತಪಾಸಣೆ, ಬಿಟಿಎಂ ಲೇಔಟಲ್ಲಿ 1000 ಎಲ್‌ಇಡಿ ಟಿವಿ ವಶ
ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆ ಚಾಲ್ತಿಯಲ್ಲಿರುವ ಕಾರಣ, ಕೋಲಾರ ಗಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರು ತಪಾಸಣೆ ನಡೆಯಿತು. ಇನ್ನೊಂದ ಪ್ರಕರಣದಲ್ಲಿ ಬಿಟಿಎಂ ಲೇಔಟಲ್ಲಿ 1000 ಎಲ್‌ಇಡಿ ಟಿವಿ ವಶಪಡಿಸಿಕೊಂಡಿದ್ದಾರೆ. (ವರದಿ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು/ ಕೋಲಾರ: ಮಾದರಿ ನೀತಿ ಸಂಹಿತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಬಿಟ್ಟಿಲ್ಲ. ಕೋಲಾರ ಜಿಲ್ಲೆಯ ಗಡಿ ಭಾಗದ ರಾಮಸಂದ್ರ ಚೆಕ್ ಪೋಸ್ಟ್‌ನಲ್ಲಿ ಭಾನುವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಬೆಂಗಾವಲು ವಾಹನಗಳನ್ನು ತಡೆದು ಚುನಾವಣಾ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ.
ಯಾವುದೇ ಬೇಸರ ಇಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಪಾಸಣೆಗೆ ಸಹಕಾರ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಸಕ ಕೆ.ವೈ.ನಂಜೇಗೌಡ ಅವರ ಸಹೋದರನ ಪುತ್ರಿಯ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು ಕೋಲಾರಕ್ಕೆ ಹೋಗಿದ್ದರು. ಚೆಕ್‌ಪೋಸ್ಟ್‌ನಲ್ಲಿ ಕಾರು ತಪಾಸಣೆಗೆ ಒಳಪಟ್ಟ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪ್ರಯಾಣ ಮುಂದುವರಿಸಿದರು ಎಂದು ಅವರ ಆಪ್ತ ವಲಯ ತಿಳಿಸಿದೆ.
ಬಿಟಿಎಂ ಲೇಔಟ್‌ನಲ್ಲಿ 1,000 ಎಲ್‌ಇಡಿ ಟಿವಿ ವಶಕ್ಕೆ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಬಿಟಿಎಂ ಲೇಔಟ್‌ನಲ್ಲಿ ಕ್ಷಿಪ್ರ ಪಡೆ ವಿಶೇಷ ಕಾರ್ಯಾಚರಣೆ ನಡೆಸಿ ಯಾವುದೇ ದಾಖಲೆಗಳಿಲ್ಲದ 1 ಸಾವಿರ ಎಲ್‌ಇಡಿ ಟಿವಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಟಿವಿಗಳ ಮೌಲ್ಯ 87 ಲಕ್ಷ ರೂಪಾಯಿ ಎಂದು ಚುನಾವಣಾ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಇವುಗಳನ್ನು ಗೋದಾಮಿನಲ್ಲಿ ದಾಸ್ತಾನು ಮಾಡಲಾಗಿತ್ತು. ಆದರೆ ಈ ಟಿವಿಗಳ ಖರೀದಿಗೆ ಯಾವುದೇ ಬಿಲ್ ಅಥವಾ ದಾಖಲೆಗಳು ಇರಲಿಲ್ಲ. ಆದ್ದರಿಂದ ಇವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಾಖಲೆಗಳನ್ನು ಹಾಜರುಪಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಚುನಾವಣಾ ಅಕ್ರಮ ನಡೆಯದಂತೆ ತಡೆಯಲು ಪೊಲೀಸರು ವಿವಿಧೆಡೆ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಚುನಾವಣಾ ಆಯೋಗ ಕೆಲವೊಂದು ನಿರ್ಬಂಧಗಳನ್ನು ಹೇರಿದ್ದು, ಅದಕ್ಕಿಂತ ಹೆಚ್ಚು ಮೌಲ್ಯದ ವಸ್ತುಗಳಿದ್ದರೆ ಅಂಥವನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಾರೆ. ಕಾರುಗಳಲ್ಲಿ ಸಂಚರಿಸುವಾಗ ವೈಯಕ್ತಿಕ ಬಳಕೆಗೆ 10,000 ರೂಪಾಯಿ ತನಕದ ಮದ್ಯ, ಉಡುಗೊರೆ, ಇಲೆಕ್ಟ್ರಾನಿಕ್ಸ್ ವಸ್ತುಗಳು, ಹೊಸ ಉಡುಪುಗಳನ್ನು ಕೊಂಡೊಯ್ಯಬಯುದು. ಸೂಕ್ತ ದಾಖಲೆಗಳನ್ನು ಜೊತೆಗೆ ಇಟ್ಟುಕೊಂಡಿರಬೇಕು. ಇದಕ್ಕೆ ಹೆಚ್ಚಿನ ಮೌಲ್ಯದ ವಸ್ತುಗಳಿದ್ದರೆ ಅದನ್ನು ಪೊಲೀಸರು ವಶಪಡಿಸಿಕೊಳ್ಳುತ್ತಾರೆ.
ಮತದಾನ ಹೆಚ್ಚಳಕ್ಕೆ ವಿಂಟೇಜ್ ಕಾರು ಮತ್ತು ಬೈಕ್‌ಗಳ ರ‍್ಯಾಲಿ
ಎಲ್ಲ ಚುನಾವಣೆಗಳಲ್ಲಿ ರಾಜ್ಯ ರಾಜಧಾನಿಯಲ್ಲಿ ಮತದಾನಕ್ಕೆ ನಿರಿಸ ಪ್ರತಿಕ್ರಿಯೆ ಕಟ್ಟಿಟ್ಟ ಬುತ್ತಿ. ಆದರೆ ಈ ಬಾರಿ ಮತದಾನದ ಜಾಗೃತಿಗಾಗಿ ಬೆಂಗಳೂರಿನಲ್ಲಿ ಭಾನುವಾರ ವಿಂಟೇಜ್ ಕಾರು ಮತ್ತು ಬೈಕ್‌ಗಳ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ರ‍್ಯಾಲಿಗೆ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನವು ಇದೇ ಏಪ್ರಿಲ್ 26 ರಂದು ನಡೆಯಲಿದೆ. ಹೆಚ್ಚಿನ ಮತದಾನ ನಡೆಯುವಂತೆ ಮಾಡಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮತದಾನಕ್ಕೆ ಪ್ರೇರೇಪಣೆ ನೀಡುವ ರೀತಿಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮತದಾನ ಆಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಈ ನಿಟ್ಟಿನಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆ ಮೂಲಕ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ವಿಂಟೇಜ್ ಕಾರು ಮತ್ತು ಬೈಕ್‌ಗಳ ರ‍್ಯಾಲಿಯಲ್ಲಿ ಭಾಗವಹಿಸಿದವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ರ‍್ಯಾಲಿಯು ವಿಧಾನಸೌಧದ ಮುಂಭಾಗದ ಮೆಟ್ಟಿಲುಗಳ ಮೇಲೆ ಆರಂಭವಾಗಿ ಇನ್‌ಫೆಂಟ್ರಿ ರಸ್ತೆ, ಎಂ.ಜಿ ರಸ್ತೆ, ಟ್ರಿನಿಟಿ ವೃತ್ತ, ರೆಸಿಡೆನ್ಸಿ ರಸ್ತೆ ಮೂಲಕ ಕಂಠೀರವ ಕ್ರೀಡಾಂಗಣ ತಲುಪಿ ಮುಕ್ತಾಯಗೊಂಡಿತು.
ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ, ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.