ಉಡುಪಿ-ಚಿಕ್ಕಮಗಳೂರು ಕ್ಷೇತ್ರ: ಭರ್ಜರಿ ಜಯ ಗಳಿಸಿದ ಬಿಜೆಪಿಯ ಕೋಟ ಗೆಲುವಿನ ನಾಗಾಲೋಟ; ಜಯಪ್ರಕಾಶ್ ಹೆಗ್ಡೆಗೆ ಸೋಲು
ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣಾ ಫಲಿತಾಂಶ 2024: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಬಿಜೆಪಿಗೆ ಗೆಲುವಾಗಿದೆ. ಕೋಟ ಶ್ರೀನಿವಾಸ ಪೂಜಾರಿ 259175 ಮತಗಳ ಅಂತರದಿಂದ ಕಾಂಗ್ರೆಸ್‌ನ ಜಯಪ್ರಕಾಶ ಹೆಗ್ಡೆ ಅವರನ್ನು ಸೋಲಿಸಿದ್ದಾರೆ. ಆ ಮೂಲಕ ಉಡುಪಿ-ಚಿಕ್ಕಮಗಳೂರಿನಲ್ಲಿ ಮತ್ತೆ ಕಮಲ ಅರಳಿದೆ. (ವರದಿ: ಹರೀಶ್ ಮಾಂಬಾಡಿ)

ಉಡುಪಿ: ಬಿಜೆಪಿ ಭದ್ರಕೋಟೆ ಎಂದೇ ಹೆಸರಾಗಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿಯೂ ಕಮಲ ಅರಳಿದೆ. ಕೋಟ ಶ್ರೀನಿವಾಸ ಪೂಜಾರಿ ಗೆಲುವಿನ ನಾಗಾಲೋಟಕ್ಕೆ ಅನುಭವಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಬ್ರೇಕ್ ಹಾಕಲು ಅಸಾಧ್ಯವಾಯಿತು.
ಉಡುಪಿ ಸುದೀರ್ಘ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದರೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರವಾದ ಮೇಲೆ ಹೆಚ್ಚು ಬಿಜೆಪಿ ಕಡೆಗೆ ವಾಲತೊಡಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಜಯಗಳಿಸಿತ್ತು. ಕಾರ್ಕಳ ಕ್ಷೇತ್ರದಲ್ಲಿ ಪ್ರತಿಕೂಲ ವಾತಾವರಣ ಬಿಜೆಪಿಗೆ ಇದ್ದರೂ ಸುನೀಲ್ ಕುಮಾರ್ ವಿಜಯಕ್ಕೆ ಅಡ್ಡಿ ಆಗಿರಲಿಲ್ಲ. ಅಭ್ಯರ್ಥಿ ಬದಲಾಯಿಸಿದರೂ ಇತರ ಕ್ಷೇತ್ರಗಳಲ್ಲೂ ಕಮಲಪಕ್ಷಕ್ಕೆ ತೊಂದರೆ ಆಗಿರಲಿಲ್ಲ. ಹೀಗಾಗಿ ಬಿಜೆಪಿಯ ಭದ್ರಕೋಟೆಯಾಗಿ ಬದಲಾದ ಉಡುಪಿ ಜಿಲ್ಲೆಯ ಪರಿಸ್ಥಿತಿ ಹೀಗಾದರೆ, ಚಿಕ್ಕಮಗಳೂರು ಜಿಲ್ಲೆಯ ಭಾಗದಲ್ಲಿ ಮಿಶ್ರಫಲವಾಗಿತ್ತು. ಸಿ.ಟಿ. ರವಿ ಸೋಲು ಕಂಡಿದ್ದರು. ಇದಾದ ಬಳಿಕ ಲೋಕಸಭೆ ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಲೇಬಾರದು ಎಂಬ ಹಕ್ಕೊತ್ತಾಯಗಳು ಬಂದವು. ಪ್ರಮೋದ್ ಮಧ್ವರಾಜ್, ಸಿ.ಟಿ. ರವಿ ಹೆಸರುಗಳು ಕೇಳಿಬಂದವು. ಗೋ ಬ್ಯಾಕ್ ಅಭಿಯಾನಗಳೂ ಏರ್ಪಟ್ಟವು. ಈ ಸಂದರ್ಭ ಬಿಜೆಪಿ ಕಾಂಗ್ರೆಸ್ ಪಕ್ಷದಲ್ಲಿ ಯಾರು ನಿಲ್ಲುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಯನ್ನು ಫೀಲ್ಡಿಗಿಳಿಸುವ ಲೆಕ್ಕಾಚಾರ ಮಾಡಿತು. ಇಲ್ಲಿ ನೇರವಾಗಿ ಕಂಡುಬಂದದ್ದು ಜಾತಿ ಸಮೀಕರಣ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಂಟ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿದರೆ, ಉಡುಪಿಯಲ್ಲಿ ಅಚ್ಚರಿ ಎಂಬಂತೆ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಿತು. ಬಿಲ್ಲವ ಮತಗಳ ಮೇಲೆ ಕಣ್ಣಿಟ್ಟ ಬಿಜೆಪಿ ಅವರಿಗೆ ಟಿಕೆಟ್ ನೀಡಿದೆ ಎಂದು ಹೇಳಲಾಗಿತ್ತು. ಕಾಂಗ್ರೆಸ್ ಜಯಪ್ರಕಾಶ್ ಹೆಗ್ಡೆ ಅವರನ್ನು ಕಣಕ್ಕಿಳಿಸಿದ ಹಿನ್ನೆಲೆಯಲ್ಲಿ ಫೈಟ್ ಜೋರಾಯಿತು. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ತಮಗೇ ಜಯ ಎಂದು ಹೇಳಿಕೊಂಡರೆ, ಬಿಜೆಪಿ ಸಾಂಪ್ರದಾಯಿಕ ಮತಗಳು ತನಗೆ ದೊರಕಬಹುದು ಎಂಬ ನಿರೀಕ್ಷೆಯಲ್ಲಿತ್ತು. ಅದು ಹುಸಿಯಾಗಲಿಲ್ಲ. ಹೆವಿವೈಟ್ ಜಯಪ್ರಕಾಶ್ ಹೆಗ್ಡೆ ಅವರು ಕಣಕ್ಕಿಳಿದರೂ ಕೋಟ ಶ್ರೀನಿವಾಸ ಪೂಜಾರಿ ಗೆಲುವಿನ ನಗೆ ಬೀರಿದ್ದಾರೆ. ತನ್ಮೂಲಕ ಲೋಕಸಭೆ ಪ್ರವೇಶಿಸಲಿದ್ದಾರೆ.
ಕಳೆದ ಬಾರಿಯ ಫಲಿತಾಂಶ ಹೀಗಿತ್ತು
2014ರಲ್ಲಿ ಹೊರಬಿದ್ದ ಫಲಿತಾಂಶಗಳನ್ನು ಗಮನಿಸಿದರೆ, ಶೋಭಾ ಕರಂದ್ಲಾಜೆ (ಬಿಜೆಪಿ) 581168, ಜಯಪ್ರಕಾಶ ಹೆಗ್ಡೆ (ಕಾಂಗ್ರೆಸ್) – 399525 ಮತಗಳನ್ನು ಗಳಿಸಿದ್ದರು. ಈ ಬಾರಿ ಶೋಭಾ ಕರಂದ್ಲಾಜೆ ಕಣದಲ್ಲಿಲ್ಲ, ಆದರೆ ಜಯಪ್ರಕಾಶ ಹೆಗ್ಡೆ ಮತ್ತೆ ಕಾಂಗ್ರೆಸ್‌ನಿಂದ ಕಣದಲ್ಲಿದ್ದಾರೆ. 2019ರಲ್ಲಿ ಶೋಭಾ ಕರಂದ್ಲಾಜೆ (ಬಿಜೆಪಿ) ಗೆಲುವಿನ ಅಂತರ ಹಿಗ್ಗಿಸಿಕೊಂಡರು. 7,18,916 ಮತಗಳನ್ನು ಶೋಭಾ ಗಳಿಸಿದರೆ, ಕಾಂಗ್ರೆಸ್-ಜೆಡಿಎಸ್ ಸಂಯುಕ್ತ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ 3,69,317 ಮತಗಳನ್ನಷ್ಟೇ ಗಳಿಸಿದ್ದರು. ಒಟ್ಟು 11,51,012 ಮತಗಳು 2019ರಲ್ಲಿ ಚಲಾವಣೆ ಆಗಿತ್ತು.
ಈ ಬಾರಿಯ ಮತದಾನದ ವಿವರ
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.77.15 ಮತದಾನವಾಗಿದೆ. ಕುಂದಾಪುರ ಕ್ಷೇತ್ರದಲ್ಲಿ 167612, ಉಡುಪಿಯಲ್ಲಿ 172257, ಕಾಪುವಿನಲ್ಲಿ 152477, ಕಾರ್ಕಳದಲ್ಲಿ 154154, ಶೃಂಗೇರಿಯಲ್ಲಿ 135678, ಮೂಡಿಗೆರೆಯಲ್ಲಿ 132975, ಚಿಕ್ಕಮಗಳೂರಿನಲ್ಲಿ 164253, ತರೀಕೆರೆಯಲ್ಲಿ 143482 ಮತ ಚಲಾವಣೆಯಾಗಿದೆ.
ಈ ಬಾರಿಯ ಫಲಿತಾಂಶದ ವಿವರ
ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ)
ಕೆ. ಜಯಪ್ರಕಾಶ್ ಹೆಗ್ಡೆ (ಕಾಂಗ್ರೆಸ್)
ಕೆ.ಟಿ. ರಾಧಾಕೃಷ್ಣ (ಬಿಎಸ್‌ಪಿ)
ಸುಧೀರ್ ಕಾಂಚನ್ (ಪಕ್ಷೇತರ)
ಎಂ.ಕೆ.ದಯಾನಂದ (ಪಿಎಸ್ ಎಸ್)
ಸುಪ್ರೀದ್ ಪೂಜಾರಿ ಕಟೀಲ್ (ಜನಹಿತ ಪಕ್ಷ)
ಶಬರೀಶ್ (ಕರುನಾಡ ಸೇವಾಕರ ಪಾರ್ಟಿ)
ವಿಜಯ ಕುಮಾರ್ ಎಂಜಿ (ಪಕ್ಷೇತರ)
ಸಚಿನ್ ಬಿಕೆ (ಉತ್ತಮ ಪ್ರಜಾಕೀಯ ಪಕ್ಷ)
ಎಲ್.ರಂಗನಾಥ ಗೌಡ (ಕರ್ನಾಟಕ ರಾಷ್ಟ್ರ ಸಮಿತಿ)
ನೋಟಾ
