ಕನ್ನಡ ಸುದ್ದಿ / ಕರ್ನಾಟಕ /
Karnataka BJP Rebel: ಬಿಜೆಪಿಯಲ್ಲಿ ಆರದ ಬಂಡಾಯದ ಬೇಗುದಿ, ಕರಡಿ ಸಂಗಣ್ಣ ರಾಜೀನಾಮೆ, ಯಾವ ಕ್ಷೇತ್ರದಲ್ಲಿದೆ ತೊಡಕು
ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಬಿಜೆಪಿ ಅಣಿಯಾಗಿದ್ದರೂ ಬಂಡಾಯದ ಕಾವು ಮಾತ್ರ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಇದೆ.

ಕರ್ನಾಟಕ ಬಿಜೆಪಿಯಲ್ಲಿ ಬಂಡಾಯದ ಬಿಸಿ ಹಲವು ಕ್ಷೇತ್ರಗಳಲ್ಲಿ ಹಬ್ಬಿದೆ.
ಬೆಂಗಳೂರು: ಲೋಕಸಭೆ ಚುನಾವಣೆಗೆ ಮೊದಲ ಹಂತದ ಪ್ರಚಾರದ ಅಬ್ಬರ ಜೋರಾಗಿದೆ.ಮತ್ತೊಂದು ಕಡೆಗೆ ಎರಡನೇ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜೋರಾಗಿದೆ. ಮೂರನೇ ಬಾರಿಗೆ ಅಧಿಕಾರ ಹಿಡಿದು ಹ್ಯಾಟ್ರಿಕ್ ಸಾಧನೆಗೆ ಬಿಜೆಪಿ ಯೋಜನೆ ಹಾಕಿಕೊಂಡಿದ್ದರೂ ಕರ್ನಾಟಕದಲ್ಲಿ ಆ ಪಕ್ಷದ ಬಂಡಾಯದ ಬಿಸಿ ಆಗುತ್ತಲೇ ಇಲ್ಲ. ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಜೋರಾಗಿಯೇ ಇದೆ. ಈಗಾಗಲೇ ರಾಜಕೀಯದಿಂದ ದೂರ ಉಳಿದಿದ್ದರೂ ಬಿಜೆಪಿ ಬೆಂಬಲಿಸಲು ಪರೋಕ್ಷವಾಗಿ ನಿರಾಕರಿಸಿದ ಚಾಮರಾಜನಗರ ಸಂಸದ ಶ್ರೀನಿವಾಸಪ್ರಸಾದ್ ನಂತರ ಕೊಪ್ಪಳ ಸಂಸದ ಕರಡಿ ಸಂಗಣ್ಣ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಬೀದರ್, ದಾವಣಗೆರೆ, ಶಿವಮೊಗ್ಗ, ಉತ್ತರ ಕನ್ನಡ, ರಾಯಚೂರು, ವಿಜಯಪುರ, ತುಮಕೂರು ಸಹಿತ ಹಲವು ಕ್ಷೇತ್ರಗಳಲ್ಲಿ ಇನ್ನೂ ಬಂಡಾಯದ ಬಿಸಿ ಹಾಗೆಯೇ ಇದೆ.
- ಕೊಪ್ಪಳದಲ್ಲಿ ಬಂಡಾಯದ ಬಿಸಿ ಜೋರಾಗಿಯೇ ಇದೆ. ಮೂರು ಬಾರಿ ಶಾಸಕ, ಎರಡು ಬಾರಿ ಸಂಸದರಾಗಿದ್ದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ನೀಡಿಲ್ಲ. ಇದರಿಂದ ಬೇಸರಗೊಂಡಿದ್ದ ಅವರು ಪಕ್ಷಕ್ಕೇ ರಾಜೀನಾಮೆ ನೀಡಿದ್ದಾರೆ. ಬುಧವಾರ ಬಹುತೇಕ ಕಾಂಗ್ರೆಸ್ ಸೇರಲಿದ್ದಾರೆ. ಪಕ್ಷದ ನಾಯಕರು ಮನ ಒಲಿಸಿದಾಗ ತಣ್ಣಗಾಗಿದ್ದ ಸಂಗಣ್ಣ ಅವರನ್ನು ಕಾಂಗ್ರೆಸ್ ನಾಯಕರು ಸಂಪರ್ಕಿಸಿದ್ದರು. ಲಕ್ಷ್ಮಣ ಸವದಿ ತಮ್ಮ ನಿವಾಸಕ್ಕೆ ಆಗಮಿಸಿ ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದ್ದರು. ಮುಂದೆ ಎಂಎಲ್ಸಿ ಸ್ಥಾನ ನೀಡುವ ಭರವಸೆ ನೀಡಿದ್ದರಿಂದ ಅವರು ಕಾಂಗ್ರೆಸ್ ಸೇರುವ ತೀರ್ಮಾನ ಕೈಗೊಂಡಿದ್ದಾರೆ. ಇದರಿಂದ ಕೊಪ್ಪಳದಲ್ಲಿ ಬಿಜೆಪಿಗೆ ಬಲವಾದ ಏಟು ಬೀಳಬಹುದು.
- ಶಿವಮೊಗ್ಗದಲ್ಲಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಯಾವುದೇ ಆಮಿಷಗಳಿಗೂ ಜಗ್ಗುತ್ತಿಲ್ಲ. ಈಗಾಗಲೇ ನಾಮಪತ್ರ ಸಲ್ಲಿಸಿರುವ ಅವರು ಪ್ರಚಾರಕ್ಕೂ ಧುಮುಕಿದ್ಧಾರೆ. ಬಿಜೆಪಿ ಅಭ್ಯರ್ಥಿ ಸೋಲಿಸುವ ಏಕೈಕ ಗುರಿಯೊಂದಿಗೆ ಕಣದಲ್ಲಿದ್ದೇನೆ ಎಂದು ಬಿಜೆಪಿ ಮತಬುಟ್ಟಿಗೆ ಕೈ ಹಾಕಿದ್ದಾರೆ. ಬಂಡಾಯದ ಬಿಸಿ ಬಿಜೆಪಿಗೂ ತಟ್ಟಿದೆ. ಕಾಂಗ್ರೆಸ್ ಅಭ್ಯರ್ಥಿ ಪ್ರಚಾರದ ಮೇಲೆ ಫಲಿತಾಂಶ ನಿರ್ಧಾರವಾಗಬಹುದು ಎನ್ನಲಾಗುತ್ತಿದೆ.
- ಚಾಮರಾಜನಗರದಲ್ಲೂ ಹಾಲಿ ಸಂಸದ ವಿ.ಶ್ರೀನಿವಾಸಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಆದರೆ ಅವರ ಅಳಿಯ ಡಾ. ಮೋಹನ್‌ಗೆ ಟಿಕೆಟ್ ಸಿಗಲಿಲ್ಲ ಎನ್ನುವ ಬೇಸರ ಅವರಿಗಿದೆ. ಈ ನಡುವೆಸಿಎಂ ಸಿದ್ದರಾಮಯ್ಯ ಅವರು ಪ್ರಸಾದ್ ನಿವಾಸಕ್ಕೆ ತೆರಳಿ ಬೆಂಬಲ ಕೋರಿದ್ದಾರೆ.ಕಾಂಗ್ರೆಸ್ ಪರವಾಗಿಯೇ ಪ್ರಸಾದ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮರು ದಿನ ಬಿ.ಎಸ್.ಯಡಿಯೂರಪ್ಪ ಅವರು ತೆರಳಿದರೂ ಪ್ರಸಾದ್ ಅವರು ಮೋದಿ ಸಮಾವೇಶಕ್ಕೆ ಬರುವುದಿಲ್ಲ ಎಂದು ಹೇಳಿರುವ ಜತೆಗೆ ಬಿಜೆಪಿಗೆ ಬೆಂಬಲಿಸುವಂತೆ ತಿಳಿಸುವ ಬಗ್ಗೆಯೂ ಏನು ಹೇಳಿಲ್ಲ. ಇದರಿಂದ ಚಾಮರಾಜನಗರ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಆಗಬಹುದು ಎನ್ನುವ ಅತಂಕ ಪಕ್ಷದ ವಲಯದಲ್ಲಿದೆ.
- ವಿಜಯಪುರ ಕ್ಷೇತ್ರದಲ್ಲಿ ಬಾಗಲಕೋಟೆ ಮಧುಮೇಹ ತಜ್ಞ ಡಾ.ಬಾಬು ರಾಜೇಂದ್ರ ನಾಯಿಕ ಪ್ರಮುಖ ಆಕಾಂಕ್ಷಿಯಾಗಿದ್ದರು. ಐದು ವರ್ಷದಿಂದಲೂ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದರು. ಆದರೆ ಮತ್ತೆ ರಮೇಶ ಜಿಗಜಿಣಗಿ ಅವರಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಬೇಸರಗೊಂಡ ರಾಜೇಂದ್ರ ನಾಯಿಕ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
- ತುಮಕೂರಿನಲ್ಲಿ ಸೋಮಣ್ಣ ಪರವಾಗಿ ಪ್ರಚಾರಕ್ಕೆ ಮಾಜಿ ಸಚಿವ ಮಾಧುಸ್ವಾಮಿ ಈಗಲೂ ಆಗಮಿಸುತ್ತಿಲ್ಲ. ಪ್ರಚಾರಕ್ಕೆ ಹಿರಿಯ ನಾಯಕರು ಬಂದರೂ ಅವರು ಕಾಣಿಸಿಕೊಂಡಿಲ್ಲ. ಇದು ಕೂಡ ಬಿಜೆಪಿಗೆ ಬಿಸಿ ತುಪ್ಪವಾಗಿಯೇ ಪರಿಣಮಿಸಿದೆ.
- ರಾಯಚೂರಿನಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ್ ನಾಯಕ್ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಸಿಡಿದೆದ್ದಿರುವ ಮಾಜಿ ಸಂಸದ ಭಗವಂತ ನಾಯಕ್ ಅವರ ಅಸಮಾಧಾನ ತಣ್ಣಗಾಗಿಲ್ಲ. ಈಗಾಗಲೇ ಹಲವಾರು ಸಭೆಗಳನ್ನು ಅವರು ನಡೆಸಿ ರಾಜಾ ಅಮರೇಶ್ವರ ನಾಯಕ್ ವಿರುದ್ದವೇ ತೊಡೆ ತಟ್ಟಿದ್ದಾರೆ. ಇಲ್ಲಿಯೂ ಬಿಜೆಪಿಗೆ ಹೊಡೆತ ಬೀಳುವ ಲಕ್ಷಣಗಳಿವೆ.
- ದಾವಣಗೆರೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರ ಪತ್ನಿಗೆ ಟಿಕೆಟ್ ನೀಡಿದ್ದಕ್ಕೆ ಮುನಿಸಿಕೊಂಡಿರುವ ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ್, ಎಂ.ಪಿ.ರೇಣುಕಾಚಾರ್ಯ ಅವರ ಅಸಮಾಧಾನ ಶಮನವಾಗಿಲ್ಲ. ಖುದ್ದು ಯಡಿಯೂರಪ್ಪ ಮಾತನಾಡಿದರೂ ಭಿನ್ನಮತ ತಗ್ಗಿಲ್ಲ. ಮತ್ತೊಬ್ಬ ಮಾಜಿ ಶಾಸಕ ಗುರುಸಿದ್ದನಗೌಡ ಈಗಾಗಲೇ ಕಾಂಗ್ರೆಸ್ ಸೇರಿರುವುದು ಪಕ್ಷಕ್ಕೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
- ಬೀದರ್ ನಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ದ ಬಿಜೆಪಿ ಶಾಸಕರ ಮುನಿಸು ಜೋರಾಗಿಯೇ ಇದೆ. ಕಳೆದ ಬಾರಿ ತಮ್ಮನ್ನು ಸೋಲಿಸಲು ಯತ್ನಿಸಿದ ಖೂಬಾಗೆ ಟಿಕೆಟ್ ಬೇಡ ಎಂದು ಬಿಜೆಪಿ ಶಾಸಕರು ಮನವಿ ಮಾಡಿದ್ದರು. ಆದರೆ ಅವರಿಗೆ ಟಿಕೆಟ್ ದೊರೆತಿದೆ. ಇದರಿಂದ ಬಿಜೆಪಿ ಶಾಸಕರು ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗುತ್ತಿಲ್ಲ.
- ಉತ್ತರ ಕನ್ನಡ ಒಳಗೊಂಡ ಕೆನರಾ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆಗೆ ಟಿಕೆಟ್ ಸಿಕ್ಕಿಲ್ಲ. ಅವರ ಬದಲು ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಅವಕಾಶ ದೊರೆತಿದೆ. ಇದರಿಂದ ಮುನಿಸಿಕೊಂಡಿರುವ ಅನಂತಕುಮಾರ್ ಹೆಗಡೆ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಮನ ಒಲಿಸಿದರೂ ಪ್ರಚಾರಕ್ಕೆ ಬಂದಿಲ್ಲ. ಇದೂ ಕೂಡ ಬಿಜೆಪಿಗೆ ಕೊಂಚ ಹಿನ್ನಡೆ ಉಂಟು ಮಾಡಬಹುದು.
- ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿರುದ್ದ ದಿಂಗಾಲೇಶ್ವರ ಸ್ವಾಮೀಜಿ ತಿರುಗಿಬಿದ್ದಿದ್ದಾರೆ. ಸ್ವಾಮೀಜಿ ಪರವಾಗಿ ಕಾಂಗ್ರೆಸ್ ನವರು ಮಾತ್ರವಲ್ಲದೇ ಬಿಜೆಪಿ ಮುಖಂಡರು ಪರೋಕ್ಷವಾಗಿ ಬೆಂಬಲಕ್ಕೆ ನಿಂತಿರುವ ಅನುಮಾನಗಳು ಪಕ್ಷದ ವಲಯದಲ್ಲಿದೆ. ಇದು ಜೋಶಿ ಅವರ ಗೆಲುವಿಗೆ ತೊಡರುಗಾಲು ಆಗಬಹುದು ಎನ್ನಲಾಗುತ್ತಿದೆ.
