ಕನ್ನಡ ಸುದ್ದಿ  /  ಕರ್ನಾಟಕ  /  ನೀರಿಲ್ಲ,ರಸ್ತೆ ಸರಿಯೇ ಇಲ್ಲ, ಕೇಳಿ ಸಾಕಾಗಿ ಹೋಗಿದೆ, ಹೇಗೆ ಮತ ಹಾಕೋದು?: ಮತದಾನ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

ನೀರಿಲ್ಲ,ರಸ್ತೆ ಸರಿಯೇ ಇಲ್ಲ, ಕೇಳಿ ಸಾಕಾಗಿ ಹೋಗಿದೆ, ಹೇಗೆ ಮತ ಹಾಕೋದು?: ಮತದಾನ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಿಕ್ಕೇರಿಕಟ್ಟೆ ಗ್ರಾಮಕ್ಕೆ ಮೂಲಸೌಕರ್ಯವಿಲ್ಲ ಎಂದು ಗ್ರಾಮಸ್ಥರು ಲೋಕಸಭೆ ಚುನಾವಣೆ ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳಿದ್ದಾರೆ.ವರದಿ: ಪಿ.ರಂಗಸ್ವಾಮಿ, ಮೈಸೂರು

ಮೂಲಸೌಕರ್ಯಗಳಿಲ್ಲದೇ ಕಿಕ್ಕೇರಿ ಕಟ್ಟೆ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.
ಮೂಲಸೌಕರ್ಯಗಳಿಲ್ಲದೇ ಕಿಕ್ಕೇರಿ ಕಟ್ಟೆ ಗ್ರಾಮಸ್ಥರು ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ.

ಮೈಸೂರು: ಕುಡಿಯುವ ನೀರು, ವಿದ್ಯುತ್, ರಸ್ತೆ ಸೇರಿದಂತೆ ಅಗತ್ಯ ಮೂಲ ಸೌಲರ್ಯಗಳಿಂದ ವಂಚಿತವಾಗಿರುವ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಕಿಕ್ಕೇರಿಕಟ್ಟೆ ಗ್ರಾಮಸ್ಥರು ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲು ನಿರ್ಧರಿಸಿದ್ದಾರೆ. ಕಾಡಂಚಿನಲ್ಲಿರುವ ಕಿಕ್ಕೇರಿಕಟ್ಟೆ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ಗ್ರಾಮದ ಜನರು ‌ಮುಂಬರುವ ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕಾರ ಮಾಡಿದ್ದಾರೆ. 250 ಕ್ಕೂ ಹೆಚ್ಚು ಮತದಾರರಿರುವ ಕಿಕ್ಕೇರಿ ಕಟ್ಟೆ ಗ್ರಾಮದಲ್ಲಿ 50 ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಆದರೆ ಕನಿಷ್ಠ ಮೂಲಭೂತ ಸೌಕರ್ಯಗಳು ಕೂಡ ಈ ಗ್ರಾಮದ ಜನರಿಗೆ ಮರಿಚೀಕೆಯಾಗಿವೆ. ಸಮರ್ಪಕ ರಸ್ತೆ, ಕುಡಿಯುವ ನೀರು, ವಿದ್ಯುತ್ ಸರಬರಾಜು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಿಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಮ್ಮ ಗ್ರಾಮಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ಎಷ್ಟೇ ಮನವಿ ಮಾಡಿದ್ದರೂ ಈವರೆಗೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಹಲವಾರು ವರ್ಷಗಳಿಂದಲೂ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ, ಆದರೆ ಯಾವುದೇ ಪರಿಹಾರ ದೊರೆತಿಲ್ಲ, ಓಡಾಡಲು ಸೂಕ್ತವಾದ ರಸ್ತೆ ಇಲ್ಲದೇ ಅಪಘಾತಗಳು ಸಂಭವಿಸುತ್ತಿವೆ. ವಿದ್ಯುತ್ ಸೌಕರ್ಯವಿಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೂ ಅಡಚಣೆಯಾಗಿದೆ.

ನೀರು ಸರಬರಾಜಿಲ್ಲದೇ ಜಮೀನಿನ ಪಂಪ್ ಸೆಟ್ ಮೊರೆ ಹೋಗುವ ಪರಿಸ್ಥಿತಿ ಬಂದಿದೆ. ಅಲ್ಲದೇ ನಮ್ಮ ಜಮೀನುಗಳಿಗೆ ಆರ್ ಟಿ ಸಿ ನೀಡಲು ಮೀನಾಮೇಷ ಎಣಿಸುತ್ತಿದ್ದಾರೆ. ಚುನಾವಣೆ ಬಂದರೆ ಮಾತ್ರ ಮತಕ್ಕಾಗಿ ಗ್ರಾಮಕ್ಕೆ ಬರುವ ಜನಪ್ರತಿನಿಧಿಗಳು ನಂತರ ಇತ್ತ ಸುಳಿಯುವುದಿಲ್ಲ.

ಗ್ರಾಮಕ್ಕೆ ಅಗತ್ಯವಾಗಿರುವ ಮೂಲಭೂತ ಸೌಕರ್ಯಗಳನ್ನು ಕಲ್ಪಿಡಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಆಳುವ ಸರ್ಕಾರಗಳು ಸ್ಪಂದಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರು ಕಿಕ್ಕೇರಿಕಟ್ಟೆ ಗ್ರಾಮಸ್ಥರು, ಮುಂಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಇನ್ನೂ ಅರಣ್ಯದಂಚಿನಲ್ಲಿರುವ ಕಿಕ್ಕೇರಿಕಟ್ಟೆ ಗ್ರಾಮಸ್ಥರು ಮೂಲಭೂತ ಸೌಕರ್ಯಗಳಿಂದ ವಂಚಿತವಾಗುವುದರ ಜೊತೆಗೆ ವನ್ಯ ಜೀವಿಗಳ ಉಪಟಳದಿಂದ ರೋಸಿ‌ ಹೋಗಿದ್ದಾರೆ.

ಪ್ರತಿನಿತ್ಯವೂ ಕಾಡುಪ್ರಾಣಿಗಳ ಹಾವಳಿಯನ್ನು ಎದುರಿಸುತ್ತಿರುವ ಕಿಕ್ಕೇರಿಕಟ್ಟೆ ಗ್ರಾಮಸ್ಥರು ಜೀವ ಭಯದಿಂದಲೇ ಜೀವನ ಸಾಗಿಸುತ್ತಿದ್ದಾರೆ. ಆನೆ, ಹುಲಿ, ಚಿರತೆ, ಕಿರುಬ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳ ದಾಳಿಯಿಂದಾಗಿ ಕಿಕ್ಕೇರಿಕಟ್ಟೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಹಾಗಾಗಿ ಈ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವುದರ ಜೊತೆಗೆ ಕಾಡುಪ್ರಾಣಿಗಳ ಹಾವಳಿ ತಡೆಗೂ ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ ಎನ್ನುವುದು ಗ್ರಾಮಸ್ಥರ ಆಗ್ರಹ.

ನಮ್ಮೂರು ಹುಣಸೂರು ತಾಲ್ಲೂಕಿನ ಅರಣ್ಯದಂಚಿನ ಗ್ರಾಮ. ನಿತ್ಯ ಕಾಡು ಪ್ರಾಣಿಗಳ ಉಪಟಳದ ನಡುವೆಯೇ ಬದುಕಬೇಕು. ಹಲವರು ಪ್ರಾಣಿಗಳ ದಾಳಿಯಿಂದ ತೊಂದರೆ ಅನುಭವಿಸಿದ್ದಾರೆ. ಅರಣ್ಯದಂಚಿನ ಗ್ರಾಮವೆಂಬ ಕಾರಣಕ್ಕೆ ಅಭಿವೃದ್ದಿಯೂ ಸರಿಯಾಗಿ ಆಗುತ್ತಿಲ್ಲ. ನಮ್ಮ ಹಾಲಿ ಶಾಸಕರು, ಹಿಂದಿನ ಶಾಸಕರಿಗೆ ಹಲವಾರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ ಕೆಲಸ ಮಾತ್ರ ಆಗುತ್ತಿಲ್ಲ. ಚುನಾವಣೆ ಬಂದಾಗ ಮತ ಕೇಳಿ ಹೋದವರು ಮತ್ತೆ ನಮ್ಮ ಕಡೆ ಬರುವುದಿಲ್ಲ. ನಮ್ಮ ಬೇಡಿಕೆ ಈಡೇರದೇ ಇದ್ದರೆ ಮತದಾನ ಮಾಡುವುದಿಲ್ಲ ಎಂದು ಈಗಾಗಲೇ ಚುನಾವಣಾಧಿಕಾರಿಗೂ ಮನವಿ ನೀಡಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.

ಹಿಂದಿನ ಬಾರಿ ಚುನಾವಣೆಯಲ್ಲೂ ನಾವು ಆಕ್ರೋಶ ಹೊರ ಹಾಕಿದ್ದೆವು. ಆಗ ರಸ್ತೆ, ನೀರಿನ ಸೌಲಭ್ಯವನ್ನು ಮಾಡಿಕೊಡುವ ಭರವಸೆ ಅಧಿಕಾರಿಗಳಿಂದ ದೊರಕಿತ್ತು. ಆದರೂ ಅದು ಸರಿಯಾಗಿ ಆಗಲಿಲ್ಲ. ನಮ್ಮ ಹಕ್ಕುಗಳಿಗಾಗಿ ನಾವು ಎಷ್ಟು ಅಂತ ಕೇಳಬೇಕು ಎಂದು ಹೇಳಿ ಎಂದು ಗ್ರಾಮಸ್ಥರು ಆಕ್ರೋಶದ ದನಿಯಲ್ಲೇ ಪ್ರಶ್ನಿಸುತ್ತಾರೆ.

(ವರದಿ: ಪಿ.ರಂಗಸ್ವಾಮಿ, ಮೈಸೂರು)

IPL_Entry_Point