Ramanagar news: ಕುಮಾರಸ್ವಾಮಿ ತೋಟದ ಮನೆಯಲ್ಲಿ ಬಾಡೂಟದ ವ್ಯವಸ್ಥೆ ಆರೋಪ, ಶಾಮಿಯಾನ ತೆರವುಗೊಳಿಸಿದ ಆಯೋಗ; ಕಾಂಗ್ರೆಸ್ ವಿರುದ್ಧ ಗರಂ
ಕನ್ನಡ ಸುದ್ದಿ  /  ಕರ್ನಾಟಕ  /  Ramanagar News: ಕುಮಾರಸ್ವಾಮಿ ತೋಟದ ಮನೆಯಲ್ಲಿ ಬಾಡೂಟದ ವ್ಯವಸ್ಥೆ ಆರೋಪ, ಶಾಮಿಯಾನ ತೆರವುಗೊಳಿಸಿದ ಆಯೋಗ; ಕಾಂಗ್ರೆಸ್ ವಿರುದ್ಧ ಗರಂ

Ramanagar news: ಕುಮಾರಸ್ವಾಮಿ ತೋಟದ ಮನೆಯಲ್ಲಿ ಬಾಡೂಟದ ವ್ಯವಸ್ಥೆ ಆರೋಪ, ಶಾಮಿಯಾನ ತೆರವುಗೊಳಿಸಿದ ಆಯೋಗ; ಕಾಂಗ್ರೆಸ್ ವಿರುದ್ಧ ಗರಂ

ಲೋಕಸಭೆ ಚುನಾವಣೆ ಇರುವ ಕಾರಣದಿಂದ ರಾಜಕೀಯ ನಂಟು ಇರುವ ಕಾರ್ಯಕ್ರಮ ಮಾಡಿದರೆ ಚುನಾವಣೆ ಆಯೋಗ ಹದ್ದಿನ ಕಣ್ಣು ಇರಿಸಲಿದೆ. ರಾಮನಗರ ಸಮೀಪದಲ್ಲಿರುವ ಮಾಜಿ ಸಿಎಂ ಎಚ್‌ಡಿಕುಮಾರಸ್ವಾಮಿ ಅವರ ತೋಟದ ಮನೆ ಮೇಲೂ ಅಧಿಕಾರಿಗಳು ಮಾಡಿ ಶಾಮೀಯಾನ ತೆರವುಗೊಳಿಸಿದ್ದಾರೆ.ವರದಿ: ಎಚ್‌.ಮಾರುತಿ, ಬೆಂಗಳೂರು

ಕೇತನಗಾನಹಳ್ಳಿಯಲ್ಲಿ ಹಾಕಿದ್ದ ಶಾಮೀಯಾನ ತೆರವುಗೊಳಿಸಿದ ಅಧಿಕಾರಿಗಳು.
ಕೇತನಗಾನಹಳ್ಳಿಯಲ್ಲಿ ಹಾಕಿದ್ದ ಶಾಮೀಯಾನ ತೆರವುಗೊಳಿಸಿದ ಅಧಿಕಾರಿಗಳು.

ರಾಮನಗರ: ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿರುವ ಜೆಡಿಎಸ್ ವರಿಷ್ಠ, ಮಾಜಿ ಮುಖ್ಯಮಂತ್ರಿ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಅವರ ತೋಟದ ಮನೆಯಲ್ಲಿ ಬಾಡೂಟದ ವ್ಯವಸ್ಥೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಚುನಾವಣಾ ಅಧಿಕಾರಿಗಳ ತಂಡ ಬುಧವಾರ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮಾಗಡಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ, ಕ್ಷಿಪ್ರ ಕಾರ್ಯಪಡೆ ತಂಡ (ಎಫ್‌ಎಸ್‌ಟಿ) ಹಾಗೂ ವಿಡಿಯೊ ಪರಿವೀಕ್ಷಣಾ ತಂಡ ತೋಟಕ್ಕೆ ಭೇಟಿ ನೀಡಿದಾಗ ಅಲ್ಲಿ ಶಾಮಿಯಾನ, 50 ಕುರ್ಚಿ ಹಾಗೂ ಊಟದ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ಊಟಕ್ಕೆ ಅಡುಗೆಯವರು ಬಾಡೂಟ ಸಿದ್ಧಪಡಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ ಪೋಸ್ಟ್‌

ಜೆಡಿಎಸ್ ಪಕ್ಷದ ಹೆಡ್ಡಾಫೀಸ್‌ನಂತಿರುವ ಬಿಡದಿ ತೋಟದ ಮನೆಯಿಂದ ಮದ್ಯ ಹಾಗೂ ಬಾಡೂಟದ ಘಮಲು ಹೊರಬರುತ್ತಿದೆಯಂತೆ ಸೋಲಿನ ಭೀತಿಯಿಂದ ಹೊಸ ತೊಡಕಿನ ಹೆಸರಲ್ಲಿ ಮತದಾರರಿಗೆ, ಕಾರ್ಯಕರ್ತರಿಗೆ ಬಾಡೂಟದ ವ್ಯವಸ್ಥೆ ಮಾಡಿರುವ ಕುರಿತು ಮಾಹಿತಿಗಳಿದ್ದರೂ ಚುನಾವಣಾ ಅಧಿಕಾರಿಗಳಿ ಅವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕೂತಿರುವುದೇಕೆ? ಎಂದು ಕಾಂಗ್ರೆಸ್ ಪಕ್ಷ ಎಕ್ಸ್ ನಲ್ಲಿ ಪ್ರಶ್ನಿಸಿತ್ತು.

ಸೋಲಿನ ಭಯದಲ್ಲಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮದ್ಯ, ಮಾಂಸದ ರುಚಿ ತೋರಿಸಿ ಮತ ಕೇಳಲು ಮುಂದಾಗಿವೆಯೇ? ರಾಮನಗರ ಅಪರ ಜಿಲ್ಲಾ ಚುನಾವಣಾಧಿಕಾರಿಗಳು ಬಾಡೂಟದ ಆಮಿಷವನ್ನು ತಡೆಯದೇ ವಾಮಮಾರ್ಗದ ಚುನಾವಣೆಗೆ ಬೆಂಬಲ ನೀಡುತ್ತಿದ್ದಾರೆಯೇ? ಎಂದು ಕಾಂಗ್ರೆಸ್‌ ಪೋಸ್ಟ್ ಮಾಡಿತ್ತು.

ಆಯೋಗ ಸಿಬ್ಬಂದಿ ದೌಡು

ಈ ಆರೋಪ ಕೇಳಿ ಬಂದ ಬೆನ್ನಲ್ಲೇ ಆಯೋಗ ತಪಾಸಣೆ ನಡೆಸಿದೆ. ಆಯೋಗದ ಅಧಿಕಾರಿಗಳು ತೋಟದ ಮನೆಗೆ ಭೇಟಿ ನೀಡಿದಾಗ ಅಲ್ಲಿ ಕುಮಾರಸ್ವಾಮಿ ಸೇರಿದಂತೆ ಅವರ ಕುಟುಂಬದ ಯಾರೊಬ್ಬರೂ ಇರಲಿಲ್ಲ. ಕೆಲಸ ಮಾಡುವ ಸಿಬ್ಬಂದಿ ಮಾತ್ರ ಇದ್ದರು.

ಹೊಸತೊಡಕು ಪ್ರಯುಕ್ತ ಮನೆಗೆ ಆಗಮಿಸುವ ಅತಿಥಿಗಳು ಮತ್ತು ಸಂಬಂಧಿಕರಿಗೆ ಊಟದ ತಯಾರಿ ನಡೆದಿತ್ತು. ಇದಕ್ಕಾಗಿ ಶಾಮಿಯಾನ, ಕುರ್ಚಿ ಮತ್ತು ಟೇಬಲ್ ಹಾಕಲಾಗಿತ್ತು ಎಂದು ಸ್ಥಳದಲ್ಲಿ ಇದ್ದ ನೌಕರರು ತಿಳಿಸಿದ್ದಾರೆ.

ಅನುಮತಿ ನಿರಾಕರಣೆ

ಆರಂಭದಲ್ಲಿ ಚುನಾವಣಾ ಸಿಬ್ಬಂದಿಗೆ ತೋಟದ ಮನೆ ಪ್ರವೇಶಿಸಲು ಅಲ್ಲಿನ ಸಿಬ್ಬಂದಿ ಅನುಮತಿ ನೀಡಿರಲಿಲ್ಲ. ಹಾಗಾಗಿ, ನಾನೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇನೆ. ಮನೆಯ ಕಂಪೌಂಡ್ ಒಳಗೆ ರಾಜಕೀಯ ಮುಖಂಡರಾಗಲೀ ಅಥವಾ ಕಾರ್ಯಕರ್ತರಾಗಲೀ ಇರಲಿಲ್ಲ. ರಾಜಕೀಯ ಪಕ್ಷದ ಬಾವುಟ, ಚಿಹ್ನೆ ಸೇರಿದಂತೆ ಯಾವುದೇ ವಸ್ತುಗಳು ಕಂಡು ಬರಲಿಲ್ಲ.ಚುನಾವಣಾ ಆಯೋಗದ ಅಧಿಕಾರಿಗಳು ತೋಟಕ್ಕೆ ಭೇಟಿ ನೀಡಿದ್ದರಿಂದ ಇವರ ಮನೆಗೆ ಆಗಮಿಸಿದ ಅನೇಕ ಮುಖಂಡರು ಬರಿಗೈಲಿ ಮರಳಿದರು.

ಆದರೂ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಊಟದ ವ್ಯವಸ್ಥೆಗೆ ಅವಕಾಶವಿಲ್ಲ ಎಂದು ಅಲ್ಲಿ ಇದ್ದ ಕಾರ್ಮಿಕರಿಗೆ ಎಚ್ಚರಿಕೆ ನೀಡಲಾಗಿದೆ. ಶಾಮಿಯಾನ, ಕುರ್ಚಿ ಮತ್ತು ಟೇಬಲ್‌ಗಳನ್ನು ತೆಗೆಸಲಾಗಿದೆ ಎಂದು ಮಾಗಡಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ರಮೇಶ್ ತಿಳಿಸಿದ್ದಾರೆ.

ಆಯೋಗ ಹೇಳಿದ್ದೇನು

ಈ ಎಲ್ಲ ಚಿತ್ರಣವನ್ನು ವಿಡಿಯೊ ಮಾಡಲಾಗಿದೆ. ಒಂದು ವೇಳೆ ರಾಜಕೀಯ ಮುಖಂಡರಿಗೆ ಬಾಡೂಟ ಹಮ್ಮಿಕೊಂಡಿದ್ದರೆ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಆಯೋಗ ತಿಳಿಸಿದೆ.

ಕುಮಾರಸ್ವಾಮಿ ತಿರುಗೇಟು

ಕಾಂಗ್ರೆಸ್ ನ ಆರೋಪಕ್ಕೆ ತಿರುಗೇಟು ನೀಡಿರುವ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ಕಾಂಗ್ರೆಸ್ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸ್ಥಳೀಯ ತಹಶೀಲ್ದಾರ್ ಅವರಿಗೆ ಒತ್ತಡ ಹೇರಿ ತಪಾಸಣೆ ನಡೆಸಲು ಸೂಚಿಸಿದೆ. ನಮ್ಮ ತೋಟದ ಮನೆಯಲ್ಲಿ 120 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಕೆಪಿಸಿಸಿ ಕಚೇರಿ, ಬಿಜೆಪಿಗೆ ಕೇಶವ ಕೃಪ ಹೆಡ್ ಆಫೀಸ್ ಇದ್ದ ಹಾಗೆ. ಹಾಗೆಯೇ ಜೆಡಿಎಸ್ ಗೆ ನಮ್ಮ ತೋಟದ ಮನೆಯೇ ಹೆಡ್ ಆಫೀಸ್. ಏನು ಮಾಡಬೇಕು ಏನು ಮಾಡಬಾರದು ಎಂದು ನಮಗೂ ಅರಿವಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

(ವರದಿ: ಎಚ್. ಮಾರುತಿ, ಬೆಂಗಳೂರು)

Whats_app_banner