ಕನ್ನಡ ಸುದ್ದಿ  /  ಕರ್ನಾಟಕ  /  Karnataka Results2024: ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು, ಬೆಂಗಳೂರಲ್ಲಿ ಟ್ರೆಂಡ್‌ ಹೇಗಿದೆ

Karnataka Results2024: ಕರ್ನಾಟಕದ 28 ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು, ಬೆಂಗಳೂರಲ್ಲಿ ಟ್ರೆಂಡ್‌ ಹೇಗಿದೆ

Karnataka Politics ಲೋಕಸಭೆ ಚುನಾವಣೆ2024 ರಲ್ಲಿ ಯಾವ ಕ್ಷೇತ್ರದಲ್ಲಿ ಯಾರು ವಾತಾವರಣವಿದೆ, ಪೂರಕ ಅವಕಾಶ ಯಾರಿಗಿದೆ. ಇಲ್ಲಿದೆ ಮಾಹಿತಿ.

ಕರ್ನಾಟಕದ ಆರು ಭಾಗಗಳಲ್ಲಿಯೂ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ದೃಷ್ಟಿ ನೆಟ್ಟಿದೆ
ಕರ್ನಾಟಕದ ಆರು ಭಾಗಗಳಲ್ಲಿಯೂ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ದೃಷ್ಟಿ ನೆಟ್ಟಿದೆ

ಬೆಂಗಳೂರು: ಸತತ ಎರಡು ತಿಂಗಳ ಕಾಲ ನಡೆದ ಸುದೀರ್ಘ ಲೋಕಸಭೆ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಕರ್ನಾಟಕದಲ್ಲೂ 28 ಲೋಕಸಭಾ ಕ್ಷೇತ್ರಗಳಲ್ಲಿ ಯಾರು ಗೆಲ್ಲಬಹುದು. ಸೋಲುವವರು ಯಾರು, ಗೆಲುವಿನ ಅಂತರ ಹೇಗಿರಲಿದೆ, ಮೋದಿ ಹವಾ ಕೆಲಸ ಮಾಡಿದೆಯೇ, ಮತದಾರ ಗ್ಯಾರಂಟಿ ಯೋಜನೆ ನೋಡಿಕೊಂಡು ಮತ ನೀಡಿರಬಹುದೇ ಎನ್ನುವ ಹತ್ತಾರು ಪ್ರಶ್ನೆಗಳಿಗೆ ಉತ್ತರ ಸಿಗುವ ಸಮಯ ಇನ್ನೇನು ಬಂದೇ ಬಿಡುತ್ತಿದೆ. ಹಿಂದಿನ ನಾಲ್ಕು ಚುನಾವಣೆಗಳಿಂದಲೂ ಕರ್ನಾಟಕದಲ್ಲಿ ಮುನ್ನಡೆ ಕಾಯ್ದುಕೊಂಡು ಬಂದಿರುವ ಬಿಜೆಪಿ ಈ ಬಾರಿಯೂ ಮುನ್ನಡೆ ಸಾಧಿಸಲಿದೆ ಎನ್ನುವ ಭವಿಷ್ಯವನ್ನು ಮತಗಟ್ಟೆ ಸಮೀಕ್ಷೆಗಳು ನುಡಿದಿವೆ. ಹೀಗಿದ್ದರೂ ಫಲಿತಾಂಶ ಹೇಗಿರಬಹುದು ಎನ್ನುವ ಕುತೂಹಲ ಪ್ರತಿ ಮತದಾರರಿಗೆ ಇದ್ದೇ ಇದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕದಲ್ಲಿ ಕರ್ನಾಟಕದ ಬೆಂಗಳೂರು, ಹಳೆ ಮೈಸೂರು, ಕಲ್ಯಾಣ ಕರ್ನಾಟಕ( ಹೈದ್ರಾಬಾದ್‌ ಕರ್ನಾಟಕ), ಕಿತ್ತೂರು ಕರ್ನಾಟಕ( ಮುಂಬೈ ಕರ್ನಾಟಕ), ಮಧ್ಯ- ಮಲೆನಾಡು ಕರ್ನಾಟಕ ಹಾಗೂ ಕರಾವಳಿ ಕರ್ನಾಟಕ ಭಾಗಗಳೆಂದು ಚುನಾವಣೆ ಲೆಕ್ಕಾಚಾರದಲ್ಲಿ ನೋಡಲಾಗುತ್ತದೆ. ಈ ಬಾರಿಯೂ ಇದೇ ನೆಲೆಯಲ್ಲಿ ಯಾವ ಭಾಗದಲ್ಲಿ ಫಲಿತಾಂಶ ಏನಾಗಿರಬಹುದು ಎನ್ನುವ ಕುತೂಹಲವಿದೆ.

ಬೆಂಗಳೂರಿನಲ್ಲಿ ಹೇಗೆ

ಮುಖ್ಯವಾಗಿ ಬೆಂಗಳೂರು ನಗರ ಕೇಂದ್ರಿತವಾಗಿ ನಾಲ್ಕು ಕ್ಷೇತ್ರಗಳಿವೆ. ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಿವೆ. ಬೆಂಗಳೂರು ನಗರದ ಮೂರು ಕ್ಷೇತ್ರಗಳೂ ಕಳೆದ ನಾಲ್ಕು ಚುನಾವಣೆಗಳಿಂದಲೂ ಬಿಜೆಪಿಯ ಭದ್ರಕೋಟೆಯೇ. ಅದರಲ್ಲೂ ದಕ್ಷಿಣದಲ್ಲಿ 1991ರಿಂದ ಬಿಜೆಪಿ ಗೆಲ್ಲುತ್ತಲೇ ಬರುತ್ತಿದೆ. ಉತ್ತರದಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಬದಲಿಸಿದರೂ ಮತದಾರ ಪಕ್ಷವನ್ನು ಮಾತ್ರ ಬದಲಿಸಿಲ್ಲ. ಕೇಂದ್ರದಲ್ಲೂ ಕೂಡ ಅಭ್ಯರ್ಥಿ ಬದಲಾದರೂ ಬಿಜೆಪಿ ಮಾತ್ರ ಗೆಲ್ಲುತ್ತಲೇ ಇದೆ. ಈ ಬಾರಿ ಉತ್ತರದಲ್ಲಿ ಮಾಜಿ ಸಿಎಂ ಸದಾನಂದಗೌಡರ ಬದಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಣಕ್ಕಿಳಿದಿದ್ದಾರೆ. ಈ ಬಾರಿ ಮೂರು ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆಯೇ ತುರುಸಿನ ಸ್ಪರ್ಧೆ ಏರ್ಪಟ್ಟರೂ ಬಿಜೆಪಿ ಪರವಾಗಿಯೇ ಫಲಿತಾಂಶ ಬರಬಹುದು ಎನ್ನುವ ವಾತಾವರಣವಿದೆ.

ಹಿಂದೆ ಕನಕಪುರ ಕ್ಷೇತ್ರವಾಗಿ ಈಗ ಬೆಂಗಳೂರು ಗ್ರಾಮೀಣ ಕ್ಷೇತ್ರ ಮೊದಲಿನಿಂದಲೂ ಕಾಂಗ್ರೆಸ್‌ ಭದ್ರಕೋಟೆಯೇ. ಇಲ್ಲಿ ಒಮ್ಮೆ ದೇವೇಗೌಡರು ಗೆದ್ದಿದ್ದು ಬಿಟ್ಟರೆ ಬಹುತೇಕ ಕಾಂಗ್ರೆಸ್‌ನವರೇ ಆರಿಸಿ ಬಂದಿದ್ದಾರೆ. ಈಗ ಅದು ಡಿಕೆ ಸಹೋದರರ ತೆಕ್ಕೆಯಲ್ಲಿದೆ. ಈ ಬಾರಿ ದೇವೇಗೌಡರ ಅಳಿಯ, ಖ್ಯಾತ ವೈದ್ಯ ಡಾ.ಮಂಜುನಾಥ್‌ ಅವರಿಗೆ ಬಿಜೆಪಿ ಟಿಕೆಟ್‌ ನೀಡಿ ತುರುಸಿನ ಸ್ಪರ್ಧೆಗೆ ದಾರಿ ಮಾಡಿಕೊಟ್ಟಿದೆ. ಇಲ್ಲಿನ ಫಲಿತಾಂಶವೂ ಕುತೂಹಲಕಾರಿಯೇ ಆಗರಲಿದ್ದು, ಯಾರೇ ಗೆದ್ದರೂ ಕಡಿಮೆ ಅಂತರದಲ್ಲಿ ಇರಲಿದೆ

ಹಳೆ ಮೈಸೂರಲ್ಲಿ ಸಮಬಲ

ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗಿಂತ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಡುವೆ ನೇರ ಹಣಾಹಣಿ. ಕಳೆದ ಬಾರಿ ಬಿಜೆಪಿ ಹಾಸನ, ಬೆಂಗಳೂರು ಗ್ರಾಮಾಂತರ ಬಿಟ್ಟು ಎಲ್ಲ ಕಡೆ ಗೆದ್ದಿತ್ತು. ಈ ಬಾರಿ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡಿರುವುದು ಬಿಜೆಪಿಗೆ ಪೂರಕ ಎನ್ನುವಂತಿದೆ. ಮೈಸೂರುನಲ್ಲಿ ಬಿಜೆಪಿ, ಮಂಡ್ಯದಲ್ಲಿ ಜೆಡಿಎಸ್‌ ಹಾಗೂ ಚಾಮರಾಜನಗರದಲ್ಲಿ ಕಾಂಗ್ರೆಸ್‌ ಮುನ್ನಡೆ ಎನ್ನುವ ವಾತಾವರಣವಂತೂ ಇದೆ. ಹಾಸನದಲ್ಲಿ ಪ್ರಜ್ವಲ್‌ ರೇವಣ್ಣ ಗೆಲ್ಲಲೂ ಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿದ್ದರೂ ಫಲಿತಾಂಶ ಏರುಪೇರು ಆಗಲೂ ಬಹುದು ಎನ್ನುವ ಚರ್ಚೆಗಳೂ ಇವೆ. ಕೋಲಾರದಲ್ಲಿ ಕಾಂಗ್ರೆಸ್‌ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರೆ ಗೆಲುವು, ಇಲ್ಲದೇ ಇದ್ದರೆ ಜೆಡಿಎಸ್‌ನದ್ದೇ ನಾಗಾಲೋಟ ಎನ್ನುವ ಮಾತುಗಳೂ ಇವೆ. ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಟಿಕೆಟ್‌ ಹಂಚಿಕೆ ವಿಚಾರದ ಗೊಂದಲ ಫಲಿತಾಂಶದ ಮೇಲೆ ಏರು ಪೇರು ಉಂಟು ಮಾಡಬಹುದು ಎನ್ನುವ ಚರ್ಚೆಗಳಿವೆ. ತುಮಕೂರಿನಲ್ಲಿ ಕಾಂಗ್ರೆಸ್‌ ಒಗ್ಗಟ್ಟಿನ ಮುಂದೆ ಬಿಜೆಪಿ ಒಳೇಟಿನ ರಾಜಕೀಯದಿಂದ ಹಿನ್ನಡೆಯಾಗಬಹುದು ಎನ್ನುವ ಲೆಕ್ಕಾಚಾರಗಳಿವೆ. ಹತ್ತು ವರ್ಷದ ಹಿಂದೆ ಬಂದಂತ ಫಲಿತಾಂಶ ಇಲ್ಲಿ ಬರಬಹುದು. ಏಳರಲ್ಲಿ ಮೂರು ಪಕ್ಷಗಳು ಸಮಾನವಾಗಿ ಹಂಚಿಕೊಂಡು ಒಂದು ಸ್ಥಾನದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೋ ಕಾದು ನೋಡಬೇಕು.

ಕಲ್ಯಾಣ ಕರ್ನಾಟಕದಲ್ಲಿ ಕೈ

ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರೇ ಸೋತಿದ್ದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಈ ಬಾರಿ ಕಾಂಗ್ರೆಸ್‌ ಸ್ಥಿತಿ ಸುಧಾರಿಸಿದೆ. ಬಿಜೆಪಿಯಲ್ಲಿ ಮೊದಲಿನಂತಹ ಒಗ್ಗಟ್ಟು, ಉತ್ಸಾಹವಿಲ್ಲ. ಈ ಕಾರಣದಿಂದ ಈ ಭಾಗದ ಬೀದರ್‌, ಕಲಬುರಗಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಫಲಿತಾಂಶ ವ್ಯತ್ಯಾಸವಾಗಬಹುದು. ಕೊಪ್ಪಳ, ಕಲಬುರಗಿ, ರಾಯಚೂರು ಕಾಂಗ್ರೆಸ್‌ಗೆ ಪೂರಕ ವಾತಾವರಣವಿದೆ ಎನ್ನುವ ಅಭಿಪ್ರಾಯಗಳು ಕೇಳಿ ಬಂದಿವೆ

ಕಿತ್ತೂರು ಕರ್ನಾಟದಲ್ಲಿ ಕಮಲವೇ ಬಲ

ಇನ್ನು ಕಿತ್ತೂರು ಕರ್ನಾಟಕದ ಆರು ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆಯೇ ನೇರ ಸ್ಪರ್ಧೆಯಿದೆ. ಚಿಕ್ಕೋಡಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ, ಧಾರವಾಡ ಕ್ಷೇತ್ರಗಳಲ್ಲಿ ಬಿಜೆಪಿಗೆ ಉತ್ತಮ ವಾತಾವರಣವಿರುವ ಮಾತುಗಳಿವೆ. ಬೆಳಗಾವಿ ಹಾಗೂ ಹಾವೇರಿಯಲ್ಲಿ ಮಾಜಿ ಸಿಎಂಗಳಾದ ಜಗದೀಶ್‌ ಶೆಟ್ಟರ್‌, ಬಸವರಾಜ ಬೊಮ್ಮಾಯಿ, ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಜಯಪುರ, ಬಾಗಲಕೋಟೆಯಲ್ಲಿ ಹಳೆ ಹುಲಿಗಳಾದ ರಮೇಶ ಜಿಗಜಿಣಗಿ, ಪಿ.ಸಿ.ಗದ್ದಿಗೌಡರ, ಚಿಕ್ಕೋಡಿಯಲ್ಲಿ ಸಹಕಾರಿ ಧುರೀಣ ಅಣ್ಣಾಸಾಹೇಬ್‌ ಜೊಲ್ಲೆ ಸ್ಪರ್ಧಿಸಿದ್ದಾರೆ. ಹಿಂದಿನ ಹಲವು ಚುನಾವಣೆಗಳಿಂದ ಚಿಕ್ಕೋಡಿ ಹೊರತುಪಡಿಸಿದರೆ ಎಲ್ಲಡೆ ಬಿಜೆಪಿಯೇ ಗೆಲ್ಲುತ್ತಾ ಬಂದಿದೆ. ಈ ಬಾರಿಯ ಫಲಿತಾಂಶವೂ ಹಿಂದಿನದ್ದೇ ಆಗಬಹುದು ಎನ್ನುವ ಲೆಕ್ಕಾಚಾರಗಳಿವೆ.

ಮಧ್ಯ ಮಲೆನಾಡು ಕರ್ನಾಟಕ

ಕರ್ನಾಟಕದ ಮಧ್ಯ ಹಾಗೂ ಮಲೆನಾಡು ಭಾಗದಲ್ಲೂ ಬಿಜೆಪಿಯೇ ಕಳೆದ ಚುನಾವಣೆಯಲ್ಲೂ ಗೆದ್ದಿತ್ತು.ಶಿವಮೊಗ್ಗದಲ್ಲಿ ಇಬ್ಬರು ಮಾಜಿ ಸಿಎಂಗಳ ಮಕ್ಕಳ ಸ್ಪರ್ಧೆ ತುರುಸಿನಿಂದ ನಡೆದಿದೆ. ಇಲ್ಲಿ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಬಂಡೆದ್ದು ಕಣಕ್ಕಿಳಿದಿದ್ದರು. ಇಲ್ಲಿ ಬಿಜೆಪಿ ರಾಘವೇಂದ್ರ ಅವರಿಗೆ ವಾತಾವರಣ ಚೆನ್ನಾಗಿದೆ. ಈಶ್ವರಪ್ಪ ಪ್ರಭಾವದಿಂದ ಕೊಂಚ ಮತ ಕಡಿಮೆಯಾಗಬಹುದು ಎನ್ನುವ ಮಾತುಗಳಿವೆ. ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಬಿಜೆಪಿ ಟಿಕೆಟ್‌ ಬಂಡಾಯ ಆರಂಭದಲ್ಲಿದ್ದರೂ ನಂತರ ಶಮನಗೊಂಡಿತ್ತು. ದಾವಣಗೆರೆಯಲ್ಲಿ ಶಿಕ್ಷಣ ಧಣಿಗಳ ಪತ್ನಿಯರು ಕಣದಲ್ಲಿದ್ದಾರೆ. ಕಾಂಗ್ರೆಸ್‌ ಗೆ ವಿನಯಕುಮಾರ್‌ ಬಂಡಾಯವಿದೆ. ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತಲೇ ಬಂದಿದ್ದು, ಈ ಬಾರಿಯೂ ಉಳಿಸಿಕೊಳ್ಳಬಹುದು ಎನ್ನುವ ಮಾತುಗಳಿವೆ. ಚಿತ್ರದುರ್ಗದಲ್ಲಿ ಒಮ್ಮೆ ಕಾಂಗ್ರೆಸ್‌ ಮತ್ತೊಮ್ಮೆ ಬಿಜೆಪಿ ಎನ್ನುವ ಸನ್ನಿವೇಶವಿದೆ. ಇದರಿಂದ ಇಲ್ಲಿ ಫಲಿತಾಂಶ ಅದಲು ಬದಲಾದರೂ ಅಚ್ಚರಿಪಡಬೇಕಿಲ್ಲ.

ಕರಾವಳಿ ಹೇಗೆ

ಕರ್ನಾಟಕದ ಕರಾವಳಿ ಭಾಗದ ಮೂರು ಕ್ಷೇತ್ರಗಳು ಬಿಜೆಪಿ ಭದ್ರಕೋಟೆಗಳಾಗಿ ಮಾರ್ಪಟ್ಟಿವೆ. ದಕ್ಷಿಣ ಕನ್ನಡ, ಉಡುಪಿ- ಚಿಕ್ಕಮಗಳೂರು ಹಾಗೂ ಕೆನರಾ ಕ್ಷೇತ್ರದಲ್ಲಿಯೂ ಬಿಜೆಪಿ ಹಾಗೂ ಕಾಂಗ್ರೆನ್‌ ಹಣಾಹಣಿ. ಮೂರು ಕ್ಷೇತ್ರದಲ್ಲೂ ಹಾಲಿ ಸದಸ್ಯರನ್ನು ಬಿಜೆಪಿ ಬದಲಿಸಿ ಎರಡು ಕಡೆ ಹಿರಿಯರಿಗೆ, ಮತ್ತೊಂದು ಕಡೆ ಹೊಸಬರಿಗೆ ನೀಡಿದೆ. ಈ ಪ್ರಯೋಗದ ನಡುವೆಯೂ ಕರಾವಳಿ ಕೋಟೆಯನ್ನು ಈ ಬಾರಿಯೂ ಕಾಂಗ್ರೆಸ್‌ ಅಲುಗಾಡಿಸುವುದು ಕಷ್ಟ ಎನ್ನುವ ಮಾತಿದೆ. ಸಮೀಕ್ಷೆಗಳು, ಲೆಕ್ಕಾಚಾರಗಳು ಏನೇ ಇದ್ದರೂ ಫಲಿತಾಂಶ ಅಂತಿಮ ಎನ್ನುವುದಂತೂ ಸತ್ಯ.

ಟಿ20 ವರ್ಲ್ಡ್‌ಕಪ್ 2024