RahulGandhi in Mandya: ಮಂಡ್ಯಕ್ಕೆ ಆಗಮಿಸಿದ ರಾಹುಲ್‌ ಗಾಂಧಿ, ಪ್ರಚಾರಕ್ಕೆ ಚಾಲನೆ, ಎಚ್‌ಡಿಕೆ ವಿರುದ್ದ ಕಾಂಗ್ರೆಸ್‌ ಠಕ್ಕರ್‌
ಕನ್ನಡ ಸುದ್ದಿ  /  ಕರ್ನಾಟಕ  /  Rahulgandhi In Mandya: ಮಂಡ್ಯಕ್ಕೆ ಆಗಮಿಸಿದ ರಾಹುಲ್‌ ಗಾಂಧಿ, ಪ್ರಚಾರಕ್ಕೆ ಚಾಲನೆ, ಎಚ್‌ಡಿಕೆ ವಿರುದ್ದ ಕಾಂಗ್ರೆಸ್‌ ಠಕ್ಕರ್‌

RahulGandhi in Mandya: ಮಂಡ್ಯಕ್ಕೆ ಆಗಮಿಸಿದ ರಾಹುಲ್‌ ಗಾಂಧಿ, ಪ್ರಚಾರಕ್ಕೆ ಚಾಲನೆ, ಎಚ್‌ಡಿಕೆ ವಿರುದ್ದ ಕಾಂಗ್ರೆಸ್‌ ಠಕ್ಕರ್‌

Karnataka politics ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಕಾಂಗ್ರೆಸ್‌ ಪ್ರಚಾರಕ್ಕೆ ರಾಹುಲ್‌ ಗಾಂಧಿ ಮಂಡ್ಯದಲ್ಲಿ ಚಾಲನೆ ನೀಡಿದರು.

ಮಂಡ್ಯಕ್ಕೆ ಹೆಲಿಕಾಪ್ಟರ್‌ ನಲ್ಲಿ ಸಿಎಂ ಜತೆಗೆ ಬಂದಿಳಿದ ರಾಹುಲ್‌ ಗಾಂಧಿ,
ಮಂಡ್ಯಕ್ಕೆ ಹೆಲಿಕಾಪ್ಟರ್‌ ನಲ್ಲಿ ಸಿಎಂ ಜತೆಗೆ ಬಂದಿಳಿದ ರಾಹುಲ್‌ ಗಾಂಧಿ,

ಮಂಡ್ಯ: ಮೂರು ದಿನದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿನಲ್ಲಿ ಬೃಹತ್‌ ಸಮಾವೇಶ ನಡೆಸಿ ಕಾಂಗ್ರೆಸ್‌ ವಿರುದ್ದ ಟೀಕಾ ಪ್ರಹಾರ ನಡೆಸಿ ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಪ್ರಚಾರ ಆರಂಭಿಸಿದ ಬೆನ್ನೆಲ್ಲೆ ಸಕ್ಕರೆ ನಾಡು ಮಂಡ್ಯದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಚಾರ ನಡೆಸಿದರು. ಸಕ್ಕರೆಯ ನಾಡು ಮಂಡ್ಯಕ್ಕೆ ಬುಧವಾರ ಮಧ್ಯಾಹ್ನ ಆಗಮಿಸಿದ ರಾಹುಲ್‌ ಗಾಂಧಿ ಅವರನ್ನು ನಾಯಕರು ಹಾಗೂ ಕಾರ್ಯಕರ್ತರು ಭರ್ಜರಿಯಾಗಿ ಸ್ವಾಗತಿಸಿದರು. ಹಳೆ ಮೈಸೂರು ಭಾಗದಿಂದ ಆಗಮಿಸಿದ್ದ ಸಹಸ್ರಾರು ಕಾರ್ಯಕರ್ತರತ್ತ ಕೈ ಬೀಸಿದ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ನ ಚುನಾವಣಾ ಪ್ರಚಾರಕ್ಕೆ ಬಲ ತುಂಬಿದರು.

ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬೆಳಿಗ್ಗೆ ಪ್ರಚಾರ ಕೈಗೊಂಡು ವಿಶೇಷ ವಿಮಾನದಲ್ಲಿ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರನ್ನು ಸಿಎಂ ಸಿದ್ದರಾಮಯ್ಯ ಹಾಗೂ ಇತರೆ ನಾಯಕರು ಬರ ಮಾಡಿಕೊಂಡರು. ಅಲ್ಲಿಂದ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಮಂಡ್ಯಕ್ಕೆ ಹೆಲಿಕಾಪ್ಟರ್‌ನಲ್ಲಿ ರಾಹುಲ್‌ ಗಾಂಧಿ ಬಂದರು. ಮಂಡ್ಯ ವಿಶ್ವವಿದ್ಯಾನಿಲಯ ಆವರಣದಲ್ಲಿ ರೂಪಿಸಿದ್ದ ಬೃಹತ್‌ ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ನಾಯಕರೊಂದಿಗೆ ರಾಹುಲ್‌ ಗಾಂಧಿ ಪ್ರಚಾರ ಕೈಗೊಂಡರು.

ಈ ಹಿಂದೆ ಹಲವಾರು ಬಾರಿ ಚುನಾವಣೆ ನಡೆದಾಗಲೂ ರಾಹುಲ್‌ ಗಾಂಧಿ ಮಂಡ್ಯದಲ್ಲಿ ಪ್ರಚಾರ ಕೈಗೊಂಡಿದ್ಧಾರೆ. ನಟಿ ರಮ್ಯಾ ಅವರು ಇಲ್ಲಿಂದ ಸ್ಪರ್ಧೆ ಮಾಡಿದ್ದಾಗ ಸೋನಿಯಾಗಾಂಧಿ ಹಾಗೂ ರಾಹುಲ್‌ ಗಾಂಧಿ ಪ್ರಚಾರ ಕೈಗೊಂಡಿದ್ದರು. ಈ ಬಾರಿ ಕರ್ನಾಟಕದಲ್ಲಿ ರಾಹುಲ್‌ ಗಾಂಧಿ ಪ್ರಚಾರ ಮಂಡ್ಯದಿಂದಲೇ ಆರಂಭವಾಗಿದೆ.

ಮಾಜಿ ಸಿಎಂ ಎಚ್‌ಡಿಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸಿರುವ ಕಾರಣಕ್ಕೆ ಈ ಕ್ಷೇತ್ರ ಮಹತ್ವ ಪಡೆದುಕೊಂಡಿದೆ. ಕಳೆದ ಬಾರಿ ಇಲ್ಲಿ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಸುಮಲತಾ ಅಂಬರೀಶ್‌ ಪಕ್ಷೇತರರಾಗಿ ಕಣಕ್ಕಿಳಿದು ಗೆದ್ದಿದ್ದರು. ಈ ಬಾರಿ ಸುಮಲತಾ ಅವರು ಸ್ಪರ್ಧಿಸದೇ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಬೆಂಬಲಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೂ ಮಂಡ್ಯ ಚುನಾವಣೆ ಮಹತ್ವದ್ದು. ಈಗಾಗಲೇ ಡಿ.ಕೆ.ಶಿವಕುಮಾರ್‌ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ನಡುವೆ ಒಕ್ಕಲಿಗ ನಾಯಕತ್ವಕ್ಕೆ ಪ್ರಬಲ ಪೈಪೋಟಿಯೇ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿನ ಫಲಿತಾಂಶವನ್ನೇ ಈ ಬಾರಿಯೂ ಮಂಡ್ಯದಲ್ಲಿ ಪಡೆದು ತಮ್ಮ ಶಕ್ತಿ ವೃದ್ದಿಸಿಕೊಳ್ಳಲು ಡಿ.ಕೆ.ಶಿವಕುಮಾರ್‌ ಬಯಸಿದ್ದಾರೆ. ಈ ಕಾರಣದಿಂದಲೇ ರಾಹುಲ್‌ ಗಾಂಧಿ ಅವರು ಕರ್ನಾಟಕದ ಮೈತ್ರಿ ಕೂಟಕ್ಕೆ ಉತ್ತರ ನೀಡಲು ಮಂಡ್ಯದಿಂದಲೇ ಪ್ರಚಾರ ಆರಂಭಿಸಿದ್ದಾರೆ ಎನ್ನುವುದು ಕಾಂಗ್ರೆಸ್ ನಾಯಕರ ಅಭಿಪ್ರಾಯ.

ಬೃಹತ್‌ ಸಮಾವೇಶದಲ್ಲಿ ಮೈಸೂರು- ಕೊಡಗು, ಮಂಡ್ಯ, ಚಾಮರಾಜನಗರ ಹಾಗೂ ಹಾಸನ ಅಭ್ಯರ್ಥಿ ಪರವಾಗಿ ರಾಹುಲ್‌ ಗಾಂಧಿ ಪ್ರಚಾರ ನಡೆಸಿದರು. ವಿಶೇಷವಾಗಿ ಒಕ್ಕಲಿಗರ ರಾಜಕೀಯ ಕಣವಾದ ಮಂಡ್ಯದಲ್ಲಿ ಈ ಬಾರಿ ಮಾಜಿ ಸಿಎಂ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮಂಡ್ಯದಿಂದ ಕಣಕ್ಕಿಳಿದಿರುವುದರಿಂದ ರಾಹುಲ್‌ ಗಾಂಧಿ ಸಮಾವೇಶವೂ ಮಹತ್ವ ಪಡೆದುಕೊಂಡಿದೆ. ಮಂಡ್ಯ, ಮೈಸೂರು ಭಾಗದಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿದ್ದರು. ಮದ್ದೂರು, ಮಳವಳ್ಳಿ, ಕೆಆರ್‌ಪೇಟೆ, ಶ್ರೀರಂಗಪಟ್ಟಣ, ಮಂಡ್ಯ, ಪಾಂಡವಪುರ ತಾಲ್ಲೂಕಿನಿಂದ ಕಾರ್ಯಕರ್ತರನ್ನು ಕರೆ ತರಲು ಬಸ್‌ ವ್ಯವಸ್ಥೆ ಮಾಡಲಾಗಿದೆ.

ಸಚಿವ ಎನ್‌.ಚಲುವರಾಯಸ್ವಾಮಿ, ಶಾಸಕರಾದ ನರೇಂದ್ರಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್‌, ಡಿ.ರವಿಶಂಕರ್‌, ಕದಲೂರು ಉದಯ್, ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ( ಸ್ಟಾರ್‌ ಚಂದ್ರು)ಮತ್ತಿತರರು ವೇದಿಕೆಯಲ್ಲಿದ್ದರು.

Whats_app_banner