Belagavi Politics: ಬೀಗರಿಗೆ ಟಿಕೆಟ್ ತಪ್ಪಿಸಿದ ಶೆಟ್ಟರ್ ಎಂದ ಲಕ್ಷ್ಮಿ, ಹಿರಿಯರ ಸಚಿವ ಸ್ಥಾನ ಕಿತ್ತುಕೊಂಡ್ರಿ, ತಿರುಗೇಟು ಕೊಟ್ಟ ಮಂಗಲಾ
ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನೀಡಿದ್ದರ ವಿಚಾರವಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರ ಹೇಳಿಕೆಗೆ ಸಂಸದೆ ಮಂಗಲಾ ಅಂಗಡಿ ತಿರುಗೇಟು ನೀಡಿದ್ದಾರೆ.
ಬೆಳಗಾವಿ: ಲೋಕಸಭೆ ಚುನಾವಣೆಯ ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಾತಿನ ಸಮರ ಜೋರಾಗಿದೆ. ಅದರಲ್ಲೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಬೆಳಗಾವಿಯಲ್ಲಿ ಬೀಗರಿಗೆ ಟಿಕೆಟ್ ತಪ್ಪಿಸಿದರು ಎಂದು ಟಾಂಗ್ ಕೊಟ್ಟರೆ, ಬೆಳಗಾವಿ ರಾಜಕಾರಣದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರನ್ನು ಬಿಟ್ಟು ತಾವು ಸಚಿವ ಸ್ಥಾನ ಪಡೆದುಕೊಂಡಿದ್ದು ಹೇಗೆ ಎಂದು ಶೆಟ್ಟರ್ ಅವರ ಬೀಗರೂ ಆಗಿರುವ ಸಂಸದೆ ಮಂಗಲಾ ಅಂಗಡಿ ತಿರುಗೇಟು ನೀಡಿದ್ದಾರೆ. ಇಬ್ಬರ ನಡುವೆ ರಾಜಕೀಯ ಮಾತಿರ ಏಟು ಎದಿರೇಟು ಜೋರಾಗಿಯೇ ನಡೆದಿದೆ. ಅದರ ವಿವರ ಇಲ್ಲಿದೆ.
ಶೆಟ್ಟರ್‌ಗೆ ಲಕ್ಷ್ಮಿ ಟಾಂಗ್
ಹುಬ್ಬಳ್ಳಿ ಧಾರವಾಡ ಜನರಿಂದ ತಿರಸ್ಕರಿಸಲ್ಪಟ್ಟ ವ್ಯಕ್ತಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬೆಳಗಾವಿಯಲ್ಲಿ ಸಲ್ಲಲು ಹೇಗೆ ಸಾಧ್ಯ. ಸ್ವತಃ ಬೀಗರಿಗೆ ಟಿಕೆಟ್ ತಪ್ಪಿಸಿ ತಾವೇ ಅಭ್ಯರ್ಥಿಯಾಗುವ ಮೂಲಕ ಸ್ವಾರ್ಥ ರಾಜಕಾರಣಿ ಎಂದು ನಿರೂಪಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿ ಅಭ್ಯರ್ಥಿ ವಿರುದ್ಧ ಕಿಡಿ ಕಾರಿದರು.
ಲೋಕಸಭೆ ಚುನಾವಣೆಯ ಪ್ರಚಾರಾರ್ಥ ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾರಿಹಾಳ ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸತತವಾಗಿ ಆರು ಬಾರಿ ಆರಿಸಿದ ಹುಬ್ಬಳ್ಳಿ ಧಾರವಾಡ ಜನತೆಯನ್ನು ಮರೆತ ಶೆಟ್ಟರ್ ಅವರಿಂದ ಬೆಳಗಾವಿ ಜನತೆ ಅಭಿವೃದ್ಧಿ ನಿರೀಕ್ಷಿಸುವುದು ಅಸಾಧ್ಯ ಎಂದು ಹೇಳಿದರು. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ ನಂತ ಮಹನಿಯರು ಹುಟ್ಟಿ ಬೆಳೆದ ಜಿಲ್ಲೆಗೆ ಇಂಥ ನಾಯಕರು ಬೇಡ ಎಂದು ಹೇಳಿದರು.
ಜಗದೀಶ್ ಶೆಟ್ಟರ್ ತಮ್ಮ 32 ವಯಸ್ಸಿಗೆ ಮೊದಲ ಬಾರಿಗೆ ಶಾಸಕರಾಗಿದ್ದರು. ಅವರಿಗೆ ಬಿಜೆಪಿ ಅಂಥ ಅವಕಾಶಗಳನ್ನು ನೀಡಿದ್ದಕ್ಕೆ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರಾದರು. ಅವರು ಯುವಕರಾಗಿದ್ದ ಸಿಕ್ಕ ಅವಕಾಶದಿಂದಲೇ ದೊಡ್ಡ ನಾಯಕರೆನಿಸಿಕೊಂಡರು. ನನ್ನ ಮಗನಿಗೆ ಟಿಕೆಟ್ ನೀಡಿದ್ದಕ್ಕೆ ಇನ್ನೂ ಯುವಕ ಎಂದು ಹೇಳಲಾಗುತ್ತಿದೆ. ಯುವಕರಿಗೆ ಅವಕಾಶ ನೀಡೋದು ತಪ್ಪೆ ಎಂದು ಪ್ರಶ್ನಿಸಿದರು.
ಬಕ್ರಾ ಮಾಡೋಕೆ ಬಂದಿದ್ದಾರಾ ಶೆಟ್ಟರ್
ಕೋವಿಡ್ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಗೆ ಅಲೋಟ್ ಆಗಿದ್ದ ಆಕ್ಸಿ ಜನ್ ನ್ನು ಹುಬ್ಬಳ್ಳಿ - ಧಾರವಾಡಕ್ಕೆ ತೆಗೆದುಕೊಂಡು ಹೋಗಿ ಇಲ್ಲಿಯ ಜನರಿಗೆ ಅನ್ಯಾಯ ಮಾಡಿರುವ ಜಗದೀಶ್ ಶೆಟ್ಟರ್ ಕೊಡುಗೆ ಏನಿದೆ ಬೆಳಗಾವಿ ಜಿಲ್ಲೆಗೆ? ಈಗ ಇಲ್ಲಿಗೆ ಬಂದು ಕರ್ಮ ಭೂಮಿ ಕರ್ಮ ಭೂಮಿ ಎನ್ನುತ್ತಿದ್ದಾರೆ. ನಾವೇನು ಹುಚ್ಚರಾ? ಬೆಳಗಾವಿ ಜಿಲ್ಲೆಯ ಜನರನ್ನು ಬಕ್ರಾ ಮಾಡಲು ಬಂದಿದ್ದೀರಾ? ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಖಾರವಾಗಿ ಪ್ರಶ್ನಿಸಿದ್ದಾರೆ.
ಗೋಕಾಕದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದ ಹೆಬ್ಬಾಳ್ಕರ್,6 ಬಾರಿ ಹುಬ್ಬಳ್ಳಿ ಜನರು ಅವರನ್ನು ಆಯ್ಕೆ ಮಾಡಿ ಕಳುಹಿಸಿದ್ದರು. ವಿರೋಧ ಪಕ್ಷದ ನಾಯಕರಾದರು, ಮಂತ್ರಿಯಾದರು, ಮುಖ್ಯಮಂತ್ರಿಯಾದರು, ಬಿಜೆಪಿ ಅಧ್ಯಕ್ಷರಾದರು. ಎಲ್ಲವನ್ನೂ ಅನುಭವಿಸಿದ್ದಂತವರನ್ನು ಹುಬ್ಬಳ್ಳಿ- ಧಾರವಾಡ ಜನರು ಹೊರಗೆಹಾಕಿದ್ದಾರೆ. ಈಗ ಇಲ್ಲಿಗೆ ಬಂದು ಕರ್ಮ ಭೂಮಿ ಕರ್ಮ ಭೂಮಿ ಎನ್ನಲು ಏನಿದೆ ಬೆಳಗಾವಿಗೆ ನಿಮ್ಮ ಕೊಡುಗೆ? ಏನಾದರೂ ಕೊಡುಗೆ ಇದೆಯಾ ನಾಚಿಕೆಯಾಗಬೇಕು ನಿಮಗೆ ಎಂದು ಹೆಬ್ಬಾಳಕರ್ ಕಿಡಿಕಾರಿದರು.
ಗೋ ಬ್ಯಾಕ್ ಶೆಟ್ಟರ್ ಎನ್ನುವುದು ಅವರ ಪಕ್ಷದ ಕಾರ್ಯಕರ್ತರೇ ಮಾಡುತ್ತಿರುವ ಅಭಿಯಾನ, ಅವರ ಪಕ್ಷದ ಕಾರ್ಯಕರ್ತರ ಸ್ವಾಭಿಮಾನಕ್ಕೂ ಧಕ್ಕೆಯಾಗಿದೆ. ಮೋದಿಯವರು ಎಲ್ಲೋ ಹೋಗಿ ಚುನಾವಣೆಗೆ ನಿಂತಿದ್ದಾರೆ ಎಂದು ತಮ್ಮ ಬೆಳಗಾವಿ ಸ್ಪರ್ಧೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇವರೇನು ಮೋದಿಯಷ್ಟು ದೊಡ್ಡವರಾ? ನಾಚಿಕೆಯಾಗಬೇಕು ಇವರಿಗೆ ಎಂದು ಜರಿದರು.
ಹಿರಿಯರನ್ನು ಹಿಂದಿಕ್ಕಿದ್ದು ಯಾರು, ಮಂಗಲಾ ಅಂಗಡಿ ತಿರುಗೇಟು
ಜಿಲ್ಲೆಯ ಹಿರಿಯ ರಾಜಕಾರಣಿಗಳನ್ನು ಹಿಂದಕ್ಕೆ ತಳ್ಳಿ, ಅವರಿಗೆ ಸಚಿವ ಸ್ಥಾನ ವಂಚನೆ ಮಾಡಿ ತಾವೇ ಸಚಿವೆ ಆದವರು ಲಕ್ಷ್ಮಿ ಹೆಬ್ಬಾಳಕರ. ತಮ್ಮ ಘನತೆಯನ್ನು ನೆನಪಿನಲ್ಲಿ ಇಟ್ಟುಕೊಂಡು ಇನ್ನೊಬ್ಬರ ಬಗ್ಗೆ ಮಾತನಾಡಬೇಕು ಎಂದು ಸಂಸದೆ ಮಂಗಲಾ ಅಂಗಡಿ ತಿರುಗೇಟು ನೀಡಿದ್ದಾರೆ.
ಬೀಗರ ಟಿಕೆಟ್ ತಪ್ಪಿಸಿದ ಶೆಟ್ಟರ್ ಎಂಬ ಲಕ್ಷ್ಮಿ ಹೆಬ್ಬಾಳಕರ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮಂಗಲಾ, ಲಕ್ಷ್ಮಿ ಬಗ್ಗೆ ನಾನು ಈವರಗೂ ಒಂದೇ ಒಂದು ಆರೋಪವನ್ನೂ ಮಾಡಿಲ್ಲ. ಆದರೆ, ಜಗದೀಶ ಶೆಟ್ಟರ್ ಅವರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಅವರು ಮೊದಲು ಕೈ ಬಿಡಬೇಕು. ಘನತೆಯಿಂದ ರಾಜಕಾರಣ ಮಾಡುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.
ಟಿಕೆಟ್ ಕಿತ್ತುಕೊಂಡಿದ್ದಾರೆ ಎಂಬಂತಹ ಕ್ಷುಲ್ಲಕ ಹೇಳಿಕೆಗಳಿಗೆ ನಾನು ಪ್ರಜ್ಞಾವಂತ ಪ್ರಜೆಯಾಗಿ ಉತ್ತರಿಸಲಾರೆ. ಲಕ್ಷ್ಮಿ ಹೆಬ್ಬಾಳಕರ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ನ ಹಿರಿಯರನ್ನು ಬದಿಗೊತ್ತಿ ಎರಡನೇ ಸಲ ಶಾಸಕಿ ಆಗುತ್ತಲೇ ಸಚಿವೆಯಾಗಿದ್ದಾರೆ. ಅವರಿಗಿಂತ ಹಿರಿಯರಾದ ಅಶೋಕ ಪಟ್ಟಣ, ಮಹಾಂತೇಶ ಕೌಜಲಗಿ ಅವರಿಂದ ಸಚಿವ ಸ್ಥಾನ ಕಿತ್ತುಕೊಂಡವರು ಲಕ್ಷ್ಮಿ ಹೆಬ್ಬಾಳಕರ. ಈ ವಿಷಯವನ್ನು ಈವರೆಗೆ ನಾವು ಪ್ರಸ್ತಾಪಿಸಿರಲಿಲ್ಲ. ಜಿಲ್ಲೆಯ ಜನರಿಗೆ ಈ ವಿಷಯ ತಿಳಿದಿದೆ. ಲಕ್ಷ್ಮಿ ಅವರು ವೈಯಕ್ತಿಕ ವಿಚಾರ ಬಿಟ್ಟು ಸಮಷ್ಟಿ ಪ್ರಜ್ಞೆಯಿಂದ ರಾಜಕೀಯ ಮಾಡುವುದನ್ನು ರೂಢಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದ್ದಾರೆ.
ಜಗದೀಶ ಶೆಟ್ಟರ್ ಅವರಿಗೆ ಈ ಬಾರಿ ಟಿಕೆಟ್ ನೀಡುವುದಾಗಿ ವರಿಷ್ಠರು ಹೇಳಿದ ತಕ್ಷಣ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತಳಾಗಿ ಒಪ್ಪಿಕೊಂಡೆ.ಪಕ್ಷ ಮೊದಲು, ಕುಟುಂಬ ನಂತರ. ಪಕ್ಷದ ನಿರ್ಧಾರಕ್ಕೆ ನಾನು ಬದ್ಧ. ನಮ್ಮ ಕುಟುಂಬ ಯಾವತ್ತೂ ಬಿಜೆಪಿ ಸಿದ್ಧಾಂತ ನಂಬಿ ರಾಜಕೀಯ ಮಾಡಿದೆ. ಸುರೇಶ ಅಂಗಡಿ ಅವರು ಸಹ ಬದುಕಿನುದ್ದಕ್ಕೂ ಬಿಜೆಪಿ ತತ್ವದಂತೆ ಬದುಕಿದ ಧೀಮಂತ ರಾಜಕಾರಣಿ ಆಗಿದ್ದರು. ಅವರ ನಂತರ ಪಕ್ಷ ನನಗೆ ಅವಕಾಶ ಕೊಟ್ಟಿತ್ತು. ಅದನ್ನು ಸಮರ್ಥವಾಗಿ ನಿಭಾಯಿಸಿದ ತೃಪ್ತಿ ಇದೆ ಆದರೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ಜನರ ಮನಸಿನಲ್ಲಿ ಸಂಶಯ ಹುಟ್ಟಿಸುವ ಕ್ಷುಲ್ಲಕ ಹೇಳಿಕೆ ಕೊಡುವ ಬದಲು ಸಚಿವ ಸ್ಥಾನಕ್ಕೆ ಗೌರವ ತರುವ ಮಾತನಾಡಬೇಕು ಎಂದೂ ಮಂಗಲಾ ಅಂಗಡಿ ತಿಳಿಸಿದ್ದಾರೆ.