ಕನ್ನಡ ಸುದ್ದಿ  /  Karnataka  /  Lok Sabha Elections Cm Siddaramaiah Taken Seriously To Win Mysuru Chamarajanagar Camping 3 Days In Mysuru Rgs

Siddaramaiah:ಮೈಸೂರು-ಕೊಡಗು, ಚಾಮರಾಜನಗರ ಕ್ಷೇತ್ರಗಳಲ್ಲಿ ಗೆಲ್ಲಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್, ಮೈಸೂರಲ್ಲೇ ಠಿಕಾಣಿ !

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿ ಸೋತಿದ್ದಾರೆ. ಅವರ ಬೆಂಬಲಿಗರೂ ಗೆದ್ದಿದ್ದು ಕಡಿಮೆ. ಈ ಬಾರಿ ತಾವೇ ಆಯ್ಕೆ ಮಾಡಿರುವ ಎಂ.ಲಕ್ಷ್ಮಣ್‌ ಅವರನ್ನು ಗೆಲ್ಲಿಸುವ ಜತೆಗೆ ಚಾಮರಾಜನಗರ ಕ್ಷೇತ್ರದಲ್ಲೂ ಅಭ್ಯರ್ಥಿ ಸುನೀಲ್‌ ಬೋಸ್‌ ಅವರನ್ನು ಗೆಲ್ಲಿಸುವ ಪಣವನ್ನು ತೊಟ್ಟಿದ್ಧಾರೆ.ವರದಿ: ಪಿ.ರಂಗಸ್ವಾಮಿ, ಮೈಸೂರು

ಮೈಸೂರು ಜಿಲ್ಲೆಯಲ್ಲಿ ಸೋಮವಾರ ಪ್ರಚಾರಕ್ಕೆ ಇಳಿಸಿದ ಸಿಎಂ ಸಿದ್ದರಾಮಯ್ಯ.
ಮೈಸೂರು ಜಿಲ್ಲೆಯಲ್ಲಿ ಸೋಮವಾರ ಪ್ರಚಾರಕ್ಕೆ ಇಳಿಸಿದ ಸಿಎಂ ಸಿದ್ದರಾಮಯ್ಯ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಗೆಲ್ಲಲು ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರಹಣಾಹಾಣಿಗೆ ಚುನಾವಣಾ ಕಣ ಸಿದ್ದಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪ್ರತಿಷ್ಠೆಯ ಅಖಾಡವಾಗಿ ಮಾರ್ಪಟ್ಟಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಹೊಸಬರು ಕಣಕ್ಕಿಳಿದಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದಲ್ಲಿ ಸತತ ಎರಡು ಬಾರಿ ಗೆಲುವು ಸಾಧಿಸಿದ್ದ ಸಂಸದ ಪ್ರತಾಪ್ ಸಿಂಹ ಬದಲು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಿ ಬದಲಾವಣೆಗೆ ನಾಂದಿ ಹಾಡಿರುವ ಬಿಜೆಪಿ, ಮೈಸೂರು ರಾಜಮನೆತನದ ಮೇಲೆ ಜನಸಾಮಾನ್ಯರಿಗೆ ಇರುವ ಗೌರವ ಭಾವನೆಯ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ನೆಚ್ಚಿಕೊಂಡಿದೆ.

ಬಿಜೆಪಿಯಲ್ಲಿ ಒಗ್ಗಟ್ಟು

ಯದುವೀರ್ ಒಡೆಯರ್ ಪರವಾಗಿ ಬಿಜೆಪಿಯ ಎಲ್ಲಾ ನಾಯಕರು ಒಗ್ಗಟ್ಟಿನಿಂದ ಪ್ರಚಾರ‌ ಮಾಡುತ್ತಿದ್ದಾರೆ. ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರಿಂದ ವಿಚಲಿತವಾಗಿದ್ದ ಕಾಂಗ್ರೆಸ್ ನಾಯಕರು, ಅಭ್ಯರ್ಥಿ ಆಯ್ಕೆ ಬಗ್ಗೆ ಸಾಕಷ್ಟು ತಲೆಬಿಸಿ ಮಾಡಿಸಿಕೊಂಡಿದ್ದರು. ಕಡೆಗೆ ಅಳೆದು ತೂಗಿ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರನ್ನು ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳಿಂದ ಪ್ರಚಾರ ಬಿರುಸು ಪಡೆದುಕೊಳ್ಳತ್ತಿದ್ದರೂ ಕೂಡ ಇದುವರೆಗೂ ಯಾವುದೇ ಒಂದು ಪಕ್ಷದ ಪರವಾದ ಅಲೆ ಕಂಡು ಬರುತ್ತಿಲ್ಲ. ಎರಡೂ ಪಕ್ಷಗಳ ಅಬ್ಬರದ ಪ್ರಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಮತದಾರ ಪ್ರಭು ಮಾತ್ರ ಯಾವುದೇ ಒಂದು ಪಕ್ಷದ ಪರ ಒಲವು ವ್ಯಕ್ತಪಡಿಸದೇ ಮಗುಮ್ಮಾಗಿದ್ದಾನೆ. ಮತದಾರರ ಚಿತ್ತ ಎತ್ತ ಕಡೆಗಿದೆ ಎಂದು ತಿಳಿಯದೇ ಚಡಪಡಿಸುತ್ತಿರುವ ನಾಯಕರು, ಗೆಲುವಿಗಾಗಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.

ಸಿದ್ದರಾಮಯ್ಯರಿಗೆ ಪ್ರತಿಷ್ಠೆ

ಮೈಸೂರು-ಕೊಡಗು ಕ್ಷೇತ್ರದ ಜೊತೆಗೆ ಚಾಮರಾಜನಗರ ಎಸ್ ಸಿ ಮೀಸಲು ಕ್ಷೇತ್ರ ಕೂಡ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಡಾ ಹೆಚ್ ಸಿ ಮಹದೇವಪ್ಪನವರಿಗೆ ಪ್ರತಿಷ್ಠೆಯ ಅಖಾಡವಾಗಿ ಪರಿಣಮಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣ ಮತ್ತು ಸಚಿವ ಮಹದೇವಪ್ಪ ಪ್ರತಿನಿಧಿಸುತ್ತಿರುವ ಟಿ ನರಸೀಪುರ ವಿಧಾನಸಭಾ ಕ್ಷೇತ್ರಗಳು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ.

ನಂಜನಗೂಡು, ಹೆಚ್ ಡಿ ಕೋಟೆ, ಗುಂಡ್ಲುಪೇಟೆ, ಕೊಳ್ಳೇಗಾಲ, ಚಾಮರಾಜನಗರ ವಿಧಾನಸಭಾ ಕ್ಷೇತ್ರಗಳು ಕೂಡ ಕಾಂಗ್ರೆಸ್ ತೆಕ್ಕೆಯಲ್ಲಿವೆ. ಹನೂರಿನಲ್ಲಿ ಮಾತ್ರ ಜೆಡಿಎಸ್ ಶಾಸಕ ಇದ್ದಾರೆ.

ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. ಹಾಗಾಗಿ ಕಾಂಗ್ರೆಸ್ ಗೆ ಚಾಮರಾಜನಗರ ಕ್ಷೇತ್ರವನ್ನು ಗೆಲ್ಲುವ ಅನಿವಾರ್ಯತೆ ಎದುರಾಗಿದೆ. ಓರ್ವ ಶಾಸಕನಿಲ್ಲದಿದ್ದರೂ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಎಸ್ ಬಾಲರಾಜ್ ಕಣದಲ್ಲಿದ್ದು ಪ್ರಬಲ ಪೈಪೋಟಿ‌ ನೀಡಲು ಸಜ್ಜಾಗಿದ್ದಾರೆ.

ಇನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿದ್ದವರ ಪೈಕಿ ಮಾಜಿ ಸಂಸರ ಆರ್ ಧ್ರುವನಾರಾಯಣ್ ಅಕಾಲಿಕವಾಗಿ ನಿಧನರಾಗಿದ್ದಾರೆ. ಹಾಲಿ ಸಂಸದ ವಿ ಶ್ರೀನಿವಾಸಪ್ರಸಾದ್ ರಾಜಕೀಯ ‌ನಿವೃತ್ತಿ ಘೋಷಣೆ ಮಾಡಿದ್ದಾರೆ. ಪರಿಣಾಮ ಕಾಂಗ್ರೆಸ್ ಬಿಜೆಪಿಯಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೊಸಬರು ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್ ನಿಂದ ಸಚಿವ ಮಹದೇವಪ್ಪನವರ ಪುತ್ರ ಸುನಿಲ್ ಬೋಸ್ ಕಣದಲ್ಲಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ಬಾಲರಾಜ್ ಕಣದಲ್ಲಿದ್ದಾರೆ. ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಖಾಡ ಸಿದ್ದವಾಗಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮ್ಮ ಪ್ರತಿಷ್ಠೆಯನ್ನು ಪಣಕ್ಕೊಡ್ಡಿದ್ದಾರೆ.

ಸೋಲು ಗೆಲುವು

ಸಿದ್ದರಾಮಯ್ಯ ಅವರು ಎರಡು ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದಾರೆ. ಒಮ್ಮೆ ಮೈಸೂರಿನಲ್ಲಿ ಮತ್ತೊಮ್ಮೆ ಕೊಪ್ಪಳದಲ್ಲಿ ಗೆಲ್ಲಲು ಆಗಿಲ್ಲ. ಆದರೂ ಲೋಕಸಭೆ ಚುನಾವಣೆಯಲ್ಲಿ ತಮ್ಮವರನ್ನು ಗೆಲ್ಲಿಸಲು ಪ್ರಯತ್ನಿಸಿದ್ದಾರೆ.

ಚಾಮರಾಜನಗರದಲ್ಲಿ ಹಿಂದೆ ಜನತಾದಳದಿಂದ ಸಿದ್ದರಾಜು, ಜೆಡಿಎಸ್‌ನಿಂದ ಕಾಗಲವಾಡಿ ಶಿವಣ್ಣ, ಕಾಂಗ್ರೆಸ್‌ನಿಂದ ಧ್ರುವನಾರಾಯಣ್‌ ಇಲ್ಲಿ ಗೆಲ್ಲುವ ಹಿಂದೆ ಸಿದ್ದರಾಮಯ್ಯ ಅವರ ಪಾತ್ರವೂ ಇತ್ತು. ಮೈಸೂರಿನಲ್ಲಿ ಎಚ್‌.ವಿಶ್ವನಾಥ್‌ ಅವರನ್ನು ಗೆಲ್ಲಿಸುವ ಹಿಂದೆ ಸಿದ್ದರಾಮಯ್ಯ ಶ್ರಮಿಸಿದ್ದರು. ಆದರೆ ಮೈಸೂರಿನಲ್ಲಿ ಮಾತ್ರ ಹಿಂದೆ ಅವರು ಜನತಾಳದಲ್ಲಿದ್ದಾಗ ಇಲ್ಲಿ ಕಾಂಗ್ರೆಸ್‌ ಗೆದ್ದಿದೆ. ಅವರು ಕಾಂಗ್ರೆಸ್‌ಗೆ ಬಂದ ಮೇಲೆ ಒಮ್ಮೆ ಬಿಟ್ಟರೆ ಹೆಚ್ಚು ಬಾರಿ ಬಿಜೆಪಿಗೆ ಗೆದ್ದಿದೆ.

ಈ ಕಾರಣದಿಂದ ಅವರು ಶತಾಯಗತಾಯ ಮೈಸೂರು ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲ್ಲಿಸಲೇಬೇಕೆಂಬ ಸವಾಲಿನೊಂದಿಗೆ ಅಖಾಡಕ್ಕೆ ಇಳಿದಿದ್ದಾರೆ. ಮೂರು ದಿನ ಕ್ಷೇತ್ರದಲ್ಲಿ ಇದ್ದು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಜತೆಗೆ ಗೆಲುವಿನ ತಂತ್ರಗಳನ್ನು ರೂಪಿಸಲಿದ್ದಾರೆ ಎನ್ನಲಾಗುತ್ತಿದೆ.

(ವರದಿ: ಪಿ.ರಂಗಸ್ವಾಮಿ, ಮೈಸೂರು)

IPL_Entry_Point