ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬಿಜೆಪಿಯಿಂದಲೇ ಗೋ ಬ್ಯಾಕ್‌ ಎನ್ನಿಸಿಕೊಂಡ ಶೋಭಾ ಕರಂದ್ಲಾಜೆಗೆ ಬೆಂಗಳೂರಲ್ಲಿ ಮತ ಏಕೆ ಕೊಡಬೇಕು, ಸಿದ್ದರಾಮಯ್ಯ ಪ್ರಶ್ನೆ

Bangalore News: ಬಿಜೆಪಿಯಿಂದಲೇ ಗೋ ಬ್ಯಾಕ್‌ ಎನ್ನಿಸಿಕೊಂಡ ಶೋಭಾ ಕರಂದ್ಲಾಜೆಗೆ ಬೆಂಗಳೂರಲ್ಲಿ ಮತ ಏಕೆ ಕೊಡಬೇಕು, ಸಿದ್ದರಾಮಯ್ಯ ಪ್ರಶ್ನೆ

Lok Sabha Elections 2024 ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರೊ.ಎಂ.ವಿ.ರಾಜೀವ್‌ಗೌಡ ಪರವಾಗಿ ಸಿಎಂ ಸಿದ್ದರಾಮಯ್ಯ ಮತ ಯಾಚಿಸಿದರು.

ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರೊ.ರಾಜೀವ್‌ ಗೌಡ ಪರ ಮತಯಾಚಿಸಿದರು.
ಬೆಂಗಳೂರಿನ ಬ್ಯಾಟರಾಯನಪುರದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪ್ರೊ.ರಾಜೀವ್‌ ಗೌಡ ಪರ ಮತಯಾಚಿಸಿದರು.

ಬೆಂಗಳೂರು:ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಅವರಿಗೆ ನೀವು ಮತ ಹಾಕಲು ಕಾರಣಗಳೇ ಇಲ್ಲ. ಅವರು ಸಂಸದರಾಗಿ ನಾಡಿನ ಜನತೆಗೆ ಆದ ಅನ್ಯಾಯಗಳು ಬಗ್ಗೆ ಸಂಸತ್‌ನಲ್ಲಿ ಒಮ್ಮೆಯೂ ಸರಿಯಾಗಿ ಧ್ವನಿ ಎತ್ತಲೇ ಇಲ್ಲ. ಶೋಭಾ ಕರಂದ್ಲಾಜೆ ಅವರನ್ನು ಉಡುಪಿ-ಚಿಕ್ಕಮಗಳೂರು ಜಿಲ್ಲೆಗಳ ಲೋಕಸಭಾ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರೇ ಗೋ-ಬ್ಯಾಕ್ ಶೋಭಾ ಎಂದು ಓಡಿಸಿದ್ದಾರೆ. ಎರಡು ಬಾರಿ ತನ್ನನ್ನು ಗೆಲ್ಲಿಸಿದ ಕ್ಷೇತ್ರದ ಕಾರ್ಯಕರ್ತರೇ ಅವರನ್ನು ಗೋ ಬ್ಯಾಕ್ ಎಂದು ಕಳುಹಿಸಿದ್ದಾರೆ.ಈಗ ಅವರು ಬೆಂಗಳೂರಿಗೆ ಬಂದಿದ್ಧಾರೆ. ಆದ್ದರಿಂದ ಬೆಂಗಳೂರು ಕ್ಷೇತ್ರದಲ್ಲಿ ಅವರಿಗೆ ಮತಹಾಕಲು ಕಾರಣಗಳೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಉತ್ತರ ಲೋಕಸಭಾ ಕ್ಷೇತ್ರದ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜೀವ್ ಗೌಡರ ಪರವಾಗಿ ನಡೆದ ಬೂತ್ ಮುಖಂಡರು ಮತ್ತು ಬ್ಲಾಕ್ ಮುಖಂಡರುಗಳ ಬೃಹತ್ ಸಭೆಯನ್ನು ಹಾಗೂ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಶೋಭಾ ಕರಂದ್ಲಾಜೆ ಅವರು ಸಂಸದರಾಗಿ ಜನರ ಕೆಲಸ ಮಾಡಲಿಲ್ಲ. ಈ ಕಾರಣಕ್ಕೇ ಮೋದಿಯವರ ಮುಖನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ. ಬಿಜೆಪಿಯವರೂ ಸರ್ಕಾರ ನಡೆಸಿ ಜನರ ಕೆಲಸ ಮಾಡದೆ ತಿರಸ್ಕೃತಗೊಂಡರು. ಹೀಗಾಗಿ ಇವರೂ ಮೋದಿ ಮುಖ ನೋಡಿ ಮತ ಹಾಕಲು ಕೇಳುತ್ತಿದ್ದಾರೆಯೇ ಹೊರತು ತಮ್ಮ ಸಾಧನೆಗಳ ಮೇಲೆ ಕೇಳುತ್ತಿಲ್ಲ ಎಂದು ಸಿಎಂ ಆಕ್ರೋಶ ಹೊರ ಹಾಕಿದರು.

ಕೇಂದ್ರ ಸರ್ಕಾರ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆಗೆ ಅನುಮತಿ ಕೊಡಲಿಲ್ಲ. ಮೋದಿಯವರೂ ಬೆಂಗಳೂರಿನ‌ ಜನತೆಗೆ ಕುಡಿಯುವ ನೀರು ಕೊಡುವ ಯೋಜನೆಗೆ ಬೆಂಬಲ ಘೋಷಿಸುತ್ತಿಲ್ಲ. ಕಪ್ಪುಹಣ ತಂದು ಎಲ್ಲರ ಖಾತೆಗೆ 15 ಲಕ್ಷ ಹಾಕ್ತೀವಿ ಅಂದ ಮೋದಿಯವರು 15 ರೂಪಾಯಿಯನ್ನೂ ಹಾಕಿಲ್ಲ. ಮೋದಿಯವರು ಹೇಳಿದ ಯಾವುದನ್ನೂ ಜಾರಿ ಮಾಡಿಲ್ಲ. ಹೀಗಾಗಿ ಅವರ ಮುಖ ನೋಡಿ ಮತ ಹಾಕಿದರೆ ನಿಮ್ಮ‌ಮತಕ್ಕೆ ಗೌರವ ಬರುತ್ತದಾ ಎಂದು ಪ್ರಶ್ನಿಸಿದರು.

ನುಡಿದಂತೆ ನಡೆದು ನಿಮ್ಮ ಮತಗಳಿಗೆ ಘನತೆ ತರುವ ಕೆಲಸವನ್ನು ನಾವು ಮಾಡಿದ್ದೇವೆ. ನಮಗೆ ಶಕ್ತಿ ತುಂಬಿ. ರಾಜೀವ್ ಗೌಡರನ್ನು ಗೆಲ್ಲಿಸಿ ಕೃಷ್ಣಬೈರೇಗೌಡರನ್ನು ಮತ್ತಷ್ಡು ಗಟ್ಟಿಗೊಳಿಸಿ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಕರೆ ನೀಡಿ, ಕನಿಷ್ಠ 50 ಸಾವಿರ ಮತಗಳ ಲೀಡ್ ಅನ್ನು ಈ ವಿಧಾನಸಭಾ ಕ್ಷೇತ್ರದಲ್ಲಿ ನೀಡಬೇಕು ಎಂದು ವಿನಂತಿಸಿದರು

ಉತ್ತರ ಲೋಕಸಭಾ ಕ್ಷೇತ್ರದ ಪ್ರೊ.ರಾಜೀವ್ ಗೌಡ ಅವರು ಪಾರ್ಲಿಮೆಂಟಿನಲ್ಲಿ ಸಮರ್ಥವಾಗಿ ನಾಡಿನ ಪರವಾಗಿ, ಕ್ಷೇತ್ರದ ಜನರ ಪರವಾಗಿ ಧ್ವನಿ ಎತ್ತುತ್ತಾರೆ ಎಂದು ಸಿ.ಎಂ ಸಿದ್ದರಾಮಯ್ಯ ಅವರು ಭರವಸೆಯ ಮಾತುಗಳನ್ನು ಆಡಿದರು.

ಸಚಿವರಾದ ಕೃಷ್ಣಬೈರೇಗೌಡ, ಬೈರತಿ ಸುರೇಶ್‌ ಹಲವು ಮುಖಂಡರು ಹಾಜರಿದ್ದರು.

ರೋಡ್‌ ಶೋ

ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಪ್ರೊ.ರಾಜೀವ್ ಗೌಡ ಗೆಲ್ಲೋದು ಅಷ್ಟೇ ಸತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಚಿತವಾಗಿ ನುಡಿದರು.

ಪ್ರೊ.ರಾಜೀವ್ ಗೌಡ ಪರವಾಗಿ ಮಲ್ಲೇಶ್ವರಂ, ಸುಬ್ರಮಣ್ಯನಗರ, ಗಾಯತ್ರಿನಗರದ ರಸ್ತೆಗಳಲ್ಲಿ ಎರಡು ಗಂಟೆಗೂ ಹೆಚ್ಚು ಲಾಲ ರೋಡ್ ಶೋ ನಡೆಸಿದ ಬಳಿಕ ಮಾತನಾಡಿದರು.

ಕೇಂದ್ರ ಕೃಷಿ ಸಚಿವೆಯಾಗಿದ್ದ ಶೋಭಾ ಕರಂದ್ಲಾಜೆ ರಾಜ್ಯದ ರೈತರ ಪರವಾಗಿ ಯಾವ ಕೆಲಸಗಳನ್ನೂ ಮಾಡಲಿಲ್ಲ. ಸಂಸದೆಯಾಗಿಯೂ ನಾಡಿನ ಪರವಾಗಿ ಕೆಲಸ ಮಾಡಲಿಲ್ಲ. ಇಂಥವರಿಗೆ ಬೆಂಬಲಿಸಿದರೆ ನಿಮ್ಮ ಮತಕ್ಕೆ ಗೌರವ ಬರುತ್ತದಾ ಎಂದು ಪ್ರಶ್ನಿಸಿದರು.

ಗೋಪಿಕೃಷ್ಣ ಕಾಂಗ್ರೆಸ್ ಸೇರ್ಪಡೆ

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ವಿಧಾನಸಭಾ ಕ್ಷೇತ್ರದ ಮುಖಂಡರಾದ ಗೋಪಿಕೃಷ್ಣ ಸಹಿತ ಹಲವರು ಅವರು ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡು, ರಾಜೀವ್ ಗೌಡರನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿಗಳ ಕೈ ಬಲಪಡಿಸುವುವಂತೆ ಕೋರಿದರು.

IPL_Entry_Point