Dharwad News: ಸಚಿವ ಜೋಶಿ ವಿರುದ್ದ ಕಣಕ್ಕೆ ಇಳಿದ ದಿಂಗಾಲೇಶ್ವರ ಸ್ವಾಮೀಜಿ, ಎಸ್‌ಎಸ್‌ಎಲ್‌ಸಿ ಫೇಲ್‌, ಕೋಟ್ಯಾಧೀಶ-lok sabha elections2024 dingaleshwar swamiji of shirahatti files nominations in dharwad against pralhad joshi kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Dharwad News: ಸಚಿವ ಜೋಶಿ ವಿರುದ್ದ ಕಣಕ್ಕೆ ಇಳಿದ ದಿಂಗಾಲೇಶ್ವರ ಸ್ವಾಮೀಜಿ, ಎಸ್‌ಎಸ್‌ಎಲ್‌ಸಿ ಫೇಲ್‌, ಕೋಟ್ಯಾಧೀಶ

Dharwad News: ಸಚಿವ ಜೋಶಿ ವಿರುದ್ದ ಕಣಕ್ಕೆ ಇಳಿದ ದಿಂಗಾಲೇಶ್ವರ ಸ್ವಾಮೀಜಿ, ಎಸ್‌ಎಸ್‌ಎಲ್‌ಸಿ ಫೇಲ್‌, ಕೋಟ್ಯಾಧೀಶ

Karnataka politics ಧಾರವಾಡ ಕ್ಷೇತ್ರದಿಂದ ಗದಗ ಶಿರಹಟ್ಟಿಯ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವನ್ನು ಸಲ್ಲಿಸಿದ್ದಾರೆ. ಅವರ ಆಸ್ತಿ ವಿವರ ಇಲ್ಲಿದೆ.

ದಿಂಗಾಲೇಶ್ವರ ಸ್ವಾಮೀಜಿ
ದಿಂಗಾಲೇಶ್ವರ ಸ್ವಾಮೀಜಿ

ಧಾರವಾಡ: ಕೇಂದ್ರ ಸಚಿವ ಪ್ರಲ್ಹಾದಜೋಶಿ ವಿರುದ್ದ ತೊಡೆ ತಟ್ಟಿರುವ ಗದಗ ಜಿಲ್ಲೆ ಶಿರಹಟ್ಟಿಯ ಬಾಳೆಹೊಸೂರು ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಅವರು ಗುರುವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದ್ದಾರೆ. ಯಾವ ಮೆರವಣಿಗೆ, ಆಡಂಬರವಿಲ್ಲದೇ ನಾಲ್ವರು ಬೆಂಬಲಿಗರೊಂದಿಗೆ ಧಾರವಾಡ ಡಿಸಿ ಕಚೇರಿಗೆ ಆಗಮಿಸಿದ ದಿಂಗಾಲೇಶ್ವರ ಸ್ವಾಮೀಜಿ ಅವರು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಕಳೆದ ತಿಂಗಳಿನಿಂದಲೇ ಜೋಶಿ ಅವರ ವಿರುದ್ದ ಹೇಳಿಕೆ ನೀಡುತ್ತಲೇ ಬಂದಿರುವ ಸ್ವಾಮೀಜಿ ಅವರ ವಿರುದ್ದ ಕಣಕ್ಕೆ ಸ್ಪರ್ಧಿಸುವುದಾಗಿ ಹೇಳಿಕೆ ನೀಡಿದ್ದರು. ಅದರಂತೆಯೇ ಸ್ವಾಮೀಜಿ ಅವರು ಕೊನೆಗೂ ಲೋಕಸಭೆ ಚುನಾವಣೆ ಅಭ್ಯರ್ಥಿಯಾಗಲಿದ್ದಾರೆ. ಅವರಿಗೆ ಕಾಂಗ್ರೆಸ್‌ ಬೆಂಬಲ ಕೊಡುವ ಕುರಿತು ಚರ್ಚೆ ನಡೆದಿದೆಯಾದರೂ ಅಂತಿಮ ತೀರ್ಮಾನವಾಗಿಲ್ಲ.

ಸ್ವಾಮೀಜಿ ಅವರಿಗೆ ಈಗ 48 ವರ್ಷ. ಫಕೀರೇಶ್ವರ ಮಠದ ಮುಖ್ಯಸ್ಥರಾಗಿ. ಶಿಕ್ಷಣ ಸಂಸ್ಥೆಯ ಪ್ರಮುಖರಾಗಿಯೂ ಸ್ವಾಮೀಜಿ ಗುರುತಿಸಿಕೊಂಡಿದ್ದಾರೆ. ಹುಬ್ಬಳ್ಳಿ ಮೂರುಸಾವಿರ ಮಠದ ವಿಚಾರದಲ್ಲಿ ಪ್ರಲ್ಹಾದ ಜೋಶಿ ಅವರೊಂದಿಗೆ ಭಿನ್ನಾಭಿಪ್ರಾಯವನ್ನು ಇದ್ದ ಕಾರಣ ಅವರ ವಿರುದ್ದವೇ ಕಣಕ್ಕೆ ಇಳಿದಿರುವ ಕುರಿತು ಚರ್ಚೆಗಳು ನಡೆದಿವೆ.

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಸ್ವಾಮೀಜಿ, ಈ ಹಿಂದೆಯೇ ಘೋಷಿಸಿದಂತೆ ನಾನು ಧಾರವಾಡ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದೇನೆ. ಈಗಲೂ ನಾನು ಕಣದಿಂದ ಹಿಂದೆ ಸರಿಸಲು ಪ್ರಯತ್ನಿಸುತ್ತಿದ್ದಾರೆ. ಮಠಕ್ಕೆ ಬಂದು ಕಿರಿಯ ಸ್ವಾಮೀಜಿ ಅವರಿಗೂ ಬೆದರಿಕೆ ಹಾಕಿದ್ದಾರೆ. ಆದರೆ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದು ಹೇಳಿದ್ದಾರೆ.

ಕೋಟ್ಯಾಧೀಶ

ದಿಂಗಾಲೇಶ್ವರ ಸ್ವಾಮೀಜಿ ಅವರ ಆಸ್ತಿ ಸುಮಾರು 10 ಕೋಟಿ ಯಷ್ಟಿದೆ. ಇದರಲ್ಲಿ 8.52 ಕೋಟಿ ರೂ. ಸ್ಥಿರಾಸ್ತಿಯನ್ನು ಘೋಷಿಸಿಕೊಂಡಿದ್ದರೆ, ಚರಾಸ್ತಿ ಮೌಲ್ಯವೇ 1.22 ಕೋಟಿ ರೂ. ಗಳಷ್ಟಿದೆ. ಸ್ವಾಮೀಜಿ ಅವರಿಗೆ ವಿವಿಧೆಡೆ ಸುಮಾರು 39.68 ಲಕ್ಷ ರೂ. ಸಾಲ ಇರುವುದನ್ನೂ ಉಲ್ಲೇಖಿಸಲಾಗಿದೆ. ಸ್ವಾಮೀಜಿ ಅವರ ಬಳಿ ಎರಡು ಇನ್ನೋವಾ ಕಾರುಗಳಿದ್ದು, ಮೂರು ಪ್ರಕರಣಗಳು ಅವರ ವಿರುದ್ದ ದಾಖಲಾಗಿವೆ ಎಂದು ವಿವರ ನೀಡಿದ್ದಾರೆ.

1.25 ಲಕ್ಷ ರೂ. ತಮ್ಮ ಬಳಿ ನಗದು ರೂಪದಲ್ಲಿದೆ. ಶಿರಹಟ್ಟಿ. ಗದಗ ಸಹಿತ ವಿವಿಧ ಬ್ಯಾಂಕ್‌ ಖಾತೆಗಳಲ್ಲಿ 11 ಲಕ್ಷ ರೂ.ಗಳನ್ನು ಹಣವಿದೆ. 4.75 ಲಕ್ಷ ರೂ. ಮೌಲ್ಯದ ಶೇರುಗಳನ್ನು ಸ್ವಾಮೀಜಿ ವಿನಿಯೋಗಿಸಿದ್ದಾರೆ. ಬಾಂಡ್‌ಗಳನ್ನು ಸಹಾ ಸ್ವಾಮೀಜಿ ವಿವಿಧ ಸಹಕಾರಿ ಬ್ಯಾಂಕ್‌ಗಳಲ್ಲಿ ಹೊಂದಿದ್ದಾರೆ. ಸ್ವಾಮೀಜಿ ಅವರಿಗೆ ಸೇರಿದ ಎರಡು ಟೊಯೊಟೊ ಇನೋವಾ ಕಾರು, ಒಂದು ಟ್ರಾಕ್ಟರ್‌ ಹಾಗೂ ಬಸ್‌ ಇರುವುದಾಗಿ ತಿಳಿಸಲಾಗಿದೆ. ಬಸ್‌ ಶಿಕ್ಷಣ ಸಂಸ್ಥೆಗೆ ಸೇರಿದ್ದಾಗಿದೆ.

ತಮ್ಮ ಬಳಿಯಲ್ಲಿ ಸುಮಾರು 4.35 ಲಕ್ಷ ರೂ. ಮೌಲ್ಯದ 7 ಕೆಜಿ 820 ಗ್ರಾಂ ಬೆಳ್ಳಿ ಹಾಗೂ 1.17 ಲಕ್ಷ ರೂ. ಮೌಲ್ಯದ 18.9 ಗ್ರಾಂ ಚಿನ್ನ ತಮ್ಮ ಬಳಿ ಇರುವುದಾಗಿ ದಿಂಗಾಲೇಶ್ವರ ಸ್ವಾಮೀಜಿ ತಿಳಿಸಿದ್ದಾರೆ. ಒಟ್ಟುಚರಾಸ್ತಿಯ ಮೌಲ್ಯವೇ 1.22 ಕೋಟಿ ರೂ. ಆಗಲಿದೆ. ಸ್ವಾಮೀಜಿ ಅವರ ಹೆಸರಿನಲ್ಲಿ 23 ಎಕರೆ 17 ಗುಂಟೆ ಕೃಷಿ ಭೂಮಿ ಶಿರಹಟ್ಟಿ ಬಳಿ ಇದೆ. 19 ಕಡೆ ಕೃಷಿಯೇತರ ಭೂಮಿಯನ್ನೂ ಸ್ವಾಮೀಜಿ ಹೊಂದಿದ್ದಾರೆ. ಮಠಕ್ಕೆ ಶಿಕ್ಷಣ ಸಂಸ್ಥೆಯಿದ್ದು. ಕಟ್ಟಡದ ಮೌಲ್ಯ2 ಕೋಟಿ ರೂ. ಇವೆಲ್ಲವೂ ಸೇರಿ ಒಟ್ಟು, 8.52 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ತಮ್ಮ ಬಳಿ ಇದೆ ಎಂದು ಅಫಿಡವಿಟ್‌ನಲ್ಲಿ ಸ್ವಾಮೀಜಿ ಉಲ್ಲೇಖಿಸಿದ್ಧಾರೆ.

ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಮೂರು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದು, ಮೂರು ಕೂಡ ಜಾತಿ ನಿಂದನೆ ಹಾಗೂ ಹಲ್ಲೆ ನಡೆಸಿರುವ ಪ್ರಕರಣಗಳು ಎಂದು ತಿಳಿಸಲಾಗಿದೆ. ಈ ಪ್ರಕರಣಗಳ ವಿಚಾರಣೆ ನಡೆದಿದೆ. ಇನ್ನು ದಿಂಗಾಲೇಶ್ವರ ಸ್ವಾಮೀಜಿ ತಮ್ಮ ಅಫಿಡವಿಟ್‌ನಲ್ಲಿ ವಿದ್ಯಾರ್ಹತೆಯನ್ನು ಉಲ್ಲೇಖಿಸಿದ್ದಾರೆ. ತಾವು ಎಸ್‌ಎಸ್‌ಎಲ್‌ಸಿ ಅನುತ್ತೀರ್ಣಗೊಂಡಿರುವುದಾಗಿ ಸ್ವಾಮೀಜಿ ಹೇಳಿಕೊಂಡಿದ್ಧಾರೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

mysore-dasara_Entry_Point