Belagavi News: ನೇಹಾಹಿರೇಮಠ ಹತ್ಯೆಗೆ ಮೋದಿ ಖಂಡನೆ, ಪಿಎಫ್‌ಐ ಸಂಘಟನೆ ಬೆಂಬಲಕ್ಕೆ ಕಾಂಗ್ರೆಸ್ ವಿರುದ್ದ ಆಕ್ರೋಶ
ಬೆಳಗಾವಿಯಲ್ಲಿ ನಡೆದ ಲೋಕಸಭಾ ಚುನಾವಣಾ ಪ್ರಚಾರಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ನೇಹಾ ಹತ್ಯೆ ಪ್ರಕರಣ ಉಲ್ಲೇಖಿಸಿದ ಅವರು, ಪಿಎಫ್‌ಐ ಸಂಘಟನೆಯನ್ನು ಚುನಾವಣೆಗೆ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದರು.
ಬೆಳಗಾವಿ: ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಖಂಡಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಕೇವಲ ಮತಬ್ಯಾಂಕ್ ರಾಜಕಾರಣಕ್ಕೋಸ್ಕರ ಕರ್ನಾಟಕ ರಾಜ್ಯ ಸರ್ಕಾರವು ಕೆಲವು ಪ್ರಕರಣವನ್ನು ಗಂಭೀರವಾಗಿಯೇ ಸ್ವೀಕರಿಸುತ್ತಿಲ್ಲ. ಕೆಲವರನ್ನು ತುಷ್ಠೀಕರಣ ಮಾಡಿ ಕೊಲೆಯಾದವರಿಗೆ ಅಗೌರವ ತೋರುತ್ತಿದೆ. ಪಿಎಫ್‌ಐ ಸಂಘಟನೆಯನ್ನು ನಾವು ನಿಷೇಧಿಸಿದರೂ ಕಾಂಗ್ರೆಸ್ ಆ ಸಂಘಟನೆಯನ್ನು ಚುನಾವಣೆಗೋಸ್ಕರ ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಪಾದಿಸಿದ್ದಾರೆ.
ಬೆಳಗಾವಿಯಲ್ಲಿ ಭಾನುವಾರ ನಡೆದ ಲೋಕಸಭೆ ಚುನಾವಣೆಯ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಹುಬ್ಬಳ್ಳಿಯ ಕಾಲೇಜು ಅಂಗಳದಲ್ಲಿ ನಮ್ಮ ಸಹೋದರಿಯ ಭೀಕರ ಹತ್ಯೆಯಾಯಿತು. ಹೆಣ್ಣು ಮಕ್ಕಳು ಈ ರೀತಿ ಕೊಲೆಯಾದರೆ ಹೇಗೆ ಎನ್ನುವ ಆತಂಕ ಹಲವಾರು ಕುಟುಂಬಗಳಲ್ಲಿದೆ. ಭೀಕರವಾಗಿ ಹತ್ಯೆಯಾದರೂ ಕರ್ನಾಟಕ ಸರ್ಕಾರ ಇದನ್ನು ಗಂಭೀರವಾಗಿಯೇ ಪರಿಗಣಿಸಿಯೇ ಇಲ್ಲ ಎಂದು ಆರೋಪಿಸಿದರು.
ಬೆಂಗಳೂರಿನಲ್ಲಿ ಕೆಫೆ ಒಂದರಲ್ಲಿ ಬಾಂಬ್ ಸ್ಟೋಟವಾಯಿತು. ಇದನ್ನು ಸಿಲೆಂಡರ್ ಸ್ಪೋಟ ಎಂದು ಕರ್ನಾಟಕ ಸರ್ಕಾರ ಹೇಳಿತು. ಉಗ್ರಗಾಮಿಗಳ ಚಟುವಟಕೆಯಾದರೂ ಅದನ್ನು ಸಾಮಾನ್ಯ ಘಟನೆ ಎಂದು ಹೇಳಲಾಗುತ್ತಿದೆ. ಒಂದು ಸಮುದಾಯದ ತುಷ್ಟೀಕರಣಕ್ಕೆ ಈ ರೀತಿ ಕಾಂಗ್ರೆಸ್ ಸರ್ಕಾರ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಮೋದಿ ಟೀಕಿಸಿದರು.
ಪಾಪುಲರ್ ಫ್ರಂಟ್ ಆಫ್ ಇಂಡಿಯಾ( PFI) ಸಂಘಟನೆ ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿದೆ. ಹಲವಾರು ಘಟನೆಗಳು ನಮ್ಮ ಮುಂದಿದೆ. ಆ ಸಂಘಟನೆಯನ್ನು ಕೇಂದ್ರ ಸರ್ಕಾರ ಈಗಾಗಲೇ ನಿಷೇಧಿಸಿದೆ. ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾದವರ ವಿರುದ್ದ ನಾವು ಕ್ರಮ ಕೈಗೊಂಡದರೆ ಕರ್ನಾಟಕದಲ್ಲಿ ಅವರನ್ನೇ ಬೆಂಬಲಿಸುವ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಒಂದು ಸ್ಥಾನವನ್ನು ಚುನಾವಣೆಯಲ್ಲಿ ಗೆಲ್ಲಲು ಉಗ್ರಗಾಮಿ ಹಾಗೂ ದೇಶವಿರೋಧಿ ಸಂಘಟನೆಯನ್ನು ಪೋಷಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿರುವುದನ್ನು ಒಪ್ಪಲಾಗದು ಎಂದು ಆಪಾದಿಸಿದರು.
ಚಿಕ್ಕೋಡಿಯಲ್ಲಿ ಜೈನ ಧರ್ಮಗುರುಗಳ ಹತ್ಯೆಯಾಯಿತು. ಈ ಪ್ರಕರಣವನ್ನು ಗಂಭೀರವಾಗಿ ಸ್ವೀಕರಿಸಲೇ ಇಲ್ಲ. ಇಂತಹ ಹಲವಾರು ಘಟನೆಗಳು ಕರ್ನಾಟಕದಲ್ಲಿ ಆದರೂ ಇದರಿಂದ ಆರೋಪಿಗಳನ್ನು ಕಠಿಣವಾಗಿ ಶಿಕ್ಷಿಸುವ ಬದಲು ರಕ್ಷಿಸುವಂತಹ ಕೆಲಸ ಆಗುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಸಂಪತ್ತನ್ನು ಹಂಚುವ ಕೆಲಸ ಮಾಡಲಿದೆ. ನಿಮ್ಮ ಆಸ್ತಿ ಎಷ್ಟಿದೆ. ನಿಮ್ಮ ಬಳಿ ಹಣ ಯಾವ ಪ್ರಮಾಣದಲ್ಲಿ,ಬ್ಯಾಂಕ್ ಲಾಕರ್, ಜಮೀನು ಎಷ್ಟಿದೆ, ನಿಮ್ಮ ಬಳಿ ಇರುವ ವಾಹನಗಳೆಷ್ಟು ಎನ್ನುವ ಎಕ್ಸ್‌ರೇಯನ್ನು ಕಾಂಗ್ರೆಸ್ ಮಾಡಲಿದೆ. ಮಹಿಳೆಯರು ಕಷ್ಟ ಪಟ್ಟು ಸಂಪಾದಿಸಿರುವ ಚಿನ್ನದ ಆಭರಣಗಳನ್ನೂ ಕಾಂಗ್ರೆಸ್ ವಶಪಡಿಸಿಕೊಳ್ಳಲಿದೆ. ನೀವೇ ಗಳಿಸಿದ ನಿಮ್ಮ ಸಂಪತ್ತನ್ನು ಕಿತ್ತುಕೊಂಡು ಇನ್ಯಾರಿಗೋ ನೀಡುವ ಕೆಲಸ ಮಾಡಲಿದೆ. ಕೊನೆಗೆ ನಿಮ್ಮ ಮಂಗಳಸೂತ್ರವನ್ನೂ ಕಾಂಗ್ರೆಸ್ ಬಿಡುವುದಿಲ್ಲ. ಈ ಬಗ್ಗೆ ಎಚ್ಚರದಿಂದ ಇರಿ ಎಂದು ಮೋದಿ ಹೇಳಿದರು.
ಭಾರತದಲ್ಲಿನ ರಾಜವಂಶಸ್ಥರ ಬಗ್ಗೆ ಕಾಂಗ್ರೆಸ್‌ಗೆ ಗೌರವೇ ಇಲ್ಲ. ಮೈಸೂರಿನಲ್ಲಿ ರಾಜವಂಸ್ಥರಿಗೆ ಟಿಕೆಟ್ ನೀಡುವ ಮೂಲಕ ಗೌರವ ನೀಡಿದ್ದೇವೆ. ಅವರೇನಿದ್ದರೂ ಔರಂಗಾಜೇಬ್‌ನನ್ನು ಹೊಗಳುತ್ತಾರೆ. ಇದರ ಹಿಂದೆ ಇರುವುದು ಮತ ಗಳಿಸುವ ಹುನ್ನಾರವಷ್ಟೇ ಎಂದು ಆಪಾದಿಸಿದರು.
ರೈತರ ಖಾತೆಗಳಿಗೆ ನೇರವಾಗಿ ಹಣ ವರ್ಗ ಮಾಡುವ ಕೆಲಸ ಹಲವು ವರ್ಷದಿಂದ ನಮ್ಮ ಸರ್ಕಾರದಿಂದ ಆಗುತ್ತಿದೆ. ಹತ್ತು ವರ್ಷದಲ್ಲಿ ದೇಶದ ಪ್ರಗತಿಯ ಹಾದಿಗೆ ತಂದಿದ್ದೇವೆ. ಇನ್ನಷ್ಟು ಸುಧಾರಣೆ ಕೆಲಸಗಳು ಮುಂದೆ ಆಗಲಿವೆ ಎಂದು ಹೇಳಿದರು.
ದೇಶದ ಬಗ್ಗೆ ಗೌರವ ಇರುವ, ಸ್ವಾತಂತ್ರ್ಯ ಹೋರಾಟಗಾರರು, ಸೇನಾನಿಗಳಿಗೆ ಗೌರವ ನೀಡುವ ಬಿಜೆಪಿಗೆ ಮತ ನೀಡಿ. ನಿಮ್ಮ ಕೆಲಸ ಮಾಡುವ ಅವಕಾಶವನ್ನು ಮತ್ತೊಮ್ಮೆ ಮಾಡಿಕೊಡಿ ಎಂದು ಮೋದಿ ಮನವಿ ಮಾಡಿದರು.