Lok Sabha Polls: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಇಂದು ಬಿಡುಗಡೆ ನಿರೀಕ್ಷೆ, ಕರ್ನಾಟಕದ 11 ಅಭ್ಯರ್ಥಿಗಳ ಹೆಸರು ಅಂತಿಮ
Lok Sabha Polls: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಪಟ್ಟಿ ಇಂದು ಬಿಡುಗಡೆಯಾಗುವ ನಿರೀಕ್ಷೆ ಇದೆ. ಕರ್ನಾಟಕದ ಡಿಕೆ ಸುರೇಶ್ ಸೇರಿ 11 ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದ್ದು ಇದೇ ಪಟ್ಟಿಯಲ್ಲಿರುವ ಸಾಧ್ಯತೆ ಇದೆ. ಇಲ್ಲಿದೆ ಆ ವಿವರ.
ನವದೆಹಲಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ವಯನಾಡ್‌ನಿಂದಲೇ ಸ್ಪರ್ಧಸಲಿದ್ದಾರೆ. ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಗುರುವಾರ ನಡೆಸಿದ ಸಭೆಯಲ್ಲಿ ಈ ತೀರ್ಮಾನ ಆಗಿದೆ ಎಂದು ಈ ವಿದ್ಯಮಾನದ ಅರಿವು ಇರುವಂಥವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.
ಇದಲ್ಲದೇ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಇಂದು ಪ್ರಕಟಿಸುವ ನಿರೀಕ್ಷೆ ಇದೆ. ಈ ಪಟ್ಟಿಯಲ್ಲಿ ಕರ್ನಾಟಕದ 11 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರೂ ಇರಲಿದೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಈಗಾಗಲೇ ಕೇಂದ್ರೀಯ ಚುನಾವಣಾ ಸಮಿತಿ ಹಸಿರು ನಿಶಾನೆ ತೋರಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಹೇಳಿದೆ.
ರಾಹುಲ್ ಗಾಂಧಿ ಸ್ಪರ್ಧೆ ಎಲ್ಲಿಂದ ಎಂಬ ವದಂತಿಗಳಿಗೂ ತೆರೆಬಿದ್ದಿದೆ. ರಾಹುಲ್ ಗಾಂಧಿ ಈ ಸಲ ಕರ್ನಾಟಕದಿಂದ ಸ್ಪರ್ಧಿಸುತ್ತಾರೆ ಎಂಬಿತ್ಯಾದಿ ವದಂತಿಗಳಿಗೆ ತೆರೆ ಎಳೆದಿರುವ ಕಾಂಗ್ರೆಸ್ ಪಕ್ಷದ ಅವರ ಸ್ಪರ್ಧೆ ವಯನಾಡ್‌ನಿಂದಲೇ ಎಂಬ ಸಂದೇಶ ರವಾನಿಸಿದೆ. ಹಾಲಿ ವಯನಾಡ್ ಸಂಸದರಾಗಿರುವ ರಾಹುಲ್ ಗಾಂಧಿ ಮತ್ತೊಮ್ಮೆ ಅಲ್ಲಿಂದ ಸ್ಪರ್ಧಿಸುವುದು ಖಚಿತವಾಗಿದೆ. ಅಷ್ಟೇ ಅಲ್ಲ, ಅಮೇಥಿಯಿಂದ ಸ್ಪರ್ಧಿಸುವ ಸಾಧ್ಯತೆಯೂ ಇದೆ. ಈ ಕುರಿತು ಕೇಂದ್ರೀಯ ಚುನಾವಣಾ ಸಮಿತಿ ಮುಂದಿನ ಸಭೆಯಲ್ಲಿ ತೀರ್ಮಾನಿಸಲಿದೆ ಎಂದು ಮೂಲಗಳು ತಿಳಿಸಿದ್ದಾಗಿ ವರದಿ ವಿವರಿಸಿದೆ.
ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಮಾರ್ಚ್ 11ಕ್ಕೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆದಿದ್ದು, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕರ್ನಾಟಕದ ಇಂಧನ ಸಚಿವ ಕೆಜೆ ಜಾರ್ಜ್ ಭಾಗವಹಿಸಿದ್ದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು. ಇದೇ ಸಭೆಯಲ್ಲಿ ಕರ್ನಾಟಕದ 11 ಸ್ಥಾನಗಳು ಮತ್ತು ತೆಲಂಗಾಣದ 7 ಸ್ಥಾನಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗಿದೆ. ಹನ್ನೊಂದರ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರದ ಹಾಲಿ ಸಂಸದ ಡಿಕೆ ಸುರೇಶ್ ಹೆಸರು ಅಂತಿಮಗೊಂಡಿದೆ. ಇನ್ನುಳಿದವರ ವಿವರ ಬಹಿರಂಗವಾಗಿಲ್ಲ.
ಇನ್ನುಳಿದಂತೆ, ಕೇರಳದ ವಯನಾಡ್‌ನಿಂದ ರಾಹುಲ್ ಗಾಂಧಿ, ಕಣ್ಣೂರ್‌ನಿಂದ ಕೇರಳ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್, ತಿರುವನಂತಪುರಂನಿಂದ ಶಶಿ ತರೂರ್ ಸೇರಿ 15 ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ. ಛತ್ತೀಸ್‌ಗಡದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ರಾಜ್‌ನಂದಗಾಂವ್ ನಿಂದ, ಮಾಜಿ ಸಚಿವ ತಾಮ್ರಧ್ವಜ್ ಸಾಹು ದುರ್ಗ್ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ. ಇಲ್ಲಿ 11 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಂಡಿದೆ.
ಕಾಂಗ್ರೆಸ್ ಪಕ್ಷದ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು (ಮಾ.8) ಪ್ರಕಟವಾದರೆ, ಎರಡನೇ ಪಟ್ಟಿ ಬಿಡುಗಡೆಗೂ ಮೊದಲು ಮಾರ್ಚ್ 11ಕ್ಕೆ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ. ದೆಹಲಿಯ ಮೂರು ಸ್ಥಾನಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವುದಕ್ಕೆ ಚುನಾವಣಾ ಸಮಿತಿ ಸೋಮವಾರ ಸಭೆ ಸೇರಲಿದೆ.
(This copy first appeared in Hindustan Times Kannada website. To read more on Lok Sabha Elections, Political developments, Lok Sabha Constituency profiles, Political Analysis in Kannada please visit kannada.hindustantimes.com)