ಮುಡಾ ಪ್ರಕರಣ; ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಲು ಸಮಯ ಕೇಳಿದ ಲೋಕಾಯುಕ್ತ, ಎಡಿಜಿಪಿಯಿಂದ ಅಧ್ಯಯನ
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾ ಪ್ರಕರಣ; ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಲು ಸಮಯ ಕೇಳಿದ ಲೋಕಾಯುಕ್ತ, ಎಡಿಜಿಪಿಯಿಂದ ಅಧ್ಯಯನ

ಮುಡಾ ಪ್ರಕರಣ; ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಲು ಸಮಯ ಕೇಳಿದ ಲೋಕಾಯುಕ್ತ, ಎಡಿಜಿಪಿಯಿಂದ ಅಧ್ಯಯನ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧದ ಮುಡಾ ಪ್ರಕರಣದ ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ಅಧಿಕಾರಿಗಳು ಸಮಯಾವಕಾಶ ಕೋರಿದ್ದಾರೆ. ಮನವಿ ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆ ಮುಂದೂಡಿದೆ. (ವರದಿ: ಎಚ್.‌ ಮಾರುತಿ, ಬೆಂಗಳೂರು)

ಮುಡಾ ಪ್ರಕರಣ; ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಲು ಸಮಯ ಕೇಳಿದ ಲೋಕಾಯುಕ್ತ ಇಲಾಖೆ
ಮುಡಾ ಪ್ರಕರಣ; ಹೈಕೋರ್ಟ್‌ಗೆ ಅಂತಿಮ ವರದಿ ಸಲ್ಲಿಸಲು ಸಮಯ ಕೇಳಿದ ಲೋಕಾಯುಕ್ತ ಇಲಾಖೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ಕೇಳಿ ಬಂದ ಮೈಸೂರು ನಗರಾಭಿವೃಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದ ತನಿಖೆಗೆ ರಚಿಸಲಾಗಿದ್ದ ಲೋಕಾಯುಕ್ತ ತನಿಖಾ ತಂಡ, ಅಂತಿಮ ವರದಿಯನ್ನು ಸಲ್ಲಿಸಲು ಕಾಲಾವಕಾಶ ಕೋರಿದೆ. ಲೋಕಾಯುಕ್ತ ಪರವಾಗಿ ಹಾಜರಾದ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರು ಅಂತಿಮ ವರದಿ ಸಲ್ಲಿಸಲು ಅಲ್ಪಾವಧಿಯ ಸಮಯಾವಕಾಶ ಕೇಳಿದ್ದರು. ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗಜಾನನ ಭಟ್ ಅವರು ಸರ್ಕಾರದ ಪರ ವಕೀಲರು ಮಾಡಿದ ಮನವಿಯನ್ನು ಪುರಸ್ಕರಿಸಿ ಮುಂದಿನ ವಿಚಾರಣೆಯನ್ನು ಇದೇ ತಿಂಗಳ 24ಕ್ಕೆ ಮುಂದೂಡಿದರು.

ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಸೂಚನೆಯಂತೆ ಮೈಸೂರು ಲೋಕಾಯುಕ್ತ ಎಸ್ ಪಿ ಉದೇಶ್ ಅವರು ಐದು ದಿನಗಳ ಹಿಂದೆಯೇ ಲೋಕಾಯುಕ್ತ ಎಡಿಜಿಪಿ ಸುಬ್ರಹ್ಮಣೇಶ್ವರ ರಾವ್ ಅವರಿಗೆ ತನಿಖಾ ವರದಿಯನ್ನು ಸಲ್ಲಿಸಿದ್ದಾರೆ. ವರದಿ ಲೋಕಾಯುಕ್ತ ಎಡಿಜಿಪಿ ಸುಬ್ರಹ್ಮಣೇಶ್ವರ ರಾವ್ ಮತ್ತು ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಲೋಕಾಯುಕ್ತ ವರದಿಯಲ್ಲಿ ಏನಿದೆ?

ಹಗರಣದ ಅಮೂಲಾಗ್ರ ತನಿಖೆ ನಡೆಸಿರುವ ಮೈಸೂರು ಲೋಕಾಯುಕ್ತ ಎಸ್‌ಪಿ ಉದೇಶ್ ಮತ್ತು ಅವರ ತಂಡ, ಲೋಕಾಯುಕ್ತ ಐಜಿಪಿ ಸುಬ್ರಮಣೇಶ್ವರ ರಾವ್‌ ಅವರಿಗೆ ತನಿಖೆಯ ಅಂತಿಮ ವರದಿಯನ್ನು ಸಲ್ಲಿಸಿದೆ. ಬಲ್ಲ ಮೂಲಗಳ ಪ್ರಕಾರ 550 ಪುಟಗಳ ವರದಿ ಸಲ್ಲಿಕೆ ಮಾಡಲಾಗಿದೆ. ಕೆಲವು ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿರುವುದು, ಅವಶ್ಯಕತೆ ಇಲ್ಲದಿದ್ದರೂ 14 ಸೈಟ್‌ಗಳನ್ನು ಹಂಚಿಕೆ ಮಾಡಿರುವುದು ಮೊದಲಾದ ಅಂಶಗಳನ್ನು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದು ಬಂದಿದೆ.

ದೇವರಾಜು ಅವರಿಗೆ ಜಮೀನು ಬಂದ ಹಿನ್ನೆಲೆ, ಡಿನೋಟಿಫಿಕೇಷನ್ ಮತ್ತು ಭೂ ಪರಿವರ್ತನೆ ಹೇಗೆ ಆಯಿತು, ಪಾರ್ವತಿ ಅವರಿಗೆ ನಿವೇಶನ ಹಂಚಿಕೆ, ನಂತರ ನಿವೇಶನಗಳನು ಹಿಂತಿರುಗಿಸಿರುವ ಬಗ್ಗೆ ಮತ್ತು ನಂತರದ ಬೆಳವಣಿಗೆಗಳ ಕುರಿತು ತನಿಖೆ ನಡೆಸಲಾಗಿದೆ. ಲೋಕಾಯುಕ್ತದ ಕಾನೂನು ಕೋಶ ಪರಿಶೀಲನೆ ಮಾಡಲಿದೆ. ನಂತರ ಪ್ರಕರಣ ಚಾರ್ಜ್ ಶೀಟ್‌ಗೆ ಯೋಗ್ಯವೋ ಅಥವಾ ಬಿ ರಿಪೋರ್ಟ್‌ಗೆ ಅರ್ಹವೋ ಎಂಬುದನ್ನು ಕುರಿತು ನಿರ್ಧರಿಸಲಿದೆ.

ಫೆ.7ರಂದು ಹೈಕೋರ್ಟ್‌ ಈ ಪ್ರಕರಣ ಕುರಿತು ಸಿಬಿಐ ತನಿಖೆಗೆ ವಹಿಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅರ್ಜಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.

ಕೇಂದ್ರ ಸಚಿವ ಕುಮಾರಸ್ವಾಮಿ ಭೂ ಒತ್ತುವರಿ ಆರೋಪ, ಸಮೀಕ್ಷೆ ಆರಂಭಿಸಿದ ಕಂದಾಯ ಇಲಾಖೆ

ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಅವರ ಸಂಬಂಧಿ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವರ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿ ಬಂದಿದ್ದು, ಹೈಕೋರ್ಟ್‌ ಸೂಚನೆಯಂತೆ ಸೋಮವಾರ ರಾಮನಗರ ತಾಲೂಕಿನ ಬಿಡದಿ ಹೋಬಳಿ ವ್ಯಾಪ್ತಿಯ ಕೇತಗಾನಹಳ್ಳಿ ತೋಟದ ಸುತ್ತಮುತ್ತ ಕಂದಾಯ ಇಲಾಖೆ ಸಮೀಕ್ಷೆ ಆರಂಭಿಸಿದೆ.

ಸಮಾಜ ಪರಿವರ್ತನಾ ವೇದಿಕೆಯ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸಮೀಕ್ಷೆ ನಡೆಸಿ ವರದಿ ನೀಡದಿರುವ ಕಂದಾಯ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿತ್ತು. ಜನವರಿ 29ರಂದು ಅರ್ಜಿ ವಿಚಾರಣೆಯ ವೇಳೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳನ್ನು ತರಾಟೆಗೆ ತೆಗೆದುಕೊಂಡು ಮುಂದಿನ ವಿಚಾರಣೆ ವೇಳೆಗೆ ಸರ್ವೆ ವರದಿ ನೀಡುವಂತೆ ಸೂಚಿಸಿತ್ತು.

ಸೋಮವಾರ (ಫೆ.17) ಬಿಡದಿ ಹೋಬಳಿ ರೆವಿನ್ಯೂ ಇನ್ಸ್‌ಪೆಕ್ಟರ್‌ ಪ್ರಕಾಶ್‌ ಮತ್ತು ವಿ.ಎ. ವಿಶಾಲಾಕ್ಷಿ ನೇತೃತ್ವದ 35ಕ್ಕೂ ಹೆಚ್ಚು ಸಿಬ್ಬಂದಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದರು. ಕುಮಾರಸ್ವಾಮಿ, ತಮ್ಮಣ್ಣ, ಕುಮಾರಸ್ವಾಮಿ ಸಹೋದರಿ ಅನುಸೂಯ ಮಂಜುನಾಥ್‌ ಅವರಿಗೆ ಸೇರಿದ ಜಮೀನಿನಲ್ಲಿ ಭೂ ಮಾಪನ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸಮೀಕ್ಷೆ ಕಾರ್ಯ ನಡೆಸಿದರು. ಕಂದಾಯ ಇಲಾಖೆ ಮೂಲಗಳ ಪ್ರಕಾರ ಮೊದಲ ದಿನವೇ ಸುಮಾರು 110 ಎಕರೆಯಷ್ಟು ಭೂಮಿಯನ್ನು ಸಮೀಕ್ಷೆ ಮಾಡಲಾಗಿದೆ. ಇಂದೂ ಸಹ ಸಮೀಕ್ಷೆ ಮುಂದುವರೆಯಲಿದೆ. ಇವರ ವಿರುದ್ಧ ಕೇತಗಾನಹಳ್ಳಿ ಗ್ರಾಮದ ಸ್ಮಶಾನ ಜಾಗ ಹಾಗೂ ಇನ್ನಿತರ ಸರಕಾರಿ ಭೂಮಿ ಒತ್ತುವರಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

  • ವರದಿ: ಎಚ್.‌ ಮಾರುತಿ, ಬೆಂಗಳೂರು

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner