ಹಂದಿಗಳ ಜೊತೆ ಕುಸ್ತಿ ಬೇಡ; ಕುಮಾರಸ್ವಾಮಿಗೆ ಎಡಿಜಿಪಿ ಚಂದ್ರಶೇಖರ್ ಟಾಂಗ್, ಕೇಂದ್ರ ಸಚಿವ vs ಐಪಿಎಸ್ ಅಧಿಕಾರಿ ಜಟಾಪಟಿ-lokayukta sit adgp chandrashekhar storng reply to central minister hd kumaraswamy allegations prs ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಹಂದಿಗಳ ಜೊತೆ ಕುಸ್ತಿ ಬೇಡ; ಕುಮಾರಸ್ವಾಮಿಗೆ ಎಡಿಜಿಪಿ ಚಂದ್ರಶೇಖರ್ ಟಾಂಗ್, ಕೇಂದ್ರ ಸಚಿವ Vs ಐಪಿಎಸ್ ಅಧಿಕಾರಿ ಜಟಾಪಟಿ

ಹಂದಿಗಳ ಜೊತೆ ಕುಸ್ತಿ ಬೇಡ; ಕುಮಾರಸ್ವಾಮಿಗೆ ಎಡಿಜಿಪಿ ಚಂದ್ರಶೇಖರ್ ಟಾಂಗ್, ಕೇಂದ್ರ ಸಚಿವ vs ಐಪಿಎಸ್ ಅಧಿಕಾರಿ ಜಟಾಪಟಿ

HD Kumaraswamy vs ADGP Chandrashekar: ತಮ್ಮ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೆ ಲೋಕಾಯುಕ್ತ ಎಸ್​ಐಟಿ ಎಜಿಡಿಪಿ ಚಂದ್ರಶೇಖರ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸಚಿವ vs ಐಪಿಎಸ್ ಅಧಿಕಾರಿ ಜಟಾಪಟಿ
ಕೇಂದ್ರ ಸಚಿವ vs ಐಪಿಎಸ್ ಅಧಿಕಾರಿ ಜಟಾಪಟಿ

ಬೆಂಗಳೂರು: ಲೋಕಾಯುಕ್ತ ಎಸ್​ಐಟಿ ಎಡಿಜಿಪಿ, ಹಿರಿಯ ಐಪಿಎಸ್ ಅಧಿಕಾರಿ ಚಂದ್ರಶೇಖರ್ ಅವರು (ADGP Chandrashekar) ತಮ್ಮ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರಿಗೆ (HD Kumaraswamy) ಪತ್ರದ ಮೂಲಕ ಟಾಂಗ್​ ಕೊಟ್ಟು, ಅದೇ ಪತ್ರದ ಮುಖೇನ ಹಂದಿಗೆ ಹೋಲಿಸಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಗಂಗೇನಹಳ್ಳಿಯ 1 ಎಕರೆ 11 ಗುಂಟೆ ಭೂಮಿ ಡಿನೋಟಿಫಿಕೇಷನ್ ಸಂಬಂಧ ಕುಮಾರಸ್ವಾಮಿ, ಲೋಕಾಯುಕ್ತ ಎಸ್​ಐಟಿ ವಿಚಾರಣೆಗೆ ಹಾಜರಾದ ನಂತರ ಪ್ರೆಸ್​ಮೀಟ್​​ನಲ್ಲಿ ಐಪಿಎಸ್ ಅಧಿಕಾರಿ ವಿರುದ್ಧ ಕಿಡಿಕಾರಿದ್ದರು.

ಸೆಪ್ಟೆಂಬರ್​ 28ರ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಹೆಚ್​​ಡಿಕೆ, ಎಡಿಜಿಪಿ ಚಂದ್ರಶೇಖರ್​ ವಿರುದ್ಧ ಸಿಕ್ಕಾಪಟ್ಟೆ ಆರೋಪ ಮಾಡಿದ್ದರು. ಅಚ್ಚರಿ ಏನೆಂದರೆ ಕುಮಾರಸ್ವಾಮಿ ಡಿನೋಟಿಫಿಕೇಷನ್ ಪ್ರಕರಣವನ್ನು ಚಂದ್ರಶೇಖರ್ ಅವರೇ ತನಿಖೆ ನಡೆಸುತ್ತಿದ್ದಾರೆ. ರಾಜ್ಯಪಾಲರ ಕಚೇರಿ ಪರಿಶೀಲನೆ ನಡೆಸಬೇಕು ಎನ್ನುವುದರ ಕುರಿತು ಪ್ರತಿಕ್ರಿಯಿಸಿದ ಹೆಚ್​ಡಿಕೆ, ಲೋಕಾಯುಕ್ತ ಎಸ್​ಐಟಿ ಚಂದ್ರಶೇಖರ್ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ಮಾನ್ಯತಾ ಟೆಕ್​ ಪಾರ್ಕ್​ನಲ್ಲಿ 38 ಮಹಡಿಗಳ ಬಿಲ್ಡಿಂಗ್​​ ಅನ್ನು ತನ್ನ ಹೆಂಡತಿ ಹೆಸರಿನಲ್ಲಿ ಕಟ್ಟಿಸುತ್ತಿದ್ದಾರೆ. ಅವರು ಕಾನೂನು ಬಾಹಿರವಾಗಿ ಇಲ್ಲೇ ಇದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದರು.

ಚಂದ್ರಶೇಖರ್ ಬಿಡುಗಡೆ ಹೇಳಿಕೆಯಲ್ಲಿ ಏನಿದೆ?

ಇದಕ್ಕೆ ಉತ್ತರಿಸಿದ ಎಡಿಜಿಪಿ ಚಂದ್ರಶೇಖರ್​, ಎಸ್​ಐಟಿ ತನಿಖೆ ನಡೆಸುತ್ತಿರುವ ಅಪರಾಧ ಸಂಖ್ಯೆ 16/14ರ ಆರೋಪಿ ಹೆಚ್​​ಡಿ ಕುಮಾರಸ್ವಾಮಿ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಸುಳ್ಳು, ಮಾನಹಾನಿಕಾರಕ, ದುರುದ್ದೇಶಪೂರಿತ ಆರೋಪಗಳು, ಬೆದರಿಕೆ ಹಾಕಿದರು. ರಾಜ್ಯಪಾಲರ ಬಳಿ ಈ ಆರೋಪಿ ಪ್ರಾಸಿಕ್ಯೂಷನ್​ಗೆ ಅನುಮತಿ ಕೋರಿದ ವಿಷಯ ನಿಮಗೆ ಗೊತ್ತಿದೆ. ಜಾಮೀನಿನ ಮೇಲಿರುವ ಈ ಆರೋಪಿ, ನಮ್ಮ ಕರ್ತವ್ಯ ನಿಭಾಯಿಸದೇ ಇರುವಂತೆ ಮಾಡುವಂತೆ ಈ ರೀತಿ ಆರೋಪ ಮಾಡಿದ್ದಾರೆ. ನನ್ನ ಮೇಲೆ ದಾಳಿ ಮಾಡುವ ಮೂಲಕ ಎಸ್‌ಐಟಿ ಅಧಿಕಾರಿಗಳಲ್ಲಿ ಭಯ ಸೃಷ್ಟಿಸುವುದು ಮತ್ತು ಮನೋಬಲ ಕುಸಿಯುವಂತೆ ಮಾಡುವುದು ಅವರ ಉದ್ದೇಶದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲ, ಆದರೆ, ಒಬ್ಬ ಆರೋಪಿ ಎಷ್ಟೇ ಉನ್ನತ, ದೊಡ್ಡ ವ್ಯಕ್ತಿ, ಎಷ್ಟೇ ಶೌರ್ಯವಂತರಾಗಿದ್ದರೂ ಅವನು ಆರೋಪಿಯೇ. ಈ ರೀತಿಯಾದ ಆರೋಪಗಳು ಮತ್ತು ಬೆದರಿಕೆಗಳಿಂದ ನಾವು ಮನೋಬಲ ಕುಸಿಯದಂತೆ ನೋಡಿಕೊಳ್ಳಬೇಕು. ನಾನು ಎಸ್‌ಐಟಿ ಮುಖ್ಯಸ್ಥನಾಗಿ ನಿಮಗೆ ಹೇಳುತ್ತಿದ್ದೇನೆ, ನಾನು ಭಯ ಅಥವಾ ರಾಗಾದ್ವೇಷಗಳಿಲ್ಲದೆ ಈ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಕೊಡಿಸುವುದಕ್ಕೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಹೊರಗಡೆಯಿಂದ ಬರಬಹುದಾದ ಒತ್ತಡಗಳಿಂದ, ಎಲ್ಲಾ ಬಾಹ್ಯ ಪ್ರಭಾವಗಳಿಂದ ನಾನು ನಿಮ್ಮನ್ನು ರಕ್ಷಿಸುತ್ತೇನೆ ಎಂದು ನಿಮಗೆ ಭರವಸೆ ನೀಡುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಂದಿಗಳೊಂದಿಗೆ ಕುಸ್ತಿ ಆಡುವುದಿಲ್ಲ ಎಂದ ಎಡಿಜಿಪಿ

ಜನಪ್ರಿಯ ಜಾರ್ಜ್ ಬರ್ನಾರ್ಡ್ ಷಾ ಅವರ ಪ್ರಸಿದ್ಧ ಹೇಳಿಕೆ ಇದೆ. ಅದೇನೆಂದರೆ ಹಂದಿಗಳ ಜೊತೆ ಎಂದಿಗೂ ಕುಸ್ತಿಯಾಡಬೇಡ. ಹಂದಿ ಮತ್ತು ನೀವು ಇಬ್ಬರು ಕೊಳಕಾಗುತ್ತೀರಿ. ಆದರೆ ಹಂದಿಯು ಅದನ್ನು ಇಷ್ಟಪಡುತ್ತದೆ. ಆದರೆ ನಮ್ಮ ಕರ್ತವ್ಯವನ್ನು ನಿರ್ವಹಿಸುವ ವೇಳೆ ಅಪರಾಧಿಗಳು ಮತ್ತು ಆರೋಪಿಗಳನ್ನು ಎದುರಿಸುವುದನ್ನು ನಾವು ತಪ್ಪಿಸಲು ಸಾಧ್ಯವಿಲ್ಲ. ಯಾವ ಕ್ರಿಮಿನಲ್​, ಯಾವ ಆರೋಪಿಗಳ ಜೊತೆ ವಿರೋಧ ಕಟ್ಟಿಕೊಳ್ಳುತ್ತೇವೋ ಅವರು ನಮ್ಮ ಮೇಲೆ ಕೊಳಕು ಎಸೆಯುತ್ತಾರೆ. ಇದು ನಮ್ಮ ಕರ್ತವ್ಯ. ಭರವಸೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ. ಏಕೆಂದರೆ, ಸತ್ಯ ಯಾವಾಗಲೂ ಜಯಗಳಿಸುತ್ತದೆ. ಸತ್ಯ ಮತ್ತು ದೇವರು ಮತ್ತು ನಮ್ಮ ಕಾನೂನಿನಲ್ಲಿ ನಂಬಿಕೆ ಇರಲಿ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಿ ಸಿಬ್ಬಂದಿಗೆ ಧೈರ್ಯ ತುಂಬಿದ್ದಾರೆ.

ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದೇನು?

ರಾಜ್ಯಪಾಲರ ಕಚೇರಿಯಲ್ಲಿ ಮಾಹಿತಿ ಸೋರಿಕೆಗೆ ಸಂಬಂಧಿಸಿ, ನಿಮ್ಮ ಆಫೀಸ್ ಪರಿಶೀಲನೆ ನಡೆಸುತ್ತೇವೆ ಎಂದಿದ್ದ ಚಂದ್ರಶೇಖರ್​ ವಿರುದ್ಧ ಪ್ರೆಸ್​ಮೀಟ್​ನಲ್ಲಿ ಹೆಚ್​​ಡಿಕೆ ಕಿಡಿಕಾರಿದರು. ಚಂದ್ರಶೇಖರ್​ಗೆ ಎಷ್ಟು ಉದ್ಧಟತನ ಇರಬೇಕು? ಗವರ್ನರ್​ ಕಚೇರಿ ಪರಿಶೀಲಿಸುತ್ತೇವೆ ಎಂದರೆ ಏನರ್ಥ? ನಿಮಗೆ ಸರ್ಕಾರ ಅನುಮತಿ ಕೊಟ್ಟಿತ್ತಾ? ಚಂದ್ರಶೇಖರ್ ಹಿನ್ನೆಲೆ ಗೊತ್ತಾ? ಈ ವ್ಯಕ್ತಿ ಹಿನ್ನೆಲೆ ಹುಡುಕಿ ಹೊರಟಾಗ ಗೊತ್ತಾಗಿದ್ದು, ಹಿಮಾಚಲ ಪ್ರದೇಶದ ಕೇಡರ್​​ನಲ್ಲಿ ಇರಬೇಕಾದವರು. ಯುಪಿಎಸ್​ಸಿಯಲ್ಲಿ ಆಯ್ಕೆಯಾಗಿ ಹಿಮಾಚಲದಲ್ಲಿ ಕೆಲಸ ಮಾಡಬೇಕಾದವನು ಎಂದು ಏಕವಚನದಲ್ಲೇ ದಾಳಿ ನಡಸಿದ್ದರು.

ಆದರೆ, ಕೆಲವು ಸೂಕ್ಷ ವಿಚಾರಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ನಾನು ಹಿಟ್ ಅಂಡ್ ರನ್ ಮಾಡುವುದಿಲ್ಲ. 1998ರಲ್ಲಿ ಚಂದ್ರಶೇಖರ್​​ ಆಯ್ಕೆ ಆಗಿರೋದು. 2008ರಲ್ಲಿ ಕರ್ನಾಟಕಕ್ಕೆ ಬಂದರು. ಮನವಿ ಮಾಡಿಕೊಂಡು ಬೇರೆ ರಾಜ್ಯಗಳನ್ನು ಕೇಳುತ್ತಾರೆ. ಆದರೆ ಹಿಮಾಚಲ ಪ್ರದೇಶಕ್ಕೆ ಹೋಗುತ್ತಿಲ್ಲ. ಏಕೆಂದರೆ ಅಲ್ಲಿನ ವಾತಾವರಣ ಹೊಂದಲ್ಲ ಎಂದು ಸುಳ್ಳು‌ ದಾಖಲೆ ಸೃಷ್ಟಿಸಿ ಇಲ್ಲೇ ಮುಂದುವರೆದಿದ್ದಾರೆ. ನಾನೆಲ್ಲೋ ಇವರು ದೊಡ್ಡ ಸೂಪರ್ ಕಾಪ್ ಇರಬೇಕು ಅನ್ಕೊಂಡಿದ್ದೆ. ಅವರು ಕಾನೂನುಬಾಹಿರವಾಗಿ ಇಲ್ಲೇ ಮುಂದುವರೆದಿದ್ದಾನೆ. ಮಾನ್ಯತಾ ಟೆಕ್​ ಪಾರ್ಕ್​ ಮುಂಭಾಗ 38 ಮಹಡಿಗಳ ಬಿಲ್ಡಿಂಗ್ ಅನ್ನು ತನ್ನ ಹೆಂಡತಿ ಹೆಸರಿನಲ್ಲಿ ಕಟ್ಟುತ್ತಿದ್ದಾರೆ. ಅದು ಕೂಡ ರಾಜಕಾಲುವೆ ಜಾಗದಲ್ಲಿ ಎಂದು ಹೆಚ್​ಡಿಕೆ ವಾಗ್ದಾಳಿ ನಡೆದಿದ್ದಾರೆ.

ಸಚಿವರ ಕುರಿತು ಬಳಸುವ ಭಾಷೆ ಇದಲ್ಲ ಎಂದ ಹಿರಿಯ ಅಂಕಣಕಾರ

ಎಡಿಜಿಪಿ ಎಸ್ಐಟಿ ಅವರು ನೀಡಿರುವ ಹೇಳಿಕೆಯಲ್ಲಿ ಅವರು ಕೇಂದ್ರ ಸಚಿವರನ್ನು ಉಲ್ಲೇಖಿಸಿ ಮಾತನಾಡುವಾಗ ಬಳಸಿರುವ ಭಾಷೆ ಮತ್ತು ಅವರನ್ನು ಹಂದಿಯ ಜೊತೆ ಹೋಲಿಕೆ ಮಾಡುವಂತಹ ರೂಪಕವನ್ನು ಬಳಸಿರುವುದು ಅವರ ವೃತ್ತಿಪರತೆ ಮತ್ತು ಸಾರ್ವಜನಿಕ ಸ್ಥಾನದಲ್ಲಿ ಇರುವವರ ಕುರಿತು ಅವರು ಹೊಂದಿರುವ ಗೌರವಗಳ ಕುರಿತು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಕಾನೂನಿನ ಪ್ರಕ್ರಿಯೆಗಳು ಏನೇ ಇದ್ದರೂ, ಓರ್ವ ಸಚಿವರ ಕುರಿತು ಬಳಸುವ ಭಾಷೆ ಇದಲ್ಲ. ಪ್ರಸ್ತುತ ಪೊಲೀಸ್ ಅಧಿಕಾರಿಗೆ ಓರ್ವ ವ್ಯಕ್ತಿ ಅಥವಾ ಅವರಿರುವ ಸ್ಥಾನವನ್ನು ನೇರವಾಗಿ ಅವಮಾನಿಸುವ ಉದ್ದೇಶ ಇಲ್ಲದಿರಬಹುದು. ಆದರೆ, ಅವರು ಬಳಸಿರುವ ಭಾಷೆ ಸಾರ್ವಜನಿಕ ಅಭಿಪ್ರಾಯವನ್ನು ಋಣಾತ್ಮಕವಾಗಿಸಬಹುದು. ಅವರು ಅಧಿಕೃತ ರೀತಿಯಲ್ಲಿ ನಡೆಸಬೇಕಾಗಿರುವ ಸಂವಹನದ ಮಟ್ಟವನ್ನು ಕೆಳಗಿಳಿಸಿದಂತೆ ಕಾಣುತ್ತಿದೆ. ಕಾನೂನು ತನ್ನ ಕ್ರಮವನ್ನು ಸಮರ್ಪಕವಾಗಿ ತೆಗೆದುಕೊಳ್ಳುವಂತೆ ಮಾಡುವುದು ಖಂಡಿತಾ ಸರಿ. ಆದರೆ, ಆರೋಪಗಳ ಕುರಿತು ಮಾತನಾಡುವ ಸಂದರ್ಭದಲ್ಲಿ, ಜವಾಬ್ದಾರಿಯುತ ಹುದ್ದೆಯಲ್ಲಿ ಇರುವವರು ತಮ್ಮ ಪದಗಳನ್ನು ಜಾಗರೂಕವಾಗಿ ಬಳಸಬೇಕು. ಅವರು ಬಳಸುವ ಮಾತುಗಳು ಅವರದೇ ವೈಯಕ್ತಿಕ ಗೌರವ ಮತ್ತು ಅವರು ಮಾತನಾಡುವ ವಿಚಾರಗಳ ಭಾಗವಾಗಿರುವವರ ಗೌರವವನ್ನೂ ಒಳಗೊಂಡಿರುತ್ತದೆ. ಅಧಿಕಾರದ ಸ್ಥಾನದಲ್ಲಿ ಇರುವವರು ಇದನ್ನು ಅರಿತು ಮಾತನಾಡುವುದು ಉತ್ತಮ ಎಂದು ಹಿರಿಯ ಅಂಕಣಕಾರ ಗಿರೀಶ್ ಲಿಂಗಣ್ಣ ಅವರು ಹೇಳಿದ್ದಾರೆ.

mysore-dasara_Entry_Point