ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕದ 2ನೇ ಹಂತದ ಮತದಾನ ಮುಕ್ತಾಯ, ಘರ್ಷಣೆ, ಬಿಸಿಲ ನಡುವೆ ಭಾರೀ ಹಕ್ಕು ಚಲಾವಣೆ

ಕರ್ನಾಟಕದ 2ನೇ ಹಂತದ ಮತದಾನ ಮುಕ್ತಾಯ, ಘರ್ಷಣೆ, ಬಿಸಿಲ ನಡುವೆ ಭಾರೀ ಹಕ್ಕು ಚಲಾವಣೆ

ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲ ಎರಡನೇ ಹಂತದ ಮತದಾನವೂ ಮುಕ್ತಾಯವಾಗಿದೆ. ಚುನಾವಣೆ ಹಾಗೂ ಮತದಾನದ ಚಿತ್ರಣದ ಇಲ್ಲಿದೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕೆಸರೊಳ್ಳಿ ಗ್ರಾಮ ಪಂಚಾಯತಿಯ ಗರಡೊಳ್ಳಿ ಗ್ರಾಮದ ಜನಾಂಗೀಯ ಮತಗಟ್ಟೆಯಲ್ಲಿ ಜನಾಂಗೀಯ ಜನರು ತಮ್ಮ ವಿಶೇಷ ಉಡುಪುಗಳನ್ನು ಧರಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದರು.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕೆಸರೊಳ್ಳಿ ಗ್ರಾಮ ಪಂಚಾಯತಿಯ ಗರಡೊಳ್ಳಿ ಗ್ರಾಮದ ಜನಾಂಗೀಯ ಮತಗಟ್ಟೆಯಲ್ಲಿ ಜನಾಂಗೀಯ ಜನರು ತಮ್ಮ ವಿಶೇಷ ಉಡುಪುಗಳನ್ನು ಧರಿಸಿ ಮತದಾನ ಮಾಡುವ ಮೂಲಕ ಗಮನ ಸೆಳೆದರು.

ಬೆಂಗಳೂರು: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮಂಗಳವಾರ ನಡೆದ 2 ನೇ ಹಂತದ ಮತದಾನ ಮುಕ್ತಾಯವಾಗಿದೆ. ಅಲ್ಲಲ್ಲಿ ನಡೆದ ಸಣ್ಣಪುಟ್ಟ ಘರ್ಷಣೆಗಳು, ಬಿಸಿಲಿನ ಬೇಗೆಯ ನಡುವೆಯೂ ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಯವರೆಗೆ ನಡೆದಿದೆ. ಕೆಲವು ಕಡೆ ಸಣ್ಣ ತೊಂದರೆಗಳು ಕಂಡು ಬಂದರೂ ಮತದಾನಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಇದರೊಂದಿಗೆ ಕರ್ನಾಟಕದ ಎಲ್ಲಾ 28 ಲೋಕಸಭಾ ಕ್ಷೇತ್ರಗಳ ಮತದಾನವೂ ಮುಕ್ತಾಯವಾದಂತಾಗಿದೆ. ಇನ್ನೇನಿದ್ದರೂ ಜೂನ್‌ 4ರಂದು ಮತ ಎಣಿಕೆವರೆಗೂ ಕಾಯಬೇಕಾದ ಸಮಯ.

ಟ್ರೆಂಡಿಂಗ್​ ಸುದ್ದಿ

ಕುಂದಾ ನಗರಿ ಬೆಳಗಾವಿ ಕ್ಷೇತ್ರದಲ್ಲಿ ಶೇ. 71.11ರಷ್ಟು ಮತದಾನವಾಗಿದ್ದು, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಶೇ.78.41ರಷ್ಟು ಮತದಾನವಾಗಿದೆ. 2019ರ ಲೋಕಸಭಾ ಚುನಾವಣಾ ಮತದಾನಕ್ಕಿಂತ ಈ ಬಾರಿ ಬೆಳಗಾವಿಯಲ್ಲಿ ಶೇ.3.56ರಷ್ಟು ಹೆಚ್ಚು ಮತದಾನವಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಮತದಾನವಾಗಿದೆ. ಒಟ್ಟು 78.24 ಮಂದಿ ತಮ್ಮ ಹಕ್ಕನ್ನು ಚಲಾವಣೆ ಮಾಡಿದ್ದಾರೆ.

ಬಾಗಲಕೋಟೆ ಕ್ಷೇತ್ರದಲ್ಲಿ ಶೇ. 69.33, ಬಳ್ಳಾರಿ ಕ್ಷೇತ್ರದಲ್ಲಿ ಶೇ 69.13, ಬೀದರ್‌ ಕ್ಷೇತ್ರದಲ್ಲಿ ಶೇ 61.72 , ವಿಜಯಪುರ ಕ್ಷೇತ್ರದಲ್ಲಿ ಶೇ 64.71, ದಾವಣಗೆರೆ ಕ್ಷೇತ್ರದಲ್ಲಿ ಶೇ 73.17, ಧಾರವಾಡ ಕ್ಷೇತ್ರದಲ್ಲಿ ಶೇ. 73.17, ಕಲಬುರಗಿ ಕ್ಷೇತ್ರದಲ್ಲಿ ಶೇ 61.38, ಹಾವೇರಿ ಕ್ಷೇತ್ರದಲ್ಲಿ ಶೇ 72.59, ಕೊಪ್ಪಳ ಕ್ಷೇತ್ರದಲ್ಲಿ ಶೇ 66.69, ರಾಯಚೂರು ಕ್ಷೇತ್ರದಲ್ಲಿ ಶೇ 60.72, ಉತ್ತರ ಕನ್ನಡ ಕ್ಷೇತ್ರದಲ್ಲಿ ಶೇ 72.57 ರಷ್ಟು ಮತದಾನವಾದ ವರದಿಯಾಗಿದೆ.

ಗಣ್ಯರ ಮತದಾನ

ಹಲವು ಕ್ಷೇತ್ರಗಳಲ್ಲಿ ಗಣ್ಯರು ಮತದಾನ ಮಾಡಿದರು. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಕುಟುಂಬದವರು ಶಿಕಾರಿಪುರ, ಜಗದೀಶ್‌ ಶೆಟ್ಟರ್‌ ಕುಟುಂಬದವರು ಬೆಳಗಾವಿ ಹಾಗೂ ಹುಬ್ಬಳ್ಳಿ, ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯಲ್ಲಿ ಮತ ಚಲಾಯಿಸಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಲ್ಲಿ ಮತ ಹಾಕಿದರು.

ಭಾಲ್ಕಿಯಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಮತದಾನಕಲ್ಯಾಣ ಕರ್ನಾಟಕ ಭಾಗದಲ್ಲಿ ಖಂಡ್ರೆ ಕುಟುಂಬದಿಂದ ತಾತ, ಮಗ, ಮೊಮ್ಮಗ ಬೀದರ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಭಾಲ್ಕಿಯಲ್ಲಿ ಮತ ಚಲಾಯಿಸಿದ್ದು, ಈ ಅಪರೂಪದ ಘಟನೆಗೆ ಹಲವರು ಸಾಕ್ಷಿಯಾದರು.

ಮಾಜಿ ಸಾರಿಗೆ ಸಚಿವರು, ಸ್ವಾತಂತ್ರ್ಯ ಹೋರಾಟಗಾರರು, ಏಕೀಕರಣ ಚಳವಳಿಯ ನೇತಾರರು ಹಾಗೂ ಲೋಕನಾಯಕ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ಅವರು ವಾರ್ಧಕ್ಯದ ನಡುವೆಯೂ ಉತ್ಸಾಹದಿಂದ ಗಾಲಿ ಕುರ್ಚಿಯಲ್ಲಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹಾಗೂ ಅವರ ಪುತ್ರ ಮತ್ತು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಈಶ್ವರ್ ಖಂಡ್ರೆ ಅವರು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ನೂತನ ಕಚೇರಿಯ ಸಭಾ ಭವನದ ಮತಗಟ್ಟೆ ಸಂಖ್ಯೆ 118ರಲ್ಲಿ ತಮ್ಮ ಹಕ್ಕು ಚಲಾಯಿಸಿದರು. ಖಂಡ್ರೆ ಕುಟುಂಬದ ಇತರ ಸದಸ್ಯರೂ ಇದೇ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಶಾಸಕಗೆ ಕೋರ್ಟ್‌ ಅನುಮತಿ

ಜಿಪಂ ಸದಸ್ಯ ಯೋಗೇಶ ಗೌಡ ಹತ್ಯೆ ಪ್ರಕರಣದಲ್ಲಿ ಗಡಿಪಾರಾಗಿರುವ ಧಾರವಾಡ ಶಾಸಕ ಹಾಗೂ ಮಾಜಿ ಸಚಿವ ವಿನಯಕುಲಕರ್ಣಿ ನ್ಯಾಯಾಲಯದ ಅನುಮತಿ ಮೇರೆಗೆ ಧಾರವಾಡಕ್ಕೆ ಬಂದು ಮತ ಚಲಾಯಿಸಿದರು.

ಮತದಾನ ಮಾಡಲು ಧಾರವಾಡ ಪ್ರವೇಶಕ್ಕೆ ಶಾಸಕ ವಿನಯ್ ಕುಲಕರ್ಣಿ ಮನವಿ ಮಾಡಿದ್ದರು. ಧಾರವಾಡ ಹೈಕೋರ್ಟ್ ಪೀಠದ ನ್ಯಾ.ಎಂ.ಜೆ ಉಮಾ ನೇತೃತ್ವದ ಏಕಸದಸ್ಯ ಪೀಠ ಅನುಮತಿ ನೀಡಿದ್ದರಿಂದ ಕುಟುಂಬ ಸಮೇತರಾಗಿ ಅವರು ಹಕ್ಕು ಚಲಾಯಿಸಿದರು

ಮಾರಾಮಾರಿ

ಬೆಳಗಾವಿ ಜಿಲ್ಲೆ ಸವದತ್ತಿ ಮತ ಕ್ಷೇತ್ರದ ಭಂಡಾರಹಳ್ಳಿ ಬೂತ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಕಾಂಗ್ರೆಸ್‌ ಕಾರ್ಯಕರ್ತ ಹಣಮಂತಪ್ಪ ಅರಬಾವಿ ಎಂಬಾತನಿಗೆ ತೀವ್ರ ಗಾಯವಾಗಿದೆ. ಐವರ ವಿರುದ್ದ ಪ್ರಕರಣವೂ ದಾಖಲಾಗಿದೆ.

IPL_Entry_Point