ಓದು, ಕಲಿಕೆ ನಿಜವಾದ ಲಾಂಗ್ ಟರ್ಮ್ ಇನ್ವೆಸ್ಟ್‌ಮೆಂಟ್, ಕೆಳವರ್ಗದವರು ಅರ್ಥ ಮಾಡಿಕೊಳ್ಳಬೇಕಾದ ವಿಷಯವಿದು: ಮಧು ವೈಎನ್ ಬರಹ
ಓದು, ಕಲಿಕೆ ಎಂಬುದು ನಿಜವಾದ ದೀರ್ಘಕಾಲದ ಹೂಡಿಕೆ. ಜ್ಞಾನದ ಹಸಿವನ್ನು ನಾವಾಗೇ ಬೆಳೆಸ್ಕೊಬೇಕು. ಅದು ಉದ್ಯೋಗಕ್ಕೆ ಸಂಬಂಧವೇ ಇರದಿರಬಹುದು, ಅದರಿಂದ ಹಣ, ಆಸ್ತಿ, ಅಧಿಕಾರ ಏನೂ ಲಾಭ ಸಿಗದಿರಬಹುದು. ಆದರೆ, ಇದನ್ನು ಕೆಳವರ್ಗದವರು ಅರ್ಥ ಮಾಡಿಕೊಳ್ಳಬೇಕು ಎಂದು ಮಧು ವೈಎನ್ ಅರ್ಥಪೂರ್ಣವಾಗಿ ಫೇಸ್ಬುಕ್ ವಾಲ್ನಲ್ಲಿ ಬರೆದಿದ್ದಾರೆ.

ಮಧು ವೈಎನ್ ಬರಹ…
ಇದೊಂದು ಮಾತನ್ನು ಕಾಳಜಿಯಿಂದ ಹೇಳ್ತೇನೆ, ಯಾರೂ ಅಪಾರ್ಥ ಮಾಡಿಕೊಳ್ಳಬಾರದು. ಇನ್ ಫ್ಯಾಕ್ಟ್ ನನಗೆ ಸಿಗುವ ಯುವಕರಿಗೆಲ್ಲಾ ಹೇಳ್ತಿರ್ತೇನೆ, ಇದೀಗ ಸಾರ್ವಜನಿಕ ಪೋಸ್ಟು ಅಷ್ಟೇ. ಮೇಲ್ವರ್ಗದ ಜನ ಏನು ಸಿಕ್ಕಿದರೂ ಓದ್ತಾರೆ. ಅವರಲ್ಲೊಂದು ಆ ಹಪಹಪಿ ಕಾಣಿಸುತ್ತದೆ. ಅದಷ್ಟೇ ಅಲ್ಲ, ಯಾರು ಬರೆದಿದ್ದರೂ ಓದ್ತಾರೆ. ಆಮೇಲೆ ಜಡ್ಜ್ ಮೆಂಟಲ್ ಇರ್ತಾರೆ ಅದು ಬೇರೆ ವಿಷಯ. ಕೆಳವರ್ಗದಲ್ಲಿ ಈ 'ಹಪಹಪಿ' ಇಲ್ಲ, ಅಥವಾ ಕಡಿಮೆ. ಅಲ್ಲೊಂದು ಇಲ್ಲೊಂದು ಇದ್ದ ಮಗು ಅದು ಹೇಗೋ ಬೆಳೆದು ಮುಂದೆ ಬಂದು ಬಿಡುತ್ತೆ. ಕೆಲವೊಮ್ಮೆ ಅರ್ಧಂಬರ್ಧಕ್ಕೇ ತೃಪ್ತಿಯಾಗಿಬಿಡುವುದೂ ಇದೆ.
ನಾನು ಮೊದಲ ಸಲ ಬೆಂಗಳೂರಿಗೆ ಕಾಲಿಟ್ಟಾಗ ವಿಜಯ್ ಕುಮಾರ್ ಅಂತ ಒಬ್ಬರು ಸರ್ ಹೇಳಿದ ಒಂದು ಮಾತು ನೆನಪಾಗ್ತಿದೆ. ಅವರು ಹೆಚ್ಎಎಲ್ನಲ್ಲಿ ಟೆಕ್ನಿಕಲ್ ಆರ್ಕಿಟೆಕ್ಟ್ ಏನೋ ಆಗಿದ್ದಂಥವರು. ನಮಗೆ ಆಗೆಲ್ಲ ಬಹಳ ಅಪೌಷ್ಠಿಕತೆ ಕಾಡ್ತಾ ಇತ್ತು. ಅವರು - ಏನು ಸಿಕ್ಕಿದರೂ ತಿನ್ನಿ, ಕುಡಿಯಿರಿ ಅನ್ನೋರು. ಹೋಟೆಲಲ್ಲಿ ಸಿಗುವ ಚಟ್ನಿಯನ್ನೂ ಬಿಡಬೇಡಿ, ಒಂದು ಲೋಟ ಟೀ ಸಿಕ್ಕಿದರೆ ಅದನ್ನೂ ಎಳ್ಕೊಳಿ, ಅದ್ರಲ್ಲೇ ಸೊಲ್ಪ ಶುಗರ್ ಇರುತ್ತೆ, ಶಕ್ತಿ ಬರುತ್ತೆ ಅನ್ನೋರು.
‘ಸಿಕ್ಕಿದ್ದೆಲ್ಲಾ ಓದಿ, ಉಪಯೋಗಕ್ಕೆ ಬಂದೇ ಬರುತ್ತೆ’
ದೈಹಿಕ ಹಸಿವನ್ನು ನಾವೇ ಎಳ್ಕೊಳದಲ್ಲ, ಅದಾಗೆ ಹುಡಿಕ್ಕೊಂಡು ಬರುತ್ತೆ, ದರಿದ್ರ ಲಕ್ಷ್ಮಿ ತರಹ. ಆದರೆ ಜ್ಞಾನದ ಹಸಿವನ್ನು ನಾವಾಗೇ ಬೆಳೆಸ್ಕೊಬೇಕು. ಅದು ಉದ್ಯೋಗಕ್ಕೆ ಸಂಬಂಧವೇ ಇರದಿರಬಹುದು, ಅದರಿಂದ ಹಣ, ಆಸ್ತಿ, ಅಧಿಕಾರ ಏನೂ ಲಾಭ ಸಿಗದಿರಬಹುದು. ಆದಾಗ್ಯೂ ಸುಮ್ಮನೇ ತಿಳ್ಕೊಳ್ತಾ ಹೋಗಬೇಕು. ಮುಂದೆಂದಾದರೂ ನಿಮ್ಮ ಉಪಯೋಗಕ್ಕೆ ಬಂದೇ ಬರುತ್ತದೆ. ಲಾಂಗ್ ಟರ್ಮ್ ಇನ್ವೆಸ್ಟ್ ಮೆಂಟು ಅದು. ಮತ್ತು ಅನೇಕ ಸಲ ಅದು ನೇರವಾಗಿ ಏನನ್ನೂ ಕೊಟ್ಟಿರಲ್ಲ. ಸುಪ್ತವಾಗಿ ನಿಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಸಹಾಯ ಮಾಡಿರುತ್ತದೆ.
ಆದ್ದರಿಂದ ಏನು ಸಿಕ್ಕಿದರೂ ಓದಿ ಮತ್ತು ಯಾರು ಬರೆದಿದ್ದರೂ ಓದಿ. ಮಡಿ ಬೆಳೆಸ್ಕೊಬೇಡಿ. ಮತ್ತು ನಿರಂತರವಾಗಿ ಓದಿ. ತೃಪ್ತಿ ಎಂಬುದು ಇರಬಾರದು. ಹೆಚ್ಚೆಚ್ಚು ತಿಳ್ಕೊಳ್ತಾ ತಿಳ್ಕೊಂಡಿದ್ದರಲ್ಲೇ ಜರಡಿ ಹಿಡಿಯುವ ಕಲೆಯೂ ಸಿದ್ಧಿಸುತ್ತಾ ಹೋಗುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರದಿಂದ ಹುಟ್ಟುವ ಜ್ಞಾನ ನಮಗೆ ತಾನಾಗೇ ಸಿದ್ಧಿಸಿರುತ್ತದೆ. ನಮಗೆ ಅಪರಿಚಿತವಾಗಿರುವ ಲೋಕ, ಅಲ್ಲಿನ ಅರಿವು ಅದು ವಿರಳವಾಗಿರುವ ಕಾರಣದಿಂದ ಹೆಚ್ಚು ಮೌಲ್ಯಯುತವಾಗಿರುತ್ತದೆ.
ನಾನು ಹೆಚ್ಚಾಗಿ ಶಿಕ್ಷಿತ ಕುಟುಂಬದಿಂದ ಬಂದಂತಹ ಲೇಖಕ/ಲೇಖಕಿಯರ ಸಂದರ್ಶನಗಳನ್ನು ಗಮನಿಸಿದಾಗ, ಎಲ್ಲರಿಗೂ ಈ ಪ್ರಶ್ನೆ ಕೇಳಲಾಗಿರುತ್ತೆ, ನಿಮ್ಮ ಓದು ಯಾವಾಗಿಂದ ಶುರುವಾಯಿತು ಎಂದು. ಮತ್ತು ಬಹುತೇಕ ಎಲ್ಲರ ಉತ್ತರವೂ ಓಂದೇ ಆಗಿರುತ್ತದೆ. ನಮ್ಮ ಅಪ್ಪಾಮ್ಮ ಅಂತನೋ ನಮ್ಮ ದೊಡ್ಡಪ್ಪ ಚಿಕ್ಕಪ್ಪ ಅಂತನೊ ಯಾರೋ ಒಬ್ಬರು ಅವರಿಗೆ ಬಹಳ ಚಿಕ್ಕ ವಯಸಿಗೇ ಕತೆ, ಕಾದಂಬರಿ, ಚಿಣ್ಣರ ಪುಸ್ತಕಗಳು, ಎನ್ಸೈಕ್ಲೋಪೀಡಿಯಾಳನ್ನು ಸರಬರಾಜು ಮಾಡಿರುತ್ತಾರೆ. ಒಳ್ಳೆಯ/ವೈಜ್ಞಾನಿಕ ಸಿನಿಮಾಗಳನ್ನು ತೋರಿಸಿರುತ್ತಾರೆ. ಅವಕಾಶ ಸಿಕ್ಕಾಗ ಪ್ರವಾಸಕ್ಕೆ ಕರೆದುಕೊಂಡು ಹೋಗಿರುತ್ತಾರೆ.
ನನಗೆ ಅಂತಹ ಪ್ರಶ್ನೆ ಕೇಳಿದಾಗೆಲ್ಲ ಮೈಂಡು ಬ್ಲಾಂಕಾಗಿದೆ. ಕೆಲವೊಮ್ಮೆ ನಾನೂ ಏನಾದರೂ ಕಲ್ಪಸಿಕೊಂಡು ಉತ್ತರಿಸಬೇಕಾ ಎಂಬ ಒತ್ತಡವೂ ಬಂದಿದ್ದಿದೆ. ಕೃಷಿಕ, ಗ್ರಾಮೀಣ, ಹಿಂದುಳಿದ ಮುಂತಾದ ಹಿನ್ನೆಲೆಯಿಂದ ಬಂದವರಲ್ಲಿ ಯಾರೂ ಈ ಬಗೆಯ ಪುಸ್ತಕಗಳನ್ನು ಚಿಕ್ಕಂದಿನಲ್ಲೇ ಓದಿರುತ್ತಾರೆ ಎಂದು ನನಗೆ ಅನಿಸಲ್ಲ. ಅಥವಾ ಒಳ್ಳೆಯ ಸಿನಿಮಾ ನೋಡಿರಲ್ಲ, ಪ್ರವಾಸ ಹೋಗಿರಲ್ಲ. ಎಕ್ಸೆಪ್ಷನ್ಸ್ ಇರಬಹುದು. ಕೆಲವರು ಉತ್ಪ್ರೇಕ್ಷೆಗೆ ಹೇಳಿಕೊಳ್ಳಬಹುದು. ಇದು ನನ್ನನ್ನು ಯಾವಾಗಲೂ ಬಾಧಿಸುತ್ತದೆ.
‘ಬಾಲ್ಯದಿಂದಲೇ ಮಕ್ಕಳನ್ನು ಸದೃಢರನ್ನಾಗಿಸಿ’
ಆದ್ದರಿಂದ ಈಗಿನ ತಂದೆತಾಯಿ ಜೆನರೇಶನ್ನುಗಳಾದರೂ ಸ್ವಲ್ಪ ಎಚ್ಚೆತ್ತು ತಮ್ಮ ಮಕ್ಕಳನ್ನು ಬಾಲ್ಯದಿಂದಲೇ ಸದೃಢರನ್ನಾಗಿ ಮಾಡಬೇಕು ಎಂಬ ಆಸೆ ನನ್ನದು. ಸಧೃಡ ಎಂದರೆ ಹೇಗೆ? ಚಿಕ್ಕಂದಿನಿಂದಲೇ ಬುದ್ಧಿ ಭಾವಗಳಿಗೆ ಸತ್ವಯುತ ಗೊಬ್ಬರ ಒದಗಿಸುವುದು. ಸಾಹಿತ್ಯ, ಕ್ರೀಡೆ, ಸಂಗೀತ, ಪ್ರವಾಸ ಇನ್ನೂ ಅನೇಕ ವಿಧಗಳು ಇದಾವೆ. ಅದು ಆಗ್ತಿಲ್ಲವಲ್ಲ, ಕಾಣಿಸ್ತಿಲ್ಲವಲ್ಲ ಎಂಬ ನೋವಿನಿಂದ ಇದನ್ನೆಲ್ಲ ಹೇಳಬೇಕಾಯ್ತು. ಒಳ್ಳೆ ಬಟ್ಟೆ ಹಾಕಿ ಒಳ್ಳೆ ಊಟ ಕೊಡಿ ಅದೆಲ್ಲ ಓಕೆ. ಕ್ಷಣಿಕ ಸಂತಸದ ಕೂಪಗಳಿಗೆ ಮಕ್ಕಳನ್ನು ತಳ್ಳಬೇಡಿ. ರಿಯಾಲಿಟಿ ಶೋಗಳು, ಔದ್ಯೋಗಿಕ ಪರೀಕ್ಷೆಗಳು, ಶಾಲೆಗಳು ಕೊಡುವ ರ್ಯಾಂಕುಗಳು, ಪತ್ರಿಕೆಯಲ್ಲಿನ ಪ್ರಕಟಣೆಗಳು- ಇಂಥವಕ್ಕೆ ಹೆಚ್ಚು ಪ್ರೋತ್ಸಾಹ ಕೊಡಬೇಡಿ.
ಗಮನಿಸಿ ಇಂಥ ಕಡೆ ಕೆಳವರ್ಗ ಮಧ್ಯಮವರ್ಗದವರೇ ಹೆಚ್ಚಾಗಿ ಕಂಡುಬರುತ್ತಾರೆ. ಮಾಡ್ಲೇಬೇಡಿ ಅನ್ನಲ್ಲ. ಯಾವುದೋ ಒಂದು ಬಗೆಯ ಸ್ಪರ್ಧೆ ಮುಖ್ಯವಾಗುತ್ತದೆ. ಆದರೆ ಮಕ್ಕಳ ಬೆಳವಣಿಗೆಗಳನ್ನು ಹೀಗೆ ಸಂಪೂರ್ಣವಾಗಿ 'ಔಟ್ ಸೋರ್ಸ್' ಮಾಡಿ ಕೈಕಟ್ಟಿ ಕೂರಬೇಡಿ. ಯಾವುದೋ ಶಾಲೆ, ಯಾವುದೋ ಸಂಸ್ಥೆಗೆ ಹಣ ಕಟ್ಟಿದ ಮಾತ್ರಕ್ಕೆ ಎಲ್ಲವೂ ಆಗಿಬಿಡಲ್ಲ. ಭದ್ರಭುನಾದಿ ನಿಮ್ಮಿಂದಲೇ ಮನೆಯಿಂದಲೇ ಆಗಬೇಕು. ನಿಮ್ಮ ಆಯಸ್ಸು ಆಸಕ್ತಿ ಮೀರಿರಬಹುದು, ಅರ್ಥವಾಗುತ್ತದೆ. ಆದರೆ ಸರಿಯಾದ ದಿಕ್ಕಿನಲ್ಲಿ ಪ್ರೋತ್ಸಾಹಿಸುವುದಕ್ಕೆ ಹೆಚ್ಚಿನ ಶ್ರಮ ಬೇಕಿರಲ್ಲವಲ್ಲ?
ಗಮನಿಸಿ: ಮಧು ವೈಎನ್ ಫೇಸ್ಬುಕ್ನಲ್ಲಿ ಹಂಚಿಕೊಂಡ ಪೋಸ್ಟ್ ಅನ್ನು ಯತಾವತ್ತಾಗಿ ಪ್ರಕಟಿಸಲಾಗಿದೆ.
