Kannada News  /  Karnataka  /  Magaluru News After Huge Controversy Ganesh Chaturthi Celebration Begins At Mangalore University Mgb

ಭಾರೀ ವಿವಾದದ ಬಳಿಕ ಮಂಗಳೂರು ವಿವಿಯಲ್ಲಿ ಗಣೇಶ ಪ್ರತಿಷ್ಠಾಪನೆ; ಉಪಕುಲಪತಿಯಿಂದಲೇ ಚಾಲನೆ

ಮಂಗಳೂರು ವಿವಿಯಲ್ಲಿ ಗಣೇಶ ಪ್ರತಿಷ್ಠಾಪನೆ
ಮಂಗಳೂರು ವಿವಿಯಲ್ಲಿ ಗಣೇಶ ಪ್ರತಿಷ್ಠಾಪನೆ

Ganesh festival at Mangalore University: ಸಾಕಷ್ಟು ಹೇಳಿಕೆ, ಟೀಕೆ, ಪ್ರತಿಟೀಕೆಗಳಿಗೆ ಈ ಗಣೇಶೋತ್ಸವ ಕಾರ್ಯಕ್ರಮ ಕಾರಣವಾಗಿತ್ತು. ಉಪಕುಲಪತಿ ಈ ಬಾರಿ ಅನುಮತಿ ನೀಡುವುದಿಲ್ಲ ಎಂಬ ವದಂತಿ ಇದಕ್ಕೆ ಕಾರಣವಾಗಿತ್ತು. ಬಳಿಕ ಮಂಗಳೂರು ಬಿಜೆಪಿ ಶಾಸಕರು ಮಧ್ಯಪ್ರವೇಶಿಸಿ ಮಾತುಕತೆ ನಡೆಸಿದ್ದರು.

ಮಂಗಳೂರು: ಹಿಂದು ಸಂಘಟನೆಯ ಮುಖಂಡರು, ಶಾಸಕರ ಭಾಗವಹಿಸುವಿಕೆಯಲ್ಲಿ ಮಂಗಳೂರು ವಿವಿ ಕುಲಪತಿ ಜಯರಾಜ್ ಅಮೀನ್ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಮಾಡುವುದರೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆಯುವ ಗಣೇಶೋತ್ಸವಕ್ಕೆ ಚಾಲನೆ ಮಂಗಳವಾರ ದೊರಕಿದೆ.

ಟ್ರೆಂಡಿಂಗ್​ ಸುದ್ದಿ

ಮಂಗಳೂರು ವಿವಿ ಆಡಿಟೋರಿಯಂನಲ್ಲಿ ಗಣೇಶ ಪ್ರತಿಷ್ಟಾಪನೆಯನ್ನು ಮಂಗಳೂರು ವಿವಿ ಉಪಕುಲಪತಿ ಜಯರಾಜ್ ಅಮೀನ್ ಮಾಡಿದ್ದಾರೆ. ಸಕಲ ಧಾರ್ಮಿಕ ವಿಧಿಗಳೊಂದಿಗೆ ಸ್ವತಃ ಗಣೇಶ ಮೂರ್ತಿ ಪ್ರತಿಷ್ಟಾಪಿಸಿದ ಸಂದರ್ಭ , ವಿವಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ಸ್ಥಳೀಯರು ಭಾಗಿಯಾಗಿದ್ದರು. ಸಣ್ಣ ಗಣೇಶ ಮೂರ್ತಿಗೆ ಪ್ರತಿಷ್ಟಾಪನೆ ಬಳಿಕ ಉಪಕುಲಪತಿ ಪೂಜೆ ಸಲ್ಲಿಸಿದರು. ಅರ್ಚಕರ ಸಮ್ಮುಖದಲ್ಲಿ ಪಂಚೆ, ಶಾಲು ತೊಟ್ಟು ಧಾರ್ಮಿಕ ವಿಧಿಯನ್ನು ಜಯರಾಜ್ ಅಮೀನ್ ನೆರವೇರಿಸುವುದರ ಮೂಲಕ ಗಮನ ಸೆಳೆದರು.

ಪೊಲೀಸ್ ಭದ್ರತೆ, ಹಿಂದು ಮುಖಂಡರ ಭಾಗಿ:

ಇಂದು ನಡೆದ ಗಣೇಶೋತ್ಸವದಲ್ಲಿ ಶಾಸಕ ಡಾ.ವೈ. ಭರತ್ ಶೆಟ್ಟಿ, ಹಿಂದು ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಪಾಲ್ಗೊಂಡಿದ್ದರು. ಭಾರೀ ವಿವಾದದ ಬಳಿಕ ಮಂಗಳೂರು ವಿವಿಯಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ವಿವಾದದ ಬಳಿಕ ಗಣೇಶೋತ್ಸವ ನಡೆಸಲು ವಿವಿ ಆಡಳಿತ ಅನುಮತಿ ನೀಡಿತ್ತು.

ಸಾಕಷ್ಟು ಹೇಳಿಕೆ, ಟೀಕೆ, ಪ್ರತಿಟೀಕೆಗಳಿಗೆ ಈ ಗಣೇಶೋತ್ಸವ ಕಾರ್ಯಕ್ರಮ ಕಾರಣವಾಗಿತ್ತು. ಉಪಕುಲಪತಿ ಈ ಬಾರಿ ಅನುಮತಿ ನೀಡುವುದಿಲ್ಲ ಎಂಬ ವದಂತಿ ಇದಕ್ಕೆ ಕಾರಣವಾಗಿತ್ತು. ಬಳಿಕ ಮಂಗಳೂರು ಬಿಜೆಪಿ ಶಾಸಕರು ಮಧ್ಯಪ್ರವೇಶಿಸಿ ಮಾತುಕತೆ ನಡೆಸಿದ್ದರು. ವಿವಿ ಇರುವ ಕ್ಷೇತ್ರ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಸೇರಿದ್ದಾಗಿದ್ದು, ವೇದವ್ಯಾಸ ಕಾಮತ್ ಉಪಕುಲಪತಿ ಜೊತೆ ಮಾತುಕತೆ ನಡೆಸಿದ್ದಕ್ಕೆ ಆಕ್ಷೇಪ ಸಲ್ಲಿಸಿ, ವಿವಿ ಒಳಗಿನ ವಿಚಾರಕ್ಕೆ ಮಧ್ಯಪ್ರವೇಶಿಸುವುದು ಯಾಕೆ? ಅಲ್ಲಿ ಎಂದಿನಂತೆ ಹೇಗೆ ಉತ್ಸವ ನಡೆಯುತ್ತದೆಯೋ ಹಾಗೆಯೇ ಆಗುತ್ತದೆ ಎಂದಿದ್ದರು. ಈ ಮಧ್ಯೆ ಹಿಂದು ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಲ್ಲಿ ಗಣೇಶೋತ್ಸವಕ್ಕೆ ನಾನು ಭಾಗಿಯಾಗುತ್ತೇನೆ ಎಂದಿದ್ದರು. ಅದರಂತೆ ಅವರು ಇಂದು ಆಗಮಿಸಿದ್ದರು.

ಈ ಕಾರಣದಿಂದ ವಿವಿಯ ಮಂಗಳಾ ಆಡಿಟೋರಿಯಂ ಒಳಭಾಗದಲ್ಲೂ ಪೊಲೀಸ್ ಭದ್ರತೆ ಇತ್ತು. ಡಿಸಿಪಿ ಸಿದ್ದಾರ್ಥ್ ಗೋಯಲ್ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಒದಗಿಸಿದ್ದರು. ಮಂಗಳೂರು ವಿವಿ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಇತ್ತು. ಕೆಎಸ್ಆರ್ಪಿ ಸೇರಿದಂತೆ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಲಾಗಿತ್ತು. ಮಂಗಳಾ ಆಡಿಟೋರಿಯಂ ಎಂಟ್ರಿ ಗೇಟ್ ಸೇರಿ ಸುತ್ತಮುತ್ತ ಪೊಲೀಸ್ ಸರ್ಪಗಾವಲು ಹಾಕಿದ್ದರು.

ಸರಳ ರೀತಿಯಲ್ಲಿ ಆಡಿಟೋರಿಯಂನಲ್ಲಿ ಗಣೇಶ ಪ್ರತಿಷ್ಟಾಪಿಸಿ ಪೂಜೆ ಮಾಡಲಾಯಿತು. ಮಾವಿನ ಎಲೆ, ಹೂವು ಹಾಗೂ ಬಾಳೆ ಗಿಡ ಬಳಸಿ ಸರಳ‌ ಸಿಂಗಾರ ಮಾಡಲಾಗಿತ್ತು. ಹಾಸ್ಟೆಲ್ ವಾರ್ಡನ್ ಗಳ ಉಸ್ತುವಾರಿಯಲ್ಲಿ ಗಣೇಶೋತ್ಸವ ನಡೆಯುತ್ತಿದೆ.

ವಿವಾದವೇನಿತ್ತು?

ಕಳೆದ 40 ವರ್ಷಗಳಿಂದ ಮಂಗಳೂರು ವಿಶ್ವವಿದ್ವಾನಿಲಯದಲ್ಲಿ ನಡೆದುಕೊಂಡು ಬರುತ್ತಿದ್ದ ಗಣೇಶೋತ್ಸವ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಆಡಿಟ್ ಸಮಸ್ಯೆಯ ಹಿನ್ನೆಲೆಯಲ್ಲಿ ಈ ಬಾರಿ ಗಣೇಶೋತ್ಸವ ಆಚರಣೆಯನ್ನು ಮಾಡುವ ಕುರಿತು ಗೊಂದಲಗಳು ಎದ್ದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ವಿವಿ ಕುಲಪತಿ ಜೊತೆ ಮಾತುಕತೆ ನಡೆಸಿ, ಗಣೇಶೋತ್ಸವವನ್ನು ಎಂದಿನಂತೆ ನಡೆಸಲೇಬೇಕು ಎಂದು ಒತ್ತಾಯಿಸಿದ್ದರು. ಶಾಸಕರ ಈ ವರ್ತನೆಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸ್ಪೀಕರ್ ಯು.ಟಿ.ಖಾದರ್, ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಕುಲಪತಿ ಜಯರಾಜ್ ಅಮೀನ್ ಅವರು ಸ್ಪಷ್ಟನೆ ನೀಡಿ, ಎಂದಿನಂತೆ ಗಣೇಶೋತ್ಸವ ನಡೆಯಲಿದೆ ಎಂದು ಹೇಳಿ ವಿವಾದಕ್ಕೆ ತೆರೆ ಎಳೆದರು.

ವರದಿ: ಹರೀಶ ಮಾಂಬಾಡಿ, ಮಂಗಳೂರು