Kumbh Mela stampede: ಮಹಾಕುಂಭ ಮೇಳ ಕಾಲ್ತುಳಿತ ದುರಂತ; ಬೆಳಗಾವಿಯ ತಾಯಿ-ಮಗಳ ಜೊತೆಗೆ ಮತ್ತೊಬ್ಬ ವ್ಯಕ್ತಿ ಸಾವು
ಕನ್ನಡ ಸುದ್ದಿ  /  ಕರ್ನಾಟಕ  /  Kumbh Mela Stampede: ಮಹಾಕುಂಭ ಮೇಳ ಕಾಲ್ತುಳಿತ ದುರಂತ; ಬೆಳಗಾವಿಯ ತಾಯಿ-ಮಗಳ ಜೊತೆಗೆ ಮತ್ತೊಬ್ಬ ವ್ಯಕ್ತಿ ಸಾವು

Kumbh Mela stampede: ಮಹಾಕುಂಭ ಮೇಳ ಕಾಲ್ತುಳಿತ ದುರಂತ; ಬೆಳಗಾವಿಯ ತಾಯಿ-ಮಗಳ ಜೊತೆಗೆ ಮತ್ತೊಬ್ಬ ವ್ಯಕ್ತಿ ಸಾವು

ಮೌನಿ ಅಮಾವಾಸ್ಯೆಯಂದು ಮಹಾ ಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಗಾಯಗೊಂಡಿದ್ದ ಕರ್ನಾಟಕದ ಬೆಳಗಾವಿಯ ತಾಯಿ ಮತ್ತು ಮಗಳು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮಹಾ ಕುಂಭ ಮೇಳ ಕಾಲ್ತುಳಿತ ದುರಂತ; ಬೆಳಗಾವಿಯ ತಾಯಿ-ಮಗಳು ಸಾವು
ಮಹಾ ಕುಂಭ ಮೇಳ ಕಾಲ್ತುಳಿತ ದುರಂತ; ಬೆಳಗಾವಿಯ ತಾಯಿ-ಮಗಳು ಸಾವು

ಬೆಳಗಾವಿ: ಪ್ರಯಾಗ್​ರಾಜ್​ನ ಮಹಾ ಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೆಳಗಾವಿಯ ತಾಯಿ ಮತ್ತು ಮಗಳ ಜೊತೆಗೆ ಮತ್ತೊರ್ವ ಬೆಳಗಾವಿಯ ಯಾತ್ರಾರ್ಥಿ ಮೃತಪಟ್ಟಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಮೇಘಾ ಹತ್ತರವಾಠ್‌, ಬೆಳಗಾವಿಯ ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ ಅವರು ಇಂದು‌‌ ಬೆಳಗ್ಗೆ ಪ್ರಯಾಗ್​ರಾಜ್​ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಿತ್ರ ಸ್ನಾನಕ್ಕಾಗಿ ಯಾತ್ರಿಕರ ಆಗಮನದ ಸಂಖ್ಯೆ ಹೆಚ್ಚಾಗಿತ್ತು. ಈ ವೇಳೆ ನೂಕು-ನುಗ್ಗಲು ಉಂಟಾಗಿ ಕಾಲ್ತುಳಿತ ನಡೆದಿತ್ತು.

ಬೆಳಗಾವಿಯಲ್ಲಿರುವ ಕುಟುಂಬಸ್ಥರಿಗೆ ಬೆಳಗ್ಗೆಯಿಂದ ಇಬ್ಬರ ಸಂಪರ್ಕ ಸಿಕ್ಕಿರಲಿಲ್ಲ. ಫೋನ್‌ ರಿಂಗ್ ಆಗುತ್ತಿದ್ದರೂ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದರು. ಮೂರು ದಿನಗಳ ‌ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ 30 ಜನರ ತಂಡ ಮಹಾ ಕುಂಭ ಮೇಳಕ್ಕೆ ಪ್ರಯಾಣ ಬೆಳೆಸಿತ್ತು. ಇದೀಗ ಘೋರ ದುರಂತದಲ್ಲಿ ತಾಯಿ-ಮಗಳು ಪ್ರಾಣ ಕಳೆದುಕೊಂಡಿದ್ದಾರೆ. ಮುಂಜಾನೆಯಿಂದಲೂ ಕನ್ನಡಿಗರು ನಾಪತ್ತೆಯಾಗಿರುವ ಕುರಿತು ವರದಿಯಾಗಿತ್ತು. ಬೆಳಗಾವಿ ಜಿಲ್ಲಾಧಿಕಾರಿಯೂ ಐವರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದರು.

30 ಜನರ ತಂಡದ ಪೈಕಿ 9 ಮಂದಿ ಒಂದೆಡೆ ಇದ್ದರು. ಮುಂಜಾನೆಯೇ ಬೆಳಗಾವಿಯ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ವಡಗಾಂವ್ ಉಪನಗರದ ನಿವಾಸಿಗಳಾದ ಬಿಜೆಪಿ ಕಾರ್ಯಕರ್ತರಾದ ಸರೋಜಿನಿ ನಡುವಿನಹಳ್ಳಿ, ಕಾಂಚನ್ ಘೋರ್ಪಡೆ, ಇಬ್ಬರು ಬಾಲಕಿಯರಾದ ಮೇಘಾ ಮತ್ತು ಜ್ಯೋತಿ ಎಂಬವರು ಕಾಲ್ತುಳಿತದಲ್ಲಿ ಗಾಯಗಳೊಂದಿಗೆ ಪಾರಾಗಿದ್ದರು. ಮತ್ತೊಂದು ಗುಂಪಿನಲ್ಲಿದ್ದ ಐದು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಗಂಭೀರವಾಗಿ ಗಾಯಗೊಂಡಿದ್ದ ತಾಯಿ ಜ್ಯೋತಿ, ಮಗಳು ಮೇಘ ಜೊತೆಗೆ ಅರುಣ ಕೋಪರ್ಡೆ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿ ಏನು ಹೇಳಿದ್ರು?

ಇಂದು ಬೆಳಗ್ಗೆ ಕಾಲ್ತುಳಿತ ಪ್ರಕರಣವಾಗಿದ್ದು, ಬೆಳಗಾವಿಯ ಸಂಪರ್ಕ ಸಿಗುತ್ತಿಲ್ಲ ಎಂದು ಹೇಳಿದ್ದರು. ದುರಂತದಲ್ಲಿ ಒಬ್ಬರಿಗೊಬ್ಬರ ಸಂಪರ್ಕ ಕಡಿತಗೊಂಡಿದೆ. ಘಟನೆ ನಡೆದು ಈಗ ಆರೇಳು ತಾಸು ಅಷ್ಟೇ ಆಯಿತು, ಅಲ್ಲಿ ಸೇರಿರುವ ಜನರ ಸಂಖ್ಯೆ ‌ಹೆಚ್ಚಾಗಿದೆ. ಅಮವಾಸ್ಯೆ ಸ್ನಾನಕ್ಕೆಂದು 8 ಕೋಟಿಗೂ ಅಧಿಕ ಜನ ಸೇರುವ ಸಂದರ್ಭ ಬಂದಿದೆ. ಯಾತ್ರಾರ್ಥಿಗಳ ಪೋಷಕರು ಭಯ ಪಡುವ ಅಗತ್ಯತೆ ಇಲ್ಲ. ಉತ್ತರ ಪ್ರದೇಶದ ಜಿಲ್ಲಾಡಳಿತ ಜತೆಗೆ ನಾನು ಸಂಪರ್ಕದಲ್ಲಿದ್ದೇನೆ. 24 ಗಂಟೆ ಕಾಯುತ್ತೇವೆ. ನಾಪತ್ತೆಯಾದವರ ಸಂಪರ್ಕ ಸಾಧ್ಯವಾಗಬಹುದು. ನಮ್ಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಹಾಯವಾಣಿ ತೆರೆಯಲಾಗಿದೆ. ವೆಬ್‌ಸೈಟ್‌ನಲ್ಲಿ ನಮ್ಮ ನಂಬರ್ ಇದೆ, ಅಗತ್ಯತೆ ಇದ್ದವರು ಸಂಪರ್ಕಿಸಬಹುದು ಎಂದು ಡಿಸಿ ಹೇಳಿದ್ದಾರೆ.

ಕಾಲ್ತುಳಿತ ದುರಂತ ಸಂಭವಿಸಿದ್ದು ಹೇಗೆ?

ಇಂದು ಮೌನಿ ಅಮಾವಾಸ್ಯೆ ಕಾರಣ ಜನಸಂದಣಿ ಹೆಚ್ಚಾಗಿತ್ತು. ಈ ದಿನ ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ ಅಥವಾ ಪವಿತ್ರ ಸ್ನಾನ ಮಾಡಲು ಭಕ್ತ ಸಾಗರದ ಹರಿದು ಬಂದಿತ್ತು. ಆದರೆ, ಜನದಟ್ಟಣೆ ಹೆಚ್ಚಾದ ಕಾರಣ ಬ್ಯಾರಿಕೇಡ್​ಗಳು ಮುರಿದವು. ಹೀಗಾಗಿ ಜನರು ಏಕಾಏಕಿ ನುಗ್ಗಿದರು. ಈ ವೇಳೆ ಸಾಕಷ್ಟು ಮಂದಿ ಕೆಳಗೆ ಬಿದ್ದರು. ಆಗ ಕಾಲ್ತುಳಿತ ಸಂಭವಿಸಿ ಈ ಘೋರ ದುರಂತ ಸಂಭವಿಸಿತು. ಬೆಳಗಿನ ಜಾವ 2.30ರ ಸುಮಾರಿಗೆ ಈ ಘಟನೆ ಸಂಭವಿಸಿತು. ಮತ್ತೊಂದೆಡೆ ಸ್ನಾನ ಮಾಡಿ ಬರುವವರಿಗೆ ನಿರ್ಗಮನದ ಗೇಟ್​ ನಿರ್ಬಂಧಿಸಿದ್ದೂ ಕಾಲ್ತುಳಿತಕ್ಕೆ ಕಾರಣವಾಯಿತು. ಬೆಳಗಿನ ಜಾವ ಮೃತರ ಸಂಖ್ಯೆ 15 ಎಂದು ಹೇಳಲಾಗಿತ್ತು. ಇದೀಗ ಅದರ ಸಂಖ್ಯೆ ಏರಿರುವ ಸಾಧ್ಯತೆ ಇದೆ. ಮೃತರ ಸಂಖ್ಯೆಯನ್ನು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.

Whats_app_banner