Maha Shivaratri 2024: ಮಹಾಶಿವರಾತ್ರಿ ವಿಶೇಷ ಆಚರಣೆಗೆ ಸರ್ಕಾರದಿಂದ ಸುತ್ತೋಲೆ; ಪ್ರಾಂತೀಯ,ಜಾನಪದ,ಸಾಂಸ್ಕೃತಿಕ ಕಲೆಗಳ ಪ್ರದರ್ಶನಕ್ಕೆ ಸೂಚನೆ
Maha Shivaratri 2024: ಇಂದು ದೇಶಾದ್ಯಂತ ಮಹಾ ಶಿವರಾತ್ರಿ ಆಚರಿಸಲಾಗುತ್ತಿದೆ. ಸಾಂಸ್ಕೃತಿಕ ಕಲೆಗಳಾದ ಯಕ್ಷಗಾನ, ವೀರಭದ್ರ ಕುಣಿತ /ಡೊಳ್ಳು ಕುಣಿತ, ದೇಸೀಯ ವಾದ್ಯಗಳು, ಭರತ ನಾಟ್ಯ, ಭಕ್ತಿ ಗೀತೆಗಳ ಮೂಲಕ ಶಿವರಾತ್ರಿ ಆಚರಿಸುವಂತೆ ರಾಜ್ಯ ಸರ್ಕಾರವು ದತ್ತಿ ಇಲಾಖೆಗೆ ಸುತ್ತೋಲೆ ಹೊರಡಿಸಿದೆ.

ಮಹಾ ಶಿವರಾತ್ರಿ 2024: ಇಂದು ಮಹಾ ಶಿವರಾತ್ರಿ, ದೇಶಾದ್ಯಂದ ಶ್ರದ್ಧಾಭಕ್ತಿಗಳಿಂದ ಪರಮೇಶ್ವರನನ್ನು ಆರಾಧಿಸಲು ಭಕ್ತರು ಸಜ್ಜಾಗುತ್ತಿದ್ದಾರೆ. ಈ ಸಮಯದಲ್ಲಿ ಶಿವರಾತ್ರಿ ಹಬ್ಬದ ಪ್ರಯುಕ್ತ ರಾಜ್ಯದ ಎಲ್ಲಾ ಶಿವನ ದೇವಸ್ಥಾನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
ರಾಜ್ಯದಲ್ಲಿ ಶಾಂತಿ, ಸಂಯಮದೊಂದಿಗೆ ಜನರಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ, ಸ್ನೇಹ ಉಂಟಾಗಲೆಂದು ಲೋಕ ಕಲ್ಯಾಣಾರ್ಥವಾಗಿ ಶಿವನಲ್ಲಿ ವಿಶೇಷವಾಗಿ ಪ್ರಾರ್ಥಿಸಬೇಕು. ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿನ ಪ್ರಾಂತೀಯ ಕಲೆಗಳು ಮರೆಯಾಗುತ್ತಿರುವ ಕಾರಣ ಅವುಗಳನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಹಾಗೂ ಹಬ್ಬಗಳ ಆಚರಣೆಯನ್ನು ಪುನರುಜ್ಜೀವನಗೊಳಿಸಬೇಕು. ಪ್ರಾಂತೀಯ ಕಲೆಗಳ ಜೊತೆಗೆ ಯಕ್ಷಗಾನ, ವೀರಭದ್ರ /ಡೊಳ್ಳು ಕುಣಿತ, ದೇಸೀಯ ವಾದ್ಯಗಳು ಭರತ ನಾಟ್ಯ ಭಕ್ತಿ ಗೀತೆಗಳ ಗಾಯನವನ್ನು ಹಮ್ಮಿಕೊಳ್ಳಬೇಕು.
ದತ್ತಿ ಇಲಾಖೆಗೆ ಸುತ್ತೋಲೆ ಹೊರಡಿಸಿದ ಸರ್ಕಾರ
ಸಾಂಪ್ರದಾಯಿಕ ಜಾನಪದ ಕಲೆಗಳಾದ ಪಾರಂಪರಿಕ ಸ್ಥಳಿಯ ಕಿರು ನಾಟಕಗಳಾದ ದಕ್ಷಯಜ್ಞ, ಶನಿ ಮಹಾತ್ಮ ಮುಂತಾದ ಶಿವ ಸಂಬಂಧ ಕಿರು ನಾಟಕಗಳನ್ನು ಹಾಗೂ ಶಿವ ಪುರಾಣ ಕಥಾ ಶ್ರವಣ ಮೊದಲಾದ ಕಲೆಗಳನ್ನು ಪ್ರದರ್ಶಿಸಬೇಕು. ಈ ಮೂಲಕ ಸಾಂಪ್ರದಾಯಿಕ ಜಾನಪದ ಕಲೆಗಳನ್ನು ಉಳಿಸಿ ಬೆಳಸುವ ಪ್ರಯತ್ನಗಳು ನಡೆಯಬೇಕು ಎಂದು ಹೇಳಲಾಗಿದೆ. ಆದ್ದರಿಂದ ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಿವನ ದೇವಸ್ಥಾನಗಳಲ್ಲಿ ಈ ಕೆಳಕಂಡ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇದಕ್ಕಾಗಿ ತಗಲುವ ವೆಚ್ಚವನ್ನು ಆಯಾ ದೇವಾಲಯದ ನಿಧಿಯಿಂದ ಭರಿಸುವಂತೆ ಸೂಚನೆ ನೀಡಲಾಗಿದೆ.
ಶಿವರಾತ್ರಿಯ ಹಬ್ಬದ ದಿನ ಪ್ರಾತಃಕಾಲದಿಂದ ಮಧ್ಯಾಹ್ನದವರೆಗೆ ಯಾವುದಾದರೊಂದು ಸೂಕ್ತ ಸಮಯದಲ್ಲಿ ದೇವಾಲಯದ ದೈನಂದಿನ ಪೂಜೆಗೆ ಧಕ್ಕೆಯಾಗದಂತೆ ರುದ್ರಾಭೀಷೇಕ ಮತ್ತು ರುದ್ರ ಹೋಮ ಪೂಜಾ ಕಾರ್ಯಗಳನ್ನು ವಿಶೇಷವಾಗಿ ನಡೆಸಬೇಕು. ಕಣ್ಮರೆಯಾಗುತ್ತಿರುವ ಸಾಂಸ್ಕೃತಿಕ ಕಲೆಗಳಾದ ಗೊಂಬೆ ಆಟ (ಗೊಂಬೆ ನಾಟಕ) ಕೋಲಾಟ ಇವುಗಳನ್ನು ನಡೆಸುವ ಬಗ್ಗೆ ಸಂಬಂಧಪಟ್ಟ ಕಲಾವಿದರಿಂದ ಹಮ್ಮಿಕೊಳ್ಳಬೇಕು.
ಜಾನಪದ, ಭಕ್ತಿಪೂರ್ವಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸೂಚನೆ
ಸಾಂಸ್ಕೃತಿಕ ಕಲೆಗಳಾದ ಯಕ್ಷಗಾನ, ವೀರಭದ್ರ ಕುಣಿತ /ಡೊಳ್ಳು ಕುಣಿತ, ದೇಸೀಯ ವಾದ್ಯಗಳು, ಭರತ ನಾಟ್ಯ, ಭಕ್ತಿ ಗೀತೆಗಳು ಸಾಂಪ್ರದಾಯಿಕ ಜಾನಪದ ಕಲೆಗಳು ಪಾರಂಪರಿಕ ಸ್ಥಳೀಯ ಕಿರುನಾಟಕಗಳಾದ ದಕ್ಷಯಜ, ಶನಿ ಮಹಾತ್ಮ ಮುಂತಾದ ಶಿವ ಸಂಬಂಧ ಕಿರು ನಾಟಕಗಳು ಹಾಗೂ ಶಿವಪುರಾಣ ಕಥಾ ಶ್ರವಣ ಮೊದಲಾದ ಭಕ್ತಿಪೂರ್ವಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.
ಈ ಸಾಂಸ್ಕೃತಿಕ ಕಲೆಗಳು ಲಭ್ಯವಾಗದಿದ್ದಲ್ಲಿ ಸ್ಥಳೀಯವಾಗಿ ಮರೆಯಾಗುತ್ತಿರುವ ಯಾವುದಾದರೊಂದು ಲಭ್ಯವಿರುವ ಸಾಂಸ್ಕೃತಿಕ ಅಥವಾ ಧಾರ್ಮಿಕ ಕಲೆಯನ್ನು ಶಿವರಾತ್ರಿ ಹಬ್ಬದ ದಿನದಂದು ಆಚರಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಮಾರ್ಚ್ 8 ರಂದು ಮಹಾ ಶಿವರಾತ್ರಿಹಬ್ಬವನ್ನು ಯಶಸ್ವಿಯಾಗಿ ಆಚರಿಸಬೇಕೆಂದು ಹೇಳಲಾಗಿದೆ.
ವರದಿ: ಮಾರುತಿ ಹೆಚ್ , ಬೆಂಗಳೂರು
