Maha Shivaratri 2024:ಔಷಧೀಯ ಸಸ್ಯಗಳ ಕಣಜ ತುಮಕೂರಿನ ಸಿದ್ಧರ ಬೆಟ್ಟದ ಸಿದ್ದೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಶಿವರಾತ್ರಿ ಮಹೋತ್ಸವಕ್ಕೆ ಸಜ್ಜು
Maha Shivaratri 2024: ಔಷಧೀಯ ಸಸ್ಯಗಳ ಕಣಜ ಎಂದೇ ಹೆಸರಾದ ತುಮಕೂರು ಜಿಲ್ಲೆಯ ಸಿದ್ದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಮಹೋತ್ಸವಕ್ಕೆ ಎಲ್ಲಾ ಸಿದ್ದತೆ ನಡೆಯುತ್ತಿದೆ. ಮಾರ್ಚ್ 8, ಶುಕ್ರವಾರದ ಕಾರ್ಯಕ್ರಮಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಚಾಲನೆ ನೀಡಲಿದ್ದಾರೆ.
ತುಮಕೂರು: ಮಹಾ ಶಿವರಾತ್ರಿಗೆ ಇನ್ನು ಒಂದು ದಿನವಷ್ಟೇ ಬಾಕಿ ಇದೆ. 2 ದಿನಗಳಿಂದ ಜನರು ಹಬ್ಬ ಆಚರಿಸಲು ಮಾರುಕಟ್ಟೆಯಲ್ಲಿ ಹೂವು, ಹಣ್ಣು ಖರೀದಿಯಲ್ಲಿದ್ದಾರೆ. ಶಿವರಾತ್ರಿಯಂದು ಭಕ್ತರು ಶಿವನನ್ನು ಪೂಜಿಸುವುದು ಸಾಮಾನ್ಯವಾದರೂ, ಪೂಜೆಯ ರೀತಿ ಒಂದೊಂದು ಕಡೆ ಒಂದೊಂದು ರೀತಿ ಇದೆ. ತುಮಕೂರಿನ ಸಿದ್ಧರ ಬೆಟ್ಟದ ಸಿದ್ದೇಶ್ವರ ಸ್ವಾಮಿ ಸನ್ನಿಧಾನದಲ್ಲಿ ಕೂಡಾ ಪ್ರತಿ ವರ್ಷ ವಿಭಿನ್ನವಾಗಿ ಶಿವರಾತ್ರಿ ಆಚರಿಸಲಾಗುತ್ತದೆ.
ಔಷಧೀಯ ಸಸ್ಯಗಳ ಕಣಜ ಎಂದೇ ಹೆಸರಾದ ಸಿದ್ದೇಶ್ವರ ಬೆಟ್ಟ
ಸಿದ್ಧರು ನೆಲೆಸಿದ್ದರು ಎನ್ನಲಾಗುವ ಸಿದ್ಧರ ಬೆಟ್ಟ ತುಮಕೂರು ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದು, ಔಷಧೀಯ ಸಸ್ಯಗಳ ಕಣಜ ಎಂದೇ ಕರೆಸಿಕೊಳ್ಳುವ ಸಿದ್ಧರ ಬೆಟ್ಟ ಪ್ರವಾಸಿಗರ ನೆಚ್ಚಿನ ತಾಣಗಳಲ್ಲಿ ಒಂದು, ಇಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಔಷಧಿ ಸಸ್ಯಗಳಿವೆ ಎಂದು ಗುರುತಿಸಲಾಗಿದೆ, ಚಾರಣಿಗರ ಟ್ರಕ್ಕಿಂಗ್‌ಗೆ ಹೇಳಿ ಮಾಡಿಸಿದ ಜಾಗ, ಜೊತೆಗೆ ಇಲ್ಲಿನ ಗುಹೆಗಳು ನಿಜಕ್ಕೂ ವಿಸ್ಮಯಕಾರಿಯಾಗಿವೆ. ತುಮಕೂರಿನಿಂದ 31 ಕಿಲೋ ಮೀಟರ್ ದೂರ ಇರುವ ಸಿದ್ಧರ ಬೆಟ್ಟ ಕೊರಟಗೆರೆ ತಾಲೂಕಿಗೆ ಸೇರಿದೆ, ಕಲ್ಲಿನ ಬೆಟ್ಟ, ದೇವಾಲಯಗಳು ಮತ್ತು ಗುಹೆಗಳಿಂದ ಸುತ್ತುವರೆದಿರುವುದರಿಂದ ಇದೆಲ್ಲವನ್ನೂ ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.
ಸುತ್ತಮುತ್ತಲಿನ ಹಳ್ಳಿಗಳ ಅದ್ಭುತ ವಿಹಂಗಮ ನೋಟ ಮತ್ತು ಬೆಟ್ಟದ ಮೇಲಿರುವ ಪ್ರಶಾಂತ ವಾತಾವರಣದಿಂದಾಗಿ ಟ್ರಕ್ಕಿಂಗ್ ಉತ್ಸಾಹಿಗಳು ಮತ್ತು ವೃತ್ತಿಪರ ಪರ್ವತಾರೋಹಿಗಳಿಗೆ ಈ ಬೆಟ್ಟ ತುಂಬಾ ಇಷ್ಟವಾಗುತ್ತದೆ. ಈ ಸ್ಥಳ ಗಿಡಮೂಲಿಕೆಗಳ ಔಷಧೀಯ ಮೌಲ್ಯಕ್ಕೆ ಹೆಸರಾಗಿದೆ, ಸಿದ್ದರ ಬೆಟ್ಟ ಎಂದರೆ ಸಂತರ ಬೆಟ್ಟ ಎನ್ನಲಾಗುತ್ತೆ, ಅನೇಕ ಹಿಂದೂ ಸಂತರು ಇಲ್ಲಿ ತಪಸ್ಸು, ಧ್ಯಾನ ಮಾಡುತ್ತಿದ್ದರು, ಇದಕ್ಕಾಗಿಯೇ ಈ ಬೆಟ್ಟಕ್ಕೆ ಸಿದ್ಧರ ಬೆಟ್ಟ ಎನ್ನಲಾಗುತ್ತೆ.
1700 ಅಡಿ ಎತ್ತರದಲ್ಲಿರುವ ಸಿದ್ಧರ ಬೆಟ್ಟದಲ್ಲಿ ಶ್ರೀ ಸಿದ್ದಲಿಂಗೇಶ್ವರನ ದೇಗುಲವೂ ಪ್ರಮುಖ ಆಕರ್ಷಣೆ. ಇದು ಭಕ್ತರ ಪಾಲಿನ ಅಚ್ಚು ಮೆಚ್ಚಿನ ದೇವರು, ದೇಗುಲಕ್ಕೆ ಅಪಾರ ಸಂಖ್ಯೆ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಕೋರಿಕೆ ಸಲ್ಲಿಸುತ್ತಾರೆ. ಸಿದ್ದೇಶ್ವರ ಸ್ವಾಮಿಯ ನೈಸರ್ಗಿಕ ಗುಹಾಂತರ ದೇವಾಲಯ ತಲುಪಲು 45 ನಿಮಿಷ ಬೇಕಾಗುತ್ತದೆ, ನಂತರ ಅಲ್ಲಿಂದ ಟ್ರಕ್ಕಿಂಗ್ ಹಾದಿ ಕೆಲವು ಬೃಹತ್ ಬಂಡೆಗಳು ಮತ್ತು ಗುಹೆಗಳ ಮೂಲಕ ಹಾದು ಹೋಗುತ್ತದೆ, ಶಿಖರದ ಮೇಲೆ 13ನೇ ಶತಮಾನದಲ್ಲಿ ರಾಜ ಕುರಂಗರಾಯ ನಿರ್ಮಿಸಿದ ಪಾಳು ಬಿದ್ದ ಕೋಟೆಯಿದೆ.
ಸಿದ್ಧರ ಬೆಟ್ಟದಲ್ಲಿ ಶಿವರಾತ್ರಿ ಮಹೋತ್ಸವ
ಸಿದ್ಧರ ಬೆಟ್ಟದ ಸಿದ್ದೇಶ್ವರ ಸ್ವಾಮಿ ದೇವಸ್ಥಾನದಲ್ಲೂ ಶಿವರಾತ್ರಿ ಹಬ್ಬದ ಅಂಗವಾಗಿ ಮಹೋತ್ಸವ ಆಚರಿಸಲಾಗುತ್ತಿದೆ, ಮಾರ್ಚ್ 8ರ ಶುಕ್ರವಾರ ಇಡೀ ದಿನ ಇಲ್ಲಿ ವಿಶೇಷ ಪೂಜೆ, ಧಾರ್ಮಿಕ ಕಾರ್ಯಗಳು ನಡೆಯಲಿವೆ, ಶ್ರೀ ಸಿದ್ದೇಶ್ವರ ಸ್ವಾಮಿಯ ಮುತ್ತಿನ ಪಲ್ಲಕ್ಕಿ ಉತ್ಸವ, ಗಿರಿಜಾ ಕಲ್ಯಾಣ ಸೇವೆ, ಹೂವಿನ ಸೇವೆ, ಸ್ವಾಮಿಗೆ ಕ್ಷೀರಾಭಿಷೇಕ, ಹೂವಿನ ಅಲಂಕಾರ ಸೇವೆ, ಶಿವ ಭಕ್ತಿಗೀತ ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಅಪಾರ ಸಂಖ್ಯೆ ಭಕ್ತರು ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಲಿದ್ದಾರೆ.
ಈ ಬಾರಿ ಕೂಡಾ ಅದ್ದೂರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮಾರ್ಚ್ 8, ಶುಕ್ರವಾರ ನಡೆಯುತ್ತಿರುವ ಮುತ್ತಿನ ಪಲ್ಲಕ್ಕಿ ಉತ್ಸವಕ್ಕೆ ರಾಜ್ಯ ಗೃಹ ಸಚಿವ, ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಜಿ ಪರಮೇಶ್ವರ್ ಚಾಲನೆ ನೀಡಲಿದ್ದಾರೆ. ಶಿವರಾತ್ರಿ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಭಕ್ತರು ವಿವಿಧ ಸೇವೆಗಳನ್ನು ಮಾಡಲು ಸಜ್ಜಾಗುತ್ತಿದ್ದಾರೆ.